ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕು ಬೋಸೇಗೌಡನದೊಡ್ಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬೆಂಗಳೂರಿನ ಪ್ರಣವ್, ಆಕಾಶ್, ಆದರ್ಶ ಎಂದು ಗುರುತಿಸಲಾಗಿದೆ. ಮತ್ತೊರ್ವ ವಿದ್ಯಾರ್ಥಿ ಪೃಥ್ವಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಕೊಡಗು, ತಲಕಾಡು ಭಾಗಕ್ಕೆ ಪ್ರವಾಸ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಒಂದು ಭಾಗ ಪೂರ್ತಿ ಜಜ್ಜಿಹೋಗಿದೆ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.