ಗ್ಯಾರಂಟಿಗಳಿಂದ ನಮ್ಮ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಗ್ಯಾರಂಟಿ ಗಳು ಎಷ್ಟೊಂದು ಹೆಣ್ಮಕ್ಕಳ ಪಾಲಿಗೆ ದಾರಿ ದೀಪವಾಗಿವೆ ಅನ್ನೋದನ್ನು ಹಿರಿಯ ಪತ್ರಕರ್ತ “ಎನ್.ರವಿಕುಮಾರ್ ಟೆಲೆಕ್ಸ್” ಅವರು ಬರೆದಿರುವ ಈ ಲೇಖನ ಓದಿದರೆ ತಿಳಿಯುತ್ತೆ.
ಅವಳಿಟ್ಟ ಹೆಸರು ಸಿದ್ದರಾಮಯ್ಯ ದೀಪಗಳು!!
ಎಷ್ಟೊಂದು ರೂಪ-ರೂಪಕಗಳು..!!!
ಗವರ್ನ್‌ಮೆಂಟ್ ಶಾಲೆಯಲ್ಲಿ ಪ್ರೈಮರಿ ಹಂತ ದಾಟಿದ ನನ್ನನ್ನು ಇನ್ನಷ್ಟು ಚೆನ್ನಾಗಿ ಓದಿಸಬೇಕೆಂದು ಹಠ ಹಿಡಿದವರಂತೆ ನನ್ನನ್ನು ಕೈ ಹಿಡಿದು ಎಳೆದೊಯ್ದ ಅವ್ವ ನಮ್ಮೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮಧ್ಯಮ ವರ್ಗಗಳ ಪಾಲಿಗೆ ಮೀಸಲಿಟ್ಟಂತಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕಚೇರಿಯ ತಲೆಬಾಗಿಲಿಗೆ ತಂದು ನಿಲ್ಲಿಸಿ ಬಿಟ್ಟಿದ್ದಳು.
ಸೋಷಿಯಲಿಷ್ಟು ಚಳವಳಿ, ಜನತಾಪರಿವಾರವಾದ ನಮ್ಮೂರಿನ ಮುಖಂಡರಾಗಿದ್ದ ಎಂ.ಸಿ ಮಹೇಶ್ವರಪ್ಪ ಅವರ ರೈಸ್‌ಮಿಲ್ ಕೊಟ್ಟಿಗೆ ಮನೆಯಿಂದ ಸಗಣಿ ಬಳಿದ ಕೈಗಳನ್ನು ಸೆರಗಿಗೆ ಒರೆಸಿಕೊಂಡೆ ಸೀದಾ ಬಂದು ನಿಂತಿದ್ದ ನನ್ನವ್ವನನ್ನು ಒಳಗೆ ಬನ್ನಿ ಅಂತ ಯಾರು ಕರೆಯಲಿಲ್ಲ.
ದೂರದ ಚೇರ್‌ನಲ್ಲೆ ಕುಳಿತಿದ್ದ ಮೂಗಿನ ತುತ್ತತುದಿಗೆ ಚಷ್ಮಾ ತಗಲಿಸಿಕೊಂಡು ಮೇಲುಗಣ್ಣು ಬಿಟ್ಟುಕೊಂಡು ನೋಡಿ ವಿಚಾರಿಸಿದ ಮುಖ್ಯೋಪಾಧ್ಯಾಯರು ಕಾಸು ತಂದಿದಿಯೇನಮ್ಮಾ? ಎಂದು ಮೂಗಿಗೆ ಕರ್ಚಿಫ್ ಹೊದಿಸಿಕೊಂಡೆ ಪ್ರಶ್ನಿಸಿದರು. ಅವ್ವ ಸರಸರನೆ ಸೆರಗ ಗಂಟನ್ನು ಬಿಚ್ಚಿದವಳೇ ಚಿಲ್ಲರೆಗಳನ್ನೆಲ್ಲಾ ಅವರ ಮುಂದೆ ಕೊಡವಿ ಬಿಟ್ಟಳು. ಜೊತೆಗೆ ಸಾಹುಕಾರ್ ಮಹೇಶ್ವರಪ್ಪನೋರು ಬರೆದು ಕೊಟ್ಟಿದ್ದ ಶಿಫಾರಸ್ಸು ಚೀಟಿಯನ್ನು ಮುಂದಿಡಿದು ಒಟ್ಟು ೬೦ ರೂಪಾಯಿ ಕಾಸವೆ ಸಾಮಿ , ಮಗಂಗೆ ಸ್ಕೂಲ್‌ಗೆ ಸೇರ್ಸಕಳಿ ಎಂದು ಕೈ ಮುಗಿದು ನಿಂತು ಬಿಟ್ಟಳು .
ಸಾಹುಕಾರ್ ಮಹೇಶ್ವರಪ್ಪನೋರು ಬರೆದು ಕೊಟ್ಟ ಶಿಫಾರಸ್ಸು ಚೀಟಿಯನ್ನು ಕೋಲಿನಿಂದಲೆ ಎಳೆದುಕೊಂಡು ಓದಿದ ಮುಖ್ಯೋಪಾಧ್ಯಾಯರು ಇದೆಲ್ಲಾ ನಡೆಯಲ್ಲ ಕಣಮ್ಮ. ಕಾಸು ಇಷ್ಟು ಸಾಕಾಗೋಲ್ಲ. ೩೬೦ ರೂಪಾಯಿಗಳು ಬೇಕು. ತಂದ್ರೆ ಅಡ್ಮಿಷನ್. ಇಲ್ಲಾಂದ್ರೆ ಹೋಗಿ ಮಗನನ್ನ ಗೌರ‍್ಮೆಂಟ್ ಸ್ಕೂಲ್‌ಗೆ ಸೇರ್ಸು, ಹೋಗು ಹೋಗು.. ನನ್ನ ಕಣ್ ಮುಂದೆ ನಿಲ್ ಬ್ಯಾಡ ಎಂದು ಗದರಿ ಬಿಟ್ಟರು.
ಆ ಮಾತು ಅದ್ಯಾವ ಮಟ್ಟಿಗೆ ಅವಳಲ್ಲಿ ಹಠ ಹುಟ್ಟಿಸಿತೆಂದರೆ ನನ್ನನ್ನು ಇದೇ ಸ್ಕೂಲ್ ಗೆ ಸೇರಿಸ್ತಿನಿ ಎಂದು ಶಪಥ ಮಾಡಿದವಳಂತೆ ಅಲ್ಲಿಂದ ಭರಭರನೆ ಬಂದವಳೆ ರೈಸ್‌ಮಿಲ್ ನ ಗೋದಾಮಿನಲ್ಲಿ ಅಕ್ಕಿ ಜರಡಿ ಹಿಡಿದ ಹೊಟ್ಟಿನಲ್ಲಿ ತೌಡು ಸಾಣಿಸಲು ಕುಳಿತು ಬಿಟ್ಟಳು .
ಅಪ್ಪ ಬಿಸಿಲಿಗೆ ಬಿಸಿಲಾಗಿ ದುಡಿದು ಒಂದಿಷ್ಟು ಕಾಸು ತಂದರೆ, ತೌಡಿಗೆ ತೌಡಾಗಿ ತೇಯ್ದುಕೊಂಡ ಅವ್ವ ತೌಡು ಮಾರಿ ಒಟ್ಟು ೩೬೦ ರೂಪಾಯಿ ಹೊಂಚಿಕೊಂಡು ಬಲಗೈಲಿ ದುಡ್ಡು ಎಡಗೈಲಿ ನನ್ನನಿಡಿದುಕೊಂಡು ಮುಖ್ಯೋಪಾಧ್ಯಾಯರ ಮುಂದೆ ನಿಂತು ಬಿಟ್ಟಳು. ನಾನು ಕ್ಲಾಸ್ ರೂಂ ನ ಒಳಗೆ ಹೋಗುವುದನ್ನೆ ನೋಡುತ್ತಿದ್ದ ಅವ್ವ ಅದಾವುದೋ ಸಾಧನೆ ಮಾಡಿದಂತೆ ಬೀಗುತ್ತಿದ್ದಳು. ಅವಳ ಮುಖದಲ್ಲಿ ಬೆವರು-ಕಣ್ಣೀರು ಯಾವುದೆಂದು ಗುರುತು ಸಿಗಲಾರದಷ್ಟು ಬೆರತು ಹರಿಯುತ್ತಿದ್ದವು.
ಮೊನ್ನೆ ಪಿಯುಸಿಯಲ್ಲಿ ಪ್ರಥಮ ರ‍್ಯಾಂಕ್ ಬಂದ ವಿಜಯಪುರದ ವಿದ್ಯಾರ್ಥಿ ನನ್ನ ಓದಿಗೆ ಸರ್ಕಾರ ಕೊಟ್ಟ 2000 ರೂ.ಗಳು ನೆರವಾದವು ಎಂದು ಹೇಳುವಾಗ ನನ್ನ ನರಬಳ್ಳಿಯಿಂದ ಹೊರಬಂದ ನೆನಪಿದು. ನಾನು ಓದುವ ಕಾಲಕ್ಕೆ ಇಂತಹದ್ದೊಂದು ಗೃಹಲಕ್ಷ್ಮಿ ಇದ್ದಿದ್ದರೆ ನನ್ನವ್ವ -ಅಪ್ಪನಂತ ಅದೆಷ್ಟೋ ನಿರ್ಗತಿಕ ತಂದೆ-ತಾಯಿಗಳ ಪಡಿಪಾಟಲು ನೀಗುತ್ತಿತ್ತಲ್ಲವೆ?
ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಮಗನ ಹೆಣದ ಮುಂದೆ ಅನಾಥ ತಾಯಿಯೊಬ್ಬಳು ಕಣ್ಣೀರಿಡುತ್ತಾ ಯಾಕಪ್ಪ ಹಿಂಗ್ ಮಾಡ್ಕಂಡೆ, ನಾನು ನಿನ್ನ ನೋಡ್ಕಂತಿದ್ದೆ. ಸಿದ್ದರಾಮಯ್ನೋರು ಎರಡಸಾವ್ರ ಹಾಕೋರು. ಅದ್ರಲ್ಲೆ ನಿನ್ನ ಸಾಕ್ತಿದ್ದೇ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಎಂತವರನ್ನೂ ಕದಲಿಸದೆ ಇರದು.
ಸಣ್ಣ ಕುಟುಂಬವೊಂದು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಕಾಸಲ್ಲಿ ಮನೆಗೊಂದು ಫ್ರಿಡ್ಜ್ ತಂದಿವಿ ಎಂದು ಅದಕ್ಕೆ ಪೂಜೆ ಮಾಡಿ ಸಂಭ್ರಮಿಸುತ್ತಿದ್ದದ್ದನ್ನು ಗಮನಿಸಿದೆ.
ಗಂಡ, ಮಕ್ಕಳು ಯಾರೂ ಇಲ್ಲದ ಅನಾಥೆ ಅಜ್ಜಿಯೊಬ್ಬರು ಸಿದ್ದರಾಮಣ್ಣ ಕೊಡೊ ಕಾಸಲ್ಲಿ ಹೆಂಗೋ ಜೀವ್ನ ಮಾಡ್ತಿದಿವಪ್ಪ ಎಂದು ಧುಮ್ಮಿಕ್ಕುವ ಕಣ್ಣೀರನ್ನು ಒರೆಸಿ ಕೊಳ್ಳುತ್ತಿದ್ದರು.
ಗೃಹಲಕ್ಷ್ಮಿ ಕಾಸಲ್ಲಿ ಮಕ್ಕಳ ಸ್ಕೂಲ್ ಫೀಜು, ಗಂಡನ ಆಸ್ಪತ್ರೆ ಖರ್ಚು, ಸಂಘದ ಸಾಲ ಎಲ್ಲನೂ ನೀಚ್ಕಳಂಗಾಗಿದೆ ಎನ್ನುವ ಮಾತುಗಳಿಗೇನು ಕಮ್ಮಿ ಇಲ್ಲ.
ಈ ಸಿದ್ರಾಮಯ್ಯ ಹೆಂಗಸರಿಗೆ ಕಾಸು ಕೊಡೋಕೆ ಶುರುಮಾಡಿದ್ಮೇಲೆ ಹೆಂಡ್ತಿ ನನ್ ಮಾತೆ ಕೇಳೋಲ್ಲ ಕಣೋ ಎಂದು ಪತ್ರಕರ್ತ ಗೆಳೆಯನೊಬ್ಬ ಗಂಡಾಳಿಕೆಯಿಂದ ಅವಲತ್ತುಕೊಂಡಿದ್ದು ಸೋಜಿಗವೆನಿಸಿತು!!
ನಿನ್ನ ದುಡಿಮೆ ಹಂಗ್ಯಾಕೋ, ಗಂಡ ಅಂತ ದಂಡಿಸಬ್ಯಾಡ, ಹೆಂಗೋ ತಿಂಗ್ಳಿಗೆ ೨ಸಾವ್ರ ಬತ್ತದೆ, ಅಕ್ಕಿ ದುಡ್ಡು ಬತ್ತದೆ ನಾ ಮಕ್ಳು ಸಾಕ್ಕಂಡ್ ಇರ‍್ತಿನಿ ಅಂತ ಅದೆಷ್ಟೋ ಹೆಣ್ಮಕ್ಕಳು ಸೋಮಾರಿ- ದುಷ್ಟ ಗಂಡಂದಿರ ವಿರುದ್ಧ ಸೆಡ್ಡು ಹೊಡೆವ ಆತ್ಮಸ್ಥೈರ್ಯವನನ್ನೂ, ಅದೇ ಕಾಲಕ್ಕೆ ಈ ತಿಂಗ್ಳು ಸಿದ್ದರಾಮಯ್ನ ಕಾಸು ಬಂದಿಲ್ವ , ಕುಡಿಯೋಕೆ ಕಾಸುಕೊಡೆ ಅಂತ ಹೆಂಡತಿಗೆ ಜೋತು ಬೀಳೋ ಗಂಡಂದಿರನ್ನೂ ಕಂಡಿದ್ದೇನೆ.
ಅಷ್ಟೆ ಅಲ್ಲ. ಸಿದ್ದರಾಮಯ್ಯನ ದುಡ್ಡಲ್ಲಿ ಈ ತಿಂಗ್ಳು ನಾಲ್ಕು ನೈಟಿ ತಗಂಡೆ, ಹೋದ ತಿಂಗಳು ಡ್ರೆಸ್ ತಗೊಂಡೆ, ಸಿದ್ದರಾಮಯ್ಯನ ಆರು ತಿಂಗಳ ಕಾಸು ಕೂಡಿಟ್ಟು ಮೈನೆರೆದ ಮಗ್ಳಿಗೆ ಕಿವಿಗೆ ಒಡವೆ ಮಾಡಿಸ್ದೆ……. ಹೀಗೆ ಎಷ್ಟೊಂದು ವೈವಿಧ್ಯಮಯ ರೂಪ-ರೂಪಕಗಳು ಮುಗಿಯುವುದೇ ಇಲ್ಲ.
ಸರ್ಕಾರಗಳು ಕೊಡುವ ಅಂತಃಕರಣದಿಂದ ಕೂಡಿದ ಸಣ್ಣ ಆಸರೆಗಳು ಬಡವರ, ನಿರ್ಗತಿಕರ ಬದುಕನ್ನು ಎಷ್ಟೊಂದು ಭದ್ರಗೊಳಿಸುತ್ತವೆ ಅನ್ನೋದು ಗ್ಯಾರಂಟಿಗಳು ನಿಷ್ಪ್ರಯೋಜಕ, ದಿವಾಳಿಗೆ ದಾರಿ ಎಂದೆಲ್ಲಾ ಲೇವಡಿ ಮಾಡುವವರಿಗೆ ಅರ್ಥವಾಗುವುದಿಲ್ಲ, ಝಗಮಗಿಸುವ ಬೆಳಕಿನಲ್ಲೆ ಇರುವವರಿಗೆ ಕತ್ತಲೆ ಅನುಭವ ಆಗುವುದಾದರೂ ಹೇಗೆ? ಹೊಟ್ಟೆ ತುಂಬಿದವರಿಗೆ ಹಸಿವಿನ ಸಂಕಟವಾದರೂ ಅರ್ಥವಾಗುವುದಾದರೂ ಹೇಗೆ?
ಹೀಗೆ ಕಂಡಿದ್ದನ್ನೆಲ್ಲಾ ಉಗಾದಿ ಹಬ್ಬದ ದಿನ ಬರೆಯುವುದರಲ್ಲೇ ರೂಮ್ ಸೇರಿಕೊಂಡಿದ್ದ ನನಗೆ ಶಶಿಯ ಕೂಗು ಮುಟ್ಟಿತು.
ರೀ ಬರ್ರಿ.., ಸಿದ್ರಾಮಯ್ಯವರ ದೀಪ ಹಚ್ಚಿದಿನ ನೋಡಿ. ಇವತ್ತು ಉಗಾದಿ ಹಬ್ಬ, ಇವತ್ತಾದ್ರೂ ದೇವ್ರಿಗೆ ಕೈ ಮುಗಿರೀ ಎಂದು ತಾಕೀತು ಮಾಡಿದಳು.
ಅವಳ ದೇವರ ಮುಂದೆ ಎರಡು ಹೊಸ ಕಂಚಿನ ದೀಪಗಳು ದಿವಿನಾಗಿ ಬೆಳಗುತ್ತಿದ್ದವು. ಅವುಗಳಿಗೆ ನನ್ನ ಶಶಿ ಇಟ್ಟ ಹೆಸರು ಸಿದ್ದರಾಮಯ್ಯ ದೀಪಗಳು
ಎನ್ ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು
ಇದನ್ನೂ ಓದಿ-ಕುಮಾರಸ್ವಾಮಿಯ ಕೋಮುವಾದಿ ಮೆದುಳು ತೆನೆ ಹೊತ್ತ ಮಹಿಳೆಯ ಅರ್ಥ ಗ್ರಹಿಸುವಂತಾಗಲಿ