ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್ ಪೇದೆ ಸೇರಿದಂತೆ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಬೊಮ್ಮನಹಳ್ಳಿ
ಠಾಣೆ ಕಾನ್‌ಸ್ಟೆಬಲ್ ಅರುಣ್ ತೊಣೆಪ ಹಾಗೂ ಸಂತ್ರಸ್ತೆಯ ಸ್ನೇಹಿತ ಇಬ್ಬರನ್ನೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.
17 ವರ್ಷದ ಸಂತ್ರಸ್ತ ಬಾಲಕಿಯ ತಾಯಿ ದೂರು ದಾಖಲಿಸಿದ್ದರು.
ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ತನ್ನ ತಾಯಿಯೊಂದಿಗೆ ಸಂತ್ರಸ್ತೆ ವಾಸಿಸುತ್ತಿದ್ದರು. ಸಂತ್ರಸ್ತೆಗೆ ನೆರೆಮನೆಯ ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಆರೋಪಿಯು ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಈ ವಿಷಯವನ್ನು ಬಾಲಕಿ, ತನ್ನ ತಾಯಿಗೆ ತಿಳಿಸಿದ್ದಳು. ನಂತರ ಬಾಲಕಿಯ ತಾಯಿ ದೂರು ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ನೀಡಲು ತೆರಳಿದ್ದ ಸಂತ್ರಸ್ತೆಯನ್ನು ಕಾನ್‌ಸ್ಟೆಬಲ್ ಅರುಣ್ ಪರಿಚಯಿಸಿಕೊಂಡು ನ್ಯಾಯ ಕೊಡಿಸುವುದಾಗಿ ಮತ್ತು ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಡಿಸೆಂಬರ್‌ನಲ್ಲಿ ಬಿಟಿಎಂ ಲೇಔಟ್‌ನ ಹೋಟೆಲ್ ವೊಂದರ ಕೊಠಡಿಗೆ ಬಾಲಕಿಯನ್ನು ಕರೆಸಿಕೊಂಡ ಅರುಣ್ ಮದ್ಯದಲ್ಲಿ ಅಮಲು ಬರುವ ಔಷಧಿ ಬೆರೆಸಿ ಕುಡಿಸಿ, ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ತನ್ನ ಬಳಿ ಇರುವ ಖಾಸಗಿ
ವಿಡಿಯೊಗಳನ್ನು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದೂ ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ಬಿಎನ್ ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಮೈಕೋ ಲೇಔಟ್ ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು.