ಹೊಸದಿಲ್ಲಿ: ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾತ್ರಿ ಇಡಿ ಕಚೇರಿಯಲ್ಲಿಯೇ ಕಳೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
ಏತನ್ಮಧ್ಯೆ, ಆಮ್ ಆದ್ಮಿ ಪಾರ್ಟಿ ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕ್ರಿಮಿನಲ್ ಪ್ರಕರಣವೊಂದರಲ್ಲಿ ಹಾಲಿ ಮುಖ್ಯಮಂತ್ರಿಯೇ ಬಂಧನಕ್ಕೊಳಗಾದ ಮೊದಲ ಪ್ರಕರಣ ಇದಾಗಿದ್ದು, ದಿಲ್ಲಿ ಹೈಕೋರ್ಟ್ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ರಾತ್ರಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಕೇಜ್ರಿವಾಲ್ ಅವರನ್ನು ಬಂಧಿಸಿ ಕರೆದೊಯ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಜೈಲಿನಲ್ಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ನೇತೃತ್ವವನ್ನು ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್, ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ವಹಿಸಿಕೊಳ್ಳಬೇಕಾದ ಸಂದರ್ಭ ಒದಗಿ ಬಂದಿದೆ.
ಕೇಜ್ರಿವಾಲ್ ಬಂಧನದ ನಂತರದ ಪ್ರಮುಖ ಬೆಳವಣಿಗಳು ಹೀಗಿವೆ.
- ಆಮ್ ಆದ್ಮಿ ಪಾರ್ಟಿ ಪ್ರಾಬಲ್ಯವಿರುವ ದಿಲ್ಲಿಯಲ್ಲಿ ಪ್ರತಿಭಟನೆಗಳ ಕಾವು ಏರುವ ಹಿನ್ನೆಲೆಯಲ್ಲಿ ಪೊಲೀಸರು ಹಲವು ಹಂತದ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಎಎಪಿ ಈಗಾಗಲೇ ಬಿಜೆಪಿ ಕಚೇರಿ ಎದುರು ಪ್ರತಿಭಟನೆಗೆ ಕರೆ ನೀಡಿರುವುದರಿಂದ ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಎಎಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗುವ ಸಾಧ್ಯತೆ ಇರುವುದರಿಂದ ದಿಲ್ಲಿಯಲ್ಲಿ ಟ್ರಾಫಿಕ್ ವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ಮುಖ್ಯಕಚೇರಿ ಮತ್ತು ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ITO ಮೆಟ್ರೋ ನಿಲ್ದಾಣವನ್ನು ಇಂದು ಸಂಜೆಯವರೆಗೆ ಮುಚ್ಚಲಾಗುವುದು.
- ಅರವಿಂದ ಕೇಜ್ರಿವಾಲ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಜಾರಿ ನಿರ್ದೇಶನಾಲಯ ಹೆಚ್ಚಿನ ವಿಚಾರಣೆಗಾಗಿ ಕೇಜ್ರಿವಾಲ್ ಅವರ ಕಸ್ಟಡಿಯನ್ನು ಕೋರಲಿದ್ದಾರೆ.
- ಕೇಜ್ರಿವಾಲ್ ಬಂಧನದ ನಂತರ ಬಿಜೆಪಿ ನಾಯಕರು ಇದು ಭ್ರಷ್ಟಾಚಾರದ ವಿರುದ್ಧದ ಗೆಲುವು ಎಂದು ಬಣ್ಣಿಸಿದ್ದಾರೆ. ಕೇಜ್ರಿವಾಲ್ ಕೂಡಲೇ ರಾಜೀನಾಮೆ ನೀಡಬೇಕು. ಜೈಲಿನಲ್ಲಿದ್ದುಕೊಂಡು ಅಧಿಕಾರ ನಡೆಸುವುದು ಸಾಂವಿಧಾನಿಕ ಮೌಲ್ಯಗಳಿಗೆ ಮಾಡುವ ಅಪಚಾರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ ಹೇಳಿದ್ದಾರೆ.
- ದಿಲ್ಲಿ ಸರ್ಕಾರದ ಸಚಿವರಾದ ಸೌರಬ್ ಭಾರದ್ವಾಜ್ ಹೇಳಿಕೆ ನೀಡಿದ್ದು, ಇಡಿ ಅಧಿಕಾರಿಗಳು ಕೇಜ್ರಿವಾಲ್ ನಿವಾಸದ ಮೂಲೆಮೂಲೆಯನ್ನೂ ಬಿಡದೆ ಶೋಧಿಸಿದ್ದಾರೆ. ಅವರಿಗೆ ಸಿಕ್ಕಿರುವುದು ಕೇವಲ 70,000 ರುಪಾಯಿ ಮಾತ್ರ. ಇಡಿ ಅಧಿಕಾರಿಗಳಿಗೆ ಅಕ್ರಮ ಹಣವಾಗಲೀ, ಆಸ್ತಿಪತ್ರಗಳಾಗಲೀ, ಯಾವುದೇ ರೀತಿಯ ಸಾಕ್ಷ್ಯಗಳಾಗಿ ಲಭಿಸಿಲ್ಲ ಎಂದು ಹೇಳಿದ್ದಾರೆ.
- ನಾವು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಕೇಜ್ರಿವಾಲ್ ರಾಜೀನಾಮೆ ನೀಡುವುದಿಲ್ಲ. ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ. ಅವರು ಅಧಿಕಾರದಲ್ಲಿ ಮುಂದುವರೆಯುವುದನ್ನು ತಡೆಯುವ ಯಾವ ಕಾನೂನೂ ಇಲ್ಲ ಎಂದು ಸಚಿವೆ ಅತಿಶಿ ಹೇಳಿದ್ದಾರೆ.
- ಇದು ಪ್ರಜಾಪ್ರಭುತ್ವದ ಹತ್ಯೆ ಎಂದು ಬಣ್ಣಿಸಿರುವ ಎಎಪಿ ಮುಖಂಡ ಗೋಪಾಲ್ ರಾಜ್, ಬಿಜೆಪಿ ಕಚೇರಿ ಮುಂದೆ ನಾವು ಪ್ರತಿಭಟಿಸಲಿದ್ದೇವೆ. ದೇಶದ ನಾಗರಿಕರು ಎಲ್ಲೆಡೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
- ಕೇಜ್ರಿವಾಲ್ ಬಂಧನವನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಗೆ ಸಿಲುಕಿದೆ. ಅದಕ್ಕಾಗಿ ಹತಾಶೆಯಿಂದ ವಿರೋಧ ಪಕ್ಷಗಳ ಮೇಲೆ ಏಜೆನ್ಸಿಗಳ ಮೂಲಕ ಮುಗಿಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ. \
- ಎನ್ ಸಿಪಿ ಪಕ್ಷವೂ ಸಹ ಬಂಧನವನ್ನು ಖಂಡಿಸಿದ್ದು ಪಕ್ಷದ ಮುಖಂಡ ಶರದ್ ಪವಾರ್ ಬಿಜೆಪಿ ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತದೆ. INDIA ಮೈತ್ರಿಕೂಟ ಕೇಜ್ರಿವಾಲ್ ಅವರ ಮೇಲೆ ನಡೆದಿರುವ ಈ ಅಸಂವಿಧಾನಿಕ ದಾಳಿಯ ವಿರುದ್ಧ ನಿಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.
- ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ.