ಬಿ ಎಂ ರೋಹಿಣಿ ಅವರು ಏಪ್ರಿಲ್ 6, 2026 ಕ್ಕೆ 82 ತುಂಬಿ 83ಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಎಲ್ಲ ಸಂಘ ಸಂಸ್ಥೆಯವರು ಒಗ್ಗೂಡಿ ಅವರ ಮೇಲಿನ ತಮ್ಮ ಪ್ರೀತಿ, ಅಭಿಮಾನ, ಗೌರವಗಳ ಅಭಿವ್ಯಕ್ತಿಗಾಗಿ 21.02.2026 ಮಂಗಳೂರಿನಲ್ಲಿ ʼನಾಗರಿಕ ಸನ್ಮಾನʼ ಮಾಡುತ್ತಿದ್ದಾರೆ. ಅವರಿಗೆ ತುಂಬು ಮನದ ಶುಭಾಶಯಗಳು.
ಆ ದಿನಗಳು ದಕ್ಷಿಣ ಕನ್ನಡದ ಮಹಿಳೆಯರ ಪಾಲಿಗೆ ಬಹಳ ನೋವಿನ ದಿನಗಳು. ಇಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೊಸ ಹೊಸ ರೂಪದಲ್ಲಿ ನಡೆಯುತ್ತಿದ್ದವು. ಈ ಕುರಿತ ವರದಿಗಳನ್ನು ದಿನವೂ ಪತ್ರಿಕೆಗಳಲ್ಲಿ ಓದಿ ಓದಿ ಹಲವರು ತಮ್ಮ ಸಂವೇದನಾಶೀಲತೆಯನ್ನು ಕಳೆದುಕೊಂಡು ಇದನ್ನೊಂದು ಸಾಮಾನ್ಯ ಸಮಸ್ಯೆ ಎಂಬುದಾಗಿ ಗಮನಿಸಲು ಶುರುವಿಟ್ಟಿದ್ದರು. ಇನ್ನೊಂದೆಡೆ, ಮಹಿಳಾ ದೌರ್ಜನ್ಯದ ವಾಸ್ತವವನ್ನು ಒಪ್ಪಿಕೊಂಡರೂ ಅದಕ್ಕೆ ಪ್ರತಿರೋಧ ನೀಡುವುದಕ್ಕೆ ಹೋರಾಟಗಾರರಿದ್ದಾರೆ ಎಂದು ತಣ್ಣಗೆ ಕುಳಿತಿರುವವರೂ ಇದ್ದರು. ಜನಸಾಮಾನ್ಯರ ಇಂತಹ ಉದಾಸೀನದ ದಿನಗಳಲ್ಲೇ ನಾಡು ತಲೆ ತಗ್ಗಿಸುವಂತಹ ಕೋಮು ಸಂಘರ್ಷದ ಘಟನೆಗಳು ಮೇಲಿಂದ ಮೇಲೆ ಘಟಿಸ ತೊಡಗಿದವು.
2009 ರ ಜನವರಿ 24 ರಂದು ಹಿಂದೂತ್ವ ಸಂಘಟನೆ ಶ್ರೀ ರಾಮ ಸೇನೆಯಿಂದ ಪಬ್ ಧಾಳಿ ನಡೆದು ಅಲ್ಲಿದ್ದ ಹುಡುಗಿಯರನ್ನು ಹಿಗ್ಗಾಮುಗ್ಗ ಬಡಿದಾಗ ಇಲ್ಲಿ ಎರಡು ದನಿಗಳಿದ್ದವು. ಅದು ಹೆಣ್ಣುಮಕ್ಕಳ ಹಕ್ಕುಗಳಿಗೆ, ಸ್ವಾತಂತ್ರ್ಯಕ್ಕೆ ಇಂಥದ್ದನ್ನು ಸಹಿಸಬಾರದು ಎಂದು ಒಳಗೊಳಗೇ ಅಂದುಕೊಂಡವರ ಒಳ ದನಿ, ಹೆಣ್ಣು ಮಕ್ಕಳು ಇಲ್ಲಿ ಸಾಕಷ್ಟು ʼರಾಪಾಟʼ ಮಾಡ್ತಾರೆ, ಅವರಿಗೆ ಬುದ್ಧಿ ಕಲಿಸಬೇಕು ಎಂಬ ಇನ್ನೊಂದು ದನಿ. ಪ್ರತಿರೋಧದ ದನಿ ಬಲು ಕ್ಷೀಣವಾಗಿದ್ದುದರಿಂದ ಆಗ ನಮಗೆ ಹೆಚ್ಚೇನೂ ಮಾಡಲಾಗಿರಲಿಲ್ಲ. ಎರಡನೆಯ ಸಲ 2012 ರ ಜುಲೈ 28 ರಂದು ಹೋಮ್ ಸ್ಟೇ ಒಂದರಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಯುವಕ ಯುವತಿಯರ ಮೇಲೆ ಧಾಳಿ ನಡೆದಾಗ ಅದನ್ನು ಮಾಧ್ಯಮಗಳು ದೊಡ್ಡ ಮಟ್ಟಕ್ಕೆ ಒಯ್ದು ಅದೊಂದು ರಾಷ್ಟ್ರೀಯ ಸುದ್ದಿಯಾಯಿತು. ಹೊರಗಿನವರು ಈ ಘಟನೆಗೆ ಸ್ಪಂದಿಸಿದ ಬಗೆಯನ್ನು ನೋಡಿದಾಗ ನಮ್ಮ ನಿಷ್ಕ್ರಿಯತೆಯ ಬಗ್ಗೆ ನಮಗೆ ಪಾಪಪ್ರಜ್ಞೆ ಕಾಡಿತು. ಈ ಸಲ ನಾವು ಹೆಚ್ಚು ಸನ್ನದ್ದರಾದೆವು. `ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಹುಟ್ಟಿಕೊಂಡಿತು.

ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಮನುಕುಲದ ವಿರೋಧಿ ವಿದ್ಯಮಾನಗಳಿಗೆ ನಮ್ಮ ಪ್ರತಿರೋಧ ಇದೆ ಎಂಬುದನ್ನು ವ್ಯವಸ್ಥೆಗೆ ಮುಟ್ಟಿಸುವ ಆದ್ಯತೆ ಈ ಸಂಘಟನೆಯದು. ಅದೇ ವರ್ಷ ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ಮತ್ತು ಆ ದಿನಗಳಲ್ಲಿಯೇ ನಡೆದ ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ನಮ್ಮನ್ನು ಮತ್ತಷ್ಟು ಘಾಸಿಗೊಳಿಸಿತು. ಆ ದಿನಗಳಲ್ಲಿ ಮಂಗಳೂರಿಗೆ ಬಂದ ದು. ಸರಸ್ವತಿ 2013 ರ ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕರಾವಳಿಯಲ್ಲಿ ನಡೆಸುವ ಕನಸನ್ನು ನಮ್ಮಲ್ಲಿ ಬಿತ್ತಿದರು. ಕರ್ನಾಟಕದ ಮಹಿಳಾಪರ ಸಂಘಟನೆಗಳನ್ನು ಅದರ ಎಲ್ಲ ಪದಾಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ಪ್ರತಿರೋಧದ ಸ್ವರೂಪಕ್ಕೆ ಒಂದು ಗಟ್ಟಿತನ ಮತ್ತು ವ್ಯಾಪಕತೆಯನ್ನು ಡಾ. ಎಚ್ ಎಸ್ ಅನುಪಮಾ, ಸರಸ್ವತಿ ಮತ್ತು ಸಬೀಹಾ ಅವರು ತಂದುಕೊಟ್ಟರು. ಪರಿಣಾಮವಾಗಿ 2013 ರ ಮಾರ್ಚ್ ತಿಂಗಳಲ್ಲಿ ಸುಮಾರು 4,000 ಮಂದಿ ಮಹಿಳೆಯರು, ಸಮಾನ ಮನಸ್ಕರು ಭಾಗವಹಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಾಧ್ಯವಾಯಿತು. ಸಮಾವೇಶ ಮುಗಿದ ಬಳಿಕ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದ ಫಲವಾಗಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಅಂದೇ ಸ್ಥಾಪನೆಗೊಂಡಿತು.
ಹೀಗೆ, ಮಹಿಳೆಯರ ಗುಂಪೊಂದು ದಕ್ಷಿಣ ಕನ್ನಡದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ವಿದ್ಯಮಾನಗಳಿಗೆ ನಮ್ಮ ಪ್ರತಿರೋಧ ಇದೆ’ಎಂದು ಸ್ಪಷ್ಟವಾಗಿ ನುಡಿದು ನಡೆದು ತೋರಿಸಲು ಹೊರಟಿದ್ದಾರೆ ಎನ್ನುವಾಗ ಅಲ್ಲಿ ಬಿ ಎಂ ರೋಹಿಣಿಯವರ ಹೆಸರು ನಮಗೆ ಮುಖ್ಯವಾಗುತ್ತದೆ.
ಬಿ ಎಂ ರೋಹಿಣಿಯವರು ಮೊದಲಿಗೆ ಗುರುತಿಸಿಕೊಳ್ಳುವುದು ಓರ್ವ ಸಾಹಿತಿಯಾಗಿ. ಸಾಹಿತ್ಯ ಕೃತಿಯು ಯಾವತ್ತೂ ಕೂಡಾ ಸಾಹಿತಿಯ ವ್ಯಕ್ತಿತ್ವದ ಒಂದು ಸಮರ್ಥ ಕೈಗನ್ನಡಿಯಾಗಿರುತ್ತದೆ. ಈ ಅಂಶವನ್ನು ಬಿ ಎಂ ರೋಹಿಣಿಯವರ ಕೃತಿಗಳಲ್ಲಿ ನಾವು ಗುರುತಿಸಬಹುದಾಗಿದೆ. ಲೇಖಕಿಯ ಓದಿನ ಹಂಬಲ ಅಪಾರವಾದುದು. ಇಂಥದ್ದನ್ನೇ ಓದಬೇಕು, ಇಂಥದ್ದನ್ನೇ ಕೇಳಬೇಕು ಎಂಬ ಗಡಿರೇಖೆಯನ್ನು ಹಾಕಿಕೊಂಡವರು ಅವರಲ್ಲ. ಜ್ಞಾನ ಎಲ್ಲಿಂದಲೇ ಬರಲಿ ಅದಕ್ಕೆ ತನ್ನ ಮನದ ಕಿಟಕಿಗಳನ್ನು ತೆರೆದಿಡಬೇಕು, ಅದನ್ನು ಬಾಚಿಕೊಳ್ಳಬೇಕು ಎಂಬ ತುಡಿತವನ್ನು ಸದಾ ಇರಿಸಿ ಕೊಂಡವರು. ಹಾಗಾಗಿಯೇ ಪುರಾಣದಿಂದ ಹಿಡಿದು, ಇತಿಹಾಸ, ಸಮಕಾಲೀನದವರೆಗೆ, ಮಹಿಳಾ ಪರ ಸಂಘಟನೆಗಳಿಂದ ತೊಡಗಿ ಚಳುವಳಿಯವರೆಗೆ ಅವರ ಅರಿವಿನ ವಿಸ್ತಾರವಿದ್ದು ಅದನ್ನು ತಮ್ಮ ಬರೆವಣಿಗೆಗಳಲ್ಲಿ, ಉಪನ್ಯಾಸಗಳಲ್ಲಿ ಬಳಸಿಕೊಳ್ಳುತ್ತಾ ಬಂದವರು. ಹೋರಾಟ ಮತ್ತು ಬರೆಹ ಎರಡನ್ನೂ ಬದುಕಾಗಿಸಿ ಕೊಂಡವರು ನಮ್ಮಲ್ಲಿ ವಿರಳ. ಇಂತಹ ಅಪರೂಪದ ಮತ್ತು ಅಷ್ಟೇ ವಿಶಿಷ್ಟವಾದ ಕಾರಣಗಳಿಗಾಗಿ ರೋಹಿಣಿಯವರು ಮಹಿಳಾ ಚಳುವಳಿಗೆ ಮುಖ್ಯವಾಗುತ್ತಾರೆ.

ಅಧ್ಯಾಪನ ವೃತ್ತಿಯಿಂದ ಅವರು ನಿವೃತ್ತರಾದಾಗ ಹೆಚ್ಚಾಗಿ ಅವರೊಬ್ಬ ತರಗತಿಯ ಟೀಚರ್ ಅಷ್ಟೇ ಆಗಿದ್ದರು. ಅವರ ತಾಯಿ ದೇವಕಿಯವರು ಆ ಕಾಲಕ್ಕೇ ಬೀಡಿ ಕಾರ್ಮಿಕೆಯಾಗಿ ಹೋರಾಟಗಳಲ್ಲಿ ಭಾಗವಹಿಸಿದವರು. ಅಮ್ಮನ ಹೋರಾಟದ ಕತೆಗಳನ್ನು ನೋಡುತ್ತ ಕೇಳುತ್ತ ಬೆಳೆದ ರೋಹಿಣಿಯವರೊಳಗೊಬ್ಬ ಹೋರಾಟಗಾರ್ತಿ ಆಗಲೇ ರೂಪುಗೊಂಡಿದ್ದಳಾದರೂ ಅದು ಬೆಳಕಿಗೆ ಬರುವ ಅವಕಾಶಗಳು ಅವರಿಗೆ ಸಿಕ್ಕಿರಲಿಲ್ಲ. ಕೆಲ ಸರಕಾರೇತರ ಸಂಸ್ಥೆಗಳು ತಮ್ಮ ಜತೆ ಕೈಜೋಡಿಸಿ ಚಿಕ್ಕ ಪುಟ್ಟ ಕೆಲಸ ಮಾಡಿಕೊಡಲು ಅವರನ್ನು ಆಹ್ವಾನಿಸಿದ ಬಳಿಕ (ಡೀಡ್ಸ್, ಪಡಿ, ಸಹೋದಯ ಇತ್ಯಾದಿಗಳು) ಅವರೊಳಗಿನ ಹೋರಾಟಗಾರ್ತಿ ಬಹಿರಂಗವಾಗಿ ಕಾಣಿಸಿಕೊಂಡಳು ಎಂದು ನನಗನ್ನಿಸುತ್ತಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸುವ ಒಂದು ಸುಸಂದರ್ಭವು ರೋಹಿಣಿಯವರಿಗೆ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಲ್ಲಿ ದೊರೆತಿದೆ ಎಂದು ಹೇಳಿದರೆ ರೋಹಿಣಿಯವರು ಖಂಡಿತಾ ಅದನ್ನು ಅಲ್ಲಗಳೆಯಲಾರರು.
2009 ರ ಪಬ್ ಧಾಳಿಯ ಸಂದರ್ಭದಲ್ಲಿ ಡೀಡ್ಸ್ ನಲ್ಲಿ ನಡೆಯುತ್ತಿದ್ದ ಮಹಿಳಾಪರ ಸಭೆಯಲ್ಲಿ ಮೊದಲ ಬಾರಿಗೆ ವ್ಯವಸ್ಥೆಯ ವಿರುದ್ಧದ ರೋಹಿಣಿಯವರ ಸಿಟ್ಟಿನ ಅರಿವಾಯಿತು. ಮುಂದುವರೆದು ಹೋಮ್ ಸ್ಟೇ ಸಂದರ್ಭದಲ್ಲಿ “ಅವರ ಪ್ರತಿಭಟನೆಯ ಜೋಶ್ ಅರ್ಥವಾಗಿತ್ತು. ಮುಂದೆ ತಿಂಗಳಿಗೊಮ್ಮೆ ವೇದಿಕೆಯ ಸಭೆ ಸೇರಿದಾಗ ಮೌಲಿಕವಾದ ಸಲಹೆ ಸೂಚನೆಗಳನ್ನು ನೀಡಿ ವೇದಿಕೆಯು ಅರ್ಥಪೂರ್ಣವಾಗಿ ಮುಂದಡಿ ಇಡುವಂತೆ ಸಹಕಾರ ನೀಡುತ್ತಿದ್ದರು. ಪ್ರತಿ ಸಭೆಗೆ ಹಾಜರಾಗಿ ಅದರ ವರದಿಯನ್ನು ತಪ್ಪದೆ ಬರೆಯುತ್ತಿದ್ದರು. ʼಕಪ್ಪು ಉಡುಪಿನಲ್ಲಿ ಮಹಿಳೆಯರುʼ ಪ್ರತಿಭಟನೆಗಳ ಕರಪತ್ರಗಳ ಕರಡು ಸಿದ್ಧಪಡಿಸುವಿಕೆಯ ಜವಾಬ್ದಾರಿಯನ್ನು ತಾನೇ ಹೊತ್ತುಕೊಳ್ಳುತ್ತಿದ್ದರು. ಸಭೆಗೆ ರೋಹಿಣಿಯವರು ಬಂದರೆಂದರೆ ಸಭೆ ತುಂಬಿದ ಹಾಗೆ ಎಂಬ ಪ್ರೀತಿಯ ಮಾತು ಇತರ ಗೆಳತಿಯರದ್ದಾಗಿತ್ತು.
ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ 2013 ರಲ್ಲಿ ನಡೆದ ಮಂಗಳೂರು ಸಮಾವೇಶದಲ್ಲಿ ರೋಹಿಣಿಯವರು ವಯಸ್ಸನ್ನು ಮರೆತು ದಣಿವರಿಯದೆ ದುಡಿದಿದ್ದಾರೆ. ಹೀಗೆ ದುಡಿದ ಅವರನ್ನು ಸಮಾವೇಶದ ಯಶಸ್ಸಿನ ಪಾಲಿನಲ್ಲಿ ನೆನೆಯದಿದ್ದರೆ ಅದು ಸಂಘಟನೆಯೊಂದರ ಹಿಪಾಕ್ರಸಿಯೇ ಆದೀತು.
ಸಾಹಿತಿ ರೋಹಿಣಿಯವರು ಕ್ರಮೇಣ ಹೋರಾಟಗಾರ್ತಿ ರೋಹಿಣಿಯಾಗಿ ಜನ ಮಾನಸಕ್ಕೆ ಹತ್ತಿರವಾದರು. ಓರ್ವ ಚಳುವಳಿಗಾರ್ತಿಯಾಗಿ ತಮ್ಮ ಒಲವನ್ನು ಹೋರಾಟದ ಕುರಿತ ಬರವಣಿಗೆಗಳಲ್ಲಿ ಕಾಣಿಸಿದರು. ಅಧ್ಯಯನ, ಸಂಶೋಧನೆಗಳು ಅವರ ಇಷ್ಟದ ಆಯ್ಕೆಗಳಾದವು. ಸ್ವಾತಂತ್ರ್ಯ ಹೋರಾಟದಲ್ಲಿ ಮೇಲ್ವರ್ಗದವರ ಸಾಕಷ್ಟು ದಾಖಲೆಗಳಿದ್ದು ಕೆಳವರ್ಗದವರ ಮತ್ತು ಮಹಿಳೆಯರ ಭಾಗವಹಿಸುವಿಕೆಯು ನಗಣ್ಯವಾಗಿರುವ ಸಂಗತಿಯನ್ನು ಓದಿ ಆಚೆಗೆ ಇಟ್ಟು ಬಿಡದೆ ಅದರ ಬೆನ್ನು ಬಿದ್ದರು. ಜೈಲಿಗೆ ಹೋಗಿ ಅಲ್ಲಿಯ ದಾಖಲೆಗಳನ್ನು ಜಾಲಾಡಿದರು. ಹೋರಾಟದ ಚರಿತ್ರೆಯಲ್ಲಿ ದಾಖಲಾಗದ ಕೆಲವು ಹೆಸರುಗಳನ್ನು ಹೊರತೆಗೆದರು. ದಕ್ಷಿಣ ಕನ್ನಡದಲ್ಲಿ ಮಹಿಳಾ ಹೋರಾಟಗಳೇ ಇಲ್ಲ ಎಂಬಂತಹ ತೀರ್ಮಾನ ಇರುವಾಗ ಡೀಡ್ಸ್ ಬೆಂಬಲದೊಂದಿಗೆ ಮೊದಲ ಹೋರಾಟಗಾರ್ತಿಯರ ಹೆಜ್ಜೆ ಗುರುತುಗಳನ್ನು ಹುಡುಕಿ ನಡೆದರು. ಮಹಿಳಾ ಹೋರಾಟಗಳಿಗೆ ಇಲ್ಲೊಂದು ಉನ್ನತ ಪರಂಪರೆ ಇರುವುದನ್ನು ದಾಖಲಿಸಿದರು. ದಕ್ಷಿಣ ಕನ್ನಡದಲ್ಲಿ ಮಹಿಳೆಯರಿಗೆ ಲಭ್ಯವಿರುವ ಸರಕಾರೀ ಯೋಜನೆಗಳ ಬೆನ್ನು ಹತ್ತಿ ಅವುಗಳ ಮಾಹಿತಿಯನ್ನು ಸಂಗ್ರಹಿಸಿ ಮಹಿಳೆಯರ ಉಪಯೋಗಕ್ಕಿರಲಿ ಎಂದು ಡೀಡ್ಸ್ ಸಂಸ್ಥೆಗೆ ನೀಡಿದರು. ಹೀಗೆ, ಅವರ ಹೋರಾಟದ ಮನೋಭಾವ ಒಂದಲ್ಲ ಒಂದು ರೀತಿಯಲ್ಲಿ ಇಂದಿಗೂ ವ್ಯಕ್ತವಾಗುತ್ತಲೇ ಇರುತ್ತದೆ. ಮತ್ತದು ಅಕಾಡೆಮಿಕ್ ವಲಯದಿಂದ ದೂರವೂ ಇರುತ್ತದೆ!

ರೋಹಿಣಿಯವರು 82 ರ ವಯಸ್ಸು ಮುಗಿದು ಇನ್ನು ಕೆಲವೇ ದಿನಗಳಲ್ಲಿ 83ಕ್ಕೆ ಕಾಲಿಡಲಿದ್ದಾರೆ. ಈ ಇಳಿವಯಸಿನಲ್ಲೂ ಅವರಲ್ಲಿ ಚಳುವಳಿಯ ಕಾವು ಆರಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಮೊನ್ನೆ ಬೆಳ್ತಂಗಡಿಯಲ್ಲಿ ನಡೆದ ʼಕೊಂದವರು ಯಾರುʼ ಮಹಿಳಾ ನ್ಯಾಯ ಸಮಾವೇಶದಲ್ಲಿ ಅವರ ಭಾಗವಹಿಸುವಿಕೆ. ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದಶಕಗಳಿಂದ ನಡೆದಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಅಸಹಜ ಸಾವುಗಳು, ನಾಪತ್ತೆ ಮತ್ತು ಕೊಲೆಗಳಿಗೆ ನ್ಯಾಯ ಕೇಳಿ ಕಳೆದ ಡಿಸೆಂಬರ್ 16, 2025 ರಂದು ಬೆಳ್ತಂಗಡಿಯಲ್ಲಿ ಮೌನ ಮೆರವಣಿಗೆ ಮತ್ತು ಮಹಿಳಾ ನ್ಯಾಯ ಸಮಾವೇಶ ನಡೆಸಲಾಗಿತ್ತು. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಸ್ಥಳೀಯವಾಗಿ ಸಂಘಟನೆಯ ಜವಾಬ್ದಾರಿ ಹೊತ್ತಿತ್ತು. ವೇದಿಕೆಯ ಪರವಾಗಿ, ರೋಹಿಣಿಯವರು ತನ್ನ ವಯಸು 82 ಅಲ್ಲ 28 ಎಂಬಂತೆ ಅದರಲ್ಲಿ ಲಗುಬಗೆಯಿಂದ ಭಾಗವಹಿಸಿದರು. ಸಮಾವೇಶದ ವೇದಿಕೆಯಲ್ಲಿ ದ. ಕ ದ ಮಹಿಳೆಯರ ಹೋರಾಟದ ಇತಿಹಾಸವನ್ನು ಪರಿಚಯಿಸಿ ಇಂತಹ ನೆಲದಲ್ಲಿ ದೌರ್ಜನ್ಯಗಳು ನಡೆದಾಗ ಮಹಿಳೆಯರು ಶಾಶ್ವತವಾಗಿ ಸುಮ್ಮಗಿರುವುದಿಲ್ಲ, ಹೋರಾಟ ಪುಟಿದೇಳುತ್ತದೆ ಎಂದು ಅಪರಾಧಿಗಳ ಊರಿನಲ್ಲಿ ಧ್ವನಿ ಏರಿಸಿದರು.. ನೈಜ ಹೋರಾಟಗಾರರು ಇರಬೇಕಾದುದು ಹೀಗೇ.
ಹೀಗೆ ರೋಹಿಣಿಯವರಲ್ಲಿ ಅಪಾರವಾದ ಮತ್ತು ಅಪೂರ್ವವಾದ ಜೀವನಾನುಭವವಿದೆ. ತಮ್ಮ ಅನುಭವಗಳೆಲ್ಲವನ್ನು ಮುಕ್ತವಾಗಿ ಬಿಚ್ಚಿಡುತ್ತಾ ಅವರು ಎಳೆಯ ತಲೆಮಾರಿಗೆ ಹೋರಾಟ ಮತ್ತು ಸಾಹಿತ್ಯದ ಮಿಳಿತಕ್ಕೊಂದು ಸರಳ ಮಾದರಿಯಾಗಿದ್ದಾರೆ.
ಅಧ್ಯಾಪನ, ಸಾಹಿತ್ಯ, ಸಂಶೋಧನೆ, ಹೋರಾಟ, ಉಪನ್ಯಾಸ ಅಂತೆಲ್ಲ ಬದುಕಿಡೀ ಸಮಾಜಕ್ಕಾಗಿ ದುಡಿದ ರೋಹಿಣಿಯವರ ಕೆಲಸಗಳನ್ನು ಯಾವತ್ತೋ ಗುರುತಿಸ ಬೇಕಾಗಿತ್ತು. ಯಾವುದೇ ಜಾಹೀರಾತುಗಳಿಲ್ಲದೆ ಎಲೆ ಮರೆಯಲ್ಲಿ ದುಡಿದ ಅವರನ್ನು ತಡವಾಗಿಯಾದರೂ ಗುರುತಿಸಿ ಅಭಿನಂದನಾ ಗ್ರಂಥವೊಂದನ್ನು ಸಮರ್ಪಿಸುವ ಕೆಲಸ ಗೆಳತಿಯರಿಂದ ಆಗುತ್ತಿರುವುದು ಸಂತಸ ನೀಡುವಂಥದ್ದು. ಇದನ್ನು ಆಗು ಮಾಡುವಲ್ಲಿ ಶಕ್ತಿಯಾಗಿ ನಿಂತ ಗೆಳತಿ ಸಬೀಹಾ ಮತ್ತು ತಂಡದವರಿಗೆ ನನ್ನ ಶ್ಲಾಘನೆಗಳು. ರೋಹಿಣಿಯವರಿಗೆ ಅಭಿನಂದನೆಗಳು, ಅಭಿವಂದನೆಗಳು.
( ಬಿ. ಎಂ.ರೋಹಿಣಿಯವರು ಶಿಕ್ಷಣ, ಸಾಹಿತ್ಯ ವಲಯ ಸಾಂಸ್ಕೃತಿಕ ಸಂಘಟನೆಗಳು, ಸರಕಾರೇತರ ಸಂಘಟನೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯೊಂದಿಗಿನ ಅವರ ಒಡನಾಟವನ್ನಷ್ಟೆ ಈ ಲೇಖನದಲ್ಲಿ ಗುರುತಿಸಲಾಗಿದೆ.)
ಗುಲಾಬಿ ಬಿಳಿಮಲೆ
ಕನ್ನಡ ಪ್ಲಾನೆಟ್
ಮೊ : 9972673244.
ಇದನ್ನೂ ಓದಿ – ಮಂಗಳೂರಿನಲ್ಲಿ ಬಿ ಎಂ ರೋಹಿಣಿ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ


