ನಿನ್ನ ನೋಡಿದ್ರೆ ತುಂಬಾ ಆಸೆ ಆಗುತ್ತೆ…

Most read

ಇತ್ತಿಚೆಗೆ ಫೇಸ್ಬುಕ್ ನಲ್ಲಿ ಒಬ್ಬರು  ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ಹೆಸರು ಹುಡುಗಿಯ ಹೆಸರೆ ಆಗಿತ್ತು. ಹಾಗಾಗಿ ಹೆಚ್ಚು ಯೋಚಿಸಲಿಲ್ಲ. ಪರಿಚಯ ಇಲ್ಲದವರ ರಿಕ್ವೆಸ್ಟ್ ಹೆಚ್ಚಾಗಿ ಅಕ್ಸೆಪ್ಟ್ ಮಾಡದ ನಾನು ಅವರ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದೆ.

ಸ್ವಲ್ಪ ದಿನಗಳ ಕಾಲ ಸಾಮಾನ್ಯವಾಗೇ ಮೇಸೆಜ್ ಮಾಡಿದ ನಂತರ ಅವರ ಮಾತುಗಳು ಸಹಜ ಅನಿಸುತ್ತಿರಲಿಲ್ಲ. ಯಾವುದೇ ಫೋಟೋ ಪೋಸ್ಟ್ ಹಾಕಲಿ ತುಂಬಾ ರೋಮ್ಯಾಂಟಿಕ್ ಆಗಿ ಮಾತಾಡುತ್ತಿದ್ದರು.

ಒಂದು ದಿನ ಒಂದಷ್ಟು ಪ್ರಶ್ನೆಗಳ ನಂತರ ನಾನು ಲೆಸ್ಬಿಯನ್ I am really attracted to you. ನಿನ್ನ ನೋಡಿದ್ರೆ ತುಂಬಾ ಆಸೆ ಆಗುತ್ತೆ ಅಂತೆಲ್ಲಾ ಮೇಸೆಜ್ ಗಳನ್ನ ಕಳಿಸೋಕೆ ಶುರುಮಾಡಿದರು.

ಬದುಕನ್ನೇ ಹೋರಾಟ ಮಾಡಿಕೊಂಡು ತಮ್ಮ ಅಸ್ತಿತ್ವಕ್ಕಾಗಿ, ಬದುಕಿಗಾಗಿ ಸಾಮಾನ್ಯ ಜನರಂತೆ ತಮ್ಮನ್ನು ಬದುಕಲು ನೋಡಲು ಹಂಬಲಿಸಿ ಪರಿತಪಿಸುತ್ತಿರುವ ಗೇ, ಲೆಸ್ಬಿಯನ್, ಬೈ ಸೆಕ್ಷುವಲ್, ಟ್ರಾನ್ಸ್ ಜೆಂಡರ್‌ ಗಳ ಕುರಿತು ಅರಿವಿದ್ದ ನನಗೆ ಅವರ ಮೇಸೆಜ್‌ ಗಳು ತೀರಾ ಹಿಂಸೆ ತರಲಿಲ್ಲ.

ಪ್ರತಿ ಮೇಸೆಜ್ ಗಳಲ್ಲೂ ನನಗೆ ಪ್ರೀತಿಕೊಡಿ, ಕರುಣೆ ತೋರಿಸಿ, ನೀವು ನನ್ನ ದೇವತೆ ಅಂತ ತಿಳಿಯುತ್ತೇನೆ, ಒಂಟಿ ಬದುಕಿನಿಂದ ಪ್ರತಿ ದಿನವೂ ಸತ್ತು ಹೋಗುತ್ತಿದ್ದೇನೆ, ನಾನೇನು ನಿಮಗೆ ತೊಂದರೆ ಮಾಡಲ್ಲ, ದೂರದಿಂದಲೇ ನಿಮ್ಮನ್ನ ಪ್ರೀತಿಸುತ್ತೇನೆ, ಒಂದೇ ಒಂದು ಸಾರಿ ಪರ್ಮಿಶನ್ ಕೊಡಿ ದೂರದಿಂದಲೇ ನಿಮ್ಮನ್ನ ನೋಡಿ Masturbation ಮಾಡ್ಕೊತಿನಿ ಅಂತ ಹೇಳುತ್ತಿದ್ದದ್ದರ ಹಿಂದೆ ನಿಜಕ್ಕೂ ಹುಡುಗಿಯೋ ಲೆಸ್ಬಿಯನ್ನೋ ಎಂಬ ಅನುಮಾನ ಬಂದು ಅಸಹ್ಯ ಸೃಷ್ಟಿಯಾಯಿತು.

ಕೊನೆಗೊಂದು ದಿನ ಅವರ ಅಸಭ್ಯ ಮಾತುಗಳು ಬೇಡಿಕೆಗಳು ಅವರು ಹುಡುಗಿಯೂ ಅಲ್ಲ ಲೆಸ್ಬಿಯನ್ನೂ ಅಲ್ಲ ಎಂಬುದು ಖಚಿತವಾಯಿತು. ಆ ಎರಡು ಹೆಸರುಗಳನ್ನಿಟ್ಟುಕೊಂಡು ಸುಳ್ಳು ಹೇಳಿದ 37 ವರ್ಷದ ಗಂಡಸು ಆತ ಎಂದು ತಿಳಿದಾಗ ನಿಜಕ್ಕೂ ಬೇಸರವಾಗಿ ಬ್ಲಾಕ್ ಮಾಡಿದೆ. 

ಸೋಶಿಯಲ್ ಮೀಡಿಯಾಗಳಲ್ಲಿ ಹೀಗೆ ಸುಳ್ಳು ಹೇಳಿಕೊಂಡು ಮೋಸ ಮಾಡುವುದು ಸಾಮಾನ್ಯ. ಆದರೆ ನನ್ನನ್ನ ಕಾಡಿದ್ದು ಲೆಸ್ಬಿಯನ್ ಎಂದು ಸುಳ್ಳು ಹೇಳಿದ ಅವರ ಕೆಟ್ಟ ಮನಸ್ಥಿತಿಯ ಬಗೆಗೆ.

ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹುಡುಗಿಯ ಮುಂದೆ ಹಸ್ತ ಮೈಥುನ ಮಾಡಿಕೊಂಡ ಇಂತಹದ್ದೇ ಒಂದು ಸುದ್ದಿಯಾಗಿತ್ತು.

ಇದೆಲ್ಲಕ್ಕೂ ಕಾರಣ ಹೆಣ್ಣು ಒಂದು ಮಾಂಸದ ಮುದ್ದೆ ಅವಳು ಲೈಂಗಿಕ ಸುಖವನ್ನು ನೀಡುವುದಕಷ್ಟೇ  ಹುಟ್ಟಿರುವುದೆಂಬಂತೆ ತಿಳಿದಿರುವುದೇ ಕಾರಣ. ಮೊದಲಿನಿಂದಲೂ ಕೂಡ ಹೆಣ್ಣು ಮತ್ತು ಗಂಡಿನ ನಡುವೆ ಒಂದೊಳ್ಳೆಯ ಸ್ನೇಹ ಸಂಬಂಧವನ್ನು, ಗೆಳೆತನವನ್ನು, ನಿಷ್ಕಲ್ಮಶವಾದ ಪ್ರೀತಿಯನ್ನು ಬೆಳೆಸದೇ ಹೋದದ್ದೇ ಕಾರಣ. ಹೆಣ್ಣಿನ ಬಗೆಗೆ ಗೌರವವನ್ನು ಇಟ್ಟುಕೊಳ್ಳದೆ ಹೋದದ್ದೇ ಕಾರಣ. ಮುಕ್ತವಾಗಿ ತಿಳಿಸಬೇಕಾದ ವಿಷಯಗಳನ್ನ ಗುಟ್ಟಾಗಿ ಇಟ್ಟು ವಿಚಿತ್ರ ಕೆಟ್ಟ ಕುತೂಹಲ ಸೃಷ್ಟಿಸಿದ್ದೇ ಕಾರಣ.

ಈಗಲೂ ಕೂಡ ಪ್ರಪಂಚ ಎಷ್ಟೇ ಬದಲಾದರೂ ಶಾಲಾ ಕಾಲೇಜುಗಳಲ್ಲಿ ಹುಡುಗಿಯರು ಹುಡುಗರು ಪ್ರತ್ಯೇಕವಾಗಿಯೇ ಕುಳಿತುಕೊಳ್ಳುವುದು ಇದ್ದೇ ಇದೆ. ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಷ್ಟು ಜನ ಹೆಣ್ಣು ಮಕ್ಕಳಿಗೆ  ಗಂಡುಮಕ್ಕಳು  ಅಂತೆಯೇ ಎಷ್ಟು ಜನ ಗಂಡಸರಿಗೆ ಹೆಂಗಸರು ಆತ್ಮೀಯ ಸ್ನೇಹಿತರಿದ್ದಾರೆ? ಇದ್ದರೂ ಅದು ಕೇವಲ ಬೆರಳೆಣಿಕೆಯಷ್ಟು. ಮೊದಲು ಈ ಎಲ್ಲಾ ಪ್ರತ್ಯೇಕತೆಗಳು, ಗೆರೆಗಳು ದೂರವಾಗಬೇಕು.

ಇತ್ತೀಚಿನ ವರ್ಷಗಳಲ್ಲಿ  ಅಂದರೆ 1990 ರ ನಂತರ ಸಾಕಷ್ಟು ಹೋರಾಟಗಳು ಚಳುವಳಿಗಳ ನಂತರ Queer Theory ಯನ್ನು ಬೆಳಕಿಗೆ ತರಲಾಗಿದೆ. Queer Theory ಅಂದರೆ (LGBTQ) ಗೇ, ಲೆಸ್ಬಿಯನ್ , ಬೈ ಸೆಕ್ಷುವಲ್,  ಟ್ರಾನ್ಸ್ ಜೆಂಡರ್‌ ಗಳ ಕುರಿತು ಮಾತನಾಡುತ್ತದೆ. ಅವರ ಹಕ್ಕುಗಳಿಗಾಗಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಬಹು ಮುಖ್ಯವಾಗಿ ಗಂಡು ಮತ್ತು ಹೆಣ್ಣಿನಂತೆಯೇ ಅವರನ್ನು ಕೂಡ ಸಹಜವಾಗಿ ನೋಡಲು, ಮನುಷ್ಯರಂತೆಯೇ ಸ್ವೀಕರಿಸಲು, ಪಾಪ, ಅನುಕಂಪ, ಕರುಣೆಗಳಿಂದ ಕಾಣದೆ ಅದೆಲ್ಲದರಿಂದ ಮುಕ್ತಗೊಳಿಸಿ ಅವರನ್ನು ಅವರ ಅಸ್ತಿತ್ವವನ್ನು ಅವರ ಹುಟ್ಟನ್ನು ಸಹಜವಾಗಿ ಕಾಣುವುದಕ್ಕಾಗಿ ಈ ಕ್ಷಣಕ್ಕೂ ಕೂಡ ಹೋರಾಡುತ್ತಲೇ ಇದ್ದಾರೆ. ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಸಮಾಜ ಅವರ ಹೆಸರಲ್ಲಿ ಮೋಸ ಮಾಡುತ್ತಿರುವುದನ್ನು ನೋಡಿದರೆ ತೀರಾ ಬೇಸರ ಮತ್ತು ಸಂಕಟವಾಗುತ್ತಿದೆ.

ನಮ್ಮಂತೆಯೇ ಅವರನ್ನೂ ಕೂಡ ಸಹಜವಾಗಿ ಸ್ವಾಭಾವಿಕವಾಗಿ ಕಂಡು ಅವರ ಬದುಕಿಗೆ ತೊಂದರೆ ಕೊಡದೆ ಅವರಿಗೆ ನೆರವಾಗಿ ಪ್ರೀತಿಯಿಂದ ಅವರ ಬೆನ್ನೆಲುಬಾಗಿ ನಿಲ್ಲದಿದ್ದರೂ ಅವರ ಹೆಸರಲ್ಲಿ ಕೆಸರೆರಚುವ ಕೆಟ್ಟ ಕೆಲಸಗಳನ್ನು ಬಿಟ್ಟು ಬಿಡಬೇಕಿದೆ. ಅವರನ್ನು ಕಂಡಾಕ್ಷಣ ನಕ್ಕು ಗೇಲಿ ಮಾಡಿ ಅವಮಾನಿಸಿ ತಮಾಷೆಯ ವಸ್ತುಗಳನ್ನಾಗಿ ಕಾಣುವ ಬದಲು ಗೌರವಯುತವಾದ ಬದುಕನ್ನು ಬದುಕಲು ಅವರನ್ನು ಬಿಡಬೇಕಿದೆ.

ಗೇ, ಲೆಸ್ಬಿಯನ್, ಬೈ ಸೆಕ್ಷುವಲ್, ಟ್ರಾನ್ಸ್ ಜೆಂಡರ್ ಜೊತೆಗೆ ಹೆಣ್ಣು ಇವರೆಲ್ಲರೂ ಮೋಜಿನ, ತಮಾಷೆಯ, ಅನುಕಂಪದ, ಲೈಂಗಿಕ ಸುಖವನ್ನು ನೀಡುವ ವಸ್ತುಗಳಲ್ಲ ಎಂಬುದನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕಿದೆ.

ಶೃಂಗಶ್ರೀ.ಟಿ.

ಅತಿಥಿ ಉಪನ್ಯಾಸಕಿ ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ

More articles

Latest article