ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ – ಭಾಗ 5
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರ ಬಹುಮತದಿಂದ ಆಯ್ಕೆಯಾಗಿ ಅಧಿಕಾರ ಹಿಡಿದಿದ್ದೇ ಆದರೆ ನ್ಯಾಯಾಂಗ ನೇಮಕಾತಿಗಳ ನಿಯಂತ್ರಣವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿದ್ದೇ ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಂಡು ಸರ್ವಾಧಿಕಾರಿ ಪ್ರಭುತ್ವ ಜಾರಿಗೆ ಬರುವುದು ನಿಶ್ಚಿತ. ಪ್ರಜಾಪ್ರಭುತ್ವದ ಅಳಿವು ಹಾಗೂ ಸಂವಿಧಾನದ ಉಳಿವು ಈ ಚುನಾವಣೆಯಲ್ಲಿ ಈ ದೇಶದ ಜನರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈಗಾಗಲೇ ಶಾಸಕಾಂಗ, ಕಾರ್ಯಾಂಗ ಹಾಗೂ ಮೀಡಿಯಾಂಗಗಳನ್ನು ಹಿಂದುತ್ವವಾದಿ ಸಂಘಿ ಶಕ್ತಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗಿದೆ. ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಬಯಸುವ ದೇಶದ ಜನರಿಗೆ ಈಗ ನ್ಯಾಯಾಂಗವೊಂದೇ ಆಶಾಕಿರಣವಾಗಿದೆ. ಆದರೆ.. ಅದನ್ನೂ ಕೈವಶ ಮಾಡಿಕೊಂಡು ನಿಯಂತ್ರಿಸುವ ಪ್ರಯತ್ನಗಳೂ ಕಳೆದ ಹತ್ತು ವರ್ಷದಿಂದ ನಡೆಯುತ್ತಲೇ ಬಂದಿವೆ. ನ್ಯಾಯಾಂಗದ ಸಾರ್ವಭೌಮತೆಯ ಮೇಲೆ ಮೋದಿ ಸರಕಾರದಿಂದ ನಿರಂತರ ದಾಳಿ ನಡೆಯುತ್ತಲೇ ಇದೆ. ಯಾವತ್ತು ನ್ಯಾಯಾಂಗದ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತದೆಯೋ ಅವತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಕೊನೆಗೊಂಡು ಸರ್ವಾಧಿಕಾರ ವ್ಯವಸ್ಥೆ ಜಾರಿಗೆ ಬರುವುದು ನಿಶ್ಚಿತ.
99ನೇ ಸಾಂವಿಧಾನಿಕ ನಿಯಮಕ್ಕೆ ತಿದ್ದುಪಡಿ
ಮೋದಿ ಸರಕಾರ 2014 ರಲ್ಲಿ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮಾಡಿದ ಮೊದಲ ಕೆಲಸವೇ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವಂತಹ ಕಾನೂನು ತಿದ್ದುಪಡಿ ಎನ್ನುವುದು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಸರಕಾರ ಮಧ್ಯಪ್ರವೇಶಿಸಲು ಹಾಗೂ ಪ್ರಭಾವ ಬೀರಲು 99ನೇ ಸಾಂವಿಧಾನಿಕ ನಿಯಮಕ್ಕೆ ತಿದ್ದುಪಡಿ ತರಲಾಯಿತು. ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) 2014ರ ತಿದ್ದುಪಡಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿತು. ಇದು ನ್ಯಾಯಾಂಗ ನೇಮಕಾತಿಗಳಲ್ಲಿ ಆಳುವ ಸರಕಾರಕ್ಕೆ ನಿರ್ಣಾಯಕ ಪಾತ್ರವನ್ನು ನೀಡಿತು. ಸಂಸತ್ತಿನ ಪರಮಾಧಿಕಾರದ ಹೆಸರಲ್ಲಿ ನ್ಯಾಯಾಂಗದ ಸಾರ್ವಭೌಮತೆಯನ್ನು ಕಿತ್ತುಕೊಳ್ಳುವುದೇ ಈ ತಿದ್ದುಪಡಿಯ ಹಿಂದಿರುವ ಉದ್ದೇಶವಾಗಿತ್ತು. ಆದರೆ “ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ ಸುಪ್ರೀಂ ಕೋರ್ಟ್ ಮೋದಿ ಸರಕಾರದ ಈ ತಿದ್ದುಪಡಿ ಕಾಯಿದೆಯನ್ನೇ ರದ್ದುಗೊಳಿಸಿತು.
ಆಗಿನಿಂದ ಸರಕಾರ ಮತ್ತು ನ್ಯಾಯಾಂಗದ ನಡುವೆ ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಸಂಘರ್ಷ ನಡೆಯುತ್ತಲೇ ಇದೆ. “ಸಂವಿಧಾನದ ಮೂಲ ರಚನೆಯನ್ನು ತಿದ್ದುಪಡಿ ಮಾಡಲು ಸಂಸತ್ತಿನ ಅಧಿಕಾರವನ್ನು ಮೊಟಕು ಗೊಳಿಸಲು ಸುಪ್ರೀಂ ಕೋರ್ಟ್ ವಿಧಿಸಿದ ನಿರ್ಬಂಧಗಳನ್ನು ಒಪ್ಪಿಕೊಳ್ಳಲಾಗದು” ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದರು. ಕೇಂದ್ರ ಸರಕಾರದ ಕಾನೂನು ಮಂತ್ರಿಗಳಾಗಿದ್ದ ಕಿರಣ್ ರಿಜಿಜು ರವರು ಉಪರಾಷ್ಟ್ರಪತಿಗಳ ಹೇಳಿಕೆಯನ್ನು ತಕ್ಷಣ ಬೆಂಬಲಿಸಿದರು. ಏನೇ ಆದರೂ ಸುಪ್ರೀಂ ಕೋರ್ಟ್ ಸರಕಾರದ ತಿದ್ದುಪಡಿಯನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಹತಾಶೆಗೊಂಡ ಕೇಂದ್ರ ಸರಕಾರವು ನ್ಯಾಯಾಧೀಶರುಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸಿಗೆ ಒಪ್ಪಿಗೆ ಕೊಡುವುದನ್ನೇ ವಿಳಂಬ ಗೊಳಿಸಿತು. ನ್ಯಾಯಾಂಗ ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದರ ಮೂಲಕ ಸುಪ್ರೀಂ ಕೋರ್ಟಿನ ಕೊಲಿಜಿಯಂ ಕಾರ್ಯನಿರ್ವಹಣೆಯ ಮೇಲೆ ದಾಳಿ ಮಾಡುವ ಅವಕಾಶವನ್ನು ಎಂದೂ ಬಿಟ್ಟು ಕೊಡಲಿಲ್ಲ.
ಕೊಲಿಜಿಯಂ ವ್ಯವಸ್ಥೆ ಹೀಗಿರುತ್ತದೆ…
ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಅವರ ನಂತರದ ಹಿರಿತನವುಳ್ಳ ಮತ್ತಿಬ್ಬರು ನ್ಯಾಯಮೂರ್ತಿಗಳು ಸೇರಿ ಆಯಾ ರಾಜ್ಯದ ಹೈಕೋರ್ಟ್ ಗಳಿಗೆ ಯಾರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕಾತಿ ಮಾಡಬೇಕೆಂದು ಸುಪ್ರೀಂ ಕೋರ್ಟಿಗೆ ಶಿಫಾರಸ್ಸು ಮಾಡುತ್ತವೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಹಾಗೂ ಅಲ್ಲಿನ ಐವರು ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂ ನೇಮಕಾತಿ ಪಟ್ಟಿಯನ್ನು ಕೇಂದ್ರ ಸರಕಾರದ ಕಾನೂನು ಸಚಿವಾಲಯಕ್ಕೆ ಅಂತಿಮ ಅನುಮತಿಗಾಗಿ ಕಳುಹಿಸಿ ಕೊಡುತ್ತವೆ. ಈ ಸಚಿವಾಲಯವು ಆ ಪಟ್ಟಿಯಲ್ಲಿರುವವರ ಹೆಸರನ್ನು ಅಂತಿಮ ಗೊಳಿಸಬೇಕಾಗಿರುತ್ತದೆ. ಕೊಲಿಜಿಯಂ ಶಿಫಾರಸ್ಸಿಲ್ಲದ ಹೆಸರನ್ನು ಸರಕಾರ ನೇಮಕ ಮಾಡುವ ಹಾಗಿಲ್ಲ. ಇದು ಕೊಲಿಜಿಯಂ ವ್ಯವಸ್ಥೆಯ ನಿಯಮ. ಆದರೆ ಕೊಲಿಜಿಯಂ ಶಿಫಾರಸ್ಸಿಗೆ ಯಾವಾಗಲೂ ಕೇಂದ್ರ ಸರಕಾರ ತಕರಾರು ಎತ್ತುತ್ತಲೇ ಇರುತ್ತದೆ. ಹೀಗಾಗಿ ನ್ಯಾಯಮೂರ್ತಿಗಳ ನೇಮಕಾತಿ ವಿಳಂವಾಗುತ್ತಲೇ ಇರುತ್ತದೆ. ತನ್ನ ಆಶಯಕ್ಕೆ ಪೂರಕವಾಗಿರುವವರ ಹೆಸರು ಶಿಫಾರಸ್ಸು ಪಟ್ಟಿಯಲ್ಲಿದ್ದರೆ ಮಾತ್ರ ಸರಕಾರ ಒಪ್ಪಿಗೆ ಸೂಚಿಸುತ್ತದೆ. ಇಲ್ಲದೇ ಹೋದರೆ ನಿರಾಕರಿಸುತ್ತದೆ. ಅದಕ್ಕೊಂದು ಉದಾಹರಣೆ ಹೀಗಿದೆ.
ಕೊಲಿಜಿಯಂ ಶಿಫಾರಸ್ಸಿಗೆ ಸರಕಾರದ ತಕರಾರು-ಉದಾಹರಣೆ
ದೆಹಲಿ ಹೈಕೋರ್ಟ್ ಸೌರಭ್ ಕಿರ್ಪಾಲ್, ಮದ್ರಾಸ್ ಹೈಕೋರ್ಟ್ ಜಾನ್ ಸತ್ಯನ್ ಹಾಗೂ ಬಾಂಬೆ ಹೈಕೋರ್ಟ್ ಸೋಮಶೇಖರ್ ಸುಂದರೇಶನ್ ಅವರನ್ನು ಆಯಾ ಹೈಕೋರ್ಟ್ ಗಳಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಬೇಕೆಂದು ಸುಪ್ರೀಂ ಕೋರ್ಟ್ ಮಾಡಿದ ಶಿಫಾರಸ್ಸಿಗೆ ತಕರಾರು ಎತ್ತಿದ ಕೇಂದ್ರ ಸರಕಾರ ನೇಮಕಾತಿಯನ್ನು ನಿರಾಕರಿಸಿತು. ಕಾರಣ ಏನೆಂದರೆ ಈ ನ್ಯಾಯಾಧೀಶರುಗಳು ಮೋದಿ ನೇತೃತ್ವದ ಸರಕಾರದ ಆಡಳಿತ ಕಾರ್ಯವೈಖರಿಯನ್ನು ವಿಮರ್ಶೆ ಮಾಡಿದ ಸುದ್ದಿಗಳನ್ನು ಹಂಚಿಕೊಂಡಿದ್ದರು.
ನ್ಯಾ.ಡಿ ವೈ ಚಂದ್ರಚೂಡ್ ರವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ನಂತರದಲ್ಲಿ ಪ್ರಧಾನಿ ಮೋದಿಯವರಿಂದ ಹಿಡಿದು ಅವರ ಕಾನೂನು ಮಂತ್ರಿ ಕಿರಣ್ ರಿಜಿಜು, ಆರೆಸ್ಸೆಸ್ ನಾಯಕರು ಹಾಗೂ ಬಿಜೆಪಿಯ ನಾಯಕರುಗಳು ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ನಿರಂತರ ದಾಳಿಗಳನ್ನು ಮಾಡುತ್ತಲೇ ಬಂದಿದ್ದಾರೆ. ಉಪ ರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್ ಅವರಂತೂ ಎಲ್ಲಾ ವೇದಿಕೆಗಳಲ್ಲೂ ಮತ್ತು ಎಲ್ಲಾ ಸಂದರ್ಭಗಳಲ್ಲೂ ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕಾನೂನು ಸಚಿವಾಲಯವಂತೂ ಸರ್ವೋಚ್ಛ ನ್ಯಾಯಾಲಯದ ಕೊಲಿಜಿಯಂ ಉನ್ನತ ನ್ಯಾಯಾಲಯಗಳ ನೇಮಕಾತಿಗಳಿಗೆ ಕಳುಹಿಸಿದ ಎಲ್ಲಾ ಶಿಫಾರಸ್ಸುಗಳನ್ನು ದುರುದ್ದೇಶಪೂರ್ವಕವಾಗಿ ಲಿವೇವಾರಿ ಮಾಡದೇ ನ್ಯಾಯಾಂಗದ ಕಾರ್ಯನಿರ್ವಹಣೆಗೆ ತಡೆಯೊಡ್ಡುತ್ತಲೇ ಇದೆ.
ದೇಶದ ಆಡಳಿತ ನಿರ್ವಹಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಯಾವುದೇ ಕಾನೂನು ಮಾಡುವ ಪರಮಾಧಿಕಾರ ಸಂಸತ್ತಿಗೆ ಇದೆ. ಆದರೆ ಅಂತಹ ಕಾನೂನುಗಳು ಸಂವಿಧಾನಕ್ಕೆ ಬದ್ದವಾಗಿ ಹಾಗೂ ಕಾನೂನಿಗೆ ಅನುಗುಣವಾಗಿ ಇವೆಯಾ ಎಂದು ಪರಿಶೀಲಿಸುವ ಅಧಿಕಾರ ಸುಪ್ರೀಂ ಕೋರ್ಟಿಗೆ ಇದೆ. ‘ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವಂತಹ ಯಾವುದೇ ಕಾನೂನನ್ನೂ ಸುಪ್ರೀಂ ಕೋರ್ಟ್ ಮಾನ್ಯಮಾಡಲು ಸಾಧ್ಯವಿಲ್ಲ’ ಎಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ಬಹುಮತದ ತೀರ್ಪು ಕೊಟ್ಟಿದೆ.
ಚುನಾವಣಾ ಬಾಂಡ್ ಕಾನೂನಾತ್ಮಕ ಭ್ರಷ್ಟಾಚಾರ ಎಂದ ಸುಪ್ರೀಂ ಕೋರ್ಟ್
“ಚುನಾವಣಾ ಬಾಂಡ್ ಎನ್ನುವುದೇ ಅಸಾಂವಿಧಾನಿಕ ಹಾಗೂ ಕಾನೂನು ವಿರೋಧಿ” ಎಂದು ಹೇಳಿ ಚುನಾವಣಾ ಬಾಂಡ್ ಪ್ರಕರಣದಲ್ಲಿ ಸು ಪ್ರೀಂ ಕೋರ್ಟ್ ತೆಗೆದುಕೊಂಡ ದಿಟ್ಟ ನಿರ್ಧಾರ ಹಾಗೂ ಕೊಟ್ಟ ತೀರ್ಪು ಮೋದಿ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಚುನಾವಣಾ ಬಾಂಡ್ ಯೋಜನೆಯನ್ನೇ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರಿಂದಾಗಿ ಕಾನೂನಾತ್ಮಕ ಭ್ರಷ್ಟಾಚಾರವೊಂದು ಸಾರ್ವತ್ರಿಕಗೊಂಡಿದೆ. ವಿರೋಧ ಪಕ್ಷಗಳ ಕೈಗೆ ಅಸ್ತ್ರವನ್ನು ಕೊಟ್ಟಂತಾಗಿದೆ. ದೇಶದ ಜನತೆ ಬಿಜೆಪಿಯ ಬೃಹತ್ ಭ್ರಷ್ಟಾಚಾರದ ಬಗ್ಗೆ ಮಾತಾಡುವಂತಾಗಿದೆ. ಇಷ್ಟೆಲ್ಲಾ ಆದ ಮೇಲೂ ಬಿಜೆಪಿ ಪರವಾಗಿರುವ ಹರೀಶ್ ಸಾಳ್ವೆ ಹಾಗೂ ಪಿಂಕಿ ಆನಂದ್ ನಂತಹ ಹಿರಿಯ ವಕೀಲರು ಸೇರಿ 600ಕ್ಕೂ ಹೆಚ್ಚು ವಕೀಲರುಗಳು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡರವರಿಗೆ ಪತ್ರ ಬರೆದು ಒತ್ತಡ ಹೇರಲು ಪ್ರಯತ್ನಿಸಿದರು. ಈ ಪತ್ರದಲ್ಲಿ “ದೇಶದಲ್ಲಿ ನ್ಯಾಯಾಂಗವನ್ನು ದುರ್ಬಲಗೊಳಿಸಲು ನಿರ್ದಿಷ್ಟ ಗುಂಪು ನಿರತವಾಗಿದೆ” ಎಂದು ಆತಂಕ ವ್ಯಕ್ತಪಡಿಸಲಾಗಿತ್ತು. ನಿಜದಲ್ಲಿ ಅಂತಹ ಗುಂಪು ಈ ವಕೀಲರೆ ಆಗಿದ್ದು ವಿಪರ್ಯಾಸ. ಈ ವಕೀಲರುಗಳ ಪತ್ರದ ಆಗ್ರಹವನ್ನು ಸ್ವತಃ ಪ್ರಧಾನಿ ಮೋದಿಗಳೇ ಎಕ್ಸ್ ಖಾತೆಯಲ್ಲಿ ಸಮರ್ಥಿಸಿಕೊಂಡರು. ಮೋದಿಯವರಿಗೆ ಬೇಕಾಗಿರುವುದು ನ್ಯಾಯನಿಷ್ಠ ನ್ಯಾಯಾಧೀಶರಲ್ಲ, ಕೇವಲ ಮೋದಿ ನಿಷ್ಠ ನ್ಯಾಯಾಧೀಶರು ಎನ್ನುವುದು ರಾಜಕೀಯ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ.
ಸಂಘಟಿತ ದಾಳಿಯ ಪ್ರಯತ್ನಗಳು
ನ್ಯಾಯಾಂಗದ ನ್ಯಾಯ ತೀರ್ಮಾನಗಳು ಆಳುವ ಪ್ರಭುತ್ವಕ್ಕೆ ಪೂರಕವಾಗದೇ ಇದ್ದಾಗ ನ್ಯಾಯಾಂಗದ ಮೇಲೆ ಉದ್ದೇಶ ಪೂರ್ವಕ ಸಂಘಟಿತ ದಾಳಿ ನಡೆಸುವ ಪ್ರಯತ್ನಗಳೂ ನಡೆದಿವೆ. ನ್ಯಾಯಾಧೀಶರುಗಳ ಮೇಲೆ ಒತ್ತಡ ಹೇರುವುದು, ಭಯಭೀತ ಗೊಳಿಸುವ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿವೆ. ಬಿಜೆಪಿ ಸರಕಾರಕ್ಕೆ ವ್ಯತಿರಿಕ್ತವಾದ ತೀರ್ಪು ಕೊಡುವ ನ್ಯಾಯಾಧೀಶರ ವಿರುದ್ಧ ಟ್ರೋಲ್ ಮಾಡಿ ಅವರ ನೈತಿಕತೆ ಕುಗ್ಗಿಸಲು ಸಂಘಟಿತ ಸೈನ್ಯವೇ ಸಂಘ ಪರಿವಾರದಲ್ಲಿದೆ. ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಾಗ ನ್ಯಾಯಾಲಯಕ್ಕೆ ಜೈಕಾರ ಹಾಕಿದ ಸಂಘ ಪರಿವಾರವು, ಉದಯಪುರ ಗಲಭೆ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಕಟುವಾಗಿ ಠೀಕಿಸಿದಾಗ ಬಿಜೆಪಿ ಟ್ರೋಲ್ ಪಡೆ ಸುಪ್ರೀಂ ಕೋರ್ಟ್ ವಿರುದ್ಧವೇ ತಿರುಗಿ ಬಿದ್ದಿತ್ತು. ಬಿಜೆಪಿಯ ಬುದ್ಧಿಜೀವಿಗಳು ನ್ಯಾಯಪೀಠಕ್ಕೆ ಪತ್ರಬರೆದು ನ್ಯಾಯಾಧೀಶರು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ನ್ಯಾಯಾಧೀಶರ ವಿರುದ್ಧ ಕೀಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧವೇ ಪ್ರಧಾನಿ ಕಚೇರಿಯ ಸೂಚನೆಯಂತೆ ಕೆಲವರಿಂದ ಪತ್ರವನ್ನೂ ಬರೆಸಲಾಗಿತ್ತು. ಮೋದಿ ಸರಕಾರದ ವಿರುದ್ಧ ತೀರ್ಪು ಕೊಟ್ಟಿದ್ದಕ್ಕೆ ಬಿಜೆಪಿಯ ಹಸ್ತಕ್ಷೇಪದಿಂದ ಕಿರುಕುಳಕ್ಕೊಳಗಾದ ನ್ಯಾಯಾಧೀಶರು ಸುದ್ದಿಗೋಷ್ಠಿ ಕರೆದು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶರು “ತಮ್ಮ ಮೇಲೆ ವರ್ಗಾವಣೆ ಬೆದರಿಕೆ ಒತ್ತಡ ಇದ್ದು ನಾನು ಕೇವಲ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ” ಎಂದು ನ್ಯಾಯಾಲಯದಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ನ್ಯಾಯಾಧೀಶರು ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿರಬಾರದು..
ಇತ್ತೀಚೆಗೆ ಕಲ್ಕತ್ತಾದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅಭಿಜಿತ್ ಗಂಗೋಪಾಧ್ಯಾಯರವರು ನಿವೃತ್ತಿಗೆ ಐದು ತಿಂಗಳು ಮೊದಲೇ ರಾಜೀನಾಮೆ ಸಲ್ಲಿಸಿದ 48 ಗಂಟೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅವರು ನ್ಯಾಯಾಧೀಶರಾಗಿದ್ದಾಗಲೇ “ಬಿಜೆಪಿ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದೇನೆ ಹಾಗೂ ಒಂದೆರಡು ದಿನಗಳಲ್ಲಿ ರಾಜಕೀಯಕ್ಕೆ ಧುಮುಕುತ್ತೇನೆ” ಎಂದು ಅವರೇ ಹೇಳಿಕೊಂಡರು. ನ್ಯಾಯಾಧೀಶರಾಗಿದ್ದಾಗ ಪಶ್ಚಿಮ ಬಂಗಾಳದ ಆಳುವ ಪಕ್ಷವಾದ ಟಿಎಂಸಿ ಸರಕಾರದ ವಿರುದ್ಧ ಪ್ರಮುಖ ತೀರ್ಪುಗಳನ್ನು ನೀಡಿದ್ದರು. ಹೀಗೆ ನಿವೃತ್ತಿ ತೆಗೆದುಕೊಂಡು ರಾಜಕೀಯಕ್ಕೆ ಧುಮುಕಿದವರಲ್ಲಿ ಇವರೇನೂ ಮೊದಲಿಗರಲ್ಲ. ಆದರೆ ನ್ಯಾಯಮೂರ್ತಿಯವರಾಗಿದ್ದಾಗಲೇ ಬಿಜೆಪಿ ಜೊತೆ ಸಂಪರ್ಕ ಇತ್ತು ಎಂದು ನೇರವಾಗಿ ಹೇಳಿದವರಲ್ಲಿ ಇವರೇ ಮೊದಲಿಗರು. ಅವರ ಈ ಕ್ರಮವು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲವಾದರೂ ನ್ಯಾಯಾಂಗದ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬ ಅನುಮಾನ ಹುಟ್ಟುಹಾಕಿತು. ನ್ಯಾಯಾಧೀಶರಾದವರು ರಾಜಕೀಯ ಪಕ್ಷದೊಂದಿಗೆ ಸಂಪರ್ಕದಲ್ಲಿರುವುದು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ. ಇಂತಹ ಪಕ್ಷನಿಷ್ಟ ನ್ಯಾಯಾಧೀಶರು ಕೊಡಮಾಡಿದ ತೀರ್ಪುಗಳು ರಾಜಕೀಯ ಪ್ರೇರಿತವಾಗಿರುವುದೇ ಆತಂಕಕಾರಿ ಆಗಿರುವಂತಹುದು. ನ್ಯಾಯಮೂರ್ತಿಯಾದವರು ರಾಜಕೀಯವಾಗಿ, ಸೈದ್ಧಾಂತಿಕವಾಗಿ ಹಾಗೂ ಧಾರ್ಮಿಕವಾಗಿ ತಟಸ್ಥ ನಿಲುವನ್ನು ಹೊಂದಿರಬೇಕೇ ಹೊರತು ಯಾವುದೋ ಒಂದು ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿರಬಾರದು.
ತರಹೇವಾರಿ ಆಮಿಷಗಳು
ಆದರೆ ಸರ್ವಾಧಿಕಾರಿ ವ್ಯವಸ್ಥೆಯ ಸ್ಥಾಪನೆಗಾಗಿ ನ್ಯಾಯಾಂಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು 2014 ರಿಂದಲೂ ಪ್ರಯತ್ನಿಸುತ್ತಿರುವ ಮೋದಿ ಸರಕಾರವು ನ್ಯಾಯಾಧೀಶರಿಗೆ ರಾಜ್ಯಸಭೆ ಸದಸ್ಯತ್ವದ, ಇಲ್ಲವೇ ಚುನಾವಣಾ ಅಭ್ಯರ್ಥಿಯನ್ನಾಗಿಸುವ ಆಮಿಷವನ್ನು ತೋರಿಸಿ ನ್ಯಾಯಾಂಗದ ನಿಯತ್ತನ್ನೇ ಹಾಳು ಮಾಡುತ್ತಿರುವುದು ಆಕ್ಷೇಪಣೀಯ ಸಂಗತಿ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೋಯ್ ರವರು ನಿವೃತ್ತಿಯಾದ ತಕ್ಷಣ ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಈ ಎಲ್ಲಾ ವಿದ್ಯಮಾನಗಳು ನ್ಯಾಯಾಂಗದ ಮೇಲೆ ಸರ್ವಾಧಿಕಾರಿಯ ಹಸ್ತಕ್ಷೇಪವನ್ನು ತೋರುವಂತಿದೆ.
ಸರ್ವಾಧಿಕಾರಿ ಪ್ರಭುತ್ವ ಜಾರಿಯಾಗ ಬಾರದೆಂದರೆ…
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರ ಬಹುಮತದಿಂದ ಆಯ್ಕೆಯಾಗಿ ಅಧಿಕಾರ ಹಿಡಿದಿದ್ದೇ ಆದರೆ ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ಬದಲಿಸಿ ಮತ್ತೆ 99ನೇ ನಿಯಮಕ್ಕೆ ಸಾಂವಿಧಾನಿಕ ತಿದ್ದುಪಡಿ ತಂದು ನ್ಯಾಯಾಂಗ ನೇಮಕಾತಿಗಳ ನಿಯಂತ್ರಣವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿದ್ದೇ ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಂಡು ಸರ್ವಾಧಿಕಾರಿ ಪ್ರಭುತ್ವ ಜಾರಿಬರುವುದು ನಿಶ್ಚಿತ. ಸಂಸದೀಯ ವ್ಯವಸ್ಥೆ ಕೊನೆಗೊಂಡು ರಷ್ಯಾ ಮಾದರಿಯಲ್ಲಿ ಏಕಾಧಿಪತ್ಯದ ಅಧ್ಯಕ್ಷೀಯ ವ್ಯವಸ್ಥೆ ಘೋಷಿತವಾಗುವುದು ಸತ್ಯ. ಪ್ರಜಾಪ್ರಭುತ್ವದ ಅಳಿವು ಹಾಗೂ ಸಂವಿಧಾನದ ಉಳಿವು ಈ ಚುನಾವಣೆಯಲ್ಲಿ ಈ ದೇಶದ ಜನರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ, ಭಾಗ 4- ಸುದ್ದಿ ಮಾಧ್ಯಮಗಳ ಮೇಲೆ ಸರ್ವಾಧಿಕಾರಿಯ ಹಿಡಿತ