ಮಲೆನಾಡಿನಲ್ಲಿ ಅಕೇಶಿಯಾ(ಭಾಗ-2)

Most read

ಯಾವುದೇ ನೆಡುತೋಪು, ಅದು ಬೇಕಾದರೆ ಹಣ್ಣಿನ ಗಿಡದ್ದೇ ಆಗಿರಲಿ ಅದು ಎಂದಿಗೂ ಸಹಜ ಕಾಡಿಗೆ ಪರ್ಯಾಯವಾಗಲಾರದು. ಕಾಡು ಎಂದರೆ ವೈವಿಧ್ಯತೆ. ಅವರವರ ಲಾಭದ ದೃಷ್ಟಿಕೋನದಲ್ಲಿ ಕಾಡನ್ನು ಕಾಣುವವರಿಗೆ ಎಲ್ಲಾ ವನ್ಯಜೀವಿಗಳು ಅಲ್ಲಿನ ಅವಿಭಾಜ್ಯ ಅಂಗ ಎಂಬುದು ಅರ್ಥವಾಗಬೇಕಾದ್ದು ಇಂದಿನ ಜರೂರತ್ತು – ನಾಗರಾಜ ಕೂವೆ, ಪರಿಸರ ಬರಹಗಾರರು

ಕೆಲವು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಅರಣ್ಯ ಇಲಾಖೆಯನ್ನು, ಜನರನ್ನು ಅತೀ ಹೆಚ್ಚು ಆಕರ್ಷಿಸಿದ ಗಿಡ ಅಕೇಶಿಯಾ. ಟೊಳ್ಳಿಲ್ಲದೇ, ಅಂಕುಡೊಂಕಿಲ್ಲದೇ ನೇರವಾಗಿದ್ದ ಅಕೇಶಿಯಾದ ವ್ಯಾಮೋಹ ಎರಡ್ಮೂರು ದಶಕಗಳ ಹಿಂದೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಾ ಹೋಯಿತು.

ಅಕೇಶಿಯಾದಿಂದ ತಯಾರಿಸಿದ ಪೀಠೋಪಕರಣಗಳನ್ನು ತೇಗದ್ದೆಂದು ಹೆಚ್ಚು ಬೆಲೆಗೆ ಮಾರುವ ದಂಧೆ ಶುರುವಾಯಿತು. ತೇಗದ ನಾಟಕ್ಕೆ ಇಲ್ಲದ ಸಮಸ್ಯೆಯೊಂದು ಅಕೇಶಿಯಾಕ್ಕೆ ಇದೆ. ನೆಡುತೋಪಿನಲ್ಲಿ ಹಸಿಮರ ಕಟಾವು ಮಾಡಿ ಅದು ಒಣಗುತ್ತಿದ್ದಂತೆಯೇ ನಾಟಾ ಸೀಳು ಬಂದು ಬಿಡುತ್ತದೆ. ಒಂದು ವೇಳೆ ಮರ ಸಹಜವಾಗಿ ಸಾವನ್ನಪ್ಪಿದರೆ ಒಡೆಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಎಲ್ಲಾದರೂ ಒಮ್ಮೆ ಈ ಸೀಳುಗೆರೆಗಳು ಮೂಡಿಬಿಟ್ಟರೆ ನಂತರ ಆ ನಾಟ ಯಾವುದೇ ಗಾತ್ರದಲ್ಲಿ ಕಟಾವು ಮಾಡಿದರೂ ಅದು ಉಳಿದು ಬಿಡುತ್ತದೆ.

ಅಕೇಶಿಯಾ ಸ್ಮಲ್ಲಿ

 ಇವತ್ತು ಪೀಠೋಪಕರಣ ತಯಾರಿಸಿದ ಮೇಲೆ ಸೀಳು ಬಂದ ಜಾಗಕ್ಕೆ ಜೇನುಮೇಣ, ಅರಗು ಮೊದಲಾದ ಅಂಟು ಹಚ್ಚಿ, ಪಾಲೀಶ್ ಹೊಡೆದು, ವುಡ್ ಆಯಿಲ್ ಬಳಿದು ಅದರ ಹೊಳಪು ಹೆಚ್ಚಿಸುತ್ತಾರೆ. ಇಷ್ಟೆಲ್ಲಾ ಮುಗಿಯುವಾಗ ಅಕೇಶಿಯಾವು ಮಾರುಕಟ್ಟೆಯಲ್ಲಿ ಸಾಗುವಾನಿಯಾಗಿರುತ್ತದೆ! ಅದೇನೇ ಇರಲಿ ಬಡವರು ನಾಟ ಹಾಕಿ ಮನೆ ಕಟ್ಟಲು ಸಾಧ್ಯವಾಗಿದ್ದು ಈ ಅಕೇಶಿಯಾ ಮತ್ತು ನೀಲಗಿರಿಯಿಂದಲೇ. ಆದರೆ ದುರಂತವೆಂದರೆ ಇದರ ಮೌಲ್ಯವರ್ಧನೆ ಮಲೆನಾಡಿನಲ್ಲೇ ಮಾಡಬಹುದಿತ್ತು. ಹಲವರಿಗೆ ಉದ್ಯೋಗ ಒದಗಿಸಬಹುದಿತ್ತು. ಆದರೆ ಮಲೆನಾಡಿನುದ್ದಕ್ಕೂ ಈ ಮರವನ್ನು ಮಾರಲಾಯಿತು.

ಇದನ್ನು ಓದಿದ್ದೀರಾ? ಮಲೆನಾಡಿನಲ್ಲಿ ಅಕೇಶಿಯಾ | ಭಾಗ-1

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ‘ಶಾಲಾವನ’ ಎಂಬ ಯೋಜನೆ ರಾಜ್ಯದ ಶಾಲೆಗಳಲ್ಲಿ ಜಾರಿಗೆ ಬಂತು. ಸ್ಕೂಲ್ ಮಕ್ಕಳಿಂದ ಹಣ್ಣು ಹಂಪಲು ಗಿಡಗಳನ್ನು ಬೆಳೆಸಿ, ಅರಣ್ಯಾಭಿವೃದ್ಧಿಯನ್ನು ಉತ್ತೇಜಿಸಿ, ಪರಿಸರ ಆಸಕ್ತಿ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿತ್ತು. ಆಗ ಅಕೇಶಿಯಾ, ಕ್ಯಾಸುರಿನಾ ಬೆಳೆಸಿದರೆ ಲಾಭವೆಂದು ಯೋಚಿಸಿದ ಶಾಲಾಭಿವೃದ್ಧಿ ಸಮಿತಿಗಳು ಅದನ್ನೇ ನೆಟ್ಟವು. ಮುಂದಿನ ಹತ್ತು ವರ್ಷಗಳಲ್ಲಿ ಕಡಿದು ಮಾರಿದವು. ಇದು ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿಯಾಯಿತು ಎನ್ನುವುದು ಎಷ್ಟು ಸತ್ಯವೋ ಎಳೆಯ ಮನಸ್ಸುಗಳಲ್ಲಿ ಪರಿಸರ ಜಾಗೃತಿ ಚಿಗುರಿಸಬೇಕಾಗಿದ್ದ ಚಂದದ ಯೋಜನೆಯೊಂದು ಅಡ್ಡದಾರಿ ಹಿಡಿಯಿತೆಂಬುದು ಕೂಡಾ ಅಷ್ಟೇ ಸತ್ಯ.

ಅಕೇಶಿಯಾ ಬರದ ನೆಲದ ಸಸ್ಯ. ಇದು ಜವುಗು ನೆಲದಿಂದ ಹಿಡಿದು ಸತ್ವಹೀನ ಮಣ್ಣಿನಲ್ಲೂ ಬೆಳೆಯಬಲ್ಲದು. ಇದರ ಬೀಜ ಮೊಳೆತು ಎರಡ್ಮೂರು ವಾರದಲ್ಲಿ ಸಸ್ಯಕ್ಕೆ ಗರಿಯಂತಹ ಎಲೆ ಮೂಡುತ್ತದೆ. ಅದು ಸಾಮಾನ್ಯವಾಗಿ ನಮ್ಮ ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ಹೋಲುತ್ತದೆ. ಮತ್ತದು ಬರೇ ಒಂದು ತಿಂಗಳೊಳಗೆ ಮಾಯವಾಗಿ ಬಿಡುತ್ತದೆ! ಮುಂದೆ ಆ ಎಲೆಯ ತೊಟ್ಟು ಚಪ್ಪಟೆ ಆಕಾರ ಹೊಂದಿ ಹಸಿರು ಬಣ್ಣ ಬಳಿದುಕೊಂಡು ಎಲೆಯಂತೆ ವರ್ತಿಸುತ್ತದೆ. ನಾವೀಗ ಅಕೇಶಿಯಾ ಎಲೆ ಎಂದು ಏನನ್ನು ಹೇಳುತ್ತೇವೆಯೋ ಅದು ಎಲೆ ತೊಟ್ಟಿನ ಪರಿವರ್ತಿತ ರೂಪವೇ ಹೊರತು ಅದು ಅಸಲು ಅಕೇಶಿಯಾದ ಎಲೆಯಲ್ಲ. ಅಷ್ಟಕ್ಕೂ ನಾವಿಂದು ಎಲ್ಲೆಡೆ ನೋಡುತ್ತಿರುವ ಅಕೇಶಿಯಾ ಮರಕ್ಕೆ ಎಲೆಯೇ ಇಲ್ಲ! ಈಗ ನಾವೇನು ಎಲೆ ಎಂದು ಕರೆಯುತ್ತೇವೆಯೋ ಅವು ಹಸಿರಾಗಿದ್ದು ಎಲೆಯಂತೆ ವರ್ತಿಸುತ್ತವಷ್ಟೇ. ಇದರಲ್ಲಿ ಬೇರೆ ಸಸ್ಯಗಳ ಎಲೆಯಂತೆ ಸ್ಟೋಮೆಟಾ ಇಲ್ಲ. ನೀರು ಬಳಸಿ ಜೀವಿಸುವ ಈ ಗಿಡ ತನ್ನೊಳಗಿನ ನೀರನ್ನು ವಾತಾವರಣಕ್ಕೆ ಬಿಟ್ಟು ಕೊಡುವುದೇ ಇಲ್ಲ! ಚಪ್ಪಟೆ ತೊಟ್ಟಿನ ಹಸಿರು ಕವಚದ ರಕ್ಷಣೆಯಿಂದ ಈ ಅಕೇಶಿಯಾ ತೀವ್ರ ಬರದಲ್ಲೂ, ಅತೀ ಹೆಚ್ಚು ಉಷ್ಣತೆಯಲ್ಲೂ ಬದುಕುತ್ತದೆ.

ಅಕೇಶಿಯಾ ಸಸಿ

ಅಕೇಶಿಯಾದ ಎಲೆ(?) ನಮ್ಮ ಅರಣ್ಯದ ಬೇರೆ ಸಸ್ಯಗಳ ಎಲೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಬೇಸಿಗೆಯಲ್ಲಿ ಗಿಡದಿಂದ ನೀರು ದೊಡ್ಡ ಪ್ರಮಾಣದಲ್ಲಿ ಆವಿಯಾಗದಂತೆ ತಡೆಯುವುದರಿಂದ ಅದರ ಬೆಳವಣಿಗೆ ತುಂಬಾ ಸುಲಭವಾಗಿದೆ. ಒಮ್ಮೆ ನೀರು ಸಿಕ್ಕಾಗ ಸಾಧ್ಯವಾದಷ್ಟು ಹೀರಿಕೊಂಡು ಬರದ ಸಂದರ್ಭದಲ್ಲೂ ಬದುಕುತ್ತದೆ. ಎಂತಹ ಬಿಕ್ಕಟ್ಟನ್ನೂ ಮೆಟ್ಟಿ ನಿಲ್ಲುವ ಸಾಮರ್ಥ್ಯವಿರುವುದರಿಂದ ನೆಟ್ಟ ಬಹುಪಾಲು ಬದುಕಿ ಬೆಳೆಯುತ್ತವೆ. ಅಕೇಶಿಯಾದ ಈ ಗುಣವೇ ಅರಣ್ಯ ಇಲಾಖೆಯನ್ನು ಇನ್ನಿಲ್ಲದಂತೆ ಆಕರ್ಷಿಸಿ, ಅರಣ್ಯೀಕರಣವೆಂದ ತಕ್ಷಣ ಅಕೇಶಿಯಾ ಎಂಬ ತೀರ್ಮಾನಕ್ಕೆ ಬಂದಿದ್ದು. ಇದಕ್ಕೆ ಪ್ರಾಣಿ, ಪಕ್ಷಿ, ಕೀಟ, ಹುಳುಗಳ ಕಾಟವಿಲ್ಲ, ರೋಗಬಾಧೆಯಂತೂ ಇಲ್ಲವೇ ಇಲ್ಲ ಅಂತಾಗಿದ್ದು ಪ್ರತಿಯೊಬ್ಬರಿಗೂ ಬಹಳ ಅನುಕೂಲಕರವಾಗಿ ಕಂಡಿತು.

ನಮ್ಮ ಕಾಡುಗಳಲ್ಲಿ 1990 ರ ನಂತರ ಕಾನೂನಿನ ಮೂಲಕ ಒಣ ಮತ್ತು ಹಸಿ ಮರ ಕಡಿತವನ್ನು ನಿಯಂತ್ರಿಸಲಾಗಿದೆ. ಆದರೆ ಅದೇ ಸಮಯದಲ್ಲಿ ನೆಡುತೋಪು ಕಡಿತ ಮಾತ್ರ ಬೇಕಾಬಿಟ್ಟಿ ಹೆಚ್ಚಿಸಲಾಗಿದೆ.  ಒಂದು ಹೆಕ್ಟೇರ್ ನ ಮರಗಳನ್ನು ಸ್ವಲ್ಪ ಸ್ವಲ್ಪವೇ ಕಟಾವು ಮಾಡುತ್ತಾ ಅಲ್ಲಿ ಹೊಸ ಗಿಡ ಬೆಳೆಸುವ ಪದ್ಧತಿ ಬಿಟ್ಟು ಎಲ್ಲವನ್ನೂ ಒಮ್ಮೆಗೇ ಕತ್ತರಿಸುತ್ತೇವೆ. ಅರಣ್ಯ ಸಂರಕ್ಷಣೆ ಇಲಾಖೆಯ ಕಡತಕ್ಕಷ್ಟೇ ಸೀಮಿತಗೊಂಡಿದೆ. ತಮ್ಮ ತಮ್ಮ ಹಣದಾಹಗಳಿಗಾಗಿ ಸಂರಕ್ಷಿಸಬೇಕಾದ ಇಲಾಖೆಯವರೇ ಪರಿಸರ ವ್ಯವಸ್ಥೆಯನ್ನು ಹಂತಹಂತವಾಗಿ ಕುಲಗೆಡಿಸುತ್ತಿದ್ದಾರೆ. ಅರಣ್ಯದಲ್ಲಿ ಸೇನೆಯ ಶಿಸ್ತು ತೋರಿಸಿರುವುದೇ ಇಲಾಖೆಯ ಅರಣ್ಯೀಕರಣದ ಸಾಧನೆ! ಇವತ್ತಿಗೂ ವನ್ಯಜೀವಿಗಳ ಇಂದಿನ ದೈನೇಸಿ ಸ್ಥಿತಿಗೆ ನಿಜಕ್ಕೂ ಅದೇನು ಕಾರಣ ಅಂತ ಅರಣ್ಯ ಇಲಾಖೆ ಯೋಚಿಸುತ್ತಿಲ್ಲ. ಅವರ ಏಕಜಾತಿಯ ನೆಡುತೋಪು ಪ್ರೀತಿಯಲ್ಲಿ ನೈಸರ್ಗಿಕ ಕಾಡಿನ ರಕ್ಷಣೆಗೆ ಬೇಲಿ ಮಾಡುವುದು, ಅರಣ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿ ಮಾಡಲೇಬೇಕಾದ್ದು ಅಂತ ಅನ್ನಿಸಲೇ ಇಲ್ಲ. ಹಸಿಮರ ಕಡಿತಲೆ, ಒಣಮರ ಕಟಾವು ಅಂತ ಕಾಡು ಬೋಳಿಸಿದ ಜಾಗಕ್ಕೆಲ್ಲಾ ಅಕೇಶಿಯಾ, ಗಾಳಿ, ನೀಲಗಿರಿ ನೆಡುತೋಪು ಎಬ್ಬಿಸಿದರು. ಕಾಡು ಪ್ರಾಣಿಗಳ ಆಹಾರಕ್ಕೆ ಬೇಕಾದ ಗಿಡ ಮರಗಳನ್ನು ಉಳಿಸಿ ಬೆಳೆಸಬೇಕೆಂಬುದು ಯಾರಿಗೂ ಆದ್ಯತೆಯ ವಿಚಾರವೇ ಆಗದಿದ್ದದ್ದು ಮಹಾ ದುರಂತ.

ಅಕೇಶಿಯಾ ಮರದ ತಿರುಳು

ಸರ್ಕಾರ ಮಲೆನಾಡಿನ 22,500 ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಕಾಲ MPMಗೆ ಗುತ್ತಿಗೆ ಕೊಟ್ಟಿದ್ದರಿಂದ ಅಲ್ಲಿನ ನೈಸರ್ಗಿಕ ಅರಣ್ಯ ಬುಡಮಟ್ಟ ನಾಶವಾಗಿ ಹೋಯಿತು. ಹಾಗಂತ MPM ಉದ್ಧಾರವಾಯಿತೇ? ಎಂದು ಕೇಳಿದರೆ ಅದು ವ್ಯಾಪಕ ಭ್ರಷ್ಟಾಚಾರದಿಂದ ಮುಚ್ಚಲ್ಪಟ್ಟಿತು. ಈಗ ಪುನಃ ಆ ಒಪ್ಪಂದ ಮುಂದುವರೆಸಿ MPM ಪುನಶ್ಚೇತನ ಮಾಡುತ್ತೇವೆ, ಸರ್.ಎಂ.ವಿ ಕನಸು ಮುಳುಗಲು ಬಿಡುವುದಿಲ್ಲ, ಬಡವರ ಹಿತ ಕಾಯುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಇತ್ಯಾದಿ ಪ್ರಹಸನಗಳು ಶುರುವಾಗಿವೆ. ಕರ್ನಾಟಕ ಸರ್ಕಾರ 2017 ರಲ್ಲಿ ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ರಾಜ್ಯದಲ್ಲಿ ನಿಷೇಧಿಸಿದ್ದೇವೆ ಎಂದಿತ್ತು. ಆದರೆ ಇವತ್ತು MPM ಲೀಸ್ ಮುಂದುವರೆಸುವ ಆಸಕ್ತಿ ತೋರಿಸುತ್ತಿದೆ! ಇಂತಹ ಇಬ್ಬಂದಿತನಗಳು ಸರ್ಕಾರದ ನಿಜವಾದ ಉದ್ದೇಶಗಳ ಕುರಿತು ಸಾರ್ವಜನಿಕರಲ್ಲಿ ಗುಮಾನಿ ಎಬ್ಬಿಸುತ್ತವೆ. ಹೆಚ್ಚಿನವರ ಪರಿಸರ ಪ್ರೀತಿ ವನಮಹೋತ್ಸವದ ದಿನ ಗಿಡ ನೆಡುವುದಕ್ಕಷ್ಟೇ ಸೀಮಿತ ಎಂಬ ಸತ್ಯ ಎಲ್ಲರಿಗೂ ತಿಳಿದಿರುವಾಗ ‘ಕಾಡನ್ನು ಖಾಸಗಿಯವರಿಗೆ ಮಾರಿದರೆ…’ ಎಂಬ ಸಂಶಯ ಹುಟ್ಟದೆ ಇನ್ನೇನು ಯೋಚನೆ ಬರಲು ಸಾಧ್ಯ?

ಬರೇ ಅಕೇಶಿಯಾ ಮಾತ್ರವಲ್ಲ ಯಾವುದೇ ಏಕಜಾತಿಯ ನೆಡುತೋಪು ಕೂಡಾ ಪರಿಸರಕ್ಕೆ ಅಪಾಯಕಾರಿ. ಪಶ್ಚಿಮ ಘಟ್ಟದಲ್ಲದ ಗಿಡಗಳನ್ನು ಇಲ್ಲಿ ತೋಪಿನ ರೂಪದಲ್ಲಿ ಬೆಳೆಸುವುದು ಕೂಡಾ ಹೊಸ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಯಾವುದೇ ನೆಡುತೋಪು, ಅದು ಬೇಕಾದರೆ ಹಣ್ಣಿನ ಗಿಡದ್ದೇ ಆಗಿರಲಿ ಅದು ಎಂದಿಗೂ ಸಹಜ ಕಾಡಿಗೆ ಪರ್ಯಾಯವಾಗಲಾರದು. ಕಾಡು ಎಂದರೆ ವೈವಿಧ್ಯತೆ. ಎಲ್ಲಾ ವನ್ಯಜೀವಿಗಳು ಅಲ್ಲಿನ ಅವಿಭಾಜ್ಯ ಅಂಗ ಎಂಬುದು ಅವರವರ ಲಾಭದ ದೃಷ್ಟಿಕೋನದಲ್ಲಿ ಕಾಡನ್ನು ಕಾಣುವವರಿಗೆ ಅರ್ಥವಾಗಬೇಕಾದ್ದು ಇಂದಿನ ಜರೂರತ್ತು. ಆ ಲೀಸ್ ನೀಡಿದ ಭೂಮಿಯಲ್ಲಿ ಹಿಂದಿನಂತೆಯೇ ಪುನಃ ಸಹಜ ಕಾಡು ಬೆಳೆಯಬೇಕೆಂಬ ಗಟ್ಟಿ ಜನಾಭಿಪ್ರಾಯಗಳನ್ನು ಕನಿಷ್ಠ ಗೌರವಿಸುವ ಸೌಜನ್ಯವಾದರೂ ಸರ್ಕಾರಕ್ಕೆ ಇರಲಿ.

ನಾಗರಾಜ ಕೂವೆ

ಪರಿಸರ ಬರಹಗಾರರು.

More articles

Latest article