ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಿದೆ. ಸದ್ಯ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೂಲಿ ಕಾರ್ಮಿಕ ಪಾರಾಗಿದ್ದಾನೆ. ಕಾಡಾನೆಗಳ ಹಾವಳಿಯ ಘಟನೆಯೊಂದು ನಡೆದಿದ್ದು ಸಿಸಿಟವಿ ದೃಶ್ಯ ಎದೆ ನಡುಗಿಸುವಂತಿದೆ.
ಮಲೆನಾಡಿನ ರೈತರಿಗೆ ಆತಂಕವನ್ನು ತಂದಿಟ್ಟಿರುವ ಕಾಡಾನೆ ‘ಕರಡಿ‘ ಈ ದಾಳಿ ಮಾಡಿದೆ. ಕೆಸಗುಲಿ ಗ್ರಾಮದ ಪಿಂಟು ಎಸ್ಟೇಟ್‌ನ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರ ಗಮನಕ್ಕೆ ಬಾರದಂತೆ ಸಮೀಪಿಸಿದ ಕರಡಿ, ಏಕಾಏಕಿ ದಾಳಿ ನಡೆದಿದೆ. ತಕ್ಷಣ ಎಚ್ಚೆತ್ತ ಕೆಲಸಗಾರರು ಓಡಿದ್ದಾರೆ. ಅವರಲ್ಲಿ ಒಬ್ಬನ ಬೆನ್ನು ಹತ್ತಿದ ಆನೆ ಸೊಂಡಲು ಬೀಸಿದ್ದು, ಒಬ್ಬ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ನಂತರ ಇನ್ನೊಬ್ಬನ ಮೇಲೆ ದಾಳಿ ಮಾಡಿದ ‘ಕರಡಿ‘ ಆತನನ್ನು ಅಟ್ಟಿಸಿಕೊಂಡು ಹೋಗಿದೆ. ಆತ ಓಡಿ ಮನೆಯೊಳಗೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗೆ ಮಲಗಿ ಪಾರಾಗಿದ್ದಾನೆ.
ಇದೇ ಆನೆ ಜ.4 ರಂದು ಬೇಲೂರು ತಾಲ್ಲೂಕಿನ ಮತ್ತಾವರದಲ್ಲಿ ವಂಸತ್ ಎಂಬುವವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಹದಿನೈದು ದಿನಗಳ ಹಿಂದೆ ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ದಾಳಿ ಮಾಡಿತ್ತು.