ಬೆಳಗಾವಿ : ಮಚ್ಚೆ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿ ನೀಡಿದ ಕಳಪೆ ಆಹಾರ ಸೇವಿಸಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ನಿರಾಶ್ರಿತ ಮಲ್ಲಿಕಾರ್ಜುನ ಅವರು ಕಿನೆಯ ಜವಾಹರಲಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಿನವೇ ನಾಪತ್ತೆಯಾಗಿ ಮರುದಿನ ನೇಸರಗಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಫುಡ್ ಪಾಯಿಸನ್ ಆಗಿ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಅವರನ್ನು ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕ ಮಲ್ಲಪ್ಪ ಮೇಗಡೆ ಆಸ್ಪತ್ರೆಗೆ ದಾಖಲಿಸಿದ್ದರು. ಮಲ್ಲಿಕಾರ್ಜುನ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ, ಈ ಹಿಂದೆಯೇ ಕೇಂದ್ರದ ನಿರಾಶ್ರಿತರ ಮೇಲೆ ದೌರ್ಜನ್ಯ, ಅನೇಕ ಅವ್ಯವಹಾರ, ಕಳಪೆ ಆಹಾರ ನೀಡುವ ಆರೋಪಗಳನ್ನು ಎದುರಿಸುತ್ತಿದ್ದ ಅಧಿಕಾರಿ ಮೇಗಡೆ ಮಲ್ಲಿಕಾರ್ಜುನ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಬೆಳಗಾವಿ ಬಸ್ ನಿಲ್ದಾಣದಿಂದ ನೇಸರಗಿ ಬಸ್ ಹತ್ತಿಸಿ ಕಳುಹಿಸಿದ್ದಾರೆ. ತೀವ್ರ ಅನಾರೋಗ್ಯದ ಸ್ಥಿತಿಯಲ್ಲೇ ಅಲ್ಲಿಂದ ಹೊರಟ ನಿರಾಶ್ರಿತ ಮಲ್ಲಿಕಾರ್ಜುನ ಮಾರನೇ ದಿನ ನೇಸರಗಿ ಬಸ್ ನಿಲ್ದಾಣದಲ್ಲೇ ಅಸು ನೀಗಿದ್ದಾರೆ ಎಂದು ಯುವ ಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರವೀಣ್ ಆರ್. ಮಾದರ್ (ಚಳುವಳಿ ಪ್ರವೀಣ) ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಚಳುವಳಿ ಪ್ರವೀಣ ಅವರು ಸಂಘಟನೆಯ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಈ ಬ್ರಷ್ಟ, ಕೊಲೆಗಡುಕ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು. ಇಲ್ಲವಾದರೆ ರಾಜ್ಯದ ಎಲ್ಲ ದಲಿತ ಸಂಘಟನೆಗಳ ಬೆಂಬಲದೊಂದಿಗೆ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಜೆಡಿ ನವೀನ ಶಿಂತ್ರೆ ಅವರು ಈ ಘಟನೆಯ ಕುರಿತು ಮೇಲಾಧಿಕಾರಿಗಳಿಗೆ ತಕ್ಷಣ ವರದಿ ಕಳಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ.
ನಿರಾಶ್ರಿತರ ಪಾಲಿಗೆ ಯಮನಂತಿರುವ ಅಧೀಕ್ಷಕ ಮೇಗಡೆ
ಸಮಾಜ ಕಲ್ಯಾಣ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ನಡೆಸುವ ನಿರಾಶ್ರಿತರ ಕೇಂದ್ರದಲ್ಲಿ ಕಳೆದ 13 ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರ ಅಧೀಕ್ಷಕ ಮಲ್ಲಪ್ಪ ಮೇಗಡೆ ಅಲ್ಲಿನ ನಿರಾಶ್ರಿತರ ಪಾಲಿಗೆ ಯಮನೇ ಆಗಿದ್ದಾನೆ. ಕೇಂದ್ರದಲ್ಲಿ ಈ ಅಧಿಕಾರಿಯ ದೌರ್ಜನ್ಯ ಮೇರೆ ಮೀರಿದ್ದು. ಯಾರೂ ದಿಕ್ಕಿಲ್ಲದ ನಿರಾಶ್ರಿತರ ಮೇಲೆ ಕಿರುಕುಳ, ಬೈಗುಳ, ಹೊಡೆತ, ಜೀವಬೆದರಿಕೆಗಳು ಸಾಮಾನ್ಯವಾಗಿ ಹೋಗಿವೆ. ಕೇಂದ್ರದ ಎಲ್ಲ ಕೆಲಸಗಳಿಗೂ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಹಣ ನೀಡಿದರೂ ಆ ಎಲ್ಲ ಕೆಲಸಗಳನ್ನು ಕೃಷರಾದ ನಿರಾಶ್ರಿತರಿಂದ ಮಾಡಿಸುತ್ತಾನೆ. ಶೇವಿಂಗ್ ಕಟಿಂಗ್ ಗಾಗಿ ಪ್ರತಿ ನಿರಾಶ್ರಿತನಿಗೆ ಬರುವ 70 ರೂ. ಗಳನ್ನು ಸಹ ನುಂಗುತ್ತಿದ್ದಾನೆ.
ನಿರಾಶ್ರಿತರಿಗೆ ಕೊಡುವ ಆಹಾರವಂತೂ ತೀರಾ ನಿಕೃಷ್ಟವಾಗಿದೆ. ಇದರಿಂದಾಗಿ ಕೇಂದ್ರದ ಅನೇಕ ನಿರಾಶ್ರಿತರು ಆಗಾಗ್ಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಂಘಟನೆಯ ವತಿಯಿಂದ ಇಂತಹ ಅವ್ಯವಹಾರವನ್ನು ನಡೆಸದಂತೆ ಅಧಿಕಾರಿಗೆ ಸಾಕಷ್ಟು ಸಲ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. ಈಗ ಒಬ್ಬ ನಿರಾಶ್ರಿತನ ಸಾವಿಗೆ ಕಾರಣನಾಗಿದ್ದಾನೆ ಎಂದು ಚಳುವಳಿ ಪ್ರವೀಣ ಅವರು ನೊಂದು ನುಡಿದಿದ್ದಾರೆ.