ಮಂಡ್ಯ, ಹಾಸನ, ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ. ಆದ್ರೆ ಸುಮಲತಾ ಅವರ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಂಡ್ಯ, ಹಾಸನ, ಕೋಲಾರ ಮೂರು ಕ್ಷೇತ್ರ ಜೆಡಿಎಸ್ಗೆ (JDS) ಬಿಟ್ಟುಕೊಡುವ ತೀರ್ಮಾನ ಆಗಿದೆ. ಸುಮಲತಾ ಅವರ ಟಿಕೆಟ್ ತೀರ್ಮಾನ ಆಗಿಲ್ಲ. ಆದರೆ ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ ಎಂದು ಹೇಳಿದ್ದಾರೆ.
ಮಂಡ್ಯ, ಹಾಸನ, ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದ್ದು, ನಮ್ಮ ಕಾರ್ಯಕರ್ತರು ಪೂರ್ತಿ ಶ್ರದ್ಧೆ, ಮನಪರ್ವಕವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ಚುನಾವಣೆ ಪ್ರಚಾರ ಕಾರ್ಯ ಆರಂಭ ಆದ್ಮೇಲೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಯಾರು ಅಭ್ಯರ್ಥಿ ಎನ್ನೋದು ಮುಖ್ಯ ಅಲ್ಲ. ಮನಪೂರ್ವಕವಾಗಿ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ತಿಳಿಸಿದರು.
ಅಧಿಕೃತವಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಮೈತ್ರಿಗೂ ಮುನ್ನ ಬಿಜೆಪಿಗೆ ಬೆಂಬಲ ನೀಡಿದ್ದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಈಗ ಅತಂತ್ರರಾಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ನಿಂದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಇದೆ. ಮಂಡ್ಯ ಬಿಟ್ಟು ಬೇರೆ ಎಲ್ಲೂ ಚುನಾವಣೆಗೆ ಸ್ಪರ್ಧಿಸಲ್ಲ, ಮಂಡ್ಯ ಟಿಕೆಟ್ 100% ನನಗೆ ಸಿಗುತ್ತದೆ ಎಂದು ಟಿಕೆಟ್ಗಾಗಿ ಹಠ ಹಿಡಿದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈಗ ಮಂಡ್ಯ ಕ್ಷೇತ್ರ ಅಧಿಕೃತವಾಗಿ ಜೆಡಿಎಸ್ ಪಾಲಾಗಿದ್ದು, ಸುಮಲತಾ ಅಂಬರೀಶ್ ಮುಂದೆ ಏನ್ ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ.