ಬನವಾಸಿ: ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಗೆಲ್ಲಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕ್ ತಮ್ಮ ಬೆಂಬಲಿಗರೊಂದಿಗೆ ಸೇರ್ಪಡೆಯಾಗಿದ್ದಾರೆ. ವಿವೇಕ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಐವಾನ್ ಡಿಸೋಜಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ನೂರಾರು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡರು.
ಪಕ್ಷ ಸೇರ್ಪಡೆಯ ನಂತರ ಮಾತನಾಡಿದ ವಿವೇಕ್ ಹೆಬ್ಬಾರ್, ಬಿಜೆಪಿಯಲ್ಲಿ ಹುದ್ದೆ ನೀಡುವಲ್ಲಿ ನಮ್ಮ ಕಾರ್ಯಕರ್ತರಿಗೆ ಆದಂತಹ ತಾರತಮ್ಯದಿಂದ ಪಕ್ಷ ತೊರೆದಿದ್ದೇವೆ. ಅದರಲ್ಲೂ ನಮ್ಮ ತಂದೆ ಶಾಸಕ ಹೆಬ್ಬಾರ್‌ರನ್ನು ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದವರೇ ಶಿವರಾಮ ಹೆಬ್ಬಾರ ಅವರನ್ನು ಸೋಲಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.
ಹಲವು ತಿಂಗಳ ಕಾಲ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇವೆ. ಯಾರು ಯಾರಿಗೆ ದೂರು ಕೊಡಬೇಕೋ ಕೊಡುವ ಕೆಲಸ ಮಾಡಿದ್ದೇವೆ. ಆದರೆ ಅಂತಿಮವಾಗಿ ಈ ನಿರ್ಧಾರಕ್ಕೆ ಬರುವ ಅನಿವಾರ್ಯತೆ ಎದುರಾಯಿತು. ಕಾರ್ಯಕರ್ತರ ಒತ್ತಾಯದಂತೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಪುತ್ರನನ್ನ ಮೊದಲು ಸೇರ್ಪಡೆಗೊಳಿಸಿ ನಂತರ ಶಿವರಾಮ ಹೆಬ್ಬಾರ್ ನಂತರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ನ್ಯಾಯ ಕೊಡಬೇಕಾಗಿತ್ತು, ಅವರ ಭಾವನೆಗಳಿಗೆ ಬೆಲೆ ಕೊಡುವ ಉದ್ದೇಶದಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.