ಮೈಸೂರು: ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ವಂಚಿತರಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದು, ನಿನ್ನೆ ಅಲ್ಪಸಂಖ್ಯಾತ ಮುಖಂಡರೊಬ್ಬರ ನಿವಾಸದಲ್ಲಿ ತಡರಾತ್ರಿಯವರೆಗೆ ಸೇರ್ಪಡೆ ಕುರಿತ ಚರ್ಚೆ ನಡೆದಿರುವುದು ಬೆಳಕಿಗೆ ಬಂದಿದೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಮುನಿಸಿಕೊಂಡಿರುವ ಪ್ರತಾಪ್ ಸಿಂಹ, ಕಾಂಗ್ರೆಸ್ ಮುಖಂಡರ ಜೊತೆ ಸತತ ಸಂಪರ್ಕದಲ್ಲಿದ್ದು, ನಿನ್ನೆ ನಡೆದ ಸಭೆ ಇದಕ್ಕೆ ಪುಷ್ಠಿ ನೀಡಿದೆ.
ಪ್ರತಾಪ ಸಿಂಹ ಕಾಂಗ್ರೆಸ್ ಸೇರ್ಪಡೆಗೆ ಶಾಸಕ ತನ್ವೀರ್ ಸೇಠ್ ಸಹ ಸಹಮತ ವ್ಯಕ್ತಪಡಿಸಿದ್ದು, ಈ ಕುರಿತು ಮೈಸೂರು ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಕನ್ನಡ ಪ್ಲಾನೆಟ್ ಗೆ ತಿಳಿದುಬಂದಿದೆ.
ಪ್ರತಾಪ್ ಸಿಂಹ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಥವಾ ಬಿಡುವ ವಿಷಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಿಟ್ಟಿದ್ದು. ಅವರ ನಿರ್ಧಾರವೇ ಅಂತಿಮ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಕನ್ನಡ ಪ್ಲಾನೆಟ್ ಗೆ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಚ್ಚರಿಯ ಬದಲಾವಣೆ ಮಾಡಿದ್ದು, ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರ ಬದಲಿಗೆ ರಾಜವಂಶದ ಯದುವೀರ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಯದುವೀರ್ ಅವರ ಹೆಸರನ್ನು ಘೋಷಿಸುವುದಕ್ಕೂ ಮುನ್ನ ಪ್ರತಾಪ್ ಸಿಂಹ ಆಡಿದ ಮಾತುಗಳು ಪಕ್ಷದ ಹೈಕಮಾಂಡ್ ಕೆರಳುವಂತೆ ಮಾಡಿದೆ.
ಯದುವೀರ್ ಅವರಿಗೆ ಟಿಕೆಟ್ ಸಿಕ್ಕ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಿ ಪೋಸ್ಟ್ ಹಾಕಿದ್ದ ಪ್ರತಾಪ್ ಸಿಂಹ ನಾಳೆಯಿಂದಲೇ ಪ್ರಚಾರ ಆರಂಭಿಸೋಣ ಎಂದು ಹೇಳಿದ್ದರು. ಆದರೆ ಯದುವೀರ್ ಅವರು ಬಿಜೆಪಿಯ ಇತರ ನಾಯಕರೊಂದಿಗೆ ಈಗಾಗಲೇ ಪ್ರಚಾರ ಆರಂಭಿಸಿದ್ದು, ಪ್ರತಾಪ್ ಸಿಂಹ ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತಿಲ್ಲ.
ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರತಾಪ್ ಸಿಂಹ ಕಾಂಗ್ರೆಸ್ ಪಕ್ಷ ಸೇರಲು ಬಯಸುತ್ತಿದ್ದು, ಪಕ್ಷದ ಮುಖಂಡರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಪ್ರತಾಪ್ ಅವರು ಪಕ್ಷಕ್ಕೆ ಬರುವುದಾದರೆ ಬರಲಿ, ಆದರೆ ಲೋಕಸಭಾ ಅಭ್ಯರ್ಥಿ ಮಾಡುವುದು ಬೇಡ. ಕೆಲವು ವರ್ಷಗಳ ಕಾಲ ಅವರು ಪಕ್ಷದ ಕೆಲಸ ಮಾಡಲಿ. ಇದು ನಮ್ಮ ಅಭಿಪ್ರಾಯ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಕನ್ನಡ ಪ್ಲಾನೆಟ್ ಗೆ ತಿಳಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನೂ ತೀರ್ಮಾನವಾಗಿಲ್ಲ. ಪ್ರಖರ ವಾಗ್ಮಿ ಲಕ್ಷ್ಮಣ್ ಹಾಗು ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಅಚ್ಚರಿಯ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.