ಜೆಎನ್ ಯೂ ನಲ್ಲಿ ಎಬಿವಿಪಿ ದಾಂಧಲೆ: ಹಲವರಿಗೆ ಗಾಯ

Most read

ಹೊಸದಿಲ್ಲಿ: ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಬಿಜೆಪಿಯ ಸೋದರ ಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ದಾಂಧಲೆ ನಡೆಸಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಎನ್‌ ಯೂ ವಿದ್ಯಾರ್ಥಿ ಸಂಘಟನೆಯ ಚುನಾವಣೆಗೆ ಚುನಾವಣಾ ಅಧಿಕಾರಿಗಳ ನೇಮಕ ಸಂಬಂಧ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಜೊತೆ ಜಗಳಕ್ಕೆ ಇಳಿದ ಎಬಿವಿಪಿ ದಾಂಧಲೆ ನಡೆಸಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಲವರು ಗಾಯಗೊಂಡರು.

ಜೆಎನ್‌ ಯೂ ವಿದ್ಯಾರ್ಥಿ ಸಂಘಟನೆ (JNSU) ಗೆ ಚುನಾವನೆಗಳು ನಡೆಯಬೇಕಿದ್ದು, ಚುನಾವಣಾಧಿಕಾರಿ ನೇಮಕ ಸಂಬಂಧ ಸರ್ವಸದಸ್ಯರ ಸಭೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಗಳ ತೆಗೆದ ಎಬಿವಿಪಿ ಮುಖಂಡರು ವಿದ್ಯಾರ್ಥಿ ಸಂಘಟನೆ ಮುಖಂಡರೊಂದಿಗೆ ಸಂಘರ್ಷಕ್ಕೆ ಇಳಿದರು.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ವಿದ್ಯಾರ್ಥಿಯೊಬ್ಬನನ್ನು ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ವಿದ್ಯಾರ್ಥಿಗಳ ಮೇಲೆ ಬೈಸಿಕಲ್‌ ಎಸೆಯುವ ದೃಶ್ಯಗಳು ದಾಖಲಾಗಿದೆ. ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ರಕ್ಷಿಸಲು ಪ್ರಯತ್ನ ಪಟ್ಟರೂ ಹಲವು ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಥಳಿಸುತ್ತ ಗೂಂಡಾಗಿರಿ ಮಾಡುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣುತ್ತಿವೆ.

ಎಬಿವಿಪಿ ದಾಂಧಲೆ ಕುರಿತಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದಕ್ಕೆ ಎಬಿವಿಪಿ ಕೂಡ ಪ್ರತಿದೂರು ದಾಖಲಿಸಿದೆ. ನಾವು ಎಲ್ಲ ದೂರುಗಳನ್ನು ಪರಿಶೀಲಿಸುತ್ತಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಕುರಿತು ಮಾಹಿತಿ ದೊರೆತಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಘಟನೆ ಕುರಿತಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇದುವರೆಗೆ ಮೌನ ವಹಿಸಿದ್ದು, ಎಷ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರಾಬಲ್ಯ ಹೊಂದಿದ್ದ ಜೆಎನ್‌ ಯೂ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಳುವ ಬಿಜೆಪಿ ಸರ್ಕಾರದ ಬೆಂಬಲ ಹೊಂದಿರುವ ಎಬಿವಿಪಿ ಹಲವು ಬಾರಿ ದಾಂಧಲೆಗಳನ್ನು ನಡೆಸಿರುವ ಘಟನೆಗಳು ನಡೆದಿವೆಯಲ್ಲದೆ, ಈ ಬಗ್ಗೆಯ ಹಿಂಸಾಚಾರದ ಸಂದರ್ಭದಲ್ಲಿ ಹೊರಗಿನಿಂದ ಬಂದ ಗೂಂಡಾಶಕ್ತಿಗಳು ಮಾರಕಾಸ್ತ್ರಗಳನ್ನು ಬಳಸಿ ವಿದ್ಯಾರ್ಥಿಗಳನ್ನು ಥಳಿಸಿರುವ ಘಟನೆಗಳು ಪದೇಪದೇ ವರದಿಯಾಗುತ್ತಿವೆ.

More articles

Latest article