ಬೆಂಗಳೂರು: ಜೆಸಿಬಿ ಹರಿದು ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್ ನಲ್ಲಿ ನಡೆದಿದೆ. ಜೆಸಿಬಿ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಮಗು ಥನವ್ ರೆಡ್ಡಿ ಮೃತಪಟ್ಟಿದೆ. ಮಹದೇವಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಜೆಸಿಬಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮನೆ ಮುಂಭಾಗ ಆಟವಾಡುತ್ತಿದ್ದ ಥನವ್ ರೆಡ್ಡಿ ಮೇಲೆ ಜೆಸಿಬಿ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪೋಷಕರು ವೈದೇಹಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ಮೂಲದ ದಂಪತಿಯ ಪುತ್ರ ಥವನ್. ಮದುವೆಯಾಗಿ 4 ವರ್ಷದ ನಂತರ ಹುಟ್ಟಿದ್ದ ಮಗು ಎಂದು ಪೋಷಕರು ರೋಧಿಸುತ್ತಿದ್ದರು. ಸಾಫ್ಟ್ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದ ಥವನ್ ತಂದೆ, ಎರಡು ವರ್ಷದಿಂದ ಬಾಲಾಜಿ ಲೇಔಟ್ ನಲ್ಲಿ ವಾಸವಿದ್ದು,
ಇದೇ ಲೇಔಟ್ ನಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದರು. ಜೆಸಿಬಿ ಕೆಲಸ ಮುಗಿಸಿದ ಚಾಲಕ ವೇಗವಾಗಿ ಜೆಸಿಬಿ ಚಲಾಯಿಸಿದ್ದ. ಆಗ ಮನೆ ಮುಂದೆ ಇದ್ದ ಮಗು ಜೆಸಿಬಿ ಅಡಿಯಲ್ಲಿ ಸಿಲುಕಿದೆ. ಮಗು ಸಿಲುಕಿರುವ ವಿಷಯ ಜೆಸಿಬಿ ಚಾಲಕನಿಗೆ ಗೊತ್ತೇ ಆಗಿರಲಿಲ್ಲ. ಪೋಷಕರು ಕಿರುಚಿಕೊಂಡ ನಂತರ ದುರಂತ ನಡೆದಿರುವುದು ಅರಿವಾಗಿ ಚಾಲಕ ಜೆಸಿಬಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.