ಕಳಚಿದ ಮತ್ತೊಂದು ಸಂಗೀತ ನಿಧಿ ʼರಾಜೀವ್ ತಾರನಾಥ್‌ʼ

Most read

ಸಾಮಾಜಿಕ ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ ಲೋಕದ ಧೃವ ತಾರೆ ರಾಜೀವ್‌ ತಾರಾನಾಥ್‌ ತಮ್ಮ ಲೌಕಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಸರೋದ್‌ ಧ್ವನಿ ನಮ್ಮ ನಡುವೆ ಶಾಶ್ವತವಾಗಿ ಉಳಿದಿರುತ್ತದೆ ಎನ್ನುತ್ತಾ ರಾಜೀವ್‌ ತಾರಾನಾಥ್‌ ಅವರಿಗೆ  ಅಕ್ಷರ ನಮನ ಸಲ್ಲಿಸಿದ್ದಾರೆ ಚಿಂತಕರಾದ ನಾ ದಿವಾಕರ.

ತಮ್ಮ 92ನೆಯ ವಯಸ್ಸಿನಲ್ಲಿ ರಾಗಲೋಕಕ್ಕೆ ವಿದಾಯ ಹೇಳಿ ಇಹಲೋಕದ ಪಯಣ ಮುಗಿಸಿದ ಪಂಡಿತ್‌ ರಾಜೀವ್‌ ತಾರಾನಾಥ್‌ ವಿಶಿಷ್ಟ ವ್ಯಕ್ತಿತ್ವದ ಕಲೋಪಾಸಕರು. ಸಂಗೀತ ಮತ್ತು ಬದುಕು ಇವೆರಡರ ನಡುವೆ ಅಂತರವೇ ಇಲ್ಲದೆ ತಮ್ಮ ಸರೋದ್‌ ವಾದನದೊಂದಿಗೆ ಏಳು ದಶಕಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ ತಾರಾನಾಥ್‌, ತಮ್ಮ ಜೀವಪಯಣದ ಸ್ವರಸಂಗಾತಿ ಸರೋದ್‌ ಎಂಬ ವಾದ್ಯದ ತಂತಿಗಳಿಂದ ಹೊರಡುವ ಸ್ವರಗಳಲ್ಲೇ ಸಮಾಜದ ಅಂತರ್‌ ತುಡಿತವನ್ನೂ ಗ್ರಹಿಸಬಲ್ಲ ಸೂಕ್ಷ್ಮಗ್ರಾಹಿ ಕಲಾವಿದರಾಗಿದ್ದರು. ಬಾಹ್ಯ ಸಮಾಜದ ನಿತ್ಯ ತಲ್ಲಣಗಳಿಗೆ, ಲೌಕಿಕ ಬದುಕಿನ ನೆಲೆಗಳನ್ನು ಭಂಗಗೊಳಿಸುವ ತುಮುಲಗಳಿಗೆ, ಬಾಹ್ಯ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಘಾತುಕ ವಿದ್ಯಮಾನಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಲೇ ಇದ್ದ ತಾರಾನಾಥ್‌ ನಿರ್ಭಿಡೆಯಿಂದ ತಮ್ಮ ಅಭಿವ್ಯಕ್ತಿಯನ್ನು ದಾಖಲಿಸುತ್ತಿದ್ದುದು ಆದರ್ಶಪ್ರಾಯ ನಡೆ.

ಅರಸಿ ಬಂದ ಪ್ರಶಸ್ತಿ ಸಮ್ಮಾನಗಳನ್ನು ನಿಸ್ಪೃಹತೆಯಿಂದ ಸ್ವೀಕರಿಸುತ್ತಲೇ ಸ್ಥಾಪಿತ ವ್ಯವಸ್ಥೆಯ ನಿರೂಪಣೆಗಳನ್ನು ಸಮಯೋಚಿತವಾಗಿ ನಿರಾಕರಿಸುತ್ತಾ ಬಂದ ತಾರಾನಾಥ್‌ ಯಾವುದೇ ಹಂತದಲ್ಲೂ ಆಳ್ವಿಕೆಯ ವಾರಸುದಾರರ ಮುಂದೆ ಬಾಗಿದವರಲ್ಲ. ತಾವು ನಂಬಿ ಬದುಕಿದ ಗಾಯನಲೋಕದ ಗಾನಸರಸ್ವತಿಗೆ ಗೌರವ ತೋರುತ್ತಲೇ ತಮ್ಮ ಸುತ್ತಲಿನ ಲೋಕದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದ ತಾರಾನಾಥ್‌ ಸಾಮಾಜಿಕ ಅನ್ಯಾಯ, ಅಮಾನುಷತೆ, ಶೋಷಣೆ, ದೌರ್ಜನ್ಯ ಮತ್ತು ದಬ್ಬಾಳಿಕೆಗಳ ವಿರುದ್ಧ ತಮ್ಮ ಧ್ವನಿಯನ್ನು ದಾಖಲಿಸುತ್ತಿದ್ದರು. ಅವರ ಸಾಮಾಜಿಕ ಕಳಕಳಿ, ಕಾಳಜಿಗಳು ವ್ಯಕ್ತಿಗತ ನೆಲೆಯಲ್ಲಿ, ಸಾತ್ವಿಕ ಸಿಟ್ಟಿನೊಂದಿಗೆ, ಅಕ್ಷರ ರೂಪದಲ್ಲಿ ಕಾಣಿಸಿ ಕೊಂಡಿದ್ದೇ ಹೆಚ್ಚು. ಕಳೆದ ಹತ್ತು ವರ್ಷಗಳ ಸಾಂಸ್ಕೃತಿಕ ವಾತಾವರಣದಲ್ಲಿ ಹಿಂದುತ್ವ-ಮತೀಯವಾದದ ವಿರುದ್ಧ ಪ್ರತಿರೋಧಗಳಿಗೆ ದನಿಗೂಡಿಸಿದ ಕೆಲವೇ ಕಲಾವಿದರ ಪೈಕಿ ತಾರಾನಾಥ್‌ ಸಹ ಒಬ್ಬರು.

ಬಾಲ್ಯದಿಂದಲೇ ತಮ್ಮ ತಂದೆ ಪಂಡಿತ್‌ ತಾರಾನಾಥ್‌ ಅವರಿಂದ ಪ್ರೇರಿತರಾಗಿ ಸಮನ್ವಯದ ಬದುಕಿನ ಹಾದಿ ಆಯ್ದುಕೊಂಡಿದ್ದ ತಾರಾನಾಥರಿಗೆ ಸಂಗೀತ ಮತ್ತು ಬದುಕು ಪ್ರತ್ಯೇಕವಾಗಿರಲಿಲ್ಲ. ಹಾಗೆಯೇ ಅವರ ವ್ಯಕ್ತಿಗತ ಬದುಕು ಮತ್ತು ಸಮಾಜವೂ ಬೇರೆಯಾಗಿರಲಿಲ್ಲ. 20ನೆಯ ಶತಮಾನದ ಆರಂಭದಲ್ಲೇ ಅಂತರ್ಜಾತಿ ವಿವಾಹವಾಗುವ ಮೂಲಕ ಒಂದು ಔದಾತ್ಯಪೂರ್ಣ ಬದುಕನ್ನು ರೂಪಿಸಿಕೊಂಡಿದ್ದ ತಂದೆ ಪಂಡಿತ್‌ ತಾರಾನಾಥ್‌ ಅವರಿಂದಲೇ ಸಂಗೀತ ಪಾಠಗಳನ್ನು ಕಲಿಯಲಾರಂಭಿಸಿದ ರಾಜೀವ್‌ ತಾರಾನಾಥ್‌ ಅವರಿಗೆ ಸಾಂಸ್ಕೃತಿಕವಾಗಿ ಮಾರ್ಗದರ್ಶಿಯಾಗಿದ್ದು ಅವರ ತಾಯಿ ಸುಮಿತ್ರಾ ಬಾಯಿ. ತಮ್ಮ ಒಂಬತ್ತನೆ ವಯಸ್ಸಿನಲ್ಲೇ ಮೊದಲ ಸಂಗೀತ ಕಚೇರಿಯನ್ನು ನಡೆಸಿದ್ದ ರಾಜೀವ್‌ ತಾರಾನಾಥ್‌ ಎಂಟು ದಶಕಗಳ ಕಾಲ ರಾಗ-ತಾಳ-ಲಯದ ಪ್ರಪಂಚದಲ್ಲೇ ಬದುಕಿನ ಏಳುಬೀಳುಗಳನ್ನು ಕಂಡ ಮಹಾನ್‌ ಕಲಾವಿದ.

ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರೂ ತಾರಾನಾಥ್‌ ಅವರನ್ನು ಆಕರ್ಷಿಸಿದ್ದು ಸಂಗೀತದ ಪ್ರಪಂಚ. ಖ್ಯಾತ ಹಿಂದುಸ್ತಾನಿ ಸಂಗೀತಗಾರ ಅಲಿ ಅಕ್ಬರ್‌ ಖಾನ್‌ ಅವರ ಶಿಷ್ಯರಾಗಿ ತಮ್ಮ ರಾಗಪಯಣವನ್ನು ಆರಂಭಿಸಿದ ರಾಜೀವ್‌  2009ರಲ್ಲಿ ತಮ್ಮ ಗುರುವಿನ ಅಂತಿಮ ಗಳಿಗೆಯವರೆಗೂ ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಪಂಡಿತ್‌ ರವಿಶಂಕರ್‌, ಅನ್ನಪೂರ್ಣಾ ದೇವಿ, ಪಂಡಿತ್‌ ನಿಖಿಲ್‌ ಬ್ಯಾನರ್ಜಿ ಹಾಗೂ ಉಸ್ತಾದ್‌ ಆಶೀಶ್‌ ಖಾನ್‌ ಅವರ ಮಾರ್ಗದರ್ಶನದಲ್ಲಿ ಬೆಳೆದುಬಂದ ರಾಜೀವ್‌ ಸರೋದ್‌ ಎಂಬ ವಾದ್ಯವನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದಿದ್ದೇ ಅಲ್ಲದೆ, ಪ್ರಧಾನವಾಗಿ ಉತ್ತರ ಭಾರತದೊಡನೆ ಗುರುತಿಸಲ್ಪಡುವ ಹಿಂದುಸ್ತಾನಿ ಸಂಗೀತ ಪರಂಪರೆಯನ್ನು ಕರ್ನಾಟಕದ ನೆಲದಿಂದ ಬೆಳೆಸಿದವರು. ಹಾಗೆಯೇ ವೀಣೆ, ಸಿತಾರ್‌, ಸಾರಂಗಿ ಮೊದಲಾದ ತಂತಿ ವಾದ್ಯಗಳಿಂದ ಭಿನ್ನವಾದ ಅಪರೂಪದ ಸರೋದ್‌ ವಾದ್ಯವನ್ನು ತಳಮಟ್ಟದ ಸಂಗೀತಪ್ರಿಯರ ನಡುವೆ ಜನಪ್ರಿಯಗೊಳಿಸಿದ ಕೀರ್ತಿ ರಾಜೀವ್‌ ತಾರಾನಾಥ್‌ ಅವರಿಗೆ ಸಲ್ಲುತ್ತದೆ.

ತಮ್ಮ ನಿಷ್ಠುರ ನುಡಿಗಳನ್ನು ಸಾರ್ವಜನಿಕವಾಗಿ ಹೇಳಲು ಎಂದೂ ಹಿಂಜರಿಯದಿದ್ದ ರಾಜೀವ್‌ ತಾರಾನಾಥ್‌ ಹಲವು ಸಂದರ್ಭಗಳಲ್ಲಿ ಬ್ರಾಹ್ಮಣದ್ವೇಷಿ ಎಂಬ ಆರೋಪಕ್ಕೂ ತುತ್ತಾಗಿದ್ದರು. ತಾನು ಬ್ರಾಹ್ಮಣ್ಯ ಮತ್ತು ಸನಾತನ ಧರ್ಮವನ್ನು ಟೀಕಿಸುತ್ತೇನೆಯೇ ಹೊರತು ಬ್ರಾಹ್ಮಣರನ್ನಲ್ಲ ಎಂದು ಹೇಳುತ್ತಿದ್ದ ತಾರಾನಾಥ್‌ ಭಾರತದ ಬಹುಸಂಸ್ಕೃತಿಯನ್ನು ಎತ್ತಿಹಿಡಿಯಲು ಬಯಸಿದವರು. ಬಹುತ್ವ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಜೀವಾಳ ಎಂದೇ ಭಾವಿಸಿದ್ದ ತಾರಾನಾಥ್‌ ಒಂದು ದೇಶ-ಒಂದು ಧರ್ಮ ಎಂಬ ಸೂತ್ರವನ್ನು ಖಂಡಿಸುತ್ತಿದ್ದರು. ಈ ಕಾರಣಕ್ಕಾಗಿ ಸಾಂಪ್ರದಾಯಿಕ ಶಕ್ತಿಗಳಿಂದ ನಿಂದನೆಗೊಳಗಾಗಿದ್ದೂ ಉಂಟು. ಗೋದ್ರಾ ಘಟನೆ, ಆನಂತರ ನಡೆದ ಸಾಮೂಹಿಕ ಹತ್ಯಾಕಾಂಡ ಅದರಲ್ಲಿ ನಡೆದಂತಹ ಭೀಕರ ಕೊಲೆಗಳು, ಅತ್ಯಾಚಾರಗಳು ರಾಜೀವ್‌ ತಾರಾನಾಥ್‌ ಅವರನ್ನು ಬಹಳವಾಗಿ ಕಾಡಿತ್ತು. ಅಷ್ಟೇ ಪ್ರಖರವಾಗಿ ಈ ಘಟನೆಗಳನ್ನು ಖಂಡಿಸಿದ್ದ ಈ ಕಲಾವಿದರು, ಈ ಘಟನೆಗಳಿಂದ ಹಿಂದೂಗಳಿಗೇ ಕಳಂಕ ಅಂಟಿಕೊಂಡಿತು ಎಂದು ವಿಷಾದಿಸಿದ್ದರು. ಕೇಂದ್ರ ಬಿಜೆಪಿ ಸರ್ಕಾರ ಅರ್ಬನ್‌ ನಕ್ಸಲರ ಆರೋಪ ಹೊರಿಸಿ ಹಲವರನ್ನು ಬಂಧಿಸಿದಾಗ ತಾರಾನಾಥ್‌ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದರು.

ಪ್ಯಾರಿಸ್‌, ಸಿಡ್ನಿ, ಜರ್ಮನಿ, ಕೆನಡಾ, ಯೂರೋಪ್‌, ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾ, ಅಮೆರಿಕಾ ಮೊದಲಾದ ಹಲವಾರು ಹೊರದೇಶಗಳಲ್ಲಿ ತಮ್ಮ ಕಚೇರಿಗಳನ್ನು ನೀಡುವ ಮೂಲಕ ಸರೋದ್‌ ವಾದನವನ್ನು ಜಗದ್ವಿಖ್ಯಾತಗೊಳಿಸಿದ್ದ  ಅವರಿಗೆ ಅಮೆರಿಕದಲ್ಲಿ ಬಹುದೊಡ್ಡ ಶಿಷ್ಯವೃಂದವೇ ಇದೆ. ಸಂಗೀತದಲ್ಲಿ ಒಂದೇ ವಾದ್ಯವನ್ನು ಆಶ್ರಯಿಸಿದರೂ ರಾಜೀವ್‌ ತಾರಾನಾಥ್‌ ಭಾಷೆಯ ನೆಲೆಯಲ್ಲಿ ಬಹುಭಾಷಾ ಪ್ರವೀಣರಾಗಿದ್ದರು. ಸಂಸ್ಕೃತ, ಉರ್ದು, ಹಿಂದಿ, ಕನ್ನಡ, ಕೊಂಕಣಿ, ತಮಿಳು, ಬಂಗಾಳಿ, ತೆಲುಗು, ಇಂಗ್ಲಿಷ್‌ ಹೀಗೆ ಹಲವು ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದ ರಾಜೀವ್‌ ತಾರಾನಾಥ್‌ ಹೆಚ್ಚಾಗಿ ಮಾತನಾಡುತ್ತಿದ್ದುದು ತಮ್ಮ ಸರೋದ್‌ ತಂತಿಗಳ ಮುಖಾಂತರವೇ.  ಸಾಹಿತ್ಯದಲ್ಲೂ ಅಗಾಧ ಪಾಂಡಿತ್ಯ ಹೊಂದಿದ್ದ ಅವರು ಗಂಭೀರ ಸಾಹಿತ್ಯ ಓದುಗರೂ ಆಗಿದ್ದರು. ಭಾರತದ ಪುರಾಣ ದರ್ಶನಗಳಷ್ಟೇ ಅಲ್ಲದೆ ಷೇಕ್ಸ್‌ಪಿಯರ್‌, ಎಲಿಯಟ್‌, ಬರ್ಟ್ರಾಂಡ್‌ ರಸೆಲ್‌ ಮುಂತಾದ ಜಗದ್ವಿಖ್ಯಾತ ಸಾಹಿತಿಗಳನ್ನು ತಾರಾನಾಥ್‌ ಅಧ್ಯಯನ ಮಾಡಿದ್ದರು.

ಕಲೆ, ಸಂಸ್ಕೃತಿ ಮತ್ತು ಇವೆರಡರ ಜಗತ್ತಿನಲ್ಲಿ ಪ್ರಕಟವಾಗುವ ಸಂಗೀತ, ಸಾಹಿತ್ಯ, ರಂಗಭೂಮಿ ಇತ್ಯಾದಿ ಅಭಿವ್ಯಕ್ತಿಗಳಲ್ಲಿ ಸಾಮಾಜಿಕ ಕಾಳಜಿ-ಕಳಕಳಿ ಇದ್ದಾಗ ಆ ಸಮಾಜವು ಭಾರತದ ಬಹುಸಂಸ್ಕೃತಿಯನ್ನು ಪೋಷಿಸುವುದರಲ್ಲಿ ಮುಂಚೂಣಿಯಲ್ಲಿರುತ್ತದೆ. ಶಾಸ್ತ್ರೀಯ ಸಂಗೀತದಲ್ಲಿರುವ ಸ್ವರ-ರಾಗ-ತಾಳ-ಲಯ ಇವುಗಳ ಹೊರತಾಗಿಯೂ ಇದನ್ನು ಜನಮಾನಸಕ್ಕೆ ತಲುಪಿಸುವ ಕಲಾವಿದರಲ್ಲಿರುವ ಸಾಮಾಜಿಕ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಸಾಮಾಜಿಕ ಚಳುವಳಿಗಳ ವಿವೇಚನೆಗೆ ಬಿಟ್ಟ ಪ್ರಶ್ನೆ. ಈ ಆಲೋಚನೆಯ ಮಾರ್ಗದಲ್ಲೇ ನಮಗೆ ರಾಜೀವ್‌ ತಾರಾನಾಥ್‌ ಅಂತಹ ಮಹಾನ್‌ ಚೇತನಗಳು ಆದರ್ಶಪ್ರಾಯವಾಗುತ್ತಾರೆ.

ಈ ಸಮಾಜವನ್ನು ಮತ್ತಷ್ಟು ಆರೋಗ್ಯಕರವಾಗಿಸುವ ಸಲುವಾಗಿ ನಿರಂತರ ಹೋರಾಟಗಳಲ್ಲಿ ತೊಡಗಿರುವ ಸಾಮಾಜಿಕ ಸಂಘಟನೆಗಳು ತಮ್ಮ ಸ್ಥಾಪಿತ ನಿಬಂಧನೆಗಳನ್ನು ದಾಟಿ ಯೋಚಿಸುವಂತಾದಾಗ, ರಾಜೀವ್‌ ತಾರಾನಾಥ್‌, ಟಿ.ಎಮ್. ಕೃಷ್ಣ ಮೊದಲಾದ ಕಲಾವಿದರು ನಮ್ಮ ನಡುವಿನ ಸಾಂಸ್ಕೃತಿಕ ವಾತಾವರಣದ ಬೌದ್ಧಿಕ ಚೇತನಗಳಾಗಿ ಪರಿಣಮಿಸುತ್ತಾರೆ. ಈ ಹಲವು ಪ್ರಶ್ನೆಗಳನ್ನು ನಮ್ಮ ನಡುವೆ ಬಿಟ್ಟು ರಾಜೀವ್‌ ತಾರಾನಾಥ್‌ ತಮ್ಮ ಲೌಕಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಸರೋದ್‌ ಧ್ವನಿ ನಮ್ಮ ನಡುವೆ ಶಾಶ್ವತವಾಗಿ ಉಳಿದಿರುತ್ತದೆ. ಯಾವುದೇ ಕಲೆ ವ್ಯಕ್ತಿಯನ್ನು ಅಜರಾಮರವಾಗಿಸುತ್ತದೆ. ರಾಜೀವ್‌ ತಾರಾನಾಥ್‌ ನಮ್ಮ ನಡುವೆ ಸದಾ ಜೀವಂತವಾಗಿರುವ ಸಾಂಸ್ಕೃತಿಕ-ಸಂಗೀತಾಭಿವ್ಯಕ್ತಿಯಾಗಿ ಉಳಿಯುತ್ತಾರೆ. ಕರ್ನಾಟಕದ ಜನತೆ, ವಿಶೇಷವಾಗಿ ಮೈಸೂರಿನ ಜನತೆ ಈ ಕಾರಣಕ್ಕಾಗಿ ಸೂಕ್ಷ್ಮಗ್ರಾಹಿ ಸಂವೇದನಾಶೀಲ ಚೇತನ ರಾಜೀವ್‌ ತಾರಾನಾಥ್‌ ಅವರಿಗೆ ಚಿರಋಣಿಗಳಾಗಿರಬೇಕು.

ನಾ ದಿವಾಕರು

ಚಿಂತಕರು

More articles

Latest article