ಬೆಂಗಳೂರು: ಡ್ರಗ್ಸ್ ಮಾರಾಟ ಮಾಡಲು ಸ್ನೇಹಿತನ ಜತೆ ಕಾರಿನಲ್ಲಿ ಬಂದಿದ್ದ ವಿದೇಶಿ ಪ್ರಜೆಯನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ ಚಿಕನ್ ಸೆಂಟರ್ ಮಾಲೀಕನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾದ ಅಡಿಯಾಕೊ ಮುಸಾಲಿಯೊ (40) ಕೊಲೆಯಾದ ವ್ಯಕ್ತಿ. ಚಕನ್ ಸೆಂಟರ್ ಮಾಲೀಕ ಯಾಸೀನ್ ಖಾನ್ ಬಂಧಿತ ಆರೋಪಿ.
ಮೃತನ ಬಳಿಯಿದ್ದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕೊಲೆ ಸಂಬಂಧ ನೈಜೀರಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.
ಅಡಿಯಾಕೊ ಮುಸಾಲಿಯೊ ಸ್ನೇಹಿತನೊಂದಿಗೆ ಫೆಬ್ರುವರಿ 19ರಂದು ಬಾಗಲೂರಿನ ಕಾರಿನಲ್ಲಿ ಆಗಮಿಸಿದ್ದ. ಮಾದಕ ವಸ್ತುಗಳನ್ನು ತಲುಪಿಸುವ ಸಲುವಾಗಿ ಗ್ರಾಹಕರ ಲೊಕೇಷನ್ ತೆಗೆದುಕೊಳ್ಳಲು ಅತ್ತಿಂದಿತ್ತ ಓಡಾಡುತ್ತಿದ್ದ. ಇದನ್ನು ಗಮನಿಸಿದ್ದ ಕೋಳಿ ಅಂಗಡಿ ಮಾಲೀಕ ಯಾಸೀನ್ ಖಾನ್, ಡ್ರಗ್ಸ್ ಮಾರಾಟ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸಿ, ಗಲಾಟೆ ಮಾಡಿದ್ದ. ಆಗ ಕೋಪಗೊಂಡ ಮುಸಾಲಿಯೊ, ಚಿಕನ್ ಸೆಂಟರ್ ನಲ್ಲಿದ್ದ ಆಯುಧದಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಯಾಸೀನ್, ಮರದ ತುಂಡಿನಿಂದ ವಿದೇಶಿ ಪ್ರಜೆಯ ತಲೆಗೆ ಹೊಡೆದಿದ್ದಾನೆ. ಆಗ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿ ಭಾರತಕ್ಕೆ ಯಾವ ವೀಸಾದಡಿ, ಯಾವಾಗ ಬಂದಿದ್ದ. ಯಾರೊಂದಿಗೆ ಎಲ್ಲಿ ವಾಸವಾಗಿದ್ದ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಕೃತ್ಯದ ಸಂದರ್ಭದಲ್ಲಿ ಪರಾರಿಯಾಗಿರುವ ಮತ್ತೊಬ್ಬ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.