ಒಂದು ದೋಣಿಯ ಕಥೆ….

Most read

ಮೊದಲ ಭಾಗ ಇಲ್ಲಿದೆ –http://ಒಂದು ದೋಣಿಯ ಕಥೆ….https://kannadaplanet.com/a-story-of-a-boat/

ಬೇಸೂರು ಬಿಳಿನಾಯ್ಕರ ಮಗಳು ಪಾರ್ವತಿಯ ಮದುವೆ ಸಂಭ್ರಮ ತಾರಕಕ್ಕೇರಿತ್ತು. ನೆಪ ಮಾತ್ರಕ್ಕೆ ಹಿಂಗಾರಿ ಮದುವೆಯೂ ಏರ್ಪಟ್ಟಿತ್ತು. ಬೇಸೂರು ಬಿಳಿನಾಯ್ಕರ ಮದುವೆಯ ಭರ್ಜರಿ ತಯಾರಿಗೆ ಮುಖ್ಯವಾಗಿದ್ದು ಶ್ರೀಮಂತ ಮನೆತನದ ವನಗದ್ದೆ ಯಜಮಾನ ಗಿಡ್ಡನಾಯ್ಕರ ಮಗನಿಗೆ ಕೊಡೋದು ಅನ್ನೋ ವಿಚಾರ. ವನಗದ್ದೆ ಗಿಡ್ಡನಾಯ್ಕರ ಮನೆಯಲ್ಲಿ ಎರಡು ಗಂಡು ಮಕ್ಕಳ ಮದುವೆ. ಯಾವುದಕ್ಕೂ ಕೊರತೆ ಕಾಣದ ಗಿಡ್ಡನಾಯ್ಕರಿಗೆ ತನ್ನ ಮಕ್ಕಳ ಮದುವೆ ಸುತ್ತಮುತ್ತ ಯಾರೂ ಮಾಡಿರಬಾರದು, ಹಂಗೆ ಆಗಬೇಕು ಅಂತ ಹೊರಟವನು. ಅದು ಮೇ ತಿಂಗಳ ಹನ್ನೊಂದನೇ ತಾರೀಕು 1963 ನೇ ವರ್ಷ. ಬಿರು ಬಿಸಿಲು, ಸಂಜೆಯಾದರೆ ಮಳೆ ಸಾಧ್ಯತೆಯ ದಿನಗಳು. ಗಾಳಿ ಮಳೆಗೆ ವ್ಯತ್ಯಾಸವಿಲ್ಲದೇ ಸುರಿಯುವ ದಿನಗಳು. ಗಾಳಿಮಳೆ ಒಬ್ಬರಿಗೊಬ್ಬರು ತಬ್ಬಿಕೊಂಡು ಅರ್ಭಟಿಸುವ ದಿನಮಾನಗಳು. ಹಾಡು, ಹಸೆ, ಚಿತ್ತಾರ, ತೋರಣ, ಕೆಮ್ಮಣ್ಣು, ಶಾಸ್ತ್ರ ಒಂದೋ ಎರಡೋ ಮದುವೆಯೆಂದರೆ ಊರೆಲ್ಲಾ ಕೇಳುವ ಹಾಗೆ ಹೆಂಗಸರ ಹಾಡುಗಳು, ವಾಲಗದವರ ಸದ್ದು ಬೇಸೂರು ದಾಟಿ, ಪೂರ್ವಕ್ಕೆ ಹುಲಿದೇವರ ಬನ, ಆವಿನಹಳ್ಳಿ  ಉತ್ತರಕ್ಕೆ ಸೀತೂರು ಗುಡ್ಡ ಪಶ್ಚಿಮಕ್ಕೆ ಅಂಬಾರಗೊಡ್ಲು ದಾಟಿ ಒಂದುಮಾಡಿ ಮೊಳಗುತ್ತಿತ್ತು. ಎಷ್ಟಾದರೂ ದೀವರ ಮನೆ ಮದುವೆ ಅಂದ್ರೆ ಸಂಸ್ಕೃತಿಯೇ ತಾನೆದ್ದು ಬಂದಂತಲ್ಲವೆ?.

ಬೆಳಿಗ್ಗೆ ಹೊಳೆಂದಾಚಿಗಿನ ಹೊಳೆಬಾಗಿಲ ದಾರಿಯಲ್ಲಿ ವನಗದ್ದೆಯವರ ದಿಬ್ಬಣವೂ, ಜಾಲಸೀಮೆಯಿಂದ ಕೆತ್ಲುಗುಡ್ಡೆ ಮಾರ್ಗವಾಗಿ ಮಳೇಮಠದವರ ದಿಬ್ಬಣವೂ ಬೇಸೂರಿಗೆ ಬಂದಿಳಿದವು. ವನಗದ್ದೆ ಗಿಡ್ಡನಾಯ್ಕರ ಇನ್ನೊಬ್ಬ ಮಗನ ದಿಬ್ಬಣವು ಮಡೆನೂರು ಕಡೆಯಿಂದ ವರದಳ್ಳಿ ಸಮೀಪದ ಮೂರುಕಟ್ಟೆ ಊರಿನಿಂದ ಒಂದೆರಡು ಮೈಲುದೂರದ ಬಾಣನಕೊಪ್ಪಕ್ಕೆ ಹೋಯಿತು. ಬೇಸೂರಿನಲ್ಲಿ ಯಜಮಾನಪ್ಪನ ಮಗಳು ಪಾರ್ವತಿ ಮತ್ತು ಅವರ ಕಡೆಯವರಿಗಿದ್ದ ಸಂಭ್ರಮ ತಂದೆಯಿಲ್ಲದ ಮಗಳು ಹಿಂಗಾರಿ ಕಡೆಯವರಿಗೇನೂ ಇರಲಿಲ್ಲ. ವನಗದ್ದೆಯಿಂದ ನಲವತ್ತು ಐವತ್ತು ಮಂದಿ ಬಂದರೆ, ಮಳೇಮಠದ ಕಡೆಯಿಂದ ಏಳೆಂಟು ಮಂದಿ ಬಂದಿದ್ದರು. “ಸಮಯ ಆಗಿದೆ ಧಾರೆ ಮಾಡಿಕೊಡೋರು … ಹುಡುಗಿ ಕಡೆಯೋರು… ಬೇಗ ಬೇಗ ಬನ್ನಿ ಬನ್ನಿ” ಎಂದು ಭಟ್ರು ಕರೆದರು. ಬಿಳಿನಾಯ್ಕರು ಮತ್ತು ಭೈರಮ್ಮ ಹೊಸ ಪಂಚೆ ಸೀರೆಯುಟ್ಟು ಬಂದು ನಿಂತರು. ಭಟ್ಟರು ಪಾರ್ವತಿಯನ್ನು ವನಗದ್ದೆ ಮದುಮಗನನ್ನು ನಿಲ್ಲಿಸಿ “ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ| ಕಂಠೇ ಬದ್ನಾಮಿ ಸುಭಗೇತ್ವಂ ಜೀವಶರದಶ್ಯತಮ್…. ಎಂದೆಲ್ಲಾ ಹೇಳಿ ನಾಡನಂಟ್ರು, ಗುರುಹಿರಿಯರು, ಬಂಧುಬಳಗ…. ಹನ್ನೆರಡು ಕಂಬ….. ಹನ್ನೆರಡು ಕುಂಬ… ಎಂದೆಲ್ಲ ಹೇಳಿ ಪಾರ್ವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿಸಿದರು. ಊರೆಲ್ಲಾ ಜನ ಅಕ್ಕಿ ಕಾಳು ಬೀರಿ ಆಶೀರ್ವಾದ ಮಾಡಿದರು.

ಆದರೆ ಹಿಂಗಾರಿಯನ್ನು ಧಾರೆಯೆರೆಯಲು ಯಾರೂ ಸಿದ್ದವಾಗಿಲ್ಲ. ಗಾಮಮ್ಮ ತನ್ನ ಮೈದ್ನ ಕೊಲ್ಲಪ್ಪ ಮತ್ತು ನಾದ್ನಿ ಚಂದ್ರಮ್ಮ ಧಾರೆಯೆರೆಯುತ್ತಾರೆ ಎಂದು ಪೂರ್ಣ ನಂಬಿದ್ದಳು. ಆದರೆ ಕೊನೆಗಳಿಗೆಯಲ್ಲಿ ‘ನನಗಾಗಲ್ಲ’ ಎಂದು ಅಡ್ಡಹಾರಿದ. ಮುಂದೆ ಗಾಮಮ್ಮಳ ಹಿರಿ ಅಳಿಯ ಕತ್ರಿಕೊಪ್ಪದ ದೊಡ್ಡನಾಯ್ಕರು ಮತ್ತು ಬಸಮ್ಮ ಸೇರಿ ಅದೇ ಮುಹೂರ್ತದಲ್ಲಿ ಧಾರೆಯೆರೆದರು. ಅಂತೂ ಹಿಂಗಾರಮ್ಮ ಜಾಲಸೀಮೆಯ ಮಳೆಮಠವೆಂಬ ದೊಡ್ಡಮನೆಯ ಸೊಸೆಯಾಗಿ ಹೊರಟಳು. ಮದುವೆ ದಿನ ಮಳೆ ಬರಬಹುದೆಂದು ಗಾಬರಿಯಿಂದ ಎಲ್ಲರೂ ತಮ್ಮ ಶಾಸ್ತ್ರ ಮುಗಿಸಿ, ಊಟ ಮುಗಿಸಿ ಕತ್ಲಾಗೋದ್ರೊಳಗೆ ಊರು ಸೇರಬೇಕೆಂಬ ವನಗದ್ದೆ ಯಜಮಾನಪ್ಪನ ಮಾತು ಮೀರಲಾರದೆ ಹೊರಟರು. ಹೆಣ್ಣಿನ ದಿಬ್ಬಣಕ್ಕೆ ಯಾರ‍್ಯಾರು ಎಲ್ಲಿ ಹೋಗಬೇಕು ಅನ್ನೋ ಚರ್ಚೆ ಗಂಡಸ್ರು, ಹೆಂಗಸ್ರು ಮದ್ಯೆ  ಸುರುವಾತು. ವನಗದ್ದೆ ಕಡೆ ಹೋಗೋರ ಸಂಖ್ಯೆ ದುಪ್ಪಟ್ಟು ಆತು. ಆರು ತಿಂಗಳ ಕಟ್ಟುಮಸ್ತಾದ ಗಂಡು ಕೂಸು ಕಟ್ಟಿಕೊಂಡು ಬೇಸೂರಿನ ಸಾವಂತ್ರಮ್ಮ, ಕೆಮ್ಮಣ್ಣು ಗುಡ್ಡೆ ಭೈರಮ್ಮ, ಬೇಸೂರು ಕೆಂಚಮ್ಮನ ಅಕ್ಕ ಗುಬಲಿ, ಮದುವೆಗೆ ಬಂದ ನೆಲ್ಲೆಕೊಪ್ಪದ ಮುದ್ದಮ್ಮಳ ತಂಗಿಯೊಬ್ಬಳು, ಸಂಪೋಡಿ ಬೀರಜ್ಜನ ಮಗಳು, ಆಡಗಳಲೆ ಮನೆಯ ತಾಯಿ ಮಗಳಿಬ್ಬರು, ಕೋಳೂರು ಮೋಟಜ್ಜನ ತಂಗಿ ಹೀಗೆ ಅನೇಕರೂ ವನಗದ್ದೆಯ ಕಡೆ ಮುಖಮಾಡಿದರು. ಗಾಮಮ್ಮಳ ಮೈದ್ನ ಕೊಲ್ಲಪ್ಪ ಬೇಸೂರಲ್ಲಿ ಗಾಡಿ ಯಜಮಾನನಾಗಿದ್ರೂ ತನ್ನ ಸ್ವಂತ ಅಣ್ಣನ ಮಗಳ ದಿಬ್ಬಣ ಕಳಿಸಲು ಒಪ್ಪಲೇ ಇಲ್ಲ. ಕೊಲ್ಲಪ್ಪನೂ ಸೇರಿದಂತೆ ಏಳೆಂಟು ಜೊತೆ ಎತ್ತುಗಾಡಿ ವನಗದ್ದೆಯ ದಿಬ್ಬಣವನ್ನು ಹೊಳೆಬಾಗಿಲವರೆಗೆ ಕಳಿಸಲು ಅನುವಾದವು. ಆದ್ರೆ ಹಿಂಗಾರಿ ದಿಬ್ಬಣ ಕಳಿಸಲು ಯಾರು ಸಿದ್ದವಾಗಿಲ್ಲ… ಬರೋರು ಯಾರು ಗತಿಯಿಲ್ಲ. ಮದುವೆಗೆ ಬಂದ ಕಂಭತ್ತಮನೆ ಕರಿಮುತ್ತಜ್ಜ ಎಲ್ಲರಿಗೂ ಬೈದು “ಎಲ್ಲರೂ ದೊಡ್ಡರಿಗೆ ದಬೂರಿ ಹೂಡ್ತಿರಲ್ಲ….ಮುಂಡೆಗಂಡ್ರು….. ಈ ದಿಬ್ಬಣ ಕಳಿಸೋ ಮುಂಡೆಗಂಡ್ರು ಬೇಸೂರಲ್ಲಿ ಯಾರು ಹುಟ್ಟಿಲ್ಲಾನು ಎಂದು ಬೈಯುತ್ತಾ…..ತನ್ನ ತಮ್ಮ ಸಿದ್ದನಾಯ್ಕನನ್ನು ಕರೆದು… “ಹೋಗು ಕೆತ್ಲುಗುಡ್ಡೆ ಹೊಳೆವರೆಗೆ ದಿಬ್ಬಣ ಕಳಿಸಿ ಬಾ” ಎಂದು ಹೇಳಿದ. ಅಣ್ಣನ ಮಾತು ಕೇಳಿಸಿಕೊಂಡ ಕಂಬತ್ತಮನೆ ಸಿದ್ಮಾವ ತನ್ನ ಗಾಡಿಯೆತ್ತು ಹೊಡ್ಕೊಂಡು ಬಂದು, ಕೆತ್ಲುಗುಡ್ಡೆ ಹೊಳೆವರೆಗೆ ತಲುಪಿಸಿದ.

ಮುಂದೆ ದಿಬ್ಬಣಗಳು ಊರು ಸೇರಿದವು. ಸುತ್ತಮುತ್ತ ಹೆಸರು ಪಡೆದ ಗಿಡ್ಡನಾಯ್ಕರ ಎರಡು ಮಕ್ಕಳ ಬೀಗರಶಾಸ್ತ್ರಕ್ಕೆ ಜನವೋ ಜನ. ವನಗದ್ದೆ ಮತ್ತು ಮಳೇಮಠದಲ್ಲಿ ಬೀಗರ ಶಾಸ್ತ್ರ ಮುಗಿಸಿ, ಮಾರನೆಯ ದಿನ ಮದುಮಕ್ಕಳ ಹೂವುಗಳನ್ನು ಮನೆ ಕೋಳಿಗೆ ಕಟ್ಟುವ ಶಾಸ್ತ್ರವೂ ಮುಗಿತು. ಇತ್ತ ವನಗದ್ದೆಯಲ್ಲಿ ಯಜಮಾನಪ್ಪ ಗಿಡ್ಡನಾಯ್ಕರು ತಮ್ಮಿಬ್ಬರ ಮಕ್ಕಳಿಗೆ ಸರ್ಜು ಕೋಟು ಹಾಕಿಸಿ, ಮದುವೆ ಮಾಡಿಸಿದ ರೀತಿಯಲ್ಲಿ ಅದೂವರೆಗೆ ಯಾರೂ ಮಾಡಿರಲಿಲ್ಲ… ಮುಂದೆಯೂ ಯಾರೂ ಮಾಡಲು ಸಾಧ್ಯವಿಲ್ಲ….ಅನ್ನೋ ಮಟ್ಟಿಗೆ ಸುದ್ದಿಯಾಗಿತ್ತು. ದೀವರ ಮನೆಯ ಶಾಸ್ತ್ರ ಸಂಬಂಧಗಳು ಇಡೀ ಕರೂರು ಸೀಮೆಯನ್ನು ಮುಳುಗಿಸಿತ್ತು. ಬೀಗರ ಊಟ ಗಡದ್ದಾಗಿ ಹೊಡೆದು, ಹೆಣ್ಣಿನ ದಿಬ್ಬಣಕ್ಕೆ ಹೋದ ಜನರೆಲ್ಲಾ ಬೇಸೂರು ಮತ್ತು ಬಾಣನಕೊಪ್ಪದ ಕಡೆ ಹೊರಡುವಾಗ ಇಳಿಹೊತ್ತು ಸುರುವಾಗಿತ್ತು. ಗಿಡ್ಡನಾಯ್ಕರ ತುಂಬು ಕುಟುಂಬ ಬೇಸೂರು ಮತ್ತು ಬಾಣನಕೊಪ್ಪದ ಕಳ್ಳುಬಳ್ಳಿ ಬೀಗರಿಗೆ ‘ಜಾಕೆ’ ಹೇಳಿ ಮದುವೆ ಮನೆಯ ಪಾತ್ರೆ ಪಗಡೆ ತೊಳೆಯುವ ಕೆಲಸದಲ್ಲಿ ಮಗ್ನರಾದರು. ಮರಿದಿಬ್ಬಣಕ್ಕೆ ಹೋದ ಬೇಸೂರು ಮತ್ತ ಬಾಣನಕೊಪ್ಪದ ಬೀಗರು ಮತ್ತು ವನಗದ್ದೆಯ ಕಡೆಯಲ್ಲಿ ಒಂದಷ್ಟು ಜನರು ‘ಹಿಟ್ಟಕ್ಕಿ ಕೋಳಿ ಶಾಸ್ತ್ರ’ಕ್ಕೆ ತಮ್ಮೂರಿನ ದಾರಿ ಹಿಡಿದರು. ಹೊಳೆಬಾಗಿಲಿನ ಬೇಸೂರು- ಹರದೂರು ದೋಣಿ ಕಡವಿಗೆ ಬರೋ ಹೊತ್ತಿಗೆ ಸೂರ‍್ಯ ತನ್ನ ಸ್ವಸ್ಥಾನಕ್ಕೆ ಹೋಗುವ ಆತುರದಲ್ಲಿದ್ದನು.

ವನಗದ್ದೆಯಿಂದ ಬರೋ ಜನರು ಬರುವುದು ಈಗಾಗಲೇ ಪೂರ್ವ ನಿಯೋಜಿತವಾದ್ದರಿಂದ ಬರುವ ದಾರಿಯನ್ನು ದೋಣಿ ವೆಂಕಟಣ್ಣ ಕಾಯುತ್ತಲೇ ಇದ್ದ. “ಈ ಜನಕ್ಕೆ ಬುದ್ದಿಯಂಬೋದು ಬತ್ತಿಲ್ಲ ಮರಾರ‍್ರೆ… ನಿನ್ನೆ ಹೋಗೋರು ನಾಳೆ ಮಧ್ಯಾಹ್ನದೊಳಗೆ ಬತ್ತೀವು ಅಂತ ಹೋಗ್ಯಾರೆ… ಸಂಜೆಯಾದ್ರು ಬರಲಿಲ್ಲ. ಮಳೆ ಮೋಡ ಕಟ್ತಾ ಇದೆ….ಏನ್ ಹೇಳೋದು” ಎಂದು ತನಗೆ ತಾನು ಏನೇನೋ  ಉಸುರುತ್ತಾ ಒಂದೊಂದೆ ಬೀಡಿ ಖಾಲಿ ಮಾಡುತ್ತಾ ತನ್ನ ಅಸಮಧಾನ ಹೊರಹಾಕ್ತ ಸಮಯ ಕಳೆಯುತ್ತಿದ್ದ. ದೋಣಿ ವೆಂಕಟಣ್ಣ ಶರಾವತಿ ಆಚೆಗೀಚೆಯವರ ಪಾಲಿನ ದೈವಸಂಭೂತ. ನೋವಿನ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವ ಹಾಗೆ ಕಷ್ಟ ಎಂದು ಬಂದವರನ್ನು ಆಚೀಂದೀಚೆಗೆ ಕಳಿಸುವ ಕಾಯಕಯೋಗಿ. ದೋಣಿ ವೆಂಕಟಣ್ಣನಿಗೆ ದೂರದಲ್ಲಿ ಯಾರೋ ಓಡಿ ಬರುತ್ತಿರುವುದು ಅರೆಬರೆಯಲ್ಲಿ ಕಂಡಿತು. ಒಬ್ಬರು…ಇಬ್ಬರು…ಮೂರು… ಹೀಗೆ ಮದುಮಕ್ಕಳನ್ನು ಸೇರಿದಂತೆ ಬರೋಬ್ಬರಿ ಇಪ್ಪತ್ತೆರೆಡು ಮಂದಿ ವನಗದ್ದೆ ಕಡೆಯವರ ಗಾಡಿ ಇಳಿಯೋದ ಗುರುತಿಸಿದ. ಬಂದವರೆ ದೋಣಿ ವೆಂಕಟಣ್ಣನನ್ನು ಒತ್ತಾಯಿಸಿ “.ಬೇಗ ಅಣ್ಣ….ಬೇಗ ಅಣ್ಣ ಕತ್ಲಾಗುತ್ತೆ…. ಮಳೆ ಬತ್ತೈತೆ…. ಕತ್ಲಾಗುತ್ತೆ.. ಮಳೆ ಬತ್ತೈತೆ..” ಹೀಗೆ ಇದ್ದಬದ್ದವರೆಲ್ಲ ಒಂದೊಂದು ಮಾತು ಹೇಳಿ ದೋಣಿ ಹತ್ತಿದರು. ಈಗಾಗಲೇ ದೋಣಿ ಕಂಡಿಯಲ್ಲಿ ದೋಣಿಯನ್ನು ಸಿದ್ದವಾಗಿಟ್ಟುಕೊಂಡ ವೆಂಕಟಣ್ಣ ತಾಯಿ ಶರಾವತಿಗೂ, ಅನ್ನಕೊಡುವ ತನ್ನ ದೋಣಿಗೂ, ಮಾತೆ ಸಿಗಂದೂರು ಚೌಡವ್ವಗೂ ಕೈ ಮುಗಿದು ದೋಣಿ ನಡೆಸಿದ.

ಅಭೇಧ್ಯ ಕಾಡನ್ನು, ನೂರಾರು ಮನೆಮಠಗಳನ್ನು, ಗದ್ದೆ ತೋಟಗಳನ್ನು ನುಂಗಿದ, ಅನ್ನದ ತುತ್ತಿನ ಕೇಡಿಗೆ ಕಾರಣಳಾದ ಶರಾವತಿಗೆ ಕರುಣೆಯ ಕಣ್ಣಿಲ್ಲ. ಬಕಾಸುರ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತೆ ತನಗೆ ಸಿಕ್ಕಿದ್ದನ್ನು ಬಾಚಿ, ಆಹುತಿಯಾಗಿಸುವುದು ಅವಳಿಗೇನು ಹೊಸದಲ್ಲ. ದೋಣಿ ತುಂಬಿದ ಜನಕ್ಕೆ ಅರೆಕ್ಷಣವನ್ನು ನೂರಾರು ದಿನ ಕಳೆಯುವ ಅನುಭವವಾಗುತ್ತಾ ಹೋಯಿತು. “ಅಯ್ಯೋ ದೇವರೇ ಕಾಪಾಡಪ್ಪ….ಕಾಪಾಡಪ್ಪ” ಅನ್ನೋ ಅಸಹಾಯಕ ದನಿ ಇತ್ತು. ಆರು ತಿಂಗಳ ಸಾವಂತ್ರಮ್ಮಳ ಮಗು ಒಂದೇ ಸಮನೇ ರಚ್ಚೆ ಹಿಡಿದ ಹಾಗೆ ಅಳುತ್ತಿತ್ತು. ತಾಯ್ತನದ ಅರಿವಿಲ್ಲದ ಶರಾವತಿ ಆ ಮಗುವಿನ ದನಿಯನ್ನು ಕೇಳಿಸಿಕೊಳ್ಳಲಿಲ್ಲ. ಕೊಡಚಾದ್ರಿ ಗಿರಿಶೇಣಿಯಿಂದ ಬರ‍್ರೊ ಅನ್ನುವ ಗಾಳಿ ನೀರ ಅಲೆಯ ಮೇಲೆ ಸುಂಯ್ಯುಗುಡುತ್ತ ನುಗ್ಗಿ ಬಂತು. ಗಾಳಿಯ ಜೊತೆಗೆ ನಾನೇನು ಕಮ್ಮಿ ಅನ್ನುವ ಆತುರದಲ್ಲಿ ದಪ್ಪನೆಯ ಮಳೆಯ ಹನಿಗಳು ನುಗ್ಗಿದವು. ‘ಕೋಣಗಳೆರಡುಂ ಹೊರೆ ಗಿಡುವಿಗೆ ಮೃತ್ಯು’ ಎನ್ನುವಂತೆ ಮಳೆ ಗಾಳಿ…… ಗಾಳಿ ಮಳೆ ನಾ ಹೆಚ್ಚೋ ನೀ ಹೆಚ್ಚೋ ಅನ್ನೋ ಹಾಗೆ ನುಗ್ಗತ್ತಲೇ ಇತ್ತು. ಮಳೆಗಾಳಿಯ ರಭಸಕ್ಕೆ ದೋಣಿ ಮುಂದೆ ಮುಂದೆ ಹೋಗುವುದರಲ್ಲಿ ಸೋಲುತ್ತಿತ್ತು. ಬೆಳಕು ಹರಿದು ಪೂರ್ಣ ಕತ್ತಲಾಯಿತು. ಅಪಾರ ಅನುಭವಿ ದೋಣಿ ವೆಂಕಟಣ್ಣನ ಅನುಭವಜನ್ಯ ಕಲಿಕೆ ಸೋಲಿನ ಕಡೆ ಹೊರಳಿ, ತನ್ನವರನ್ನು ಉಳಿಸುವ ಕೊನೆ ಆಸೆಯೂ ಬತ್ತಿದ ಜಲವಾಯಿತು. ವೆಂಕಟಣ್ಣನ ಮಾತುಗಳನ್ನು ಆಲಿಸದ ದಿಬ್ಬಣದ ಜನವೆಲ್ಲಾ ತಮ್ಮಿಚ್ಚೆಯಂತೆ ಕೂಗು, ಹತಾಶೆ, ಆಕ್ರಂದನ… ಯಾವುದನ್ನು ನಿಲ್ಲಿಸುವ ಸ್ಥಿತಿಯಲ್ಲಿರಲಿಲ್ಲ. ಕೆಲವರು ನಿಂತರು, ಕೂತರು, ವಾಲಿದರು… ಯಾರು ಯಾರನ್ನು ಹಿಡಿದುಕೊಳ್ಳುತ್ತೇವೆಂಬ ಅರಿವು ಯಾರಿಗೂ ಇಲ್ಲವಾಯಿತು. ಜೀವವೊಂದನ್ನು ಉಳಿಸಿಕೊಳ್ಳಲು ಎಲ್ಲರೂ ಹಪಹಪಿಸುತ್ತಿದ್ದರು. ಮಗುವಿನ ಕೂಗೊಂದೆ ದೂರದ ಬೆಟ್ಟಕ್ಕೆ ಅಪ್ಪಳಿಸಿ ವಾಪಾಸ್ಸು ಬಂದು ನಾನಿದ್ದೇನೆ ಎನಿಸುವಂತಿತ್ತು. ವೆಂಕಟಣ್ಣನ ಅಂತಿಮ ಪ್ರಯತ್ನವೂ ಕೈಗೂಡುವ ಹಾಗೆ ಕಾಣಲಿಲ್ಲ. ಭೋರ್ಗರೆದು ಬಂದ ಗಾಳಿ ಮಳೆಯು ಒಂದು ಬಾರಿ ದೋಣಿಯನ್ನು ಅಮಾಗತ ಎತ್ತಿ ಮುಗುಚಿ ಹಾಕಿಯೇ ಬಿಟ್ಟಿತು. ಅನುಭವಿ ದೋಣಿ ವೆಂಕಟಣ್ಣನನ್ನು ಸೇರಿ ಎಲ್ಲರೂ  ದೋಣಿಯ ಅಡಿಯಾದರು.

ದೋಣಿ ಹಗ್ಗವನ್ನು ಹೆಂಗೋ ಹಿಡಿದ ವೆಂಕಟಣ್ಣ, ದೋಣಿ ಸಾಗಿದಂತೆ ದಡಕ್ಕೆ ಬರೋದು ಬರೊಬ್ಬರಿ ಹತ್ತರ ರಾತ್ರಿ. ಇಷ್ಟೊತ್ತಾದರೂ ದೋಣಿಯಲ್ಲಿ ಸಾಗಿದ ಜನರ ಕಥೆಯೇನು ಎಂಬ ಅರಿವು ಬಾರದ ಜನ ನದಿಯ ಎರಡು ದಡದಲ್ಲಿ ಒಬ್ಬೊಬ್ಬರೇ ಸೇರುತ್ತಿದ್ದರು. ಕರೂರು ಕಡೆಯ ದಡದಲ್ಲಿ ಪೂಜಾರಿ ತಿಮ್ಮಣ್ಣನು ಸೇರಿದಂತೆ ಚೌಡಣ್ಣ, ಕೆಂಪಣ್ಣ, ಶೇಷಣ್ಣ, ವನಗದ್ದೆಯ ಮದುವೆಗೆ ಬಂದ ಜನ ಎಲ್ಲರೂ ಜಮಾಯಿಸಿದರು. ದೋಣಿ ವೆಂಕಟಣ್ಣ ಈಜಿ ದಡ ಸೇರಿ “ತಿಮ್ಮಣ್ಣ ತನ್ನನ್ನು ಕ್ಷಮಿಸಿ ಬಿಡಿ…ನನ್ನಿಂದಲೇ ಆಗಿಹೋತು.. ತಪ್ಪಾಯಿತು.. ಅವರನ್ನು ಕಾಪಾಡ್ಲಿಕ್ಕೆ ಆಗಲಿಲ್ಲ…ಅಯ್ಯೋ ದೇವರೆ” ಎಂದು ತನ್ನ ಅಸಹಾಯಕತೆಯನ್ನು ಹಳಿಯುತ್ತಲೇ ತನ್ನನ್ನೇ ತಾನು ನಿಂದಿಸಿಕೊಂಡು ಕಣ್ಣೀರಾದನು. ದೋಣಿ ಮುಳುಗಿದ ಖಚಿತ ಮಾಹಿತಿ ಹೊಳಬಾಗಿಲ ದಡಕ್ಕೆ ಅಪ್ಪಳಿಸಿತು. ದಡದಲ್ಲಿದ್ದವರು ವೆಂಕಟಣ್ಣನನ್ನು ಹೊರತುಪಡಿಸಿ ಉಳಿದವರು ಬರುವರೆಂಬ ನಂಬುಗೆಯಲ್ಲಿ ಬೆಂಕಿ ಹಚ್ಚಿ ರಾತ್ರಿಯಿಡಿ ಕಾದರು. ಅನುಭವಿ ಈಜುಗಾರ ವನಗದ್ದೆಯ ಮದುಮಕ್ಕಳ ಸುಳಿವೂ ದೂರವಾಯಿತು. ಶರಾವತಿ ಭೋರ್ಗರೆತ ಬಿಟ್ಟರೆ ಯಾರ ಸುಳಿವೂ ಸಿಗಲಿಲ್ಲ…ಕಾಣಲಿಲ್ಲ.

ಇತ್ತ ಬೇಸೂರಿನಲ್ಲಿಯೂ ಅತ್ತ ಬಾಣನಕೊಪ್ಪದಲ್ಲಿಯೂ ಹಿಟ್ಟಕ್ಕಿ ಕೋಳಿ ಶಾಸ್ತ್ರಕ್ಕೆ ದೊಡ್ಡ ದೊಡ್ಡ ಹುಂಜಗಳನ್ನು, ಮೊಟ್ಟೆ ಇಡದ ಬಂಜೆ ಹ್ಯಾಟೆ ಕೋಳಿಗಳನ್ನು, ಪದೇ ಪದೇ ಮನೆಯೊಳಗೆ ಬರುವ ಕೋಳಿಗಳನ್ನು ಒಡ್ಡಿಯಲ್ಲಿ ಹುಡ್ರು ಮಕ್ಳು ಹುಡುಹುಡುಕಿ ಬೇಟೆಯಾಡಿ ರಾತ್ರಿ ಊಟಕ್ಕೆ ಸಿದ್ದಮಾಡಿಟ್ಟಿದ್ದರು. ಹರಲೆಮನೆಯಲ್ಲಿ ಕೋಳಿ ಕಾರ ಗಮ್ಮೆಂದು ಹೊರಹೋಗುತ್ತಿತ್ತು. ಬಂದವರೆಲ್ಲ ಮರಿದಿಬ್ಬಣ ಎಷ್ಟೊತ್ತಿಗೆ ಬರುತ್ತೆ ಅಂತ ಕಾತರದಿಂದ ಕಾಯುತ್ತಿದ್ದರು. ಹುಡ್ರು, ಮಕ್ಳುಗಳೆಲ್ಲಾ ಕೋಳಿ ತೊಳ್ಳೆ ಸುಟ್ಟು, ತನಗೆ ತನಗೆ ಅಂತ ಆಪೋಶನ ಮಾಡುತ್ತಿದ್ದರು. ಬೇಸೂರು ಮತ್ತು ಬಾಣನಕೊಪ್ಪದ ಸುತ್ತಮುತ್ತಲ ಹತ್ತಾರು ನಾಯಿಗಳು ಕೋಳಿ ಸುಡೋ ಜಾಗದ ಸುತ್ತ ಬೀಡುಬಿಟ್ಟಿದ್ದವು. ಬೇಸೂರಿನಲ್ಲಿ ಮಂಡೆ, ಕುಂಡೆ ಬಳಗದವರೆಲ್ಲಾ ಹಿಟ್ಟಕ್ಕಿ ಕೋಳಿ ಶಾಸ್ತ್ರಕ್ಕೆ ಸಾಕ್ಷಿಯಾಗುವ ಹವಣಿಕೆಯಲ್ಲಿದ್ದರು.

ಅತ್ತ ಜಾಲ ಸೀಮೆಯಿಂದ ಹೊರಟ ಮಳೇಮಠದವರ ದಿಬ್ಬಣದವರು ಕೆತ್ಲುಗುಡ್ಡೆ ಹೊಳೆಯಲ್ಲಿ ಕಾಯುತ್ತಿದ್ದರು. ದೋಣಿ ರಾಮಣ್ಣನು ಅನುಭವಿಯೇ. ಮಳೇಮಠದಿಂದ ಬೇಸೂರಿಗೆ ಬಂದವರು ಬೆರಣೆಕೆ. ಕುಂಬಾರಗೊಳ್ಳಿ ಸೀತಕ್ಕ, ಕಂಬತ್ತಮನೆ ಭದ್ರಮಾವ, ಕಣ್ಣೂರು ದೊಡ್ಡಪ್ಪ, ಹಳೆಯೂರು ಅವಣೆಕೊಪ್ಪದ  ಸಣ್ಣಪ್ಪ ಹೀಗೆ ಕೆಲವೇ ಮಂದಿ. ಬಲಗ್ವಾಡೆಯಾಗಿ ಬಂದ ಕಂಬತ್ತಮನೆ ಭದ್ರಮಾವ ಯಾರ ಮಾತು ಕೇಳದೆ ದೋಣಿ ರಾಮಣ್ಣನ ಗುಡ್ಲಲಲ್ಲಿ ನಿಂತು ಬಿಟ್ಟನು. ಧಾರಕಾರದ ಮಳೆ ನೋಡಿ, “ರಾತ್ರಿ ಹೋಗಲು ಆಗದಿದ್ದರೆ ಹುಡ್ರಾ ಬೆಳಿಗ್ಗೆ ಸೈಯೇನ… ಹೋಗೋದು…” ಅಂತ ಮದುಮಗ, ಮಗಳಿಗೆ, ಬಂದವರಿಗೆ ಅನುಭವದ ಮಾತುಗಳನ್ನು ಹೇಳಿ ಕೂರಿಸಿದ್ದನು. ದೋಣಿ ರಾಮಣ್ಣ ಬಂದವರಿಗೆ ಬೆಚ್ಚನೆಯ ಟೀ ಕೊಟ್ಟು, ತನ್ನ ಗುಡ್ಲುವಿನಲ್ಲಿ ಉಳಿಸಿಕೊಳ್ಳುವ ಏರ್ಪಾಟಲ್ಲಿದ್ದನು.

ಮರಿದಿಬ್ಬಣಗಳೆರಡು ಬಾರದೆ ಇದ್ದುದಕ್ಕೆ ಬೇಸೂರಲ್ಲಿ ಆತಂಕ ಮಡುಗಟ್ಟಲು ಸುರುವಾಯಿತು. ಯಾರೋ ಒಬ್ಬರು ಬಂದು ದೋಣಿ ಮುಳುಗಿದ ಸುದ್ದಿ ಹೇಳಿದನಾದರೂ, ಯಾವ ದಿಬ್ಬಣ, ಯಾವ ದೋಣಿ ಅನ್ನೋ ಖಚಿತ ಮಾಹಿತಿ ನೀಡಲಿಲ್ಲ. ವನಗದ್ದೆ ದಿಬ್ಬಣ ಅಂತ ಕೆಲವರು, ಮಳೇಮಠದವರದ್ದೆಂದು ಕೆಲವರು.. ಯಾರದ್ದು ಅನ್ನೋ ಅರಿವೇಯಿಲ್ಲದೇ ಸಾಮೂಹಿಕ ಅಳುವಿನ, ಆರ್ತದನಿ ಒಂದೇಸಮನೇ ಹೊರಹೊಂಟಿತು. ಬೇಸೂರಿನಿಂದ ಒಂದಷ್ಟು ಜನ ಹೊಳೆಬಾಗಿಲ ಕಡೆಯೂ ಇನ್ನೊಂದಷ್ಟು ಜನ ಕೆತ್ಲುಗುಡ್ಡೆ ಕಡೆಯೂ ಹೊರಟರು. ಗಾಡಿಯೆತ್ತುಗಳು ಹೊತ್ತಿಲ್ಲದ ಹೊತ್ತಿಗೆ ತಮ್ಮನ್ನು ಮಾಲಿಕ ಎಳೆದೊಯ್ಯುವುದನ್ನು ಕಂಡು ಚಿಂತೆಗೀಡಾದವು. ಮನೆಹೊರಗೆ ನಾಯಿಗಳ ಬೊಳ್ಳು ದನಿ ನೋವನ್ನು ಇಮ್ಮಡಿಗೊಳಿಸುತ್ತಿತ್ತು. ವನಗದ್ದೆಯ ಮರಿದಿಬ್ಬಣಗಳೆರಡು ಹೊಳೆಯಲ್ಲಿ ಮುಳುಗಿದ್ದು ಖಚಿತವಾಯಿತು. ಎರಡು ದಡದಲ್ಲಿ ಬೆಂಕಿಯ ಬೆಳಕು, ಜನರ ಕೂಗಿನ ದನಿ, ತಮಗೆ ತಾವೆ ಧೈರ‍್ಯ ಹೊಂದುವ, ಅಳುವ, ಕೂಗುವ, ಸೀಟಿ ಹೊಡೆದು ತಮ್ಮ ಇರುವಿಕೆಯನ್ನು ತೋರಿಸುವ ಗಲಾಟೆ, ಸಂಕಟದ ದನಿ ಮಾತ್ರ ಕೇಳಿಸುತ್ತಿತ್ತು…. ಕಾಣಿಸುತ್ತಿತ್ತು. ಇದ್ಯಾವುದು ಅರಿವಿಲ್ಲದ ಶರಾವತಿ ತುಂಬಿ ಭೋರ್ಗರೆದು, ತನಗೇನೂ ಗೊತ್ತಿಲ್ಲದಂತೆ ಗಂಭೀರವಾಗಿ ಹರಿಯುತ್ತಿದ್ದಳು. ಮಧ್ಯರಾತ್ರಿಯಲ್ಲಿ ಮಳೇಮಠದ ಮರಿದಿಬ್ಬಣ ಬೇಸೂರು ತಲುಪಿತು. ಕೂಳು ನೀರಿಲ್ಲದ ಜನ, ಬೇಸೂರಿನ ಉದರವನ್ನು ಬಗೆದು ಬಂದಂತೆ ಅಳುವೇ ಎಲ್ಲಡೆ ಮನೆಮಾಡಿತ್ತು. ಸೂತಕದ ನೀರವ ಮೌನ, ಅತ್ತು ಬತ್ತಿದ ಕಣ್ಣಾಲಿಗಳು ಎಲ್ಲರನ್ನು ಒಂದು ಮಾಡಿತ್ತು.

ಡಾ. ಅಣ್ಣಪ್ಪ ಎನ್. ಮಳೀಮಠ್

ಸಹ ಪ್ರಾಧ್ಯಾಪಕರು

More articles

Latest article