ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಸಂಜೆ 5.30ಕ್ಕೆ ಸಲ್ಲಿಸಿದ್ದು, ಮಾರ್ಚ್ 15ರಂದು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಸಂಪೂರ್ಣ ಮಾಹಿತಿ ಪ್ರಕಟಗೊಳ್ಳಲಿದೆ.
ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು SBI ಗೆ ನಿರ್ದೇಶನ ನೀಡಿತ್ತು. ಆದರೆ SBI ಮಾಹಿತಿ ನೀಡಲು ಜುಲೈವರೆಗೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಮಾಹಿತಿಗಳು ಸಿದ್ಧವಿರುವಾಗ ನ್ಯಾಯಾಲಯಕ್ಕೆ ನೀಡಲು ಕಾಲಾವಕಾಶ ಯಾಕೆ ಎಂದು ಪ್ರಶ್ನಿಸಿತ್ತು.
ಮಾರ್ಚ್ 12 (ಇಂದು)ರಂದು ಸಂಜೆಯೊಳಗೆ ಮುಗಿಯುವುದರೊಳಗೆ ಎಲ್ಲ ಮಾಹಿತಿಗಳನ್ನು ನೀಡಬೇಕು. ತಪ್ಪಿದಲ್ಲಿ SBI ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ದೇಶದ ಉನ್ನತ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಜೊತೆಗೆ ಚುನಾವಣಾ ಬಾಂಡ್ ವಿವರಗಳನ್ನು ಚುನಾವಣಾ ಆಯೋಗ ತನ್ನ ವೆಬ್ ಸೈಟ್ ನಲ್ಲಿ ಮಾರ್ಚ್ 15ರೊಳಗೆ ಪ್ರಕಟಿಸಬೇಕು ಎಂದು ತಾಕೀತು ಮಾಡಿತ್ತು.