ಒಗ್ಗಟ್ಟಿನ ಮಂತ್ರ: ಸಿಎಂ ಮತ್ತು ಡಿಸಿಎಂ ಜಂಟಿ ಪ್ರಚಾರಕ್ಕೆ ವೇದಿಕೆ ಸಜ್ಜು

Most read

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್ ಪಕ್ಷದ ನಾಯಕರು ಎಲ್ಲೆಡೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೋರಿದ ಒಗ್ಗಟ್ಟನ್ನು ಈ ಬಾರಿಯೂ ಮರುಕಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಜಾಧ್ವನಿ ಯಾತ್ರೆಯ ಮೂಲಕ ಹಲವೆಡೆ ಜಂಟಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಇಷ್ಟು ದಿನ ಪ್ರತ್ಯೇಕವಾಗಿ ಬಹಿರಂಗ ಸಭೆ, ಅಭ್ಯರ್ಥಿಗಳ ಪರವಾಗಿ ನಡೆಯುತ್ತಿದ್ದ ಪ್ರಚಾರ, ನಾಮಪತ್ರ ಸಲ್ಲಿಕೆ ರೋಡ್ ಶೋಗಳಲ್ಲಿ ಭಾಗವಹಿಸಿದ್ದ ಇಬ್ಬರೂ ನಾಯಕರು ಜಂಟಿಯಾಗಿಯೂ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಕುರುಡುಮಲೆ ದೇವಸ್ಥಾನದಿಂದ ಉಭಯ ನಾಯಕರ ಪ್ರಜಾಧ್ವನಿ- 2 ಯಾತ್ರೆ ಆರಂಭಗೊಳ್ಳಲಿದ್ದು, ಕೋಲಾರ, ಬೆಂಗಳೂರು ಉತ್ತರ ,ಬೆಂಗಳೂರು ದಕ್ಷಿಣ, ಕೇಂದ್ರ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ.

ಕೋಲಾರದ ಮುಳಬಾಗಿಲು ಕ್ಷೇತ್ರ ವ್ಯಾಪ್ತಿಯ ಕುರುಡುಮಲೆ ದೇವಸ್ಥಾನದಿಂದ ಪ್ರಜಾಧ್ವನಿ-2 ಆರಂಭವಾಗಲಿದೆ. ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ಮೂಲಕ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಹಾಗೂ ಡಿಸಿಎಂ ಸಮರ ಸಾರಲಿದ್ದಾರೆ.

ಕುರುಡುಮಲೆ ದೇವಸ್ಥಾನದಿಂದ ಪ್ರಾರಂಭವಾದ ಕಾರ್ಯಕ್ರಮಗಳು ಹೆಚ್ಚು ಫಲ ನೀಡಿವೆ ಎಂಬ ನಂಬಿಕೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಇದೆ. ಎಸ್.ಎಂ. ಕೃಷ್ಣ, ಡಾ. ಜಿ. ಪರಮೇಶ್ವರ್ ಅವರುಗಳೂ ಹಿಂದೆ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕುರುಡು ಮಲೆಯಿಂದಲೇ ಡಿ.ಕೆ. ಶಿವಕುಮಾರ್ ಯಾತ್ರೆ ಆರಂಭಿಸಿದ್ದರು. ಹೀಗಾಗಿ ಕುರುಡುಮಲೆ ದೇವಸ್ಥಾನದಿಂದಲೇ ಪ್ರಜಾಧ್ವನಿ- 2 ಯಾತ್ರೆಯನ್ನು ಪ್ರಾರಂಭ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಕಾಂಗ್ರೆಸ್ ಪ್ರಜಾಧ್ವನಿ- 2 ಯಾತ್ರೆಯ ರೂಟ್ ಮ್ಯಾಪ್ ಹೀಗಿರಲಿದೆ:

  • 06-04-2024 ಶನಿವಾರ ಬೆಳಿಗ್ಗೆ 10:30 ವಿಶೇಷ ಪೂಜೆ.
  • ಕುರುಡುಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಸಿಎಂ, ಡಿಸಿಎಂ
  • ಪೂಜೆ ಬಳಿಕ ಸಿಎಂ, ಡಿಸಿಎಂ ಬೃಹತ್ ರೋಡ್ ಶೋ..
  • ಕೋಲಾರ ಲೋಕಸಭಾ ಕ್ಷೇತ್ರದ ಬಳಿಕ ಸಿಎಂ, ಡಿಸಿಎಂ ಬೆಂಗಳೂರಿಗೆ
  • 07-04-2024 ಭಾನುವಾರ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಚಾರ
  • ಸಾಯಂಕಾಲ 5 ಗಂಟೆಯಿಂದ 9 ಗಂಟೆಯವರೆಗೆ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ
  • 08-04-2024 ಸೋಮವಾರ ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ
  • ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬೆಂಗಳೂರು ಕೇಂದ್ರದಲ್ಲಿ ಸಿಎಂ, ಡಿಸಿಎಂ ಪ್ರಚಾರ

More articles

Latest article