ಮಲೆನಾಡಿನಲ್ಲಿ ಅಕೇಶಿಯಾ | ಭಾಗ-1

Most read

ಮಲೆನಾಡಿನ ಎಲ್ಲಾ ಭಾಗಗಳಲ್ಲೂ ರೈತರ ಕೃಷಿ ಭೂಮಿಗಳು ಅಕೇಶಿಯಾ, ನೀಲಗಿರಿ ನೆಡುತೋಪುಗಳಾಗಿ ಬದಲಾದವು. ಈ ನಡುವೆ ತಂಪಾಗಿದ್ದ ಮಲೆನಾಡಿನಲ್ಲಿ ಬಿಸಿ ಏರುತ್ತಾ ಹೋಯಿತು. ಒಂದೆಡೆ ನೆಡುತೋಪುಗಳಿಂದ ನೆಲೆ ಕಳೆದುಕೊಂಡ ವನ್ಯಜೀವಿಗಳು ಕೃಷಿ ಭೂಮಿಗೆ ದಾಳಿಯಿಡ ತೊಡಗಿದವು. ಇನ್ನೊಂದೆಡೆ ಅಸಂಖ್ಯ ಜೀವ ಸಂಕುಲಗಳು ಕಣ್ಮರೆಯೇ ಆಗಿಬಿಟ್ಟವು. ನೀರ ಸೆಲೆಯ ಜಾಗಗಳಲ್ಲೇ ಭೂಮಿ ಬರಡಾಯಿತು. ಎಲ್ಲರ ಹಣದ ಹಪಾಹಪಿ ಮುಂದೆ ಪರಿಸರ ಸತ್ಯಗಳು ಅಣಕಿಸಲ್ಪಟ್ಟವು – ನಾಗರಾಜ ಕೂವೆ, ಪರಿಸರ ಬರಹಗಾರರು.

ಮಲೆನಾಡಿನ ಶಾಲಾ ಮಕ್ಕಳಿಗೆ,  ‘ಮರಗಳ ಹೆಸರು ಹೇಳಿ’ ಎಂದರೆ ಥಟ್ಟನೆ ಬಾಯಿಗೆ ಬರುವುದು ಅಕೇಶಿಯಾ. ಆಸ್ಟ್ರೇಲಿಯನ್ ಮೂಲದ ಈ ಮರ ಇವತ್ತು ಇಡೀ ಪಶ್ಚಿಮ ಘಟ್ಟದಾದ್ಯಂತ ಮನೆಮಾತಾಗಿದೆ. ಇದಕ್ಕೆ ಕಾರಣ, ಈ ಅಕೇಶಿಯಾ ಎಲ್ಲೆಡೆ ವ್ಯಾಪಿಸಿ ಎಲ್ಲದನ್ನೂ ಕಾಡುತ್ತಿರುವುದು. 

ಇವತ್ತು ಮಲೆನಾಡಿನಾದ್ಯಂತ ‘ನಮ್ಮೂರಿಗೆ ಅಕೇಶಿಯಾ ಬೇಡ’ ಎಂಬ ಕೂಗು ಎದ್ದಿದೆ. ಅಕೇಶಿಯಾ ವಿರೋಧಿ ಧ್ವನಿಗಳು ಪಕ್ಷಾತೀತವಾಗಿ ಕೇಳಿ ಬರುತ್ತಿವೆ. ಇಷ್ಟಕ್ಕೂ ನಮ್ಮ ಬೆಟ್ಟ- ಗುಡ್ಡಗಳನ್ನು ಈ ವಿದೇಶಿ ತಳಿ ಅಕ್ರಮಿಸಿಕೊಂಡಿದ್ದಾದರೂ ಹೇಗೆ? ಎಂಬ ಪ್ರಶ್ನೆಯ ಜಾಡನ್ನು ಹಿಡಿದು ಹೊರಟರೆ ಅಲ್ಲಿ ಒಂದು ದೊಡ್ಡ ಚರಿತ್ರೆಯೇ ತೆರೆದುಕೊಳ್ಳುತ್ತದೆ.

ನಮ್ಮಲ್ಲಿನ ಹುಲ್ಲುಗಾವಲುಗಳನ್ನು ‘ಹಸಿರು ಮರುಭೂಮಿ’ ಎಂದು ಗುರುತಿಸಿದ್ದ ಅರಣ್ಯ ಇಲಾಖೆ ಅಲ್ಲಿ ಅರಣ್ಯೀಕರಣ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ಅವರು ಸಸಿ ನೆಟ್ಟ ಜಾಗದಲ್ಲಿ ಮಳೆಗಾಲದಲ್ಲಿ ಸೊಂಪಾಗಿ ಹುಲ್ಲು ಬೆಳೆದರೆ, ಬೇಸಿಗೆಯಲ್ಲಿ ಬೆಂಕಿ ಬಿದ್ದು ನೆಟ್ಟಿದ್ದ ಸಸಿಗಳೆಲ್ಲಾ ಬೆಂದು ಹೋಗುತ್ತಿದ್ದವು. ಶೋಲಾ ಹುಲ್ಲುಗಾವಲುಗಳಲ್ಲಿ ಇಲಾಖೆ ಪ್ರಯೋಗಿಸಿದ ನೀಲಗಿರಿ, ಸಾಗುವಾನಿ ಮೊದಲಾದ ಗಿಡಗಳು ಸರಿಯಾಗಿ ಏಳ್ಗೆ ಕಾಣಲೇ ಇಲ್ಲ. ಇದರಿಂದಾಗಿ ಅರಣ್ಯ ಇಲಾಖೆಯ ಪ್ರತಿವರ್ಷದ ಹುಲ್ಲುಗಾವಲಿನ ಅರಣ್ಯೀಕರಣದ ಯಶಸ್ಸು ಶೇಕಡಾ ಹತ್ತು ಕೂಡಾ ದಾಟುತ್ತಿರಲಿಲ್ಲ.  ಇದರಿಂದ ತೀವ್ರ ನಿರಾಶರಾಗಿದ್ದ ಅರಣ್ಯಾಧಿಕಾರಿಗಳಿಗೆ ಅಕೇಶಿಯಾ ವಿಸ್ಮಯವೆಂಬಂತೆ ಸಿಕ್ಕಿಬಿಟ್ಟಿತು! 

ಅಕೇಶಿಯಾ ಹೆಚ್ಚೆಂದರೆ ಒಂದು ಮೀಟರ್ ಆಳಕ್ಕೆ ಮಾತ್ರ ಬೇರಿಳಿಸುತ್ತದೆ. ಇದಕ್ಕೆ ತಾಯಿ ಬೇರಿಲ್ಲ. ಅತೀ ಶೀಘ್ರವಾಗಿ ಬೆಳೆಯುತ್ತದೆ. ಇದರಿಂದಾಗಿ ಎಲ್ಲರಿಗೂ ಅಕೇಶಿಯಾ  ಸೋಜಿಗದಂತೆ ಕಂಡಿತು. ನೆಟ್ಟ ಸಸಿಗಳೆಲ್ಲಾ ಯಾವುದೇ ಅಡೆತಡೆಗಳಿಲ್ಲದೇ, ಯಾವ ಕಾಲಕ್ಕೂ ಜಗ್ಗದೇ, ಎಲ್ಲಾ ಪ್ರತಿಕೂಲ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿ, ಮರವಾಗುತ್ತಿದ್ದುದ್ದನ್ನು ಕಂಡು ಎಲ್ಲರೂ ಅಚ್ಚರಿ ಪಟ್ಟುಕೊಂಡರು. ಈ ಸಸಿ ನಾಟಿಯ ತರುವಾಯ ಹುಲ್ಲಿನ ಬೆಳವಣಿಗೆ ನಿಯಂತ್ರಣಕ್ಕೆ ಬಂತು. ಅರಣ್ಯಕ್ಕೆ ಬೆಂಕಿ ಬೀಳುವುದು ಕಡಿಮೆಯಾಯಿತು. ತಮ್ಮ ಇಲ್ಲಿಯವರೆಗಿನ ಎಲ್ಲಾ ಸಮಸ್ಯೆಗಳಿಗೆ ಅಕೇಶಿಯಾ ಒಮ್ಮೆಲೇ ಪರಿಹಾರ ಒದಗಿಸಿತು ಅಂತ ಅರಣ್ಯಾಧಿಕಾರಿಗಳು ಹಿರಿಹಿರಿ ಹಿಗ್ಗಿದರು. 

ಇದರ ಜೊತೆ ಜೊತೆಗೆ 1984 ರಲ್ಲಿ ವಿಶ್ವಬ್ಯಾಂಕ್ ಅರಣ್ಯೀಕರಣಕ್ಕೆಂದು 55 ಕೋಟಿ ರೂಪಾಯಿಗಳ ನೆರವನ್ನು ಕರ್ನಾಟಕ ಸರ್ಕಾರಕ್ಕೆ ನೀಡಿತು. ಅದು ನೀಡುವ ಧನಸಹಾಯದ ಶೇಕಡಾ ನಲವತ್ತರಷ್ಟು ಹಣವನ್ನು ಉಷ್ಣವಲಯದ ನಿತ್ಯಹರಿದ್ವರ್ಣ ಪ್ರದೇಶಗಳಲ್ಲಿ ಕೈಗಾರಿಕಾ ನೆಡುತೋಪು ಬೆಳೆಸಲು ಉಪಯೋಗಿಸಬೇಕೆಂಬ ಷರತ್ತು ಇತ್ತು. ಈ ಧನ ಸಹಾಯದ ಉದ್ದೇಶವೇ ನಗರವಾಸಿಗಳಿಗೆ ಅಗತ್ಯವಾದ ಉರವಲು ಪೂರೈಸಲು ಉಪಯುಕ್ತ ಸಸ್ಯ ಬೆಳೆಸಬೇಕೆಂದಾಗಿತ್ತು. ಇದು ಅಕೇಶಿಯಾ ಬೆಳೆಸಲು ಇನ್ನಷ್ಟು ಪ್ರೇರಣೆ ಒದಗಿಸಿತು.

ಕರ್ನಾಟಕ ಸರ್ಕಾರವು ಮೈಸೂರು ಕಾಗದದ ಕಾರ್ಖಾನೆ(MPM)ಗೆ 1981-83 ರಲ್ಲಿ ರೆವಿನ್ಯೂ ಅರಣ್ಯ, ಸಮುದಾಯ ಒಡೆತನದಲ್ಲಿದ್ದ ಗೋಮಾಳಗಳು, ಸಮುದಾಯ ಅರಣ್ಯಗಳು, ಬೆಟ್ಟು ಭೂಮಿಗಳನ್ನೆಲ್ಲಾ ಸೇರಿ ಸರಿಸುಮಾರು 22,500 ಹೆಕ್ಟೇರ್ ಪ್ರದೇಶವನ್ನು ನಲವತ್ತು ವರ್ಷಗಳ ಕಾಲ ನೆಡುತೋಪು ಬೆಳೆಯಲು ಗುತ್ತಿಗೆಗೆ ಕೊಟ್ಟಿತು. ಮುಂದೆ ಈ MPMನವರು ಬೋಳುಗುಡ್ಡಗಳಿಗೆಲ್ಲಾ ಬೆಂಕಿ ಕೊಟ್ಟು, ನೈಸರ್ಗಿಕ ಕಾಡುಗಳನ್ನೆಲ್ಲಾ ಬುಡಮಟ್ಟ ನಾಶಮಾಡಿ, ಎಲ್ಲೆಡೆ ಅಕೇಶಿಯಾ ಹಬ್ಬಿಸಿದರು. ಬೋಳುಗುಡ್ಡಗಳು ಕೂಡಾ ಜೀವವಾಸದ ಅಮೂಲ್ಯ ನೆಲೆ. ಇಲ್ಲಿನ ಪುಟ್ಟ ಹುಲ್ಲು ಕೂಡಾ ಬೃಹತ್ ಮರದಂತೆಯೇ ವಿಶಿಷ್ಟವಾದುದು ಎಂಬ ವೈಜ್ಞಾನಿಕ ಸತ್ಯಗಳು ಹಣದ ಹಪಾಹಪಿಯಲ್ಲಿದ್ದ ಯಾರಿಗೂ ಅಂದು ಮುಖ್ಯವಾಗಿರಲಿಲ್ಲ. ಇಂದಿಗೂ ಅದು ಮನವರಿಕೆಯಾಗುತ್ತಿಲ್ಲ.

ಯಾವ ವೈಜ್ಞಾನಿಕ ಅಧ್ಯಯನವೂ ಇಲ್ಲದೆ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಕಾರ್ಖಾನೆಯವರಿಗೆ ಏಕಾಏಕಿ ಎರವಲು ಕೊಟ್ಟಿತು. ಅಲ್ಲಿ ನೆಡುತೋಪು ಬೆಳೆಸಲು ಅವಕಾಶ ಮಾಡಿಕೊಟ್ಟಿತು. ಆಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚಿಸಿದ ಗಿಡ ಬೆಳೆಸಬೇಕು. ಶೇಕಡಾ ಐದರಷ್ಟು ಉರವಲಿಗಾಗಿ ಹೊಸ ಗಿಡ ನೆಡಬೇಕು. ಎಕರೆಗೆ ಕನಿಷ್ಠ ಇಪ್ಪತ್ತು ಶ್ರೀಗಂಧದ ಗಿಡ ಬೆಳೆಸಬೇಕು ಅಂತೆಲ್ಲಾ ಷರತ್ತುಗಳೇನೋ ಇತ್ತು. ಆದರೆ ಅದು ಕಾಗದದಲ್ಲಿ ಮಾತ್ರ ಉಳಿಯಿತು. ಆ ಜಾಗದಲ್ಲಿ MPM ಗಡಿಕಲ್ಲು ಹುಗಿಯಬೇಕು. ನಿಯಮ ಗಾಳಿಗೆ ತೂರಿ ಚಟುವಟಿಕೆ ಕೈಗೊಳ್ಳಬಾರದು. ಅಪ್ಪಿತಪ್ಪಿ ರೂಲ್ಸ್ ಮೀರಿದರೆ ಸರ್ಕಾರ ಆ ಭೂಮಿಯನ್ನು ವಾಪಾಸು ಪಡೆಯಬಹುದು. ಇಲಾಖೆಯ ಪೂರ್ವಾನುಮತಿ ಇಲ್ಲದೆ ಸ್ಥಳೀಯ ಗಿಡ ಮರಗಳನ್ನು ಕತ್ತರಿಸಬಾರದು ಎಂದೆಲ್ಲಾ ನಿರ್ದೇಶನಗಳೇನೋ ಇತ್ತು. ಆದರೆ ಲಂಚದ ಮುಂದೆ ಅದೆಲ್ಲಾ ಬರೇ ಸೂಚನೆಗಳಾಗಿ ಮಾತ್ರ ಉಳಿಯಿತು. 

ಇನ್ನೊಂದು ಕಡೆ ಅರಣ್ಯ ಇಲಾಖೆ ತನ್ನ ಸಾಮಾಜಿಕ ಅರಣ್ಯ ಯೋಜನೆ ಮೂಲಕ, ಜಲಾನಯನ ಇಲಾಖೆ, ಉದ್ಯೋಗ ಖಾತ್ರಿ ಯೋಜನೆ ಮುಖಾಂತರ ಅಕೇಶಿಯಾ ಸಸಿ ವಿತರಿಸಿತು. ಅದನ್ನು ನಾಟಿ ಮಾಡುವಂತೆ ರೈತರನ್ನು ಪ್ರೋತ್ಸಾಹಿಸಲಾಯಿತು. ಸ್ವತಃ ಅರಣ್ಯ ಇಲಾಖೆಯಂತೂ ರೈತರ ಸಾಗುವಳಿ ಭೂಮಿ, ಸೊಪ್ಪಿನ ಬೆಟ್ಟ, ಹಾಡ್ಯ ಬಿಟ್ಟು ಉಳಿದ ಎಲ್ಲೆಡೆ ಅಕೇಶಿಯಾ ಊರಿತು. ಅಕೇಶಿಯಾ ಬೆಳೆದು ಅದರ ಎಲೆಗಳು ನೆಲಕ್ಕೆ ಬಿದ್ದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂಬ ಕಥೆಯನ್ನು ಹಬ್ಬಿಸಲಾಯಿತು. ಗುಡ್ಡಗುಡ್ಡಗಳನ್ನೇ ನೆಡುತೋಪುಗಳಾಗಿ ಪರಿವರ್ತಿಸಲಾಯಿತು. ಒಮ್ಮೆ ಬೆಳಸಿದ ನೆಡುತೋಪು ಮುಂದಿನ ಹತ್ತನ್ನೆರಡು ವರ್ಷಕ್ಕೆ ಕಟಾವು ಮಾಡಿ ನಂತರ ಪಲ್ಪ್ ವುಡ್ ತಯಾರಿಸಿ ಕಾರ್ಖಾನೆಗೆ ಕೊಂಡೊಯ್ಯಲಾಯಿತು. ಉರವಲಿಗಾಗಿ ಬಳಸಲಾಯಿತು. 

ಇದನ್ನೂ ಓದಿ- ಅತಿಮಾನವ ಯುಗ ಮತ್ತು ಹವಾಗುಣ ಬದಲಾವಣೆ

1993ರಲ್ಲಿ ಅರಣ್ಯ ಆದಾಯದಲ್ಲಿ ಗ್ರಾಮಸ್ಥರಿಗೆ ಒಂದು ಪಾಲು ಕೊಡುವ ಜನಸಹಭಾಗಿತ್ವದ ಅರಣ್ಯಾಭಿವೃದ್ಧಿ ನೀತಿ ಜಾರಿಯಾಯಿತು. ಇಲಾಖೆಯಿಂದ ಹಳ್ಳಿಗರೊಡನೆ ನೆಡುತೋಪು ಬೆಳೆಸುವ ಉದ್ದೇಶಕ್ಕೆ ಗ್ರಾಮ ಅರಣ್ಯ ಸಮಿತಿಗಳು ಜನ್ಮತೆಳೆದವು. ಅರಣ್ಯ ಸಂರಕ್ಷಣೆಯಲ್ಲಿ ಭಾಗವಹಿಸಿದ್ದ ಹಳ್ಳಿಗಳಿಗೆ ಆದಾಯ ನೀಡುವುದು ಇದರ ಪ್ರಮುಖ ಆಶ್ವಾಸನೆಯಾಯಿತು. ‘ನೆಡುತೋಪು ಬೆಳೆಸಿದರೆ ಸರ್ಕಾರಕ್ಕೆ ಮಾತ್ರ ವರಮಾನವಾಗುತ್ತದೆ. ನಮ್ಮ ಜಾನುವಾರುಗಳ ಮೇವಿಗೆ ತೊಂದರೆಯಾಗುತ್ತದೆ’ ಎಂದು ಹೀಗಳೆಯುತ್ತಿದ್ದ ಹಳ್ಳಿಗರಿಗೆ ಈಗ ಅಕೇಶಿಯಾ ಬೆಳಸಿದರೆ ಊರಿಗೆ ಲಾಭವಾಗುತ್ತದೆ ಎಂಬ ಭಾವನೆ ಹಂತಹಂತವಾಗಿ ಮೊಳೆಯಿತು.

ಅಕೇಶಿಯಾ ನೆಡುತೋಪು

ಮಲೆನಾಡಿನ ಎಲ್ಲಾ ಭಾಗಗಳಲ್ಲೂ ರೈತರ ಕೃಷಿ ಭೂಮಿಗಳು, ಅದರಲ್ಲೂ ಭತ್ತದ ಗದ್ದೆಗಳು ಅಕೇಶಿಯಾ, ನೀಲಗಿರಿ ನೆಡುತೋಪುಗಳಾಗಿ ಬದಲಾದವು. ಇದಕ್ಕೆ ಯಾವುದೇ ಅಡೆತಡೆಗಳಿಲ್ಲದೆ ಶೀಘ್ರ ಬೆಳೆಯುವ ಅಕೇಶಿಯಾದ ಗುಣ, ಮತ್ತದರಿಂದ ಉಂಟಾಗುವ ಆರ್ಥಿಕ ಲಾಭದ ಜೊತೆಗೆ ಅರಣ್ಯ ಇಲಾಖೆಯ ನಿರಂತರ ಪ್ರ್ರೋತ್ಸಾಹವೂ ಸೇರಿಕೊಂಡಿತ್ತು. ಈ ನಡುವೆ ತಂಪಾಗಿದ್ದ ಮಲೆನಾಡಿನಲ್ಲಿ ಬಿಸಿ ಏರುತ್ತಾ ಹೋಯಿತು. ಒಂದೆಡೆ ನೆಡುತೋಪುಗಳಿಂದ ನೆಲೆ ಕಳೆದುಕೊಂಡ ವನ್ಯಜೀವಿಗಳು ಕೃಷಿ ಭೂಮಿಗೆ ದಾಳಿಯಿಡತೊಡಗಿದವು. ಇನ್ನೊಂದೆಡೆ ಅಸಂಖ್ಯ ಜೀವಸಂಕುಲಗಳು ಕಣ್ಮರೆಯೇ ಆಗಿಬಿಟ್ಟವು. ನೀರ ಸೆಲೆಯ ಜಾಗಗಳಲ್ಲೇ ಭೂಮಿ ಬರಡಾಯಿತು. ಎಲ್ಲರ ಹಣದ ಹಪಾಹಪಿ ಮುಂದೆ ಪರಿಸರ ಸತ್ಯಗಳು ಅಣಕಿಸಲ್ಪಟ್ಟವು. ಸರಳ ಜೀವನ ನಗೆಪಾಟಲಿಗೀಡಾಯಿತು. ಸಹಜ ಕಾಡು ಕಣ್ಮರೆಯಾಗುವುದರ ಜೊತೆಗೆ ನೆಲಮೂಲದ ಬದುಕು ಕೂಡಾ ಸಂಕಷ್ಟಗಳ ಸರಮಾಲೆ ಅನುಭವಿಸಬೇಕಾಯಿತು. ಇವತ್ತು ಈ ಅಕೇಶಿಯಾ ಮಲೆನಾಡನ್ನು ದುಃಸ್ವಪ್ನದಂತೆ ಕಾಡುತ್ತಿದೆ‌.

(ಮುಂದುವರೆಯಲಿದೆ‌…)

ನಾಗರಾಜ ಕೂವೆ

ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ

More articles

Latest article