ಬೆಳಗಾವಿ: ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು, ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.
ಬೆಳಗಾವಿ ನಗರದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ದೆಹಲಿ, ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲಿ ಬಿಜೆಪಿ ಹೂಡಿದ ಕುತಂತ್ರವನ್ನೇ ಕರ್ನಾಟಕದಲ್ಲೂ ಹೂಡಿದೆ. ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಯಾರೋ ಖಾಸಗಿ ವ್ಯಕ್ತಿಯ ದೂರನ್ನು ಆಧರಿಸಿ ತಮ್ಮ ಹುದ್ದೆಯ ಗೌರವವನ್ನೂ ಲೆಕ್ಕಿಸದೆ ಬಿಜೆಪಿಗರ ಒತ್ತಡಕ್ಕೆ ರಾಜ್ಯಪಾಲರು ಮಣಿದಿದ್ದು ದುರ್ದೈವದ ಸಂಗತಿ.
ಬಿಜೆಪಿ ಮತ್ತು ಮಿತ್ರಪಕ್ಷದ ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಬಾಕಿ ಉಳಿದಿದ್ದರೂ ರಾಜ್ಯಪಾಲರು ಯಾಕೆ ತಲೆ ಕೆಡಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದರು.
ಎಚ್.ಡಿ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯೇ ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ ಕಡತವನ್ನು ಸಹ ಸುಮಾರು 2 ವರ್ಷಗಳಿಂದ ರಾಜ್ಯಪಾಲರು ಬಾಕಿ ಉಳಿಸಿಕೊಂಡಿದ್ದಾರೆ. ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ. ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ನಂತೆ ವರ್ತಿಸಬಾರದು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಉನ್ನತ ನಾಯಕರನ್ನು ವಿನಾ ಕಾರಣ ಬಂಧನದಲ್ಲಿರಿಸಿ ಕಿರುಕುಳ ನೀಡುವ ಮೂಲಕ ಎಎಪಿ ಪಕ್ಷವನ್ನು ದುರ್ಬಲಗೊಳಿಸಬಹುದು ಎಂದು ಮೋದಿ-ಶಾ ಜೋಡಿ ಗ್ರಹಿಸಿದ್ದರು. ಆದರೆ ಪಕ್ಷವು ಹಿಂದಿಗಿಂತಲೂ ಪ್ರಬಲಗೊಂಡಿದ್ದು, ಸಂಘಟನಾತ್ಮಕವಾಗಿ ಸದೃಡಗೊಂಡಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡುತ್ತ, ಅಂತಿಮವಾಗಿ ಸತ್ಯಕ್ಕೆ ಗೆಲುವಾಗುತ್ತದೆ ಎಂಬುದಕ್ಕೆ ಮನೀಶ್ ಸಿಸೋಡಿಯಾ ಅವರ ಬಿಡುಗಡೆಯೇ ಸಾಕ್ಷಿ. ನಮ್ಮ ಉನ್ನತ ನಾಯಕರೆಲ್ಲರೂ ಒಬ್ಬೊಬ್ಬರಾಗಿ ಬಿಡುಗಡೆಯಾಗುತ್ತಿದ್ದಾರೆ. ಸರ್ವಾಧಿಕಾರಿಯ ಮುಂದೆ ಮಂಡಿಯೂರಿ ಕೂರುವುದಕ್ಕಿಂತ ಜೈಲಿಗೆ ಹೋಗಲು ಆಯ್ಕೆ ಮಾಡಿದ ದೇಶಭಕ್ತ ಮತ್ತು ಕ್ರಾಂತಿಕಾರಿ ನಾಯಕರ ಸೈನಿಕರು ಎಂದು ನಾವು ಹೆಮ್ಮೆಪಡುತ್ತೇವೆ. ಇಂದು ದೇಶದ ಪ್ರಜಾಪ್ರಭುತ್ವವು ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ಜೈಲಿನಲ್ಲಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಉನ್ನತ ನಾಯಕರನ್ನು ಸುಳ್ಳು ಪ್ರಕರಣದಡಿ ಸಿಲುಕಿಸಿ ಜೈಲಿನಲ್ಲಿ ಇರಿಸಿದರೆ ಇಡೀ ಪಕ್ಷವನ್ನೇ ಮುಗಿಸಿಹಾಕಬಹುದೆಂದು ಬಿಜೆಪಿಗರು ಭಾವಿಸಿದ್ದರು. ಆದರೆ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರೆಲ್ಲರೂ ಜಿದ್ದಿನಿಂದ ಸಂಘಟನೆಗಿಳಿದ ಪರಿಣಾಮ ಪಕ್ಷವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಜನತೆ ಹೊಸ ಬದಲಾವಣೆಯನ್ನು ಬಯಸುತ್ತಿದೆ. ದೆಹಲಿ ಮಾದರಿಯ ಆಡಳಿತವನ್ನು ನಿರೀಕ್ಷಿಸುತ್ತಿದೆ. ಉಚಿತ ಯೋಜನೆಗಳ ಜೊತೆಜೊತೆಗೇ ರಾಜ್ಯದ ಅಭಿವೃದ್ಧಿಯನ್ನು ಬೇಡುತ್ತಿದೆ. ನಮ್ಮ ಹೋರಾಟ, ದ್ಯೇಯ, ನಿಷ್ಠೆ, ಜನಸೇವೆಯ ಬಗ್ಗೆ ಜನರಿಗೆ ಮನವರಿಕೆಯಾಗುತ್ತಿದೆ. ಹಿಂದೆಂದಿಗಿಂತಲೂ ಪ್ರಬಲವಾಗಿ ಎಎಪಿ ರಾಜ್ಯದಲ್ಲಿ ನೆಲೆಯೂರುತ್ತಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇವೆ. ಬಿಬಿಎಂಪಿ ಸೇರಿದಂತೆ ಎಲ್ಲ ಸ್ಥಳೀಯ ಚುನಾವಣೆಗಳಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗೆ ಗೌಡರ್ , ಮೋಹನ್ ದಾಸರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆವಾನಿ, ಖಜಾಂಚಿ ಪ್ರಕಾಶ್ ನೆಡುಂಗದಿ , ಬೆಳಗಾವಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಸೇರಿದಂತೆ
ಪಕ್ಷದ ಅನೇಕ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.