Thursday, December 12, 2024

ಅಂಬೇಡ್ಕರ್ ಸಂಘಗಳು ನಡೆಸಬಹುದಾದ ಉದ್ಯಮಶೀಲತೆ ಚಳುವಳಿ

Most read

ರಾಜ್ಯಾದ್ಯಂತ ‌‌ ಪ್ರತಿಯೊಂದು ಊರುಗಳಲ್ಲು ಅಂಬೇಡ್ಕರ್ ಯುವಕ ಸಂಘಗಳಿವೆ. ಪ್ರತಿ ವರ್ಷ ಏಪ್ರಿಲ್ 14 ಕ್ಕೆ ಬಾಬಾಸಾಹೇಬ್ ಅಂಬೇಡ್ಕರರ ಜಯಂತಿಗೆ ಅವು ತಯಾರಾಗುತ್ತವೆ. ಬಾಬಾಸಾಹೇಬ್ ಅಂಬೇಡ್ಕರರ ಬಗೆಗಿನ ಅಂಬೇಡ್ಕರ್ ಯುವಕ ಸಂಘಗಳ ಅಭಿಮಾನ ವರ್ಣಿಸಲಸದಳ. ವೈಚಾರಿಕತೆಯೇ ಮೈಹೊದ್ದು ಕುಳಿತಿರುತ್ತವೆ ಅಂಬೇಡ್ಕರ್ ಯುವಕ ಸಂಘಗಳು‌‌. ಆದರೆ ಆಧುನಿಕ ಈ ಕಾಲದಲ್ಲಿ ಅಂಬೇಡ್ಕರ್ ಯುವಕ ಸಂಘಗಳ ಪಾತ್ರ ಅದು ಮಹತ್ತರವಾದುದು. ಕೇವಲ ಅಂಬೇಡ್ಕರ್ ಜಯಂತಿ ಆಚರಣೆ ಅಥವಾ ತಮಗೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡುವುದಷ್ಟೆ ಇಂದು ಅವುಗಳ ಕಾರ್ಯಕ್ರಮಗಳಾಗಿ ಉಳಿಯಬೇಕಿಲ್ಲ. ಈ ನಿಟ್ಟಿನಲ್ಲಿ ಹಲವು ಬಗೆಯ ವಿಶೇಷವಾಗಿ ಹೊಸ ಬಗೆಯ ಜವಾಬ್ದಾರಿಗಳನ್ನು ಅಂಬೇಡ್ಕರ್ ಯುವಕ ಸಂಘಗಳು ಹೊರಬೇಕಾಗುತ್ತವೆ.

ಉದಾಹರಣೆಗೆ, ಕಳೆದ ಕೆಲ ದಿನಗಳಲ್ಲಿ ನಾನು ರಾಜ್ಯಾದ್ಯಂತ ಕನಿಷ್ಠ ಮೂರು ಪ್ರದೇಶಗಳಲ್ಲಿ ಇಂತಹ ಅಂಬೇಡ್ಕರ್ ಯುವಕ ಸಂಘಗಳು ಮತ್ತು ದಲಿತ ಸಂಘರ್ಷ ಸಮಿತಿ ಏರ್ಪಾಡು ಮಾಡಿದ್ದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದೇನೆ. ಚಿಕ್ಕಮಗಳೂರಿನ ದಾಸನಪುರ, ಕೋಲಾರದ ಮಾಲೂರು, ಪಿರಿಯಾಪಟ್ಟಣದ ನವಿಲೂರು ಹಾಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಒಂದು ಹಳ್ಳಿ ಹೀಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ತುಂಬಾ ಅದ್ದೂರಿಯಾಗಿ, ಅಷ್ಟೇ ಶಿಸ್ತುಬದ್ಧವಾಗಿ, ಗರಿ ಗರಿ ಬಟ್ಟೆ, ಅಂದಚಂದದ ಉಡುಗೆ, ಶುಚಿತ್ವ, ಕಾರ್ಯಕ್ರಮದ ಅಚ್ಚುಕಟ್ಟುತನ… ಖಂಡಿತ, ಯಾರೂ ಕೂಡ ದಲಿತರನ್ನು ಈಗಿನ ದಿನಗಳಲ್ಲಿ ಅವರು ಕೆಳ ಜಾತಿ ಹಾಗೆ ಹೀಗೆ ಎಂದು ಕರೆಯಬೇಡಿ. ಯಾಕೆಂದರೆ ಆ ಮಟ್ಟಿಗಿನ ಬದಲಾವಣೆ ಈಗ ಆಗಿದೆ. ಅಂತಹ ಬದಲಾವಣೆಯನ್ನು ನಾನು ಮೇಲ್ಕಂಡ ಹಳ್ಳಿಗಳಲ್ಲಿ ಪ್ರದೇಶಗಳಲ್ಲಿ ಭಾಗವಹಿಸಿ ಸತ್ಯ ಕಂಡುಕೊಂಡಿದ್ದೇನೆ. ಆದರೆ ಒಂದು ಬೇಸರ. ಅದೆಂದರೆ ಇಲ್ಲೆಲ್ಲ ನಾನು ಹುಡುಕುತ್ತಿರುವ ದಲಿತ ಉದ್ಯಮಶೀಲತೆ ಕಾಣಲಿಲ್ಲ ಅಥವಾ ಸಿಗಲಿಲ್ಲ.

ಹಾಗಿದ್ದರೆ ದಲಿತ ಸಂಘಟನೆಗಳಿಗೆ, ಅಂಬೇಡ್ಕರ್ ಯುವಕ ಸಂಘಗಳಿಗೆ ಹಣದ ಕೊರತೆಯೇ? ಖಂಡಿತ ಇಲ್ಲ. ಮೇಲೆ ನಾನು ಭಾಗವಹಿಸಿದ ಕಾರ್ಯಕ್ರಮಗಳ ಉದಾಹರಣೆಗಳಲ್ಲಿ ಅಲ್ಲಿಯ ಅದ್ದೂರಿತನವೇ ಖರ್ಚಿನ ಅಂದಾಜನ್ನು ನೀಡುತ್ತದೆ. ಪ್ರಶ್ನೆ ಎಂದರೆ ಈ ಕಾರ್ಯಕ್ರಮದ ಹಣವನ್ನು ಅಂಬೇಡ್ಕರ್ ಯುವಕ ಸಂಘಗಳು ಮತ್ತು ದಲಿತ ಸಂಘಟನೆಗಳು ಉದ್ಯಮಶೀಲತೆಗೆ one time investment ಮಾದರಿಯಲ್ಲಿ ಬಳಸಿದರೆ? ಉದಾಹರಣೆಗೆ ಈ ಬಾರಿಯ ಅಂಬೇಡ್ಕರ್ ಜಯಂತಿ ಬರುತ್ತದೆ. ಅದರಲ್ಲಿ ಯಾವುದೇ ಸಂಘಟನೆ ಕಾರ್ಯಕ್ರಮಕ್ಕೆ ಕನಿಷ್ಟ 50 ಸಾವಿರದಿಂದ ಗರಿಷ್ಠ 5 ಲಕ್ಷ ಖರ್ಚು ಮಾಡುತ್ತವೆ. ಪ್ರಶ್ನೆ ಎಂದರೆ ಆ ಹಣವನ್ನು ಸಂಘಟನೆಗಳು ತಮ್ಮ ಊರಿನಲ್ಲಿ ತಮ್ಮ ಬಡಾವಣೆಯಲ್ಲಿ ಒಂದು ಅಂಗಡಿ, ಒಂದು ಸಣ್ಣ ಹೊಟೆಲ್ ತೆರೆಯಲು ಬಳಸಿದರೆ?

ಉದಾಹರಣೆಗೆ, ಒಂದು ಊರಿನಲ್ಲಿ ನೂರು ಕುಟುಂಬಗಳಿವೆ. ತಲಾ ಒಂದು ಸಾವಿರ ಅಂತ ಕಾರ್ಯಕ್ರಮಕ್ಕೆ ಹಾಕಿದರೆ ಆ ಹಣವನ್ನು ಒಂದು ಅಂಗಡಿ ತೆರೆಯಲು ಬಳಸಿದರೆ ಅಲ್ಲಿ ಒಂದು ಲಕ್ಷ ಬಂಡವಾಳ ಹುಟ್ಟಿತು! ತಲಾ 50 ಸಾವಿರ ಎಂದಾದರೆ ಎರಡು ಅಂಗಡಿ. ಹೀಗೆ ಬಂಡವಾಳ ಸಾಮರ್ಥ್ಯಕ್ಕನುಗುಣವಾಗಿ ಅಂಗಡಿ ಹೊಟೆಲ್ ತೆರೆಯಬಹುದು. ಹಾಗೆ ಆರಂಭದಲ್ಲಿ ಕಸ್ಟಮರ್ ಗಳು ದಲಿತರೇ ಆಗಬೇಕು ಬರುಬರುತ್ತ ಎಲ್ಲಾ ಜಾತಿಯವರು ಅಲ್ಲಿ ಬರುವಂತೆ ನೋಡಿಕೊಳ್ಳಬೇಕು. ಹೀಗೆ ಆದರೆ ಅಲ್ಲಿ ಒಂದು ಸಣ್ಣ ಚಳವಳಿ ಅರ್ಥಾತ್ ಬಿಸಿನೆಸ್ ಚಳುವಳಿ ಆರಂಭ ಆಗುತ್ತದೆ. ಹೀಗೆ ಇದು ರಾಜ್ಯಾದ್ಯಂತ ನಡೆದರೆ ದಲಿತ ಉದ್ಯಮಶೀಲತೆಯ ಪರಿಕಲ್ಪನೆ ಅದೇಕೆ ಯಶಸ್ಸು ಕಾಣುವುದಿಲ್ಲ?

ರಘೋತ್ತಮ ಹೊಬ

ಚಿಂತಕರು

More articles

Latest article