ಹಾಸನ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾದ ನಂತರ ಬುಸುಗುಡುತ್ತಲೇ ಇರುವ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದು, ತಮ್ಮ ಪ್ರಭಾವ ಇರುವ ಹಾಸನ, ಆಲೂರು, ಸಕಲೇಶಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಒಳ ಏಟು ಕೊಡಲು ಮುಂದಾಗಿದ್ದಾರೆ.
ಪ್ರೀತಂ ಗೌಡ ಬಂಡಾಯದಿಂದ ಗಾಬರಿಗೊಂಡಿರುವ ಜೆಡಿಎಸ್ ಮುಖಂಡರು ಹೇಗಾದರೂ ಅವರ ಕೋಪ ಶಮನ ಮಾಡಿ ಎಂದು ಬಿಜೆಪಿ ನಾಯಕರಿಗೆ ದುಂಬಾಲು ಬಿದ್ದಿದ್ದು, ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಾಸನದ ಸಮಸ್ಯೆ ಬಗೆಹರಿಸಲು ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಹಾಸನ ಜಿಲ್ಲೆಯ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಪಾಲ್ಗೊಂಡು ಬಂಡಾಯ ಶಮನದ ಪ್ರಯತ್ನ ನಡೆಸಲಿದ್ದಾರೆ. ಆದರೆ ಈ ಸಭೆಯಲ್ಲಿ ಪ್ರೀತಂ ಗೌಡ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ತಿಳಿದುಬಂದಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಂ ಗೌಡ ತುರುಸಿನ ಸ್ಪರ್ಧೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಎದುರು ಪರಾಭವಗೊಂಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಇಡೀ ಕುಟುಂಬ ಕ್ಷೇತ್ರದಲ್ಲಿ ದೊಡ್ಡಮಟ್ಟದ ಪ್ರಚಾರ ನಡೆಸಿ ಪ್ರೀತಂ ಸೋಲಿಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಿಂದೆಂದೂ ಕೇಳರಿಯದ ಪರಸ್ಪರ ದೂಷಣೆ, ವಾಗ್ದಾಳಿ ಕೇಳಿ ಬಂದಿತ್ತು.
ಸೋಲಿನ ಆಘಾತದಿಂದ ಹೊರಗೆ ಬರುವ ಮುನ್ನವೇ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದನ್ನು ಅರಗಿಸಿಕೊಳ್ಳಲಾಗದ ಪ್ರೀತಂ ಗೌಡ ಹಲವು ಬಾರಿ ಹೊಸ ದೋಸ್ತಿ ಬಗ್ಗೆ ಅಪಸ್ವರ ಎತ್ತುತ್ತಲೇ ಬಂದಿದ್ದರು. ಇದೀಗ ಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಕೆಲಸ ಮಾಡಲು ಪ್ರೀತಂ ಒಲ್ಲೆ ಎನ್ನುತ್ತಿದ್ದಾರೆ.
ಇಂದು ಸಂಜೆ ನಡೆಯಲಿರುವ ಸಂಧಾನ ಸಭೆಯಲ್ಲಿ ಪ್ರೀತಂಗೌಡ ಪಕ್ಷದ ಮುಖಂಡರ ಅಣತಿಯನ್ನು ಪಾಲಿಸುತ್ತಾರಾ ಅಥವಾ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಒಳ ಏಟು ಕೊಡುತ್ತಾರಾ ಕಾದು ನೋಡಬೇಕಿದೆ.
ಇನ್ನೊಂದೆಡೆ ದೇವೇಗೌಡರ ಕುಟುಂಬದ ಪಾರಂಪರಿಕ ಎದುರಾಳಿ ಜಿ.ಪುಟ್ಟಸ್ವಾಮಿ ಗೌಡರ ಮೊಮ್ಮಗ 32 ವರ್ಷದ ಶ್ರೇಯಸ್ ಪಟೇಲ್ ಈಗಾಗಲೇ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಭಾರೀ ಪೈಪೋಟಿ ನೀಡಿದ್ದ ಶ್ರೇಯಸ್, ಈ ಬಾರಿ ಅವರ ಪುತ್ರ ಪ್ರಜ್ವಲ್ ಸೋಲಿಸುವ ಪಣ ತೊಟ್ಟಿದ್ದಾರೆ.