ಬಡವರ ಮಕ್ಕಳ ತಲೆಯಲ್ಲಿ ಹುಸಿ ದೇಶಭಕ್ತಿಯನ್ನು ಹಾಗೂ ಅನ್ಯ ಧರ್ಮ ದ್ವೇಷವನ್ನು ತುಂಬಿ ಹೀನ ಕೃತ್ಯಗಳಿಗೆ ಪ್ರೇರೇಪಿಸುವ ಶಕ್ತಿಗಳು ಸಕ್ರಿಯವಾಗಿವೆ. ದೇಶಪ್ರೇಮದ ಹೆಸರಲ್ಲಿ ಧರ್ಮದ ಆಧಾರದಲ್ಲಿ ದೇಶದಲ್ಲಿ ಅಶಾಂತಿ ಹುಟ್ಟಿಸಿ ದ್ವೇಷವನ್ನು ಪಸರಿಸುತ್ತಿರುವ ಈ ಮತೀಯವಾದಿಗಳಿಂದ ಮೆದುಳು ತೊಳೆಸಿಕೊಂಡು ಎಬಿವಿಪಿ ಸೇರಿ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಹಾಕಿಸಿಕೊಂಡು ಮುಂದಿನ ಭವಿಷ್ಯವನ್ನು ಅನೇಕರು ಹಾಳು ಮಾಡಿಕೊಳ್ಳುತ್ತಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಎಬಿವಿಪಿ ಎನ್ನುವ ಸಂಘ ಪರಿವಾರದ ವಿದ್ಯಾರ್ಥಿ ಅಂಗ ಸಂಸ್ಥೆ ಫೆಬ್ರವರಿ 24 ರಂದು ಗಲಾಟೆ ದಾಂಧಲೆ ಹಲ್ಲೆ ಮಾಡಿದೆ. ವಿವಿ ನಾಮಫಲಕಕ್ಕೆ ಮಸಿ ಬಳಿದು, ರಾಷ್ಟ್ರದ್ವಜದ ಜೊತೆಗೆ ಕೇಸರಿ ದ್ವಜವನ್ನೂ ಹಿಡಿದು ” ಭಾರತ ಮಾತಾಕೀ ಜೈ, ವಂದೇ ಮಾತರಂ” ಘೋಷಣೆಗಳನ್ನು ಕೂಗಿದೆ.
ವಿರೋಧಕ್ಕೆ ಎಬಿವಿಪಿ ಕೊಡುವ ಕಾರಣಗಳು ಹೀಗಿವೆ-
* ಯೂನಿವರ್ಸಿಟಿಯಲ್ಲಿ All India Student Association ( AISA) ಎನ್ನುವ ವಿದ್ಯಾರ್ಥಿ ಸಂಘಟನೆ ಬೆಂಬಲಿತ ಸ್ಪಾರ್ಕ್ ವಿಭಾಗದ ವಿದ್ಯಾರ್ಥಿಗಳು 1991 ಫೆಬ್ರುವರಿ 23 ರಲ್ಲಿ ಕುನಾನ್ ಪೋಷ್ಪುರಾ ಗ್ರಾಮಗಳಲ್ಲಿ ಭಾರತೀಯ ಸೇನೆಯಿಂದ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ 35 ನೇ ವಾರ್ಷಿಕೋತ್ಸವದ ಕುರಿತು ಚರ್ಚಾ ಕಾರ್ಯಕ್ರಮ ಆಯೋಜಿಸಿದೆ.
* ಇದು ಭಾರತೀಯ ಸೇನೆಗೆ ಮಾಡುವ ಅವಮಾನವಾಗಿದೆ.
* ಈ ಕಾರ್ಯಕ್ರಮವು ದೇಶ ವಿರೋಧಿಯಾಗಿದ್ದು ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಹುನ್ನಾರವಾಗಿದೆ.
* ಇಂತಹ ದೇಶದ್ರೋಹಿ ಕಾರ್ಯಕ್ರಮಕ್ಕೆ ಈ ವಿಶ್ವವಿದ್ಯಾಲಯ ಅನುಮತಿ ನೀಡಿದೆ.

ಇವು 20-25 ಮಂದಿ ದೇಶಭಕ್ತ ಎಬಿವಿಪಿ ಕಾರ್ಯಕರ್ತರ ಆರೋಪವಾಗಿದೆ. ಇದರಿಂದಾಗಿ ಕೋಪೋದ್ರಿಕ್ತರಾದ ಈ ನಕಲಿ ದೇಶಪ್ರೇಮಿಗಳು ಖಾಸಗಿ ಯೂನಿವರ್ಸಿಟಿ ಕ್ಯಾಂಪಸ್ಸಿಗೆ ಅನಧಿಕೃತವಾಗಿ ನುಗ್ಗಿದ್ದಾರೆ. ಮುಖ್ಯ ನಾಮಫಲಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಗೋಡೆಗಳ ಮೇಲೆ ” Ban SPARK” ಎಂದು ಸ್ಪ್ರೇ ಪೇಂಟ್ ಮಾಡಿದ್ದಾರೆ. ಕಬ್ಬಿಣದ ಸಲಾಕೆಯಿಂದ ವಿವಿ ಲೋಗೋಕ್ಕೆ ಹಾನಿ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿ ಹಾಗೂ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಮಾರಕ ಹಲ್ಲೆ ಮಾಡಿದ್ದಾರೆ. ರಾಷ್ಟ್ರಧ್ವಜ, ಕೇಸರಿ ಬಾವುಟ ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.
“ಜಮ್ಮು ಕಾಶ್ಮೀರದ ಪ್ರತ್ಯೇಕವಾದವನ್ನು ಬೆಂಬಲಿಸಲಾಗಿದೆ ಹಾಗೂ ಇದು ಕಾಶ್ಮೀರವನ್ನು ಭಾರತದಿಂದ ವಿಭಜಿಸುವ ಕಾರ್ಯಸೂಚಿಯಾಗಿದೆ ಹಾಗೂ ಭಾರತೀಯ ಸೇನೆಗೆ ಮಾಡಿದ ಅವಮಾನವಾಗಿದೆ” ಎಂದು ಎಬಿವಿಪಿ ಗೂಂಡಾ ಗುಂಪು ತಮ್ಮ ಕಾನೂನು ವಿರೋಧಿ ಕೃತ್ಯಕ್ಕೆ ಸಮರ್ಥನೆಗಳನ್ನು ಕೊಡುತ್ತಿದೆ. ಇದನ್ನು ಬಿಜೆಪಿ ಬೆಂಬಲಿಸುತ್ತಿದೆ.
ಎಲ್ಲಾ ಮುಗಿದಾದ ಮೇಲೆ ಬಂದ ಪೊಲೀಸರು ಸಂಘಿ ವಿದ್ಯಾರ್ಥಿಗಳನ್ನು ತಮ್ಮ ವಶಕ್ಕೆ ಪಡೆದು ಅಕ್ರಮ ಸಭೆ, ಅಕ್ರಮ ಪ್ರವೇಶ, ಹಲ್ಲೆ, ಆಸ್ತಿ ಹಾನಿ ಹಾಗೂ ಬೆದರಿಕೆ ಸೆಕ್ಷನ್ ಗಳ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಐದು ನೂರಕ್ಕೂ ಹೆಚ್ಚು ಸಂಖ್ಯೆಯ ಆ ಯುನಿವರ್ಸಿಟಿಯ ವಿದ್ಯಾರ್ಥಿಗಳು ಈ ಗೂಂಡಾಗಿರಿ ವಿರೋಧಿಸಿ ಕ್ಯಾಂಪಸ್ಸಿನಲ್ಲಿ ಪದ ಸಂಚಲನ ಮಾಡಿದ್ದಾರೆ, ಸಭೆ ಮಾಡಿ ದಾಂಧಲೆಕೋರರನ್ನು ಖಂಡಿಸಿದ್ದಾರೆ. ಇದು ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ಮಾಡಲಾದ ದಾಳಿ’ ಎಂದು ಘೋಷಿಸಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಗಳು ಈ ದಮನಕಾರಿ ದಾಳಿಯನ್ನು ಖಂಡಿಸಿವೆ. ಯಥಾಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಆರೋಪ ಪ್ರತ್ಯಾರೋಪಗಳ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇಸ್ಲಾಮೋಫೋಬಿಯಾ ಪೀಡಿತ ಗೋದಿ ಮಾಧ್ಯಮಗಳು ಎಬಿವಿಪಿ ವಿದ್ಯಾರ್ಥಿ ಗುಂಪಿನ ಗೂಂಡಾಗಿರಿ ದಾಳಿಯನ್ನು ಸಮರ್ಥಿಸಿ ಪ್ರಚಾರ ಮಾಡುವಲ್ಲಿ ನಿರತವಾಗಿವೆ.
ವಿಶ್ವವಿದ್ಯಾಲಯದ ಸ್ಪಷ್ಟನೆ
ಇಷ್ಟಕ್ಕೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದವರು “ನಾವು ಕಾಶ್ಮೀರ ವಿಷಯದ ಕುರಿತು ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಯಾವುದೇ ಇವೆಂಟ್ ಮಾಡಬೇಕಾದರೂ ಕಠಿಣ ನಿಯಮಗಳನ್ನು ಪಾಲಿಸುತ್ತೇವೆ” ಎಂದು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಅಂತಹ ಯಾವುದೇ ಕಾರ್ಯಕ್ರಮದ ಆಯೋಜನೆಗೆ ಅನುಮತಿಯನ್ನು ಕೊಟ್ಟಿಲ್ಲದೇ ಇದ್ದರೂ ಈ ಎಬಿವಿಪಿ ಸಂಘಿಗಳು ರೌಡಿತನದ ವೀರತ್ವ ತೋರಿದ್ಯಾಕೆ? ಯಾಕೆಂದರೆ ಅಂತಹ ಒಂದು ಚರ್ಚಾಕೂಟ AISA ಸಂಘಟನೆಯ ವಿದ್ಯಾರ್ಥಿಗಳಿಂದ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಈ ದೇಶಭಕ್ತರ ಕಿವಿಗೆ ತಲುಪಿದೆ. ಇಂತಹ ವಿವಾದಾತ್ಮಕ ವಿಷಯಕ್ಕೆ ಕಾಯುತ್ತಿದ್ದ ಈ ವಿದ್ಯಾರ್ಥಿ ವೇಷದ ಕೇಸರಿಗರು ಜ್ಞಾನ ಕೇಂದ್ರವಾದ ವಿವಿ ಮೇಲೆ ದಾಳಿ ಮಾಡಿ ತಮ್ಮ ದೇಶಭಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಹಿಂಸೆ ಹಲ್ಲೆಗಳ ಮೂಲಕವೇ ದೇಶಪ್ರೇಮ ಉಳಿಸಿಕೊಳ್ಳುವ ಕೆಲಸವನ್ನು ಮಾಡಿ ಸುದ್ದಿಯಾಗಿದ್ದಾರೆ.
ಹೋಗಲಿ.. ವಿವಿ ಗಳಲ್ಲಿ ಚರ್ಚೆಗಳನ್ನು ಏರ್ಪಡಿಸಬಾರದೇ? ದೇಶದಲ್ಲಾದ ದಮನ ಅತ್ಯಾಚಾರಗಳ ಬಗ್ಗೆ ಮಾತಾಡಬಾರದೇ? ಅಗತ್ಯ ಇರಲಿ ಬಿಡಲಿ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಎಲ್ಲದರ ಬಗ್ಗೆ ಈ ಎಬಿವಿಪಿ ಸಂಘಿಗಳು ಗಲಭೆ ಗಲಾಟೆ ಎಬ್ಬಿಸಿ ಪ್ರತಿಭಟಿಸಬಹುದು, ಆದರೆ ಭಿನ್ನ ಸಿದ್ಧಾಂತದವರು ಮಾತ್ರ ಚರ್ಚೆ ಮಾಡಬಾರದಾ? ಆಯ್ತು, ಈ ಗುಂಪಿನವರು ಆರೋಪಿಸುವಂತೆ ಕ್ಯಾಂಪಸ್ಸಿನಲ್ಲಿ ದೇಶವಿರೋಧಿ ಚಟುವಟಿಕೆಗಳೇ ನಡೆಯುತ್ತಿದ್ದರೆ ದೂರು ಕೊಡಬಹುದಾಗಿದೆ. ಶಾಂತಿಯುತವಾಗಿ ಪ್ರೊಟೆಸ್ಟ್ ಮಾಡಬಹುದಾಗಿದೆ. ಕಾನೂನಾತ್ಮಕವಾಗಿ ಹೋರಾಟ ಮಾಡಬಹುದಾಗಿದೆ. ಇಲ್ಲವೇ ತಾವೂ ಒಂದು ಸೆಮಿನಾರ್ ಮಾಡಬಹುದಾಗಿದೆ. ಆದರೆ ಇದ್ಯಾವುದನ್ನೂ ಮಾಡದೇ ಕಾನೂನನ್ನು ಕೈಗೆ ತೆಗೆದುಕೊಂಡು ಹಿಂಸಾತ್ಮಕತೆ ಸೃಷ್ಟಿಸಿದ್ದು ಅಕ್ಷಮ್ಯವಾಗಿದೆ. ಕಾನೂನು ವಿರೋಧಿ ಹಾಗೂ ಸಂವಿಧಾನ ವಿರೋಧಿ ಕೃತ್ಯವಾಗಿದೆ.

ಅಸಲಿಗೆ ಆಗಿದ್ದಾದರೂ ಏನು?
ಈ ಯೂನಿವರ್ಸಿಟಿಯಲ್ಲಿ ಸ್ಪಾರ್ಕ್ ರೀಡಿಂಗ್ ಸರ್ಕಲ್ ಎನ್ನುವ AISA ಬೆಂಬಲಿತ ವಿದ್ಯಾರ್ಥಿ ಸಂಘ ಇದೆ. ಫೆ 23 ರಂದು ಸಂಜೆ 6 ಗಂಟೆಗೆ ಕಾಶ್ಮೀರದ ಕುನಾನ್ ಪೋಶ್ಪೋರಾ ಅತ್ಯಾಚಾರ ಘಟನೆಯ ಕುರಿತು ಚರ್ಚಿಸಲು ಸೆಮಿನಾರ್ ಒಂದನ್ನು ವಿದ್ಯಾರ್ಥಿಗಳು ಆಯೋಜಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಚರ್ಚೆಯನ್ನು ಹಾಳುಮಾಡಿ ವಿಧ್ವಂಸಕ ಕಾರ್ಯದಲ್ಲಿ ನಿರತರಾಗಿದ್ದಾರೆ. ತಡೆಯಲು ಬಂದ ವಿದ್ಯಾರ್ಥಿ ಹಾಗೂ ಸೆಕ್ಯುರಿಟಿ ಮೇಲೆ ಮಾರಣಾಂತಿಕ ಹಲ್ಲೆ ಕೂಡಾ ಮಾಡಿದ್ದಾರೆ.
ಇಷ್ಟೆಲ್ಲಾ ದಮನಕಾಂಡವನ್ನು ಈ ಸಂಘಿ ಸಂತಾನದವರು ನಡೆಸಿದ್ದಾದರೂ ಯಾಕೆ? ಯಾಕೆಂದರೆ, 1991 ರ ಈ ದಿನ ಭಾರತೀಯ ಸೇನೆಯ ಸೈನಿಕರಿಂದ ಕುನಾನ್ ಪೋಷ್ಪೋರಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕರಾಳ ದಿನದ ಕಹಿನೆನಪಿಗಾಗಿ ಫೆ.23 ರಂದು ಕಾಶ್ಮೀರಿ ಮಹಿಳೆಯರು ಪ್ರತಿರೋಧದ ದಿನ ಎಂದು ಗುರುತಿಸುತ್ತಾರೆ. ಆದರೆ ಸಂಘ ಪರಿವಾರ ಇದನ್ನು ದೇಶವಿರೋಧಿ ಹಾಗೂ ಭಾರತೀಯ ಸೇನೆಗೆ ಅಪಮಾನ ಮಾಡುವ ಹುನ್ನಾರ ಎಂದು ವಿರೋಧಿಸುತ್ತಲೇ ಬಂದಿದೆ.
ಹಾಗಾದರೆ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸುವುದು ತಪ್ಪಾ? ಸಾಮೂಹಿಕ ಅತ್ಯಾಚಾರವನ್ನು ಭಾರತೀಯ ಸೇನೆ ಮಾಡಿದರೆ ಅದರ ಬಗ್ಗೆ ಮಾತಾಡುವುದು ದೇಶದ್ರೋಹವಾ? ಮಹಿಳೆಯರ ಮೇಲೆ ಯಾರೇ ದಾಳಿ ಅತ್ಯಾಚಾರ ಹಲ್ಲೆ ಹತ್ಯೆ ಮಾಡಿರಲಿ ಅದನ್ನು ವಿರೋಧಿಸುವುದು ಮಾನವೀಯತೆಯಾಗುತ್ತದೆ. ಸೇನೆ ಮಾಡಿದೆ ಎಂದು ರಿಯಾಯತಿ ಘೋಷಿಸಲು ಈ ದೇಶದ ಕಾನೂನಿನಲ್ಲಿ ಅವಕಾಶವಿಲ್ಲ.
ಭಾರತೀಯ ಸೇನೆಯ ಮೇಲಿರುವ ಆಪಾದಗಳೇನು?
ಅದು ಕಾಶ್ಮೀರದಲ್ಲಿ ಸಂಘರ್ಷ ಉಲ್ಬಣಗೊಂಡ ಸಮಯ. 1991 ರ ಫೆಬ್ರವರಿ 23 ರಂದು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕುನಾನ್ ಮತ್ತು ಪೋಷ್ಪೋರಾ ಎನ್ನುವ ಅವಳಿ ಗ್ರಾಮಗಳಿಗೆ ಭಾರತೀಯ ಸೇನೆಯ 4 ನೇ ರಜಪೂತಾನಾ ರೈಫಲ್ಸ್ ಪಡೆ, CRPF, BSF ಸೇರಿದಂತೆ ಪ್ಯಾರಾ ಮಿಲಿಟರಿ ಪಡೆಯ 125 ಸೈನಿಕರು ಸರ್ಚ್ ಆಪರೇಶನ್ ಹೆಸರಲ್ಲಿ ನುಗ್ಗುತ್ತದೆ. ಪುರುಷರನ್ನು ಶಾಕ್ ಟ್ರೀಟ್ಮೆಂಟ್ ಕೊಟ್ಟು ಹಿಂಸಿಸಲಾಗುತ್ತದೆ ಹಾಗೂ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗುತ್ತದೆ ಎಂಬ ಗುರುತರ ಆರೋಪ ಈ ಸೇನೆಯ ಮೇಲಿದೆ.
* ಜರೀಫಾ ಬಾನೋ ಎನ್ನುವ 9 ತಿಂಗಳ ಮಹಿಳೆಯ ಮೇಲೆ 7 ಜನ ಸೈನಿಕರು ಅತ್ಯಾಚಾರ ಮಾಡಿದ್ದರು.
* 13 ವಯಸ್ಸಿನ ಬಾಲಕಿಯರಿಂದ ಹಿಡಿದು 80 ವರ್ಷದ ಮಹಿಳೆಯರನ್ನೂ ಬಿಡದೇ ಸುಮಾರು ನೂರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಗಳು ದಾಖಲಿಸಿವೆ.
* ಸ್ಥಳೀಯ ಮ್ಯಾಜಿಸ್ಟ್ರೇಟ್ ಮಾರ್ಚ್ 5 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ 23 ಮಹಿಳೆಯರು ಮಾಡಿದ ರೇಪ್ ಆರೋಪವನ್ನು ದೃಢೀಕರಿಸಿದ್ದರು.
* ಕೆಲವು ವರದಿಗಳು 53 ಮಹಿಳೆಯರನ್ನು ಸಂದರ್ಶಿಸಿ ಅತ್ಯಾಚಾರಗಳನ್ನು ದೃಢಪಡಿಸಿದ್ದವು.
* ಮಾನವ ಹಕ್ಕು ಸಂಸ್ಥೆಗಳು ಈ ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತನಿಖೆಗೆ ಒತ್ತಾಯಿಸಿದ್ದವು.
ಇಷ್ಟೆಲ್ಲಾ ಆದರೂ ಯಥಾಪ್ರಕಾರ ಭಾರತೀಯ ಸೇನೆ ಹಾಗೂ ಆಗಿನ ಕೇಂದ್ರ ಸರಕಾರವು ಅತ್ಯಾಚಾರ ಘಟನೆಯನ್ನೇ ಸಂಪೂರ್ಣವಾಗಿ ನಿರಾಕರಿಸಿವೆ. ಸರಕಾರಿ ತನಿಖೆಗಳು ಆರೋಪ ಸಾಬೀತಾಗಿಲ್ಲ ಎಂದು ವರದಿ ಮಾಡಿವೆ. ಇಲ್ಲಿಯವರೆಗೂ ಈ ದುರ್ಘಟನೆಯಲ್ಲಿ ಶಾಮೀಲಾದ ಸೇನೆಯ ಯಾರಿಗೂ ಶಿಕ್ಷೆಯಾಗಿಲ್ಲ. 2013 ರಲ್ಲಿ ಬಾಧಿತ ಮಹಿಳೆಯರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಹೈಕೋರ್ಟಿನಲ್ಲಿ ಪಿಟಿಷನ್ ಸಲ್ಲಿಸಿದ್ದರು. ನ್ಯಾಯಾಲಯದಿಂದ ಪರಿಹಾರ, ಮರುತನಿಖೆ ಕುರಿತು ಕೆಲವು ಆದೇಶಗಳಾದವು. ಆದರೆ ಕೋರ್ಟ್ ನಲ್ಲಿ ಸೇನೆಯ ಆಕ್ಷೇಪದಿಂದ ವಿಚಾರಣೆ ಸ್ಥಗಿತಗೊಂಡಿತು. ಆದರೆ 35 ವರ್ಷಗಳಾದರೂ ಇಂದಿಗೂ ನ್ಯಾಯಕ್ಕಾಗಿ ಸಂತ್ರಸ್ತರಿಂದ ಹೋರಾಟ ಮುಂದುವರೆದಿದೆಯಾದರೂ ವಿಚಾರಣೆ ಪೂರ್ಣಗೊಂಡಿಲ್ಲ, ಇಲ್ಲಿಯವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಶಿಕ್ಷೆ ಆಗುವುದೂ ಇಲ್ಲಾ. ಯಾಕೆಂದರೆ AFSPA ಎನ್ನುವ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆ ಪ್ರಕಾರ ಭಯೋತ್ಪಾದನೆಯ ಪ್ರದೇಶಗಳಲ್ಲಿ ಭಾರತೀಯ ಸೇನೆ ಏನೇ ಮಾಡಿದರೂ ಅವರನ್ನು ಕೋರ್ಟು, ಕೇಸು, ವಿಚಾರಣೆ, ಶಿಕ್ಷೆಯ ಪ್ರಕ್ರಿಯೆಗಳಿಂದ ಹೊರಗಿಡಲಾಗಿದೆ. ಈ ಕರಾಳ ಕಾನೂನನ್ನು ಕಿತ್ತು ಹಾಕಬೇಕು, ಈ ಕಾನೂನಿನ ಪರಿಧಿ ಈಶಾನ್ಯ ಭಾರತ ಹಾಗೂ ಕಾಶ್ಮೀರಗಳನ್ನು ಮುಕ್ತಗೊಳಿಸಬೇಕು ಎಂಬುದು ಈ ಪ್ರದೇಶಗಳ ಬಹುದಿನಗಳ ಬೇಡಿಕೆಯಾಗಿದೆ. ಇಂತಹುದನ್ನು ಚರ್ಚಿಸಲೆಂದೇ ಸಭೆಯನ್ನು ಆಯೋಜಿಸಲಾಗಿತ್ತು. ಇದರ ವಿರುದ್ಧ ಆರೆಸ್ಸೆಸ್ ನಿರ್ದೇಶಿತ ಎಬಿವಿಪಿ ಗೂಂಡಾಪಡೆ ವಿಧ್ವಂಸಕ ಕೃತ್ಯವನ್ನು ಎಸಗಿತು.
ಭಾರತೀಯ ಸೇನೆ ಮಾಡಲಾಗಿದೆ ಎನ್ನಲಾದ ದಬ್ಬಾಳಿಕೆ, ಅತ್ಯಾಚಾರಗಳನ್ನು ಸಮರ್ಥಿಸಿಕೊಳ್ಳುತ್ತಾರೆ ಏಕೆ?
ಇಷ್ಟೆಲ್ಲಾ ಆದರೂ ಅತ್ಯಾಚಾರಕ್ಕೆ ಒಳಗಾದವರು ಮುಸ್ಲಿಂ ಮಹಿಳೆಯರಾಗಿರುವುದರಿಂದ, ಕಾಶ್ಮೀರಿಗಳನ್ನು ದೇಶದ್ರೋಹಿಗಳು ಎಂದೇ ಈ ಹಿಂದುತ್ವವಾದಿಗಳು ಪರಿಗಣಿಸಿರುವುದರಿಂದ ಈ ಸಂಘಿ ರಾಷ್ಟ್ರೀಯವಾದಿಗಳು ಭಾರತೀಯ ಸೇನೆ ಮಾಡಲಾಗಿದೆ ಎನ್ನಲಾದ ದಬ್ಬಾಳಿಕೆ ಹಾಗೂ ಸಾಮೂಹಿಕ ಅತ್ಯಾಚಾರಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಆ ದುರಂತ ಘಟನೆಯ ಬಗ್ಗೆ ಚರ್ಚಿಸುವುದೂ ಸಹ ದೇಶದ್ರೋಹ ಎನ್ನುವ ನರೇಟಿವ್ ಒಂದನ್ನು ಸೆಟ್ ಮಾಡಲಾಗಿದೆ. ಇದರ ಭಾಗವಾಗಿಯೇ ಚರ್ಚಿಸುವ ಪ್ರಯತ್ನವೊಂದು ಅಜಿಂ ಪ್ರೇಮ್‌ಜಿ ಯುನಿವರ್ಸಿಟಿಯಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಬುಡಕ್ಕೆ ಬೆಂಕಿ ಬಿದ್ದವರಂತೆ ಹೌಹಾರಿದ ಸಂಘ ಪರಿವಾರದವರು ತಮ್ಮ ವಿದ್ಯಾರ್ಥಿ ಸಂಘದವರನ್ನು ಛೂ ಬಿಟ್ಟು ಗಲಾಟೆ ಹಲ್ಲೆಗಳನ್ನು ಮಾಡಿಸಿ ತಮ್ಮ ನಕಲಿ ದೇಶಪ್ರೇಮವನ್ನು ಹಾಗೂ ಮಾನವತಾ ವಿರೋಧಿತನವನ್ನು ತೋರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ದಾಳಿ ಮಾಡಿ ಸಂವಿಧಾನ ವಿರೋಧಿ ಕೃತ್ಯವನ್ನು ಎಸಗಿ ಕೃತಾರ್ಥರಾಗಿದ್ದಾರೆ.
ಅಪಾಯಕಾರಿ ಸಂಘಟನೆಗಳ ವ್ಯಾಪ್ತಿಯಿಂದ ತಮ್ಮ ಮಕ್ಕಳನ್ನು ದೂರವಾಗಿಸಬೇಕು
ಬಡವರ ಮಕ್ಕಳ ತಲೆಯಲ್ಲಿ ಹುಸಿ ದೇಶಭಕ್ತಿಯನ್ನು ಹಾಗೂ ಅನ್ಯ ಧರ್ಮ ದ್ವೇಷವನ್ನು ತುಂಬಿ ಇಂತಹ ಹೀನ ಕೃತ್ಯಗಳಿಗೆ ಪ್ರೇರೇಪಿಸುವ ಶಕ್ತಿಗಳು ಸಕ್ರಿಯವಾಗಿವೆ. ದೇಶಪ್ರೇಮದ ಹೆಸರಲ್ಲಿ ಧರ್ಮದ ಆಧಾರದಲ್ಲಿ ದೇಶದಲ್ಲಿ ಅಶಾಂತಿ ಹುಟ್ಟಿಸಿ ದ್ವೇಷವನ್ನು ಪಸರಿಸುತ್ತಿರುವ ಈ ಮತೀಯವಾದಿಗಳಿಂದ ಮೆದುಳು ತೊಳೆಸಿಕೊಂಡು ಎಬಿವಿಪಿ ಸೇರಿ, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಹಾಕಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನ ಹಾಗೂ ಮುಂದಿನ ಭವಿಷ್ಯವನ್ನು ಅನೇಕರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ದ್ವೇಷಪೀಡಿತ ಹಿಂಸಾ ಕಾರ್ಯಗಳಿಗೆ ಪ್ರಚೋದಿಸುವ ಸಂಘ ಪರಿವಾರದ ನಾಯಕರುಗಳ ಮಕ್ಕಳು ದೊಡ್ಡ ದೊಡ್ಡ ಯುನಿವರ್ಸಿಟಿಗಳಲ್ಲಿ ಓದಿ ತನ್ನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದರೆ, ಹಿಂದುಳಿದ ವರ್ಗದಿಂದ ಬಂದ ವಿದ್ಯಾರ್ಥಿಗಳು ದೇಶಭಕ್ತಿ ಎಂಬ ಭ್ರಮೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಮರೆತು ಹಿಂಸಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇಂತಹ ಅಪಾಯಕಾರಿ ಸಂಘಟನೆಗಳ ವ್ಯಾಪ್ತಿಯಿಂದ ತಮ್ಮ ಮಕ್ಕಳನ್ನು ದೂರವಾಗಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕಿದೆ, ಇಲ್ಲದೇ ಹೋದರೆ ಸ್ಟೇಶನ್, ಕೋರ್ಟ್ ಅಂತೆಲ್ಲಾ ಅಲೆದಾಡಬೇಕಾಗುತ್ತದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-http://ನಾಟಕ ವಿಮರ್ಶೆ | ಕುರುಡು ಕಾಂಚಾಣದವತಾರಗಳ “MONEY ಯೇ ದೇವರು” https://kannadaplanet.com/drama-review-money-is-god/


