ಬರಪರಿಹಾರ ಕೇಳಿ ಪಡೆದು, ನಂತರ ಮೋದಿ ಕರೆಸಿ; ಬಿಜೆಪಿ ನಾಯಕರಿಗೆ ಯತೀಂದ್ರ ಸಿದ್ದರಾಮಯ್ಯ ಸವಾಲು

Most read

ವರುಣಾ: ಕರ್ನಾಟಕದ ಬಿಜೆಪಿ ನಾಯಕರು ಕನ್ನಡಿಗರಾಗಿದ್ದರೆ, ಕನ್ನಡಿಗರ ಪರವಾಗಿ ಅವರಿಗೆ ಕಾಳಜಿ ಇದ್ದರೆ, ಮೋದಿಯವರಿಂದ ಬರ ಪರಿಹಾರ ಕೇಳಿ ಪಡೆದು ನಂತರ ಅವರನ್ನು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡಲು ಹೇಳಿ ಎಂದು ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ವರುಣಾದಲ್ಲಿ “ಕನ್ನಡ ಪ್ಲಾನೆಟ್.ಕಾಂ” ಸಂಪಾದಕ ಚಂದನ ಕುಮಾರ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಕರ್ನಾಟಕದ ಬಿಜೆಪಿಯವರ ಬದ್ಧತೆಯನ್ನು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ತೆರಿಗೆ ಪಾಲು ನೀಡದ, ಬರ ಪರಿಹಾರ ನೀಡದ ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಜನರಿಂದ ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಹೇಗೆ ಅನ್ಯಾಯ ಆಗಿದೆ ಎನ್ನುವುದನ್ನು ನಾವು ಬಿಡಿ ಬಿಡಿಯಾಗಿ ತಿಳಿಸಿ ಹೇಳಿದರೂ, ಬರ ಪರಿಹಾರಕ್ಕೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದರೂ ಇದ್ಯಾವುದನ್ನೂ ರಾಜ್ಯಕ್ಕೆ ನೀಡದೆ ಮೋದಿ ಸರಕಾರ ಅನ್ಯಾಯ ಮಾಡಿದೆ. ನಮ್ಮ ಧ್ವನಿಗೆ ಸರಿಯಾಗಿ ಸ್ಪಂದಿಸದೆ ಕೇವಲ ಸುಳ್ಳುಗಳ ಮೇಲೆ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದಾರೆ. ಕೇಂದ್ರ ಹೇಳುತ್ತಿರುವ ಸುಳ್ಳುಗಳನ್ನು ಇಂದು ಸುಪ್ರೀಂ ಕೋರ್ಟ್ ಕನ್ನಡಿ ಹಿಡಿದಂತೆ ತೋರಿಸಿದೆ. ಬರ ಪರಿಹಾರ ವಿಳಂಬ ಮಾಡಿದ್ದೀರಿ, ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದು ಕೋರ್ಟ್ ಹೇಳಿದೆ. ಇದರ ಮೂಲಕ ಅವರು ಹೇಳುತ್ತಿದ್ದ ಸುಳ್ಳುಗಳೆಲ್ಲ ಬಯಲಾಗಿವೆ ಎಂದು ಯತೀಂದ್ರ ಸಿದ್ದರಾಮಯ್ಯ ಸಂದರ್ಶನದಲ್ಲಿ ಕುಟುಕಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ, ಕಾರ್ಯಕರ್ತರ ಉತ್ಸಾಹದ ಬಗ್ಗೆ ಪ್ಲಾನೆಟ್ ಸಂಪಾದಕರಾದ ಚಂದನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕ್ಷೇತ್ರದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಹಲವು ಹಂತದ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಕಾರ್ಯಕರ್ತರೆಲ್ಲ ತುಂಬಾ ಉತ್ಸಾಹದಿಂದ ಇದ್ದಾರೆ. ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಾಂಗ್ರೆಸ್ ಸರಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಜನರ ಬಳಿ ಹೋಗಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಜನರ ಬಳಿ ಹೋಗಿ ನಮ್ಮ ಯೋಜನೆಗಳ ಕುರಿತು ನೆನಪಿಸಿದರೆ ಕೆಲಸ ಆಗಬೇಕು. ಕಾಂಗ್ರೆಸ್ ಪಕ್ಷದ ಕೆಲಸಗಳಿಗೆ ಪ್ರತಿಫಲವನ್ನು ನೀಡುವಂತೆ ಕೋರಬೇಕು. ಈ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ. ಮನೆ ಮನೆಗೆ ಪ್ರಚಾರ ಮಾಡ್ತೀವಿ ಎಂದು ಹೇಳುತ್ತಿದ್ದಾರೆ” ಎಂದರು.

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ ಲಕ್ಷ್ಮಣ ಅವರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದಕ್ಕೆ ಕಾರ್ಯಕರ್ತರೆಲ್ಲ ಖುಷಿ ವ್ಯಕ್ತಪಡಿಸಿದ್ದಾರೆ. ಅವರ ಪರವಾಗಿ ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇದಷ್ಟೇ ಅಲ್ಲದೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನೂ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಎಲ್ಲ ಕಡೆಯೂ ಜನ ಕಾಂಗ್ರೆಸ್ ಪಕ್ಷದ ಪರವಾಗಿ ಒಲವು ತೋರಿಸಿದ್ದಾರೆ. ಹೀಗಾಗಿ ನಮ್ಮ ಪಕ್ಷ ಗೆಲ್ಲುವ ನಿರೀಕ್ಷೆ ನಮಗೆ ಬಹಳ ಇದೆ ಎಂದಿದ್ದಾರೆ.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ

ಬಿಜೆಪಿ 2014 ರಿಂದಲೂ ತನ್ನ ಐಟಿ ಸೆಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ನಮ್ಮ ಪಕ್ಷದವರ ಬಗ್ಗೆ ಅಪಪ್ರಚಾರ ಮಾಡುವುದು, ತೇಜೋವಧೆ ಮಾಡುವುದು, ಹೆದರಿಸುವಂತದ್ದೆಲ್ಲ ಮಾಡುತ್ತಾ ಕುತಂತ್ರ ರಾಜಕಾರಣ ಮಾಡುತ್ತಿದೆ. ನಾವು ಆಗಿಂದಲೂ ನುಡಿದಂತೆ ನಡೆಯುವವರು ಎನ್ನುವುದನ್ನು ತೋರಿಸುತ್ತಲೇ ಬಂದ್ವಿ. ಅದರಂತೆ ಈ ಬಾರಿ ಕರ್ನಾಟಕದ ಜನ ನಮ್ಮನ್ನು ಈ ಬಾರಿ ಕೈ ಹಿಡಿಯುವುದು ನಿಶ್ಚಿತ.

ಬಿಜೆಪಿ ನಡೆಡುವ ಸುಳ್ಳು ಸುದ್ದಿ, ಅಪಪ್ರಚಾರದ ಶಡ್ಯಂತ್ರವನ್ನು ಪ್ರಬಲವಾಗಿ ಎದುರಿಸಲು ಆಗಿಲ್ಲ. ಅಂತ ಸುಳ್ಳು ಸುದ್ದಿ ಹಬ್ಬಿಸುವವರನ್ನು ಮಟ್ಟ ಹಾಕಲು ಆಗಿಲ್ಲ. ಇವರ ಅಪಪ್ರಚಾರ ಎಲ್ಲಿಯವರೆಗೆ ಹೋಗಿದೆ ಅಂದ್ರೆ, ಒಬ್ಬ ರಾಜ್ಯದ ಮುಖ್ಯಮಂತ್ರಿಯ ವಿರುದ್ಧವೇ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅಂತವರನ್ನು ನಾವು ಸುಮ್ಮನೆ ಬಿಡಬಾರದು. “ಸುಳ್ಳು ಸುದ್ದಿ ಎನ್ನುವಂತದ್ದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಚುನಾವಣಾ ಆಯೋಗವೇ ಹೇಳಿದೆ. ಹಾಗಾಗಿ ಇಂತದರ ವಿರುದ್ಧ ಶತಾಯ ಗತಾಯ ಕ್ರಮ ಆಗಲೇ ಬೇಕು. ಸರಕಾರ ಅದಕ್ಕಾಗಿಯೇ ಸೈಬರ್ ಕ್ರ್ರೈಮ್ ವಿಭಾಗದಲ್ಲೇ ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ಒಂದು ವಿಂಗ್ ಆರಂಭಿಸಿದೆ. ಸರಕಾರದ ಮಟ್ಟದಲ್ಲಿ ಇದಕ್ಕಾಗಿ ನೇಮಕಗೊಂಡಿರುವ ಅಧಿಕಾರಿಗಳು ಇಂತಹ ಸುಳ್ಳು ಸುದ್ದಿ ಹರಡಿಸುವುದನ್ನು ಗಂಭೀರವಾಗಿ ಪರಿಗಣಿಸಿ,

ಮಹಿಳೆಯರಿಂದ ಅಭೂತಪೂರ್ವ ಬೆಂಬಲ

ಈ ಬಾರಿ ಚುನಾವಣೆ ಪ್ರಚಾರದ ವೇಳೆ ಮಹಿಳೆಯರ ಪ್ರತಿಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ನಾವು ಈಡೇರಿಸಿಕೊಟ್ಟಿದ್ದೇವೆ. ವಿರೋಧ ಪಕ್ಷದವರು ನಮ್ಮ ಗ್ಯಾರಂಟಿ ಯೋಜನೆಗಳೆಲ್ಲ ಸುಳ್ಳು, 58 ಸಾವಿರ ಕೋಟಿ ಖರ್ಚಾಗುವ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದೆಲ್ಲ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಆದರೂ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ರಾಜ್ಯದಲ್ಲಿ ಪಕ್ಷಕ್ಕೆ ಅಧಿಕಾರ ಕೊಟ್ಟರು. ಅದೇ ರೀತಿ ನಾವೂ ಕೂಡ ನುಡಿದಂತೆ ನಡೆದಿದ್ದೇವೆ ಎಂದು ಜನರಿಗೆ ತೋರಿಸಿಕೊಟ್ಟಿದ್ದೇವೆ. ಹಾಗಾಗಿ ನಮ್ಮ ಮೇಲೆ ರಾಜ್ಯದ ಜನತೆಗೆ ವಿಶ್ವಾಸ ಬಂದಿದೆ. ಅದರಲ್ಲೂ ರಾಜ್ಯದ ಮಹಿಳೆಯರು ಎಲ್ಲ ಕಡೆ ಕಾಂಗ್ರೆಸ್ ಯೋಜನೆಗಳಿಂದ ಅತ್ಯಂತ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲ ಯೋಜನೆಗಳು ಜಾರಿಯಾದ ಮೇಲೆ ಬಿಜೆಪಿಯವರು ಹೊಸ ವರಸೆ ಆರಂಭಿಸಿದರು. ಈ ಎಲ್ಲ ಜನಪರ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದರು. ಈ ಆರೋಪವೂ ಸಹ ಸುಳ್ಳು ಎಂದು ಈ ಬಾರಿಯ ಬಜೆಟ್ ನಲ್ಲಿ ನಾವು ತೋರಿಸಿದ್ದೇವೆ. ರೆವೆನ್ಯೂ ಹರಿವು ಕಡಿಮೆ ಆಗಿದ್ದರೂ ಕೂಡ ನಾವು ಕೊಟ್ಟಂತ ಎಲ್ಲ ಯೋಜನೆಗಳಿಗೆ ಹಣ ಕೊಟ್ಟಿದ್ದೇವೆ. ಅದರ ಜೊತೆಗೆ ಆರ್ಥಿಕ ಸುಸ್ಥಿರತೆ ಕಾಪಾಡಿಕೊಂಡು ಬಂದಿದ್ದೇವೆ. ನಾವು ಕೊಟ್ಟಂತ ಹೆಚ್ಚಿನ ಕಾರ್ಯಕ್ರಮಗಳು ಮಹಿಳೆಯರಿಗೆ ನೇರವಾಗಿ ಅನುಕೂಲವಾಗುತ್ತಿವೆ. ಹೀಗಾಗಿ ರಾಜ್ಯದ ಎಲ್ಲ ಮಹಿಳೆಯರು ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ತುಂಬಾ ಸಂತುಷ್ಟರಾಗಿದ್ದಾರೆ ಎಂದಿದ್ದಾರೆ.

More articles

Latest article