ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ʻಮುಸ್ಲಿಂ ಲೀಗ್ʼ ಪ್ರಣಾಳಿಕೆ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಪ್ರಿಯ ಚಿತ್ರ ನಟ ಕಿಶೋರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡಿದ ಕೆಲಸದ ಮೇಲೆ ಓಟು ಕೇಳುವ ಯೋಗ್ಯತೆಯಿಲ್ಲದೇ ಇದ್ದರೆ ಕಡೇಪಕ್ಷ ಇನ್ನೊಬ್ಬರಿಂದ ನೋಡಿ ಕಲಿಯಬೇಕು. ಎಲ್ಲದಕ್ಕೂ ಬರೀ ದ್ವೇಷದ ಬಣ್ಣ ಹಚ್ಚುವುದೇ ಇವರ ಕೆಲಸ ಎಂದು ಟೀಕಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಕೆಲವು ಪುಟಗಳನ್ನು ಹಾಕಿ, ಇಲ್ಲಿ ಹಿಂದೂ-ಮುಸ್ಲಿಂ ಎಲ್ಲಿದೆ ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ಪ್ರಣಾಳಿಕೆಯ 48 ಪುಟದಲ್ಲಿ ನಮಗೆ ಎಲ್ಲೂ ಕಾಣದ ಹಿಂದೂ-ಮುಸ್ಲಿಂ ಈ ಕಾಮಾಲೆ ಕಣ್ಣಿನ ಸುಳ್ಳ ಭ್ರಷ್ಠ ಮನುಷ್ಯನಿಗೆ ಕಾಣಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರಲ್ಲದೆ ಚುನಾವಣಾ ನೀತಿ ಸಂಹಿತೆಯನ್ನು ಧೂಳೀಪಟ ಮಾಡುವ ಹೊಲಸು ಕೆಲಸವಷ್ಟೇ ಇವರದು ಎಂದು ಕಿಡಿಕಾರಿದ್ದಾರೆ.
ನರಸತ್ತ ಚುನಾವಣಾ ಆಯೋಗ ಬೆಂಬಲಕ್ಕಿರುವಾಗ, ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳುವುದು ಅವನಿಗೆ ಸಲೀಸಲ್ಲವೇ?
ಯಾರೇ ಅಧಿಕಾರಕ್ಕೆ ಬರಲಿ, ದೇಶ ನಮ್ಮದು. ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇ ಗತಿ ಎಂದು ಕಿಶೋರ್ ಎಚ್ಚರಿಸಿದ್ದಾರೆ.
ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಬೇಕು. ಪೈಪೋಟಿ ಮಾಡಲೇಬೇಕೆಂದರೆ ಅವರಿಗಿಂತ ಒಳ್ಳೆಯದನ್ನೇನಾದರೂ ಮಾಡಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರ ಬೆಳೆಗೆ MSP, ಸೇನಾ ಭರ್ತಿ, ಉದ್ಯೊಗ ಖಾತ್ರಿ, ಆರೋಗ್ಯ ಮತ್ತು ವಿದ್ಯಾಭದ್ರತೆ, ಬಡತನ ಮಹಿಳಾ ಭತ್ಯೆ, ವೃದ್ಧಾಪ್ಯ ಸ್ಥಿರತೆ ಯಂತಹ ಅತ್ಯಾವಶ್ಯಕ ಗ್ಯಾರಂಟಿಗಳನ್ನು ನೀಡಲಾಗಿದೆ. ಜೊತೆಗೆ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ನ್ಯಾಯಾಂಗದ ಸಮಾನ ಅಧಿಕಾರದ ಭರವಸೆ , ಪ್ರಜಾಪ್ರಭುತ್ವವನ್ನು ಪ್ರಬಲಗೊಳಿಸುವ ಭರವಸೆಗಳನ್ನು ನೀಡಲಾಗಿದೆ. ಪ್ರಬುದ್ಧ ಪ್ರಗತಿಶೀಲ ಜನಪರ ಪ್ರಣಾಳಿಕೆಯೆಂದು ಎಲ್ಲರೂ ಶ್ಲಾಘನೀಯ ಎನ್ನುತ್ತಿರುವಾಗ, ಇದು ಇವನದ್ದೇ ವಿಚಾರಧಾರೆಯ ಮುಸ್ಲಿಂ ಲೀಗ್ ಎನ್ನುತ್ತಾನೆ. ಪ್ರಬುದ್ಧ ಪ್ರಗತಿಶೀಲ ಜನಪರ ಕೆಲಸದಿಂದ ದೇಶ ಹಾಳಾಗುತ್ತದೆಂದು ಹೇಳುತ್ತಾನೆ. ಮೋದಾನಿಯ ದಾನವೀ ಶಕ್ತಿಯೆಂದರೆ ಇವನು ಸತ್ಯವನ್ನು ತಿರುಚುವುದು ಎಂದು ಅವರು ಕಿಡಿಕಾರಿದ್ದಾರೆ.