ಒಂದು ಹೃದಯಸ್ಪರ್ಶಿ ಪ್ರೇಮ ಕತೆ

Most read

ಪ್ರೀತಿ ಹುಟ್ಟುವುದು; ಹೂವು ಸಹಜವಾಗಿ ಅರಳಿದಂತೆ. ಪ್ರೀತಿಯೂ ಹಾಗೆಯೇ. ಪ್ರೀತಿ ಎಂದರೆ ಪ್ರೀತಿ. ಅಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಹಿಂಸೆಗಂತೂ ಜಾಗ ಇರುವುದೇ ಇಲ್ಲ. ಸಿಗದ ಕಾರಣಕ್ಕೆ ಕತ್ತು ಕೊಯ್ದು ಕೊಲ್ಲುವುದಿದೆಯಲ್ಲ, ಅದು ಪ್ರೀತಿ ಅಲ್ಲವೇ ಅಲ್ಲ. ಪ್ರೀತಿಯ ಸೋಗು ಅಷ್ಟೇ. ಸ್ವಾರ್ಥ ಇರದ, ತ್ಯಾಗಕ್ಕೂ ಸಿದ್ಧ ಇರುವ ಪ್ರೀತಿ ಮಾತ್ರ ಅಪ್ಪಟ ಪ್ರೀತಿ. ಅಂತಹ ಹೂವಿನಂತೆ ಅರಳಿದ ಅಪ್ಪಟ ಪ್ರೀತಿಯ ಮುಂದೆ ಜಾತಿ, ಮತ, ಧರ್ಮ, ಅಂತಸ್ತು, ದೂರ ಯಾವುದೂ ನಿಲ್ಲುವುದಿಲ್ಲ. ಅಂತಹ ಪ್ರೀತಿ ಗೆಲ್ಲುತ್ತದೆ ಮತ್ತು ದೀರ್ಘ ಕಾಲ ಬಾಳಿ ಬದುಕುತ್ತದೆ. ನೈಜ ಪ್ರೀತಿಯೊಂದರ ನಿಬ್ಬೆರಗುಗೊಳಿಸುವ ಕಥನ ಇಲ್ಲಿದೆ.

ಪಯಣದ ಹಾದಿಗೆ ದೂರ, ಅಂತಸ್ತು ಇವು ಅಡ್ಡಿಯಾಗುವುದು ಸಾಧ್ಯವೇ? ಈ ಪ್ರಶ್ನೆಗಳಿಗೆಲ್ಲ ಉತ್ತರ ನೀಡುವ ಮತ್ತು ನೈಜ ಪ್ರೇಮದ ಶಕ್ತಿಯನ್ನು ವಿವರಿಸುವ ಒಂದು ಅನೂಹ್ಯ, ಅನನ್ಯ, ಹೃದಯಸ್ಪರ್ಶಿ ಪ್ರೇಮ ಕತೆಯೊಂದು ಇಲ್ಲಿದೆ.

ಇಲ್ಲಿನ ಪ್ರೇಮ ಕಥಾನಕದ ನಾಯಕ ಭಾರತದ ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ, ನಾಯಕಿ ಸ್ವೀಡನ್ ನ ಶಾರ್ಲೆಟ್ ವಾನ್ ಶೆಡ್ವಿನ್.

ಪ್ರದ್ಯುಮ್ನ ಕುಮಾರ್ ಹುಟ್ಟಿದ್ದು ಒಡಿಶಾದಲ್ಲಿ; ಕಡಿಮೆ ಆದಾಯದ, ಅದೂ ಅಸ್ಪೃಶ್ಯ ಕುಟುಂಬವೊಂದರಲ್ಲಿ.  ಆತ ‘ವರ ಕಲಾವಿದ’ ಅಂತಾರಲ್ಲ, ಅಂತಹ ಒಬ್ಬ ಪ್ರತಿಭಾಶಾಲಿ ಚಿತ್ರ ಕಲಾವಿದನಾಗಿದ್ದ.  ಆದರೆ,  ಬಡತನದ ಕಾರಣ  ಆತನ ಶಿಕ್ಷಣಕ್ಕೆ ಹಣ ಒದಗಿಸಲು ಆತನ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ, ಕ್ರೂರ ಜಾತಿ ವ್ಯವಸ್ಥೆಯ ಕಾರಣ ಆತ ನಿತ್ಯವೂ ಅಪಾರ ಅವಮಾನ ಅನುಭವಿಸ ಬೇಕಾಗುತ್ತಿತ್ತು.

ಅಂತೂ ಇಂತೂ, 1971 ರಲ್ಲಿ ನವದೆಹಲಿಯ ಕಲಾ ಕಾಲೇಜು ಸೇರುವುದು ಆತನಿಗೆ ಸಾಧ‍್ಯವಾಯಿತು. ತನ್ನ ಸುಂದರ ಕಲಾಕೃತಿಗಳ ಕಾರಣ ಆತ ಅಲ್ಲಿ ಅಪಾರ ಜನಪ್ರಿಯತೆ ಗಳಿಸಿದ; ಎಲ್ಲರ ಕಣ್ಮಣಿಯಾದ.

ಸುಮಾರು ನಾಲ್ಕು ವರ್ಷವಾಗಿರಬಹುದು, 19 ರ ಹರೆಯದ ವಿದ್ಯಾರ್ಥಿನಿ, ಸ್ವೀಡನ್ ದೇಶದ ಶಾರ್ಲೆಟ್ ವಾನ್ ಶೆಡ್ವಿನ್ ಪ್ರದ್ಯುಮ್ನ ಕುಮಾರ್ ನ ಬಳಿ ಕಲಾ ಕೌಶಲ ಕಲಿಯಲು ಮತ್ತು ಆತನಿಂದ ತನ್ನ ಒಂದು ಚಿತ್ರ ಮಾಡಿಸಿಕೊಳ್ಳಲು ಭಾರತಕ್ಕೆ ಬಂದಳು. ಆಗ ಆಕೆ ಲಂಡನ್ ನಲ್ಲಿ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಚಿತ್ರ ರಚಿಸುತ್ತಾ ರಚಿಸುತ್ತಾ ಕುಮಾರ್ ಆಕೆಯ ರೂಪರಾಶಿಗೆ ಮಾರುಹೋದ. ಆಕೆಯ ಪ್ರೇಮ ಪಾಶದಲ್ಲಿ ಸಿಲುಕಿಕೊಂಡ. ಆತನ ಸರಳತೆಗೆ ಆಕೆಯೂ ಮಾರುಹೋದಳು.

ಪ್ರೇಮವು ನಿಧಾನವಾಗಿ ಪರಿಣಯದೆಡೆಗೆ ಸಾಗಿತು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಶಾರ್ಲೆಟ್ ತನ್ನ ಹೆಸರನ್ನು ‘ಚಾರುಲತಾ’ ಎಂದು ಬದಲಾಯಿಸಿಕೊಂಡು ಭಾರತೀಯ ಪದ್ಧತಿಯ ಅನುಸಾರ ಕುಮಾರ್ ನನ್ನು ಮದುವೆಯಾದಳು.

ಸಮಯ ಕಳೆಯಿತು. ‘ಚಾರುಲತಾ’ ಸ್ವೀಡನ್ ಗೆ ಮರಳುವ ಕಾಲ ಸನ್ನಿಹಿತವಾಯಿತು. ತನ್ನ ಪತಿಯೂ ತನ್ನೊಡನೆ ಬರಬೇಕು ಎನ್ನುವುದು ಆಕೆಯ ಬಯಕೆ. ಆದರೆ ತನ್ನ ಓದು ಮುಗಿಸಿಕೊಳ್ಳುವ ಆಸೆ ಕುಮಾರ್ ನದು.

ಪ್ರದ್ಯುಮ್ನ ಕುಮಾರ್ ಪ್ರಿಯತಮೆಯನ್ನು ಸೇರಿಕೊಳ್ಳಲು ಬಳಸಿದ ಸೈಕಲ್

ಆಕೆ ಆತನಿಗೆ ವಿಮಾನ ಯಾನದ ಟಿಕೆಟ್ ಕೂಡಾ ಕೊಡಲು ಮುಂದೆ ಬಂದಳು. ಆದರೆ ಆತ ಅದನ್ನು ನಯವಾಗಿಯೇ ನಿರಾಕರಿಸಿದ. ‘ನಿನ್ನನ್ನು ಸೇರಲು ನನ್ನದೇ ಖರ್ಚಿನಲ್ಲಿ ನಾನು ಬರುವೆ’ ಎಂದು ಆಕೆಗೆ ಆತ ತಿಳಿಸಿದ. ಮುಂದೆ ಪತ್ರಗಳ ಮೂಲಕವೇ ಅವರ ಪ್ರೇಮ ಮುಂದುವರಿಯಿತು. ಭಾರತ ಮತ್ತು ಸ್ವೀಡನ್ ನಡುವೆ ಸಾವಿರ ಸಾವಿರ ಮೈಲಿಯ ದೂರ. ಆದರೆ ಆ ದೂರ ಎನ್ನುವುದು ಅವರ ಪ್ರೇಮಕ್ಕೆ ಎಂದೂ ಒಂದು ಅಡ್ಡಿಯಾಗಲೇ ಇಲ್ಲ.

ಕುಮಾರ್ ಮಾತನ್ನೇನೋ ಕೊಟ್ಟಿದ್ದ. ದೊಡ್ಡದಾಗಿ, ‘ನನ್ನದೇ ಖರ್ಚಿನಲ್ಲಿ ಬರುವೆ’ ಎಂದಿದ್ದ. ಆದರೆ ವಾಸ್ತವದಲ್ಲಿ ಆತನ ಬಳಿ ಹಣವಿರಲಿಲ್ಲ. ಹಾಗಂತ ಪ್ರೇಮವನ್ನು ಬಿಟ್ಟುಕೊಡಲೂ ಆತ ಸಿದ್ಧನಿರಲಿಲ್ಲ.

ಇಂತಹ ಇಕ್ಕಟ್ಟಿನ ಹೊತ್ತಿನಲ್ಲಿ ಆತ ಅಸಾಧ್ಯವಾದ ಕೆಲಸವೊಂದಕ್ಕೆ ಕೈಹಾಕಿದ. ತನ್ನಲ್ಲಿ ಏನೇನು ಇತ್ತೋ ಅವೆಲ್ಲವನ್ನೂ ಆತ ಮಾರಿಬಿಟ್ಟ. ಬಂದ ಹಣದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ. ಚಿತ್ರ ಕಲೆಯ ಬ್ರಶ್ ಗಳನ್ನೆಲ್ಲ ಎತ್ತಿಕೊಂಡ. ಪ್ರದ್ಯುಮ್ನ ಕುಮಾರ್ ದೂರ ಪಶ್ಚಿಮಕ್ಕೆ ಹೊರಟೇ ಬಿಟ್ಟ. ಇದೊಂದು ಕನಸಿನಂತೆ ಕಂಡೀತು ನಿಮಗೆ. ಆದರೆ ನಡೆದುದು ಸತ್ಯ.

ದಂಪತಿಗಳು

ದಾರಿಯಲ್ಲಿ ಅನೇಕ ಬಾರಿ ಆತನ ಸೈಕಲ್ ಕೈಕೊಟ್ಟಿತು. ಹಣವಿಲ್ಲದೆ ಕೆಲವೊಮ್ಮೆ ಉಪವಾಸ ಇರಬೇಕಾಗುತ್ತಿತ್ತು ಕೂಡಾ. ಆದರೆ ಪ್ರಿಯತಮೆಯನ್ನು ಸೇರಲು ಸ್ವೀಡನ್ ತಲಪುವ ಸಂಕಲ್ಪ ಮಾತ್ರ ದೃಢವಾಗಿತ್ತು. ನಾಲ್ಕು ತಿಂಗಳು, ಮೂರು ವಾರಗಳ ಅಪಾರ ಶ‍್ರಮದ ಮತ್ತು ದೀರ್ಘ ಪಯಣದ ಬಳಿಕ ಕೊನೆಗೂ ಆತ ಸ್ವೀಡನ್ ನ ಗೊಟೆನ್ ಬರ್ಗ್ ತಲಪಿದ. ಅಲ್ಲಿ ವಲಸೆ ಅಧಿಕಾರಿಗಳು ಪ್ರಶ್ನಿಸಿದಾಗ ತನ್ನ ಭೇಟಿಯ ಕಾರಣವನ್ನು ವಿವರಿಸಿದ,  ಮಾತ್ರವಲ್ಲ, ತನ್ನ ಮದುವೆಯ ಫೋಟೋಗಳನ್ನೂ ತೋರಿಸಿದ. ಅಧಿಕಾರಿಗಳೋ ದಿಗ್ಭ್ರಾಂತರಾದರು!. ಅರಸು ಮನೆತನಕ್ಕೆ ಸೇರಿದ ಒಬ್ಬಳು ಹೆಣ್ಣುಮಗಳು ಒಬ್ಬ ಬಡವನನ್ನು, ಅದೂ ಒಬ್ಬ ಭಾರತೀಯನನ್ನು ಮದುವೆಯಾಗುವುದೇ?!

ತನ್ನಿಬ್ಬರು ಮಕ್ಕಳೊಂದಿಗೆ….

ಶಾರ್ಲೆಟ್ ಗೆ ವಿಷಯ ತಿಳಿದಾಗ ಆಕೆಯ ಸಂತಸಕ್ಕೆ ಪಾರವೇ ಇರಲಿಲ್ಲ. ತನ್ನ ಗಂಡನನ್ನು ಎದುರುಗೊಳ್ಳಲು ಆಕೆ ತಡಮಾಡದೆ ಗೊಟೆನ್ ಬರ್ಗ್ ಗೆ ವಾಹನ ಚಲಾಯಿಸಿದಳು. ಆಕೆಯ ಕುಟುಂಬವೂ ಆತನನ್ನು ಒಪ್ಪಿಕೊಂಡು ತಮ್ಮ ಕುಟುಂಬಕ್ಕೆ ಸ್ವಾಗತಿಸಿತು.

ಅವರ ಮದುವೆಯಾಗಿ ಈಗ 40 ವರ್ಷಗಳು ಕಳೆದಿವೆ. ಪ್ರದ್ಯುಮ್ನ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ವೀಡನ್ ನಲ್ಲಿ ವಾಸಿಸುತ್ತಿದ್ದಾನೆ. ಸ್ವೀಡನ್ ನಲ್ಲಿ ಆತ ಅಪಾರ ಜನಪ್ರಿಯತೆಯ, ಎಲ್ಲರೂ ಸಂಭ್ರಮಿಸುವಂತಹ ಚಿತ್ರ ಕಲಾವಿದ ಮತ್ತು ಸ್ವೀಡಿಶ್ ಸರಕಾರದ ಕಲೆ ಮತ್ತು ಸಂಸ್ಕೃತಿ ಇಲಾಖೆಯ ಸಲಹೆಕಾರನಾಗಿ ಕೆಲಸ ಮಾಡುತ್ತಿದ್ದಾನೆ.

ಒಂದು ಕಾಲದಲ್ಲಿ ಆತನನ್ನು ದೂರ ಇಟ್ಟಿದ್ದ ಆತನ ಊರು, ಆತ ಭಾರತಕ್ಕೆ ಬಂದಾಗಲೆಲ್ಲ ಪ್ರೀತಿಯಿಂದ ಆತನನ್ನು ಸ್ವಾಗತಿಸುತ್ತಿದೆ.

 ಮೂಲ : Racheal Talwo Adeleke

ಕನ್ನಡಕ್ಕೆ : ಶ್ರೀನಿವಾಸ ಕಾರ್ಕಳ

More articles

Latest article