ಹೊಸದಿಲ್ಲಿ: ರಷ್ಯಾ (russia) ಪ್ರವಾಸಕ್ಕೆ ಬಂದು ಮೋಸಕ್ಕೊಳಗಾದ ಯುವಕರು ರಷ್ಯಾ ಸೇನೆಯ ಕಪಿಮುಷ್ಠಿಗೆ ಸಿಲುಕಿ, ಉಕ್ರೇನ್ (ukrine) ವಿರುದ್ಧ ಯುದ್ದದಲ್ಲಿ ಪಾಲ್ಗೊಂಡು ತಮ್ಮನ್ನು ಬಿಡುಗಡೆ ಮಾಡಿ ಎಂದು ಭಾರತ ಸರ್ಕಾರವನ್ನು ಅಂಗಲಾಚುತ್ತಿರುವ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ರಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋದ ಏಜೆಂಟರು ವಂಚಿಸಿದ್ದರಿಂದ ರಷ್ಯಾ ಸೇನೆ ಪಾಲಾಗಿದ್ದ ಕೆಲ ಯುವಕರು ವಿಡಿಯೋ ಮಾಡಿ ಹರಿಬಿಟ್ಟ ನಂತರ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಯುವಕರ ಬಿಡುಗಡೆಗೆ ಪ್ರಯತ್ನ ಆರಂಭಿಸಿತ್ತು. ಈ ನಡುವೆ ಹೊಸ ವಿಡಿಯೋ ಒಂದು ಹೊರಗೆ ಬಂದಿದ್ದು, ಏಳು ಭಾರತೀಯ (Indian) ಯುವಕರು ತಮ್ಮನ್ನು ಕಾಪಾಡುವಂತೆ ಭಾರತ ಸರ್ಕಾರಕ್ಕೆ ಮೊರೆ ಹೋಗಿದ್ದಾರೆ.
ಭಾರತ ವಿದೇಶಾಂಗ ಇಲಾಖೆ ರಷ್ಯಾ ಸೈನ್ಯದಲ್ಲಿ ಬಲವಂತವಾಗಿ ಸೇರಿಸಲ್ಪಟ್ಟಿರುವ ಯುವಕರ ಬಿಡುಗಡೆಗೆ ಪ್ರಯತ್ನಗಳನ್ನು ನಡೆಸಿದ್ದು, ಸುಮಾರು 20 ಮಂದಿ ಯುವಕರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಿಡುಗಡೆ ಮಾಡಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದೆ. ಏತನ್ಮಧ್ಯೆ ಮತ್ತೆ ಏಳು ಜನರ ವಿಡಿಯೋ ಬಹಿರಂಗಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಏಳು ಮಂದಿ ರಷ್ಯಾ ಮಿಲಿಟರಿ ಸಮವಸ್ತ್ರದಲ್ಲಿರುವ ಯುವಕರು ಸೆಲ್ಫೀ ವಿಡಿಯೋವೊಂದನ್ನು ಮಾಡಿದ್ದು, ತಾವು ರಷ್ಯಾ ಸೇನೆ ಪಾಲಾಗಿದ್ದು ಹೇಗೆ ಎಂಬ ಕರುಣಾಜನಕ ಕಥೆಯನ್ನು ಹೇಳಿಕೊಂಡಿದ್ದರು. ಎಲ್ಲ ಕಿಟಕಿಗಳು ಮುಚ್ಚಿರುವ ಕೊಠಡಿಯೊಂದರಲ್ಲಿ ರಹಸ್ಯವಾಗಿ ಈ ವಿಡಿಯೋ ಮಾಡಿರುವುದು ತಿಳಿದುಬರುತ್ತದೆ.
ʻʻನಾವು ಡಿಸೆಂಬರ್ 27ರಂದು ರಷ್ಯಾ ಪ್ರವಾಸ ಮಾಡಲು ಬಂದಿದ್ದೆವು. ನಮ್ಮನ್ನು ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವುದಾಗಿ ಏಜೆಂಟನೊಬ್ಬ ನಂಬಿಸಿದ. ಹಲವು ಸ್ಥಳಗಳಿಗೆ ಹೋದ ನಂತರ ಆತ ನಮ್ಮನ್ನು ಬೆಲಾರಸ್ ಗೆ ಕರೆದೊಯ್ಯುವುದಾಗಿ ಹೇಳಿದ. ಬೆಲಾರಸ್ಗೆ ಹೋಗಲು ಅಲ್ಲಿನ ವೀಸಾ ಅಗತ್ಯವಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಬೆಲಾರಸ್ ಗೆ ಹೋದ ನಂತರ ನಾವು ಆತನಿಗೆ ಹಣ ಕೊಟ್ಟೆವು. ಆತ ಹೆಚ್ಚು ಹಣಕ್ಕಾಗಿ ಬೇಡಿಕೆ ಇಟ್ಟ. ಕೊನೆಗೆ ಆತ ಹೈ ವೇ ಒಂದರಲ್ಲಿ ನಮ್ಮನ್ನು ಬಿಟ್ಟು ಪರಾರಿಯಾದ.ʼʼ
ʻʻನಮ್ಮನ್ನು ಬೆಲಾರಸ್ ಪೊಲೀಸರು ಬಂಧಿಸಿ ರಷ್ಯನ್ ಸೈನ್ಯಕ್ಕೆ ಒಪ್ಪಿಸಿದರು. ರಷ್ಯನ್ ಸೈನಿಕರು ನಮ್ಮನ್ನು ನಾಲ್ಕು ದಿನಗಳ ಕಾಲ ಅಜ್ಞಾತ ಸ್ಥಳವೊಂದರಲ್ಲಿ ಕೂಡಿಹಾಕಿದರು. ನಂತರ ಅವರು ನಮ್ಮನ್ನು ಕಾಂಟ್ರಾಕ್ಟ್ ಒಂದಕ್ಕೆ ಸಹಿ ಮಾಡಲು ಹೇಳಿದರು. ಕಾಂಟ್ರಾಕ್ಟ್ ಪ್ರಕಾರ ನಮ್ಮನ್ನು ಸಹಾಯಕರು, ವಾಹನ ಚಾಲಕರು, ಅಡುಗೆ ಕೆಲಸದವರನ್ನಾಗಿ ಬಳಸಿಕೊಳ್ಳುವುದಾಗಿಯೂ , ಒಂದು ವೇಳೆ ಒಪ್ಪದೇ ಇದ್ದರೆ ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಕೂಡಿಹಾಕುವುದಾಗಿಯೂ ಬೆದರಿಸಿದರು. ಕಾಂಟ್ರಾಕ್ಟ್ ರಷ್ಯನ್ ಭಾಷೆಯಲ್ಲಿತ್ತು, ನಮಗೆ ಅದು ಅರ್ಥವಾಗಲಿಲ್ಲ. ಆದರೆ ನಾವು ಅನಿವಾರ್ಯವಾಗಿ ಅದಕ್ಕೆ ಸಹಿ ಹಾಕಿದೆವು. ನಂತರ ನಮಗೆ ಟ್ರೈನಿಂಗ್ ನೀಡಲು ಆರಂಭಿಸಿದರು. ಆಗ ನಮಗೆ ಅವರು ಮೋಸ ಮಾಡಿರುವುದು ಅರ್ಥವಾಯಿತು. ನಮ್ಮನ್ನು ರಷ್ಯನ್ ಸೇನೆಗೆ ಸೇರಿಸಲು ಟ್ರೈನಿಂಗ್ ನೀಡಲಾಗುತ್ತಿತ್ತು.ʼʼ
ʻʻ ನಮ್ಮನ್ನು ದಿಢೀರನೆ ಉಕ್ರೇನ್ ದೇಶಕ್ಕೆ ತಂದು ಬಿಡಲಾಯಿತು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ನಮ್ಮನ್ನು ಪಾಲ್ಗೊಳ್ಳುವಂತೆ ಮಾಡಲಾಯಿತು. ಈಗ ಅವರು ನಮ್ಮನ್ನು ಈ ಯುದ್ಧದಲ್ಲಿ ಫ್ರಂಟ್ ಲೈನ್ ನಲ್ಲಿ ನಿಂತು ಹೋರಾಡಲು ಹೇಳುತ್ತಿದ್ದಾರೆ. ನಾವು ಇದಕ್ಕೆ ಸಿದ್ಧರಿಲ್ಲ. ನಮಗೆ ಸರಿಯಾಗಿ ಗನ್ ಗಳನ್ನು ಹಿಡಿಯಲೂ ಬರುವುದಿಲ್ಲ. ಆದರೆ ಅವರು ನಮ್ಮನ್ನು ಯುದ್ಧದ ಮುಂದಿನ ಸಾಲಿನಲ್ಲಿ ಹೊಡೆದಾಡಲು ಹೇಳುತ್ತಿದ್ದಾರೆ. ಹೇಗಾದರೂ ನಮ್ಮನ್ನು ಕಾಪಾಡಿʼʼ ಎಂದು ಯುವಕರು ವಿಡಿಯೋದಲ್ಲಿ ಭಾರತ ಸರ್ಕಾರವನ್ನು ಅಂಗಲಾಚಿದ್ದಾರೆ.
ಈ ವಿಡಿಯೋ ಹೊರಬರುವುದಕ್ಕೂ ಮುನ್ನ ಕೆಲಸ ಹುಡುಕಿಕೊಂಡು ರಷ್ಯಾಗೆ ಹೋದವರು ಏಜೆಂಟರಿಂದ ಮೋಸ ಹೋಗಿ ರಷ್ಯಾ ಸೈನ್ಯದ ಪಾಲಾಗಿದ್ದು ಬಹಿರಂಗವಾಗಿತ್ತು. ಪಂಜಾಬ್, ಕಾಶ್ಮೀರ, ಕರ್ನಾಟಕ, ಗುಜರಾತ್ ಮತ್ತು ತೆಲಂಗಾಣದ ಏಳು ಯುವಕರು ತಮಗೆ ಆದ ಮೋಸವನ್ನು ಹೇಳಿಕೊಂಡಿದ್ದರು. ಇದೀಗ ರಷ್ಯ ಪ್ರವಾಸಕ್ಕೆ ಹೋದ ಯುವಕರು ಮೋಸ ಹೋಗಿರುವುದು ಬಯಲಿಗೆ ಬಂದಿದೆ.