ಕುಮಾರಸ್ವಾಮಿಯ ಕೋಮುವಾದಿ ಮೆದುಳು ತೆನೆ ಹೊತ್ತ ಮಹಿಳೆಯ ಅರ್ಥ ಗ್ರಹಿಸುವಂತಾಗಲಿ

Most read

ಕುಮಾರಸ್ವಾಮಿಯವರ ಪ್ರಕಾರ ಹೆಣ್ಣುಮಕ್ಕಳು ಸಬಲರಾಗುವುದು, ಶಕ್ತರಾಗುವುದು, ಸ್ವತಂತ್ರರಾಗುವುದು, ಸ್ವಾವಲಂಬನೆ ಪಡೆಯುವುದು ಎಂದರೆ ದಾರಿ ತಪ್ಪುವುದು ಎಂದು ಅರ್ಥವೇ? ಅಥವಾ ಸೌಲಭ್ಯಗಳು ದಾರಿ ತಪ್ಪಿಸುತ್ತವೆ ಎನ್ನುವುದಾದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯಗಳನ್ನು ಪಡೆಯುತ್ತಾ ಬಂದಿರುವ ಜಾತಿಗಳು ಹಾಗೂ ಪುರುಷರೆಲ್ಲಾ ದಾರಿ ತಪ್ಪಿದ್ದಾರೆ ಎಂದರ್ಥವೋ? ಕುಮಾರಸ್ವಾಮಿಯವರು ಇದಕ್ಕೆ ಉತ್ತರಿಸುತ್ತಾರೆ ಎಂದು ನಿರೀಕ್ಷಿಸೋಣ ದಿಶಾ, ಸಾಮಾಜಿಕ ಕಾರ್ಯಕರ್ತರು.

ಬಿಜೆಪಿಯೊಂದಿಗೆ ಹೋಗುವುದೆಂದರೆ ನಮ್ಮ ಮೆದುಳನ್ನು ಕಳೆದುಕೊಳ್ಳುವುದು ಎನ್ನುವುದಕ್ಕೆ ಇತ್ತೀಚಿನವರೆಗೂ ಅಲ್ಪಸ್ವಲ್ಪ ಮಾನವೀಯವಾಗಿ ನಡೆದುಕೊಳ್ಳುತ್ತಿದ್ದ ಕುಮಾರಸ್ವಾಮಿಯವರು ಉದಾಹರಣೆ. ಜೆಡಿಎಸ್ ಬಿಜೆಪಿಯ ಕೂಟ ಸೇರಿದಂದಿನಿಂದ ಸ್ವತಃ ಬಿಜೆಪಿಯವರೇ ಆಶ್ಚರ್ಯ ಪಡುವಷ್ಟರ ಮಟ್ಟಿಗೆ ಕುಮಾರಸ್ವಾಮಿ ಕೋಮುವಾದಿಯಾಗಿ, ಮನುವಾದಿಯಾಗಿ ಪರಿವರ್ತನೆಯಾಗಿದ್ದಾರೆ. ರಾಜಕೀಯವಾಗಿ ಅಪ್ರಬುದ್ಧವಾಗಿ ವರ್ತಿಸುತ್ತಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡ ಎಂಬ ಹೇಳಿಕೆಯಿಂದ ಹಿಡಿದು ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಯವರೆಗೂ ಕುಮಾರಸ್ವಾಮಿಯವರು ಅನಂತಕುಮಾರ ಹೆಗಡೆಯ ಸಂವಿಧಾನ ಬದಲಾಯಿಸಿ ಮನು ಸಿದ್ಧಾಂತವನ್ನು ಸಂವಿಧಾನವಾಗಿ ಈ ದೇಶದ ಮೇಲೆ ಹೇರುತ್ತೇವೆ ಎನ್ನುವಂತಹ ಮಾತುಗಳನ್ನು  ಪರೋಕ್ಷವಾಗಿ ಬೆಂಬಲಿಸಿ ಆಡುತ್ತಿದ್ದಾರೆ. ಕುಮಾರಸ್ವಾಮಿಯವರು ತಮ್ಮ  ಸಂವಿಧಾನ ವಿರೋಧಿ, ಕೋಮುವಾದಿ ಹಾಗೂ ಮನುವಾದಿ ವ್ಯಕ್ತಿತ್ವದಿಂದ ಬೇಗ ಗುಣಮುಖರಾಗುವಂತಹ ಪಾಠವನ್ನು ಈ ಲೋಕಸಭೆಯ ಚುನಾವಣೆ ಅವರಿಗೆ ಕರುಣಿಸಲಿ ಎಂದು ಮೊದಲಿಗೆ ಹಾರೈಸೋಣ.

ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಎರಡು ಯೋಜನೆಗಳು ನೇರವಾಗಿ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು. ಎಲ್ಲಾ ವರ್ಗದ ಹೆಣ್ಣುಮಕ್ಕಳು ಫ್ರೀಯಾಗಿ ಬಸ್‌ಗಳಲ್ಲಿ ಪ್ರಯಾಣಿಸಲು ಘೋಷಿಸಿದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳೂ ಎರಡು ಸಾವಿರ ಖಾತೆಗೆ ಹಾಕುವ ಗೃಹಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವು. ಹೆಣುಮಕ್ಕಳನ್ನು ಆರ್ಥಿಕತೆಯ ಮುಖ್ಯವಾಹಿನಿಯಲ್ಲಿ ಪಾಳ್ಗೊಳ್ಳುವಂತೆ ಸರ್ಕಾರವೊಂದು ಮಾಡಿದ ಪ್ರಯತ್ನದ ಭಾಗವಾಗಿ ಈ ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿಯೂ ಆಗಿವೆ. ಈ ಯೋಜನೆಗಳ ಫಲಾನುಭವಿ ದುಡಿಯುವ ವರ್ಗದ ಮಹಿಳೆಯರು ಮಾಧ್ಯಮಗಳಲ್ಲಿ ಇವುಗಳಿಂದ ಆಗುತ್ತಿರುವ ಪ್ರಯೋಜನಗಳನ್ನು ಕುರಿತು ಮಾತನಾಡುವ ಅಸಂಖ್ಯ ಕಥೆಗಳನ್ನು ಪ್ರತಿನಿತ್ಯವೂ ಕೇಳುತ್ತಿದ್ದೇವೆ.

ಕೂಲಿ ಕೆಲಸಕ್ಕೆ ಹೋಗುವ ಹೆಣ್ಣುಮಗಳೊಬ್ಬರು ಈಗ ಶಕ್ತಿ ಯೋಜನೆಯಿಂದಾಗಿ ಉಳಿಯುವ ಹಣದಲ್ಲಿ ಮಕ್ಕಳಿಗೆ ಹಣ್ಣು ತಗೊಂಡು ಹೋಗ್ತಿದೀನಿ ಎನ್ನುತ್ತಾರೆ; ಮೊನ್ನೆ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿ ನನ್ನ ಅಮ್ಮನಿಗೆ ಪ್ರತಿ ತಿಂಗಳು ಸರ್ಕಾರ ನೀಡಿದ ಎರಡು ಸಾವಿರ ನನ್ನ ಓದಿಗೆ ಸಹಕಾರಿಯಾಯಿತು ಎನ್ನುತ್ತಾನೆ. ಸರ್ಕಾರದ ಈ ಯೋಜನೆಗಳಿಂದ ಉಳಿತಾಯವಾದ ಹಣವನ್ನು ತಮ್ಮ ಸಂಸಾರಕ್ಕಾಗಿ ಅಥವಾ ಮಕ್ಕಳ ಭವಿಷ್ಯಕ್ಕಾಗಿಯೇ ಬಳಸುತ್ತಿದ್ದಾರೆಯೇ ವಿನಃ ತಮ್ಮ ಮೋಜಿಗಾಗಿ ಬಳಸುತ್ತಿಲ್ಲ. ಇದರ ನಡುವೆ ಮುಖ್ಯವಾಗಿ ಈ ಎರಡು ಯೋಜನೆಗಳ ಬಗ್ಗೆ ಕುಹಕ, ವ್ಯಂಗ್ಯ, ಅಪಹಾಸ್ಯದ ಹೇಳಿಕೆಗಳನ್ನು ನೀಡುತ್ತಿರುವ ವರ್ಗ, ಜಾತಿ ಹಾಗೂ ಲಿಂಗ ರಾಜಕಾರಣ ದೊಡ್ಡಮಟ್ಟದಲ್ಲಿಯೇ ಇದೆ. ಶಕ್ತಿ ಯೋಜನೆಯಿಂದ ಇನ್ನುಮುಂದೆ ಹೆಂಗಸರು ಮನೆಯಲ್ಲೇ ಇರಲ್ಲ; ಬಸ್‌ಗಳು ರಷ್ ಆಗ್ತಿವೆ; ಎಲ್ಲಾ ಬಸ್‌ಗಳಲ್ಲೂ ಹೆಂಗಸರೇ ತುಂಬಿರುತ್ತಾರೆ; ಈ ಹಿಂದೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿದ್ದವು ಹಾಗೂ ಬಸ್ಸುಗಳ ಕೊರತೆಯೇ ಇರಲಿಲ್ಲವೇನೋ ಎನ್ನುವಂತೆ ಮೂದಲಿಸುವ ಧ್ವನಿಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಸಿಕ್ಕುತ್ತವೆ. ಈ ವಿರೋಧ, ಕೊಂಕು, ಅಪಹಾಸ್ಯಗಳಲ್ಲಿ ಮಹಿಳಾ ವಿರೋಧಿ ಮನಸ್ಥಿತಿ ಇರುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಈ ಯೋಜನೆಗಳಿಂದಾಗಿ ಪುರುಷ ಪ್ರಧಾನ ವ್ಯವಸ್ಥೆ ಸ್ವಲ್ಪ ವಿಚಲಿತವಾದಂತೆ ವರ್ತಿಸುತ್ತಿದೆ.

ಸಾಮಾಜಿಕವಾಗಿ ಇರುವ ಈ ಮನಸ್ಥಿತಿಯನ್ನು ಬದಲಾಯಿಸಲು ಶ್ರಮಿಸಬೇಕಾದ ರಾಜಕಾರಣಿಗಳು ಈ ಯೋಜನೆಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ವಿರೋಧಿಸುತ್ತಿರುವುದು ಸಾಮಾಜಿಕ ದುಷ್ಟತನವನ್ನು ಹೆಚ್ಚುಮಾಡುವ ಕೆಲಸ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಕರ್ನಾಟಕದ ಕೆಲವು ರಾಜಕಾರಣಿಗಳಿಗೆ ಈ ಗ್ರಹಿಕೆ ಬರಲಾರದು ಎನ್ನಿಸುತ್ತದೆ. ಇದನ್ನು ಇನ್ನಷ್ಟು ನಿಚ್ಚಳಗೊಳಿಸುವಂತೆ ಕುಮಾರಸ್ವಾಮಿಯವರು ‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಅವರ ಬದುಕು ಏನಾಗುತ್ತದೋ; ಕುಟುಂಬದ ಬದುಕೇನಾಗುತ್ತದೋ?’ ಎಂದು ಮಾತನಾಡಿದ್ದಾರೆ. ಕುಮಾರಸ್ವಾಮಿಯವರ ಪ್ರಕಾರ ಹೆಣ್ಣುಮಕ್ಕಳು ಸಬಲರಾಗುವುದು, ಶಕ್ತರಾಗುವುದು, ಸ್ವತಂತ್ರರಾಗುವುದು, ಸ್ವಾವಲಂಬನೆ ಪಡೆಯುವುದು ಎಂದರೆ ದಾರಿ ತಪ್ಪುವುದು ಎಂದು ಅರ್ಥವೇ? ಅಥವಾ ಸೌಲಭ್ಯಗಳು ದಾರಿ ತಪ್ಪಿಸುತ್ತವೆ ಎನ್ನುವುದಾದರೆ ಶತಮಾನಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯಗಳನ್ನು ಪಡೆಯುತ್ತಾ ಬಂದಿರುವ ಜಾತಿಗಳು ಹಾಗೂ ಪುರುಷರೆಲ್ಲಾ ದಾರಿ ತಪ್ಪಿದ್ದಾರೆ ಎಂದರ್ಥವೋ? ಕುಮಾರಸ್ವಾಮಿಯವರು ಇದಕ್ಕೆ ಉತ್ತರಿಸುತ್ತಾರೆ ಎಂದು ನಿರೀಕ್ಷಿಸೋಣ.

ಇದನ್ನೂ ಓದಿ- ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ

ಇನ್ನೂ ದುರಂತವೆಂದರೆ ಸಾರ್ವಜನಿಕವಾಗಿ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾದ ನಂತರ ಅವರು ಕೊಟ್ಟಿರುವ ಸ್ಪಷ್ಟೀಕರಣ. ‘ದಾರಿ ತಪ್ಪಿದ್ದಾರೆ ಎಂದು ನಾನು ಹೇಳಿಲ್ಲ. ದಾರಿ ತಪ್ಪಿಸುತ್ತಿದ್ದಾರೆ, ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಇಟ್ಟಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದು’ ಎಂದಿದ್ದಾರೆ. ಕುಮಾರಸ್ವಾಮಿಯವರ ಪ್ರಕಾರ ಶೋಷಣೆಗೆ ಒಳಗಾಗಿರುವ ಈ ಸಮಾಜದ ತಳವರ್ಗಗಳು, ಬಡಜನರು, ಹೆಣ್ಣುಮಕ್ಕಳು ಪಡೆಯುವ ಸೌಲಭ್ಯಗಳು ಭಿಕ್ಷೆ. ತಮ್ಮ ವ್ಯಕ್ತಿತ್ವದ ಕುಸಿತವನ್ನು ಅರಿಯಲಾಗದ ಕುಮಾರಸ್ವಾಮಿಯವರು ಹೆಣ್ಣುಮಕ್ಕಳ ಸಬಲೀಕರಣವನ್ನು ಸಹಿಸುತ್ತಾರೆಯೇ? ಕುಮಾರಸ್ವಾಮಿಯವರ ಬದಲಾಗಿರುವ ಕೋಮುವಾದಿ ಮೆದುಳು ಬೇಗ ತೆನೆ ಹೊತ್ತ ಮಹಿಳೆಯ ಅರ್ಥ ಗ್ರಹಿಸುವಂತಾಗಲಿ.

ದಿಶಾ

ಸಾಮಾಜಿಕ ಕಾರ್ಯಕರ್ತರು

More articles

Latest article