ʻರಾಯ್‌ ಬರೇಲಿ ಕಾಯುತ್ತಿದೆ ನಿಮ್ಮನ್ನುʼ: ಪ್ರಿಯಾಂಕ ಗಾಂಧಿ ಲೋಕಸಭೆ ಸ್ಪರ್ಧೆಗೆ ವೇದಿಕೆ ಸಜ್ಜು

Most read

ರಾಯ್‌ ಬರೇಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉತ್ತರಪ್ರದೇಶದ ರಾಯ್‌ ಬರೇಲಿ ಈಗ ಕುತೂಹಲದ ಕೇಂದ್ರಬಿಂದುವಾಗಿದೆ. ಸತತ ಎರಡು ದಶಕಗಳ ಕಾಲ ರಾಯ್‌ ಬರೇಲಿಯನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಪ್ರಿಯಾಂಕ ಗಾಂಧಿಯವರೇ ಮುಂದಿನ ಅಭ್ಯರ್ಥಿಯಾಗಬೇಕು ಎಂಬ ಕೂಗು ಮೊಳಗುತ್ತಿದೆ.

ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕ ಗಾಂಧಿಯವರನ್ನು ರಾಯ್‌ ಬರೇಲಿಗೆ ಆಹ್ವಾನಿಸುವ ಪೋಸ್ಟರ್‌ ಗಳು ಎಲ್ಲೆಡೆ ಕಾಣಿಸುತ್ತಿದ್ದು, ʻರಾಯ್‌ ಬರೇಲಿ ನಿಮ್ಮನ್ನು ಕಾಯುತ್ತಿದೆʼ ಎಂಬ ಪ್ರೀತಿಯ ಆಹ್ವಾನವನ್ನು ಪೋಸ್ಟರ್‌ ಗಳಲ್ಲಿ ಬರೆಯಲಾಗಿದೆ.

ಪಕ್ಷವು ಈ ಬಾರಿ ಪ್ರಿಯಾಂಕ ಗಾಂಧಿಯವರಿಗೇ ಟಿಕೆಟ್‌ ನೀಡಿ ಸ್ಪರ್ಧೆಗೆ ಇಳಿಸಬೇಕೆಂದು ರಾಯ್‌ ಬರೇಲಿಯ ಕಾಂಗ್ರೆಸ್‌ ಮುಖಂಡರು ಆಗ್ರಹಿಸುತ್ತಿದ್ದಾರೆ

ರಾಯ್‌ ಬರೇಲಿ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದು, ಇದೇ ಕ್ಷೇತ್ರದಿಂದ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಪ್ರತಿನಿಧಿಸಿದ್ದರು. ಆದರೆ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರೋಧಿ ಅಲೆಯಿಂದಾಗಿ ಇಂದಿರಾಗಾಂಧಿ ಇದೇ ಕ್ಷೇತ್ರದಲ್ಲಿ ಕೇವಲ ಸೋಲನ್ನಪ್ಪಿದ್ದರು.

ಕಳೆದ ಎರಡು ದಶಕಗಳಿಂದ ಇಂದಿರಾಗಾಂಧಿಯವರ ಸೊಸೆ ಸೋನಿಯಾಗಾಂಧಿ ಸತತವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಪ್ರತಿಬಾರಿಯೂ ಭಾರೀ ಅಂತರದಿಂದಲೇ ಜಯ ಗಳಿಸುತ್ತಿದ್ದಾರೆ.

ಸೋನಿಯಾಗಾಂಧಿಯವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ, ರಾಯ್‌ ಬರೇಲಿಯ ಜನತೆಯ ಬೇಕುಬೇಡಗಳನ್ನೆಲ್ಲ ಕಳೆದ ಒಂದು ದಶಕದಿಂದ ಪ್ರಿಯಾಂಕ ಗಾಂಧಿಯವರೇ ನೋಡಿಕೊಂಡು ಬಂದಿದ್ದಾರೆ. ತಾಯಿಯ ಅನಾರೋಗ್ಯದ ಕಾರಣದಿಂದ ಚುನಾವಣೆಗಳ ಸಂದರ್ಭದಲ್ಲಿ ಪ್ರಿಯಾಂಕ ಅವರೇ ಪ್ರಚಾರದ ಹೊಣೆ ಹೊತ್ತುಕೊಂಡು ಬಂದಿದ್ದಾರೆ.

ಕಾಂಗ್ರೆಸ್‌ ಪಕ್ಷ ಇನ್ನೂ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ʻರಾಯ್‌ ಬರೇಲಿಯಲ್ಲಿ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಕ್ಕೆ ತೆಗೆದುಕೊಂಡುಹೋಗಬೇಕಾಗಿದೆ. ರಾಯ್‌ ಬರೇಲಿ ಕರೆಯುತ್ತಿದೆ, ಪ್ರಿಯಾಂಕ ಅವರೇ ದಯವಿಟ್ಟು ಬನ್ನಿ.ʼ ಎಂಬ ಪೋಸ್ಟರ್‌ ಗಳು ಈಗ ಕಾಣಿಸುತ್ತಿವೆ. ಪೋಸ್ಟರ್‌ ನಲ್ಲಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ, ಸೋನಿಯಾಗಾಂಧಿ ಮತ್ತು ಚಂದ್ರಶೇಖರ್‌ ಆಜಾದ್‌ ಅವರ ಚಿತ್ರಗಳನ್ನು ಬಳಸಲಾಗಿದೆ.

ಈ ನಡುವೆ ಬಿಜೆಪಿ ಸಹ ತನ್ನ ಮೊದಲ ಪಟ್ಟಿಯಲ್ಲಿ ರಾಯ್‌ ಬರೇಲಿಯ ಅಭ್ಯರ್ಥಿಯ ಹೆಸರನ್ನುಘೋಷಿಸಿಲ್ಲ. 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ಅಲೆಯ ನಡುವೆಯೂ ರಾಯ್‌ ಬರೇಲಿಯಲ್ಲಿ ಸೋನಿಯಾ ಗಾಂಧಿ ಗೆದ್ದು ಬಂದಿದ್ದರು. 2019ರಲ್ಲಿ ಬಿಜೆಪಿ ದಿನೇಶ್‌ ಪ್ರತಾಪ್‌ ಸಿಂಗ್‌ ಎಂಬುವವರನ್ನು ಕಣಕ್ಕಿಳಿಸಿತ್ತು. ಅವರು 1.60 ಲಕ್ಷ ಮತಗಳಿಂದ ಪರಾಭವಗೊಂಡಿದ್ದರು. ಈಗ ಉತ್ತರ ಪ್ರದೇಶ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದಿನೇಶ್‌, ಈ ಚುನಾವಣೆಯಲ್ಲಿ ಕಮಲ ಅರಳಿಸುವುದೇ ನನ್ನ ಗುರಿ. ಇದಕ್ಕಾಗಿ ನನ್ನ ಹೃದಯ, ದೇಹ, ಮನಸು ಮತ್ತು ಸಂಪತ್ತನ್ನೆಲ್ಲ ಖರ್ಚು ಮಾಡಲು ತಯಾರು ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮೂಡಿದೆ.2014ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕಿರುತೆರೆ ನಟಿ ಸ್ಮೃತಿ ಇರಾನಿ 2109ರಲ್ಲಿ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಲು ಯಶಸ್ವಿಯಾಗಿದ್ದರು.

More articles

Latest article