ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನ ಕೋರ್ಸ್ನಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದ ಜಯಶ್ರೀ ಎಂಬ ಒಡಿಸ್ಸಾ ಮೂಲದ ದಲಿತ ವಿದ್ಯಾರ್ಥಿನಿ ಆ*ಹತ್ಯೆ ಮಾಡಿಕೊಂಡಿದ್ದಾಳೆ. ಬುಧವಾರ ಮದ್ಯಾಹ್ನದ ಹೊತ್ತಿಗೆ ಈ ಘಟನೆ ಸಂಭವಿಸಿದ್ದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನಿಗೆ ವೇಲ್ ಬಿಗಿದುಕೊಂಡು ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆ*ಹತ್ಯೆ ಮಾಡಿಕೊಂಡಿದ್ದಾಳೆ.
ಆ*ಹತ್ಯೆಯ ಸುತ್ತ, ಅನುಮಾನಗಳ ಹುತ್ತ
ಈಗ ಆ*ಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಕೆಲವು ದಿನಗಳ ಹಿಂದಷ್ಟೇ ಡೀನ್ ಆಗಿರುವ ಪ್ರೊ. ಬಸವರಾಜ ಕುಬಕಡ್ಡಿ ಅವರನ್ನು ಭೇಟಿ ಮಾಡಿದ್ದು ಅಹವಾಲು ತೋಡಿಕೊಂಡಿದ್ದಳು ಎನ್ನಲಾಗಿದೆ. ಈ ಆ*ಹತ್ಯೆಯು ವಿವಿಯಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಮತ್ತು ಆರೋಪಿಗಳಿಗೆ ಆಡಳಿತ ಮಂಡಳಿಯ ಕುಮ್ಮಕ್ಕಿನ ಪರಿಣಾಮ ಎಂದು ವಿದ್ಯಾರ್ಥಿಗಳು ಅನುಮಾನಿಸುತ್ತಿದ್ದಾರೆ.
ಈ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸಿರುವ ಡಾ. ಪಿ ನಂದಕುಮಾರ್ ಕನ್ನಡ ಪ್ಲಾನೆಟ್ ನೊಂದಿಗೆ ಮಾತಾಡುತ್ತಾ, “ಈ ಹಿಂದೆ ಇದೇ ವಿಶ್ವವಿದ್ಯಾಲಯದ ಆರ್ ಎಸ್ ಎಸ್ ಹಿನ್ನಲೆಯ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಹೂಗಾರ ಅವರ ಸೋದರ ವಿಶ್ವವಿದ್ಯಾಲಯದ ಒಳಗಡೆ ಕ್ಯಾಂಟೀನಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ವಿದ್ಯಾರ್ಥಿನಿಯರು ಕುಲಪತಿಗಳಿಗೆ ಮತ್ತು ಕುಲಸಚಿರಿಗೆ ಹಾಗೂ ವಿದ್ಯಾರ್ಥಿಗಳ ಡೀನ್ ಡಾ. ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನು ನೀಡಿದ್ದರು. ಆದರೆ ಈ ಆರೋಪಿತನ ಅಣ್ಣನಾದ ಡಾ. ಮಲ್ಲಿಕಾರ್ಜುನ ಹೂಗಾರ ಅವರನ್ನು ಒಳಗೊಂಡು ಆಡಳಿತ ಮಂಡಳಿಯ ಅಧಿಕಾರಿಗಳು ಆ ವಿದ್ಯಾರ್ಥಿನಿಯರನ್ನು ಆಫೀಸ್ ಚೇಂಬರ್ ಗೆ ಕರೆಸಿ ಸಂಧಾನ ಮಾಡಿಸಿದ್ದರು. ಈ ಬಗೆಯ ಸಂಧಾನಗಳ ಕಾರಣದಿಂದ ಮತ್ತೊಮ್ಮೆ ವಿಶ್ವವಿದ್ಯಾಲಯದ ಕ್ಯಾಂಟೀನ್ ಗುತ್ತಿಗೆ ಪಡೆದ ತೆಲಂಗಾಣ ಮೂಲದ ಬಿಜೆಪಿ ನಾಯಕ ದಲಿತ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿರುವ ಕುರಿತು ಸ್ವತಃ ವಿದ್ಯಾರ್ಥಿನಿ ಮೇಲ್ ಮುಖಾಂತರ ಡೀನ್ ಅಧಿಕಾರಿ ಬಸವರಾಜ ಕುಬಕಡ್ಡಿ ಯವರಿಗೆ ದೂರನ್ನು ನೀಡಿದ್ದಳು” ಎಂದು ತಿಳಿಸಿದ್ದಾರೆ.
ಈ ಆರೋಪದ ಹಿನ್ನೆಲೆಯಲ್ಲಿ ಈಗ ನಡೆದಿರುವ ವಿದ್ಯಾರ್ಥಿನಿಯ ಆ*ಹತ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿನಿ ನೇಣಿಗೆ ಶರಣಾದ ದೃಶ್ಯವನ್ನು ಕಿಟಕಿಯಿಂದ ನೋಡಬಹುದಾಗಿದ್ದು ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಬಾಗಿಲು ಮುರಿದು ಪ್ರಾಧ್ಯಾಪಕರು ಉಪಕುಲಪತಿಗಳ ಅನುಪಸ್ಥಿತಿಯಲ್ಲೇ ಕೊಠಡಿಗೆ ಪ್ರವೇಶ ಮಾಡಿದ್ದು ಸಹ ಅನುಮಾನಕ್ಕೆ ಎಡೆ ಮಾಡಿದೆ.
ಈ ಕುರಿತು ಹೆಚ್ಚಿನ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.