ʼಪ್ರಧಾನಮಂತ್ರಿ ಯೋಜನೆಗಳು’: ಹಣ ರಾಜ್ಯದ್ದು, ಹೆಸರು ಕೇಂದ್ರದ್ದು!!

Most read

ತೆರಿಗೆ ಪಾಲಿನ ತಾರತಮ್ಯದಿಂದಾಗಿ ಅದಾಗಲೇ ಕಷ್ಟ ಅನುಭವಿಸುವ ರಾಜ್ಯ ಸರಕಾರಕ್ಕೆ ಕೇಂದ್ರ ಯೋಜನೆಗೆ ಹಣ ಹೂಡುವ ಹೆಚ್ಚುವರಿ ಹೊರೆ. ಇಷ್ಟಾದ ಮೇಲೆ ಹೆಸರಿನ ಕ್ರೆಡಿಟ್ ಆದರೂ ಇದೆಯೇ? ಅದೂ ಇಲ್ಲ. ಹಣ ಯಾರದ್ದೋ ಹೆಸರು ಯಾರಿಗೋ…ಶ್ರೀನಿವಾಸ ಕಾರ್ಕಳ

ಕೆಲ ಸಮಯದ ಹಿಂದೆ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಒಂದು ಸತ್ಯವನ್ನು ಹೇಳಿದಾಗ ಅಲ್ಲಿದ್ದ ಅನೇಕರು ಬೆಚ್ಚಿಬಿದ್ದರು. ಆ ಸತ್ಯ ಮತ್ತೇನಲ್ಲ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ.. ಹೀಗೆ ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ಅನೇಕ ಯೋಜನೆಗಳಿದ್ದಾವಲ್ಲ, ಆ ಯೋಜನೆಗಳಿಗೆ ನಿಜವಾಗಿ ಹಣ ಹಾಕುತ್ತಿರುವವರು ಯಾರು ಎಂಬ ಸತ್ಯ.

ಆವಾಸ ಯೋಜನೆಯ ಸತ್ಯ

ಅವರು ಆ ದಿನ ಉಲ್ಲೇಖಿಸಿದ್ದು ವಿಶೇಷವಾಗಿ ನರೇಂದ್ರ ಮೋದಿಯವರು ಆಗಾಗ ಟಾಂ ಟಾಂ ಮಾಡುವ ಪ್ರಧಾನ ಮಂತ್ರಿ ಆವಾಸ ಯೋಜನೆಯನ್ನು. ಈ ಯೋಜನೆಯನ್ನು ಆಗಾಗ ತಮ್ಮ ಭಾಷಣಗಳಲ್ಲಿ ಮತ್ತು ಪಕ್ಷದ ಜಾಹೀರಾತುಗಳಲ್ಲಿ ಉಲ್ಲೇಖಿಸುವ ಮೋದಿಯವರು, ಇದರಿಂದ ದೇಶದ ಲಕ್ಷಾಂತರ ಮಂದಿಗೆ ಉಚಿತ ಮನೆ ದೊರಕಿದೆ, ಅವರ ಬದುಕು ಹಸನಾಗಿದೆ ಎಂದು ಹೇಳುತ್ತಾ ಈ ಯೋಜನೆಯ ಮೂಲಕ ರಾಜಕೀಯ ಲಾಭವನ್ನು, ಅರ್ಥಾತ್ ಚುನಾವಣೆಯಲ್ಲಿ ಮತವನ್ನು ಗಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ ಹೀಗೆ ಕಟ್ಟಲಾಗುವ ಮನೆಗೆ ತಗಲುವ ಪೂರ್ತಿ ವೆಚ್ಚವನ್ನು ಒಕ್ಕೂಟ ಸರಕಾರ ಭರಿಸುತ್ತದೆಯೇ? ಭರಿಸುತ್ತದೆ, ಹಾಗಾಗಿ ಅದಕ್ಕೆ ‘ಪ್ರಧಾನಮಂತ್ರಿ ಆವಾಸ ಯೋಜನೆ’ ಎಂದು ಹೆಸರು ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಈ ಮಿಥ್ಯೆಯನ್ನು ತನ್ನ ಭಾಷಣದಲ್ಲಿ ಒಡೆದ ಸಿದ್ದರಾಮಯ್ಯ ಅವರು ಒಕ್ಕೂಟ ಸರಕಾರ ಕೊಡುವುದು ಸುಮಾರು 1 ಲಕ್ಷ 38 ಸಾವಿರ ಮಾತ್ರ (ಹಾಗೆಂದು ನೆನಪು), ಉಳಿದ ಬಹು ದೊಡ್ಡ ಮೊತ್ತವನ್ನು (ಶೇ. 64) ಭರಿಸುವುದು ರಾಜ್ಯ ಸರಕಾರ ಎಂದು ಹೇಳಿದರು.

ಕೃಷ್ಣ ಭೈರೇಗೌಡರಿಂದ ತರ್ಕಬದ್ಧ ವಿವರಣೆ

ಈ ಸತ್ಯವನ್ನು ಇನ್ನಷ್ಟು ವಿಸ್ತರಿಸಿ ಹೇಳಿದ್ದು ಕರ್ನಾಟಕ ಕಂದಾಯ ಮಂತ್ರಿ  ಕೃಷ್ಣ ಭೈರೇಗೌಡ ಅವರು ಮೊನ್ನೆಯ ತಮ್ಮ ಕಾರ್ಯಕ್ರಮದಲ್ಲಿ. ಕರ್ನಾಟಕಕ್ಕೆ ಒಕ್ಕೂಟ ಸರಕಾರದ ವತಿಯಿಂದ ಸೆಸ್, ಜಿ ಎಸ್ ಟಿ, ಅನುದಾನ, ಬರ ಪರಿಹಾರ ಹೀಗೆ   ನಾನಾ ರೀತಿಯಲ್ಲಿ ಆರ್ಥಿಕವಾಗಿ ಅನ್ಯಾಯವಾಗುತ್ತಿದೆಯೇ ಎಂದು ಚರ್ಚಿಸುವುದಕ್ಕಾಗಿ ‘ಜಾಗೃತ ಕರ್ನಾಟಕ ಸಂಘಟನೆ’ ಬೆಂಗಳೂರಿನ ಗಾಂಧಿ ಭವನದಲ್ಲಿ ಚರ್ಚಾಗೋಷ್ಠಿಯೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಒಕ್ಕೂಟ ಸರಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮತ್ತು ಕರ್ನಾಟಕ ಸರಕಾರದ ಕಂದಾಯ ಮಂತ್ರಿ ಕೃಷ್ಣ ಭೈರೇ ಗೌಡ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿತ್ತು.

ಬೆಂಗಳೂರಿನಲ್ಲಿಯೇ ಇದ್ದರೂ ನಿರ್ಮಲಾ ಸೀತಾರಾಮನ್ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ.  ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷ್ಣ ಭೈರೇ ಗೌಡ ಅವರು ಸಂಪೂರ್ಣ ಅಂಕಿ ಅಂಶಗಳೊಂದಿಗೆ, ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ತರ್ಕ ಬದ್ಧವಾಗಿ ವಿವರಿಸಿ ರಾಜ್ಯಕ್ಕೆ ಹೇಗೆ ಅನ್ಯಾಯವಾಗುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಈ ಕೇಂದ್ರ ಪ್ರಾಯೋಜಿತ ಪ್ರಧಾನಮಂತ್ರಿ ಯೋಜನೆಗಳ ಸತ್ಯವನ್ನೂ ಅವರು ಬಹಿರಂಗ ಗೊಳಿಸಿದರು. ಅವರು ಹೇಳುವ ಪ್ರಕಾರ, ಇವೆಲ್ಲವೂ ಹೆಸರಿಗೆ ಮಾತ್ರ ಒಕ್ಕೂಟ ಸರಕಾರದ್ದು. ಈ ಯೋಜನೆಗಳಲ್ಲಿ ಹಣಕಾಸಿನ ದೊಡ್ಡ ಹೊರೆ ಹೊರುವುದು ರಾಜ್ಯ ಸರ್ಕಾರ.

ಯಾರ ಪಾಲು ಎಷ್ಟು?

ಕೃಷ್ಣ ಭೈರೇಗೌಡ

ಉದಾಹರಣೆಗೆ, ಅವರು ಹೇಳುವ ಪ್ರಕಾರ, ಒಕ್ಕೂಟ ಸರಕಾರದ ‘ಗರೀಬ್ ಕಲ್ಯಾಣ ಯೋಜನೆ’ಯಲ್ಲಿ ಶೇ, 52.33, ‘ಜಲಜೀವನ್ ಮಿಶನ್ ಯೋಜನೆ’ಯಲ್ಲಿ ಶೇ. 58.03, ‘ಪಿ ಎಂ ಆವಾಸ್ ಯೋಜನೆ’ಯಲ್ಲಿ ಶೇ. 63.41, ‘ಪಿ ಎಂ ಜನ ಆರೋಗ್ಯ ಯೋಜನೆ’ಯಲ್ಲಿ ಶೇ. 77.96, ‘ಪಿ ಎಂ ಫಸಲ್ ಭೀಮಾ ಯೋಜನೆ’ಯಲ್ಲಿ ಶೇ. 50.72, ರಷ್ಟು ಹಣ ರಾಜ್ಯ ಸರಕಾರದ್ದು.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಕಾರ್ಯಕರ್ತರು

More articles

Latest article