ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‌ಮಹಲ್ ಅನ್ನು ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ. ಇಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಪ್ರಾದೇಶಿಕ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ನಂತರ ಅದು ನಕಲಿ ಕರೆ ಎನ್ನುವುದು ಸಾಬೀತಾಗಿದೆ. ಆಗ್ರಾದ ತಾಜ್ ಮಹಲ್‌ಗೆ ಮಂಗಳವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ತಂಡ ಮತ್ತು ಸ್ಥಳೀಯ ಪೊಲೀಸರು ತಾಜ್ ಮಹಲ್‌ಗೆ ಧಾವಿಸಿ ಶೋಧ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಮೂಲಕ ತಪಾಸನೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ತಾಜ್ ಮಹಲ್ನ ಭದ್ರತೆಯನ್ನು ವಹಿಸಿಕೊಂಡಿರುವ ಎಸಿಪಿಯೊಬ್ಬರು ತಿಳಿಸಿದ್ದಾರೆ. ತಾಜ್ ಮಹಲ್ ಅನ್ನು ವಿಶ್ವದ 7 ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು, ಮೊಘಲ್ ಚಕ್ರವರ್ತಿ ಷಹಜಹಾನ್ 1648ರಲ್ಲಿ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ನಿರ್ಮಿಸಿದ್ದಾನೆ.