ಸುಳ್ಳು ಸುದ್ದಿ, ಹುಸಿ ಭರವಸೆಗಳೇ 10 ವರ್ಷದ ಬಿಜೆಪಿ ಸಾಧನೆ; ಅಂಜಲಿ ನಿಂಬಾಳ್ಕರ್

Most read

ಉತ್ತರ ಕನ್ನಡ: ಕಳೆದ ಹತ್ತು ವರ್ಷದಿಂದ ಬಿಜೆಪಿ ಬರೀ ಜಾತಿ ಧರ್ಮ, ಹಿಂದೂತ್ವ, ಸುಳ್ಳು ಸುದ್ದಿ, ಸುಳ್ಳು ಭರವಸೆಗಳನ್ನು ನೀಡುತ್ತಲೇ ಜನರ ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ. ಈ ಹತ್ತು ವರ್ಷದಲ್ಲಿ ಅವರಿಂದ ಒಂದೂ ಜನಪರ ಕೆಲಸ ಆಗಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಬಿಜೆಪಿ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕೆಲಸಗಳ ಬಗ್ಗೆ ಅವಲೋಕನ ಮಾಡಿ ನೋಡಿ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಜರುಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳು ಎಲ್ಲರ ಮನೆ ತಲುಪಿವೆ. ಪ್ರತಿ ಕುಟುಂಬ ತಿಂಗಳಿಗೆ ನಾಲ್ಕೂವರೆಯಿಂದ 5 ಸಾವಿರ ರೂ. ವರೆಗೆ ಕಾಂಗ್ರೆಸ್ ಸರಕಾರದ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ.

ಇದನ್ನು ಹೊರತುಪಡಿಸಿ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪಂಚನ್ಯಾಯ ಯೋಜನೆಗಳ ಮೂಲಕ ಬಡ ಮಹಿಳೆಯರಿಗೆ ಇನ್ನೂ ಹೆಚ್ಚಿನ ಲಾಭಗಳಾಗಲಿವೆ. ಪಂಚನ್ಯಾಯಗಳ ಮೂಲಕ ಬಡ ಕುಟುಂಬದ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂ. ಸಿಗಲಿದೆ. ಕಿಸಾನ್ ನ್ಯಾಯದ ಮೂಲಕ ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಅತಿಕ್ರಮಣದ ಹೆಸರಿನಲ್ಲಿ ಗುಡ್ಡಗಾಡು ಪ್ರದೇಶದ ಜನರಿಗೆ ಸರಕಾರದ ಕಡೆಯಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲಿದ್ದೇವೆ. ಇವೆಲ್ಲ ದೇಶದ ಜನರಿಗೆ ನಾವು ನೀಡುತ್ತಿರುವ ಭರವಸೆಗಳಾಗಿವೆ.

ಮುಂದಿನ ಪ್ರಧಾನಿ ಯಾರು ಆಗುತ್ತಾರೆ ಎನ್ನುವುದಕ್ಕಿಂತ ನಮ್ಮ ಭಾಗಕ್ಕೆ ಯಾರು ಸೂಕ್ತ ವ್ಯಕ್ತಿ, ಯಾರು ಆಯ್ಕೆಯಾಗುವುದರಿಂದ ಏನು ಪ್ರಯೋಜನ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ನಮ್ಮ ಕಷ್ಟಕ್ಕೆ ನಮ್ಮ ದುಃಖಕ್ಕೆ ನಮ್ಮ ಅಳುವಿಗೆ ತಕ್ಷಣ ಯಾರು ಬರ್ತಾರೆ ಅವರಿಗೋಸ್ಕರ, ಅವರ ಜೊತೆಗೆ ನಾವೆಲ್ಲರೂ ನಿಂತ್ಕೊಳ್ತೀವಿ ಎಂದು ನಿಮ್ಮ ಬಳಿ ಬರುವ ಕಾಂಗ್ರೆಸ್ ಕಾರ್ಯಕರ್ತರೆಲ್ಲರಿಗೆ ನೀವು ಭರವಸೆ ನೀಡಬೇಕು ಎಂದು ಕೋರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಐದು ಗ್ಯಾರಂಟಿಗಳ ಜೊತೆಗೆ ಕೇಂದ್ರದ ಐದು ನ್ಯಾಯ ಗ್ಯಾರಂಟಿಗಳು ನಿಮಗೆ ಸಿಗಲಿವೆ. ನಿಮ್ಮ ಸ್ವಂತ ಅಭ್ಯುದಯಕ್ಕೋಸ್ಕರ, ಮಕ್ಕಳ ಭವಿಷ್ಯಕ್ಕಾಗಿ, ಅವರ ಶಿಕ್ಷಣ, ಆರೋಗ್ಯಕ್ಕಾಗಿ, ಯುವಕರ ಕೈಗೆ ಉದ್ಯೋಗ ಸಿಗುವುದಕ್ಕೋಸ್ಕರ ಕಡ್ಡಾಯವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು. ಮುಖ್ಯವಾಗಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಏರಿಸಿ ತೋರಿಸಲೇ ಬೇಕು.

ಖಾನಾಪುರ ಕಿತ್ತೂರು ಕ್ಷೇತ್ರವನ್ನೂ ಒಳಗೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಮುಖ್ಯವಾಗಿ ಇಲ್ಲಿ ನಮ್ಮ ಸಚಿವರಾದ ಆರ್.ವಿ. ದೇಶಪಾಂಡೆಯವರೂ ಇದ್ದಾರೆ. ಇನ್ನೂ ನಾಲ್ಕು ವರ್ಷ ನಮ್ಮ ಸರಕಾರ ಕೂಡ ರಾಜ್ಯದಲ್ಲಿ ಇರುತ್ತದೆ. ಕ್ಷೇತ್ರಕ್ಕೆ ಯಾವುದೇ ಸಹಾಯ ಸಹಕಾರ ಬೇಕಾದರೂ ಸರಕಾರದಿಂದ ದೊರೆಯುವ ಭರವಸೆ ನೀಡುತ್ತೇನೆ.

2020-21ರಲ್ಲಿ ಖಾನಾಪುರದಲ್ಲಿ ಭಯಂಕರ ಪ್ರವಾಹ ಬಂತು. ಆಗ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿಯವರು ಅಲ್ಲಿಗೆ ಬರಲಿಲ್ಲ. ಆದರೆ ನಮ್ಮ ಹೆಮ್ಮೆಯ ನಾಯಕ ಸಿಎಂ ಸಿದ್ದರಾಮಯ್ಯನವರು ಆ ಸಂದರ್ಭದಲ್ಲಿ ಖಾನಾಪುರಕ್ಕೆ ಬಂದು ಪ್ರತಿಯೊಬ್ಬರ ಮನೆಯ ದುರವಸ್ತೆಯನ್ನು ನೋಡಿದರು. ಜನರ ಸಂಕಷ್ಟ ಕೇಳಿದರು. ಇಂತಹ ಜನಾನುರಾಗಿ ಸಿಎಂ ಅವರ ಕೈ ಬಲಪಡಿಸಬೇಕು ಎಂದರೆ ರಾಜ್ಯದಿಂದ ಅತಿ ಹೆಚ್ಚಿನ ಕಾಂಗ್ರೆಸ್ ಸೀಟು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.

ನಮ್ಮ ಕಾಂಗ್ರೆಸ್ ಪಕ್ಷ ಜಾತಿ ಧರ್ಮದ ಭೇದ ಬಿಟ್ಟು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ದೇಶದ ಎಲ್ಲ ಸಣ್ಣ ಪುಟ್ಟ ಪಕ್ಷದ ಪರವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಇಂತಹ ವೇದಿಕೆಯಲ್ಲಿ ಎಲ್ಲ ಸಮುದಾಯದ ಪ್ರತಿನಿಧಿಗಳು ಕುಳಿತಿರುವುದು ಇದಕ್ಕೆ ಸಾಕ್ಷಿ. ಇಂತಹ ಬಹುತ್ವ ಪ್ರೇಮಿ ಪಕ್ಷದ ಕೈ ಬಲಪಡಿಸುವುದು ಎಲ್ಲರ ಕರ್ತವ್ಯವಾಗಿದೆ.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಹುತೇಕ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಇದರ ಫಲಾನುಭವಿಗಳಾದ ಎಲ್ಲ ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

More articles

Latest article