ಹೊಸದಿಲ್ಲಿ: ಅಮೆರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಅವರ ಹೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ.
ಪಕ್ಷದ ಹಿರಿಯ ಮುಖಂಡ ಜೈರಾಮ್ ರಮೇಶ್ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದದು, ಭಾರತದ ಒಳಗೆ ಯಾರೂ ಪ್ರವೇಶಿಸಿಲ್ಲ, ಯಾವುದೇ ಪ್ರದೇಶವನ್ನು ವಶಪಡಿಸಿಕೊಂಡಿಲ್ಲ ಎಂದು ಮೋದಿ 2020ರಲ್ಲಿ ನೀಡಿದ ಹೇಳಿಕೆಗೆ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
“ಅಮರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನ ಮಂತ್ರಿ ಹೇಡಿತನದ ಎಲ್ಲ ಎಲ್ಲೆಗಳನ್ನು ಮೀರಿದ್ದಾರೆ. ಚೀನಾ ಪದೇ ಪದೇ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದೆ. ಆದರೆ ಪ್ರಧಾನಿ ಮೋದಿಯವರ ಏಕೈಕ ಹೇಳಿಕೆ ಗಮನಿಸಿದೆ. ಗಡಿಯಲ್ಲಿನ ದೀರ್ಘಕಾಲದ ಬಿಗುವಿನ ವಾತಾವರಣ ಕೂಡಲೇ ಬಗೆಹರಿಸಬೇಕು, ಇದರ ಮೂಲಕ ದ್ವಿಪಕ್ಷೀಯ ಮಾತುಕತೆಗಳು ಹಳಿ ತಪ್ಪಿರುವುದನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಚೀನಾಗೆ ಬಲವಾದ ಸಂದೇಶವನ್ನು ನೀಡುವಅವಕಾಶ ಹೊಂದಿದ್ದರು. ಆದರೆ ಅವರ ದುರ್ಬಲ ಮತ್ತು ಪರಿಣಾಮಕಾರಿಯಲ್ಲದ ಸಂದೇಶದಿಂದಾಗಿ ಚೀನಾ ಭಾರತದ ನೆಲದಲ್ಲಿ ಮತ್ತಷ್ಟು ಭಾಗವನ್ನು ತನ್ನದೆಂದು ಪ್ರತಿಪಾದಿಸುವ ಸಾಧ್ಯತೆ ಇದೆ’’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2020ರಲ್ಲಿ ಭಾರತ-ಚೀನಾ ನಿಯಂತ್ರಣ ರೇಖೆಯ ಬಳಿ ಉಭಯದ ದೇಶದ ಸೇನಾಪಡೆಗಳ ನಡುವಿನ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಮೋದಿಯವರ ಇಂದಿನ ಹೇಳಿಕೆ ಈ ಹುತಾತ್ಮ ಯೋಧರಿಗೆ ಮಾಡಿದ ಅಪಮಾನ. ನಮ್ಮ ಸೈನಿಕರು ಭಾರತದ ಗಡಿಯನ್ನು ಕಾಪಾಡಲು ಅತ್ಯುನ್ನತ ತ್ಯಾಗ ಮಾಡಿದ್ದರು. ಮೋದಿ ಹೇಳಿಕೆ ನಾಚಿಕೆಗೇಡು ಎಂದು ಅವರು ಹೇಳಿದ್ದಾರೆ.
2020ರ ಜೂನ್ 19ರಂದು ರಾಷ್ಟ್ರೀಯ ದೂರದರ್ಶನದಲ್ಲಿ ನೀಡಿದ ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾರತದ 140 ಕೋಟಿ ಭಾರತೀಯರ ಕ್ಷಮೆ ಕೋರಬೇಕು, ಯಾರೂ ನಮ್ಮ ದೇಶದ ಗಡಿಯೊಳಗೆ ಬಂದಿಲ್ಲ, ಭಾರತದ ಯಾವುದೇ ಪ್ರದೇಶವನ್ನು ಯಾರೂ ವಶಪಡಿಸಿಕೊಂಡಿಲ್ಲ ಎಂದು ಅವರು ಹೇಳಿದ್ದರು. ಚೀನಾ ಜೊತೆಗಿನ ಸಂಘರ್ಷದಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಮೋದಿ ಇಂಥ ಹೇಳಿಕೆ ನೀಡಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.