ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2024
ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದ ಹನ್ನೆರಡನೆಯ ಸಮಾವೇಶ ಉಡುಪಿಯಲ್ಲಿ ಮಾರ್ಚ್8 ಮತ್ತು9 ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಕುರಿತು ಅವಲೋಕನವಿದು. ಒಕ್ಕೂಟದ ಸಕ್ರಿಯ ಸದಸ್ಯೆ ಹಾಗೂ ಬಿಜಾಪುರದ ಅಕ್ಕಮಹಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಸಬಿಹಾ ಭೂಮೀಗೌಡರು ಒಕ್ಕೂಟ ನಡೆದು ಬಂದ ಹಾದಿಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಒಕ್ಕೂಟದ ಆರಂಭವು ಸಮಕಾಲೀನ ಸಮಾಜದ ಮಹಿಳಾ ವಿರೋಧೀ ಚಟುವಟಿಕೆಗಳಿಗೆ ಪ್ರತಿಕ್ರಿಯೆ ರೂಪವಾಗಿ ಹುಟ್ಟಿಕೊಂಡಿತು. 2012 ರಲ್ಲಿ ಕರಾವಳಿ ಕರ್ನಾಟಕವು ‘ಅನೈತಿಕ ಪೋಲಿಸ್‌ಗಿರಿ’ ಎಂಬ ಹಿಂದುತ್ವವಾದಿ ಪುಂಡರ ಗುಂಪಿನ ಆಕ್ರಮಣದಿಂದ ನಲುಗಿತ್ತು. ಶಾಲೆ-ಕಾಲೇಜು, ಹೊಟೇಲು. ಸಮುದ್ರತೀರ, ಸಿನಿಮಾ ಥಿಯೇಟರ್, ಪಾರ್ಕು, ಪ್ರವಾಸ ಹೀಗೆ ವಿವಿಧ ಸಾರ್ವಜನಿಕ ಜಾಗಗಳಲ್ಲಿ ಭಿನ್ನ ಸಮುದಾಯಗಳ ಯುವಕ-ಯುವತಿಯರು ಒಟ್ಟು ಸೇರುವುದನ್ನು ನಿಷೇಧಿಸುತ್ತ, ಹಾಗೆ ಸೇರಿದವರನ್ನು ಹಿಡಿದು ತದುಕಿ, ಬಲವಂತದಿಂದ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು, ಅವರ ಹೆತ್ತವರನ್ನು ಠಾಣೆಗೆ ಕರೆಯಿಸಿ, ನೀತಿಪಾಠಗಳನ್ನು ಹೇಳುತ್ತಿದ್ದ ಕಾಲವದು. ಇದರ ಭಾಗವಾಗಿಯೇ ಪಬ್ ಒಂದರಲ್ಲಿ ಕುಡಿಯುತ್ತ ಕುಳಿತಿದ್ದರೆಂದು ಧಾಳಿ ನಡೆಸಿ, ದಾಂಧಲೆ ಎಬ್ಬಿಸಿ ಯುವಕರನ್ನು ಮನಬಂದಂತೆ ಥಳಿಸಿದ್ದರು. ಅದಾದ ಬಳಿಕ ಮಂಗಳೂರಿನ ಹೋಂಸ್ಟೇ ಒಂದರಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ-ಯುವತಿಯರ ಗುಂಪಿನ ಮೇಲೆ ಅದೇ ಹಿಂದುತ್ವವಾದಿ ಪುಂಡರ ಗುಂಪಿನವರು ಧಾಳಿ ಮಾಡಿ, ಯುವತಿಯರ ಮೇಲೆ ದೈಹಿಕ ಹಲ್ಲೆ ನಡೆಸಿದರು. ಒಟ್ಟಿನಲ್ಲಿ ಹೆತ್ತವರು ಶಾಲಾ ಕಾಲೇಜಿಗೆ ಹೋದ ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಿ ಬಂದಾರೇ ಎಂದು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. 2012 ರ ಡಿಸೆಂಬರ್ ಕೊನೆಯಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವು ನಮ್ಮೆಲ್ಲರ ಸಹನೆಯ ಕಟ್ಟೆಯನ್ನು ಒಡೆದು, ಬಡಿದೆಬ್ಬಿಸಿತು.
ಆಗ ಪ್ರತಿರೋಧದ ನೆಲೆಯಲ್ಲಿ ಹುಟ್ಟಿಕೊಂಡದ್ದೇ ‘ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆ’. ಹೋಂಸ್ಟೇ ಘಟನೆಯ ಸತ್ಯಶೋಧನೆ ನಡೆಸುವುದು, ಸಾಮಾಜಿಕರ ಪ್ರಜ್ಞೆಯನ್ನು ಜಾಗೃತಗೊಳಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿತ್ತು. ಸ್ಥಳೀಯ ಮಹಿಳಾ ಮತ್ತು ಮಹಿಳಾಪರ ಸಂಘಟನೆಗಳ ಈ ಕೆಲಸಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳ ಸಮಾನ ಮನಸ್ಕ ಗೆಳತಿಯರು ಸ್ಪಂದಿಸಿ ಕೈಜೋಡಿಸಿ, ಅವರ ಕನಸಿಗೆ ನೀರೆರೆದುದು ಮಾತ್ರವಲ್ಲ, ಅದನ್ನು ವಿಸ್ತಾರ ಗೊಳಿಸಿದರು. ಅದರ ಫಲವಾಗಿ 2013 ರ ಮಾರ್ಚ್ 7-8 ಬೃಹತ್ ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಆಗ ‘ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆ’ಯನ್ನು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ’ವೆಂದು ವಿಸ್ತರಿಸಲಾಯಿತು.
ಸಮಾನ ಮನಸ್ಕ ಕರ್ನಾಟಕದ ಎಲ್ಲ ಸಂಘಟನೆಗಳವರೂ ಈ ಕಾರಣಕ್ಕೆ ಒಗ್ಗೂಡಿ, ಗಟ್ಟಿ ದನಿಯಾಗಿ ರೂಪುಗೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಆರಂಭದಿಂದಲೇ ಮಹಿಳಾ ದಿನಾಚರಣೆಯ ಕಾರ‍್ಯಕ್ರಮವನ್ನು ಮೂರು ನೆಲೆಗಳಲ್ಲಿ ಯೋಜಿಸಿಕೊಂಡೆವು. ಯುವಜನತೆಯನ್ನು ತಲುಪಲು ಒಂದು ದಿನದ ವಿಚಾರ ಸಂಕಿರಣದ ಆಯೋಜನೆ, ಮಹಿಳೆಯರು ಯುದ್ಧ ವಿರೋಧಿಗಳು ಮತ್ತು ಶಾಂತಿಪ್ರಿಯರೆಂದು ಸಾರುವ ಕಪ್ಪು ಉಡುಗೆಯಲ್ಲಿ ಮಹಿಳೆಯರು ಸಾರ್ವಜನಿಕ ಜಾಗದಲ್ಲಿ ಮೌನವಾಗಿ ನಿಂತು ಪ್ರತಿಭಟನೆ ನಡೆಸುವ ಕಾರ್ಯಕ್ರಮ ಹಾಗೂ ಎಲ್ಲ ಸಮಾನ ಮನಸ್ಕ ಸಂಘಟನೆಗಳು, ಯುವ ಸಮೂಹ, ವಿದ್ಯಾರ್ಥಿಗಳು, ನಾಗರಿಕರನ್ನು ಒಳಗೊಂಡ ಬೃಹತ್ ಸಾರ್ವಜನಿಕ ಸಮಾವೇಶವನ್ನು ಆಯೋಜಿಸುವುದು 2013 ರಿಂದ ತಪ್ಪದೆ ನಡೆದುಕೊಂಡು ಬಂದಿದೆ.
2017 ರಿಂದ ಲಿಂಗತ್ವ ಸೂಕ್ಷ್ಮತೆಯ ತರಬೇತಿಯನ್ನು ಒಕ್ಕೂಟದ ಚಟುವಟಿಕೆಯಾಗಿ ಸೇರಿಸಿಕೊಂಡಿದ್ದೇವೆ. ಇದರಿಂದ ಲಕ್ಷಾಂತರ ಜನರನ್ನು ಇದುವರೆಗೆ ತಲುಪಲು ಸಾಧ್ಯವಾಗಿದೆ. ಸಮಸಮಾಜ ಮತ್ತು ಲಿಂಗತ್ವ ಸಮಾನತೆಯ ಸಮಾಜ ಕಟ್ಟಲು ಇಂಥ ಚಟುವಟಿಕೆಗಳು ಪೂರಕವಾಗಿವೆ. ಅರಿವಿನ ಪಯಣವಲ್ಲದೆ, ಅಧ್ಯಯನ ಶಿಬಿರ, ಅಧ್ಯಯನ ಪ್ರವಾಸವನ್ನು ಪ್ರತಿ ವರ್ಷ ನಡೆಸುತ್ತೇವೆ. ಗೆಳತಿಯರು ಒಂದೆಡೆ ಸೇರಿ ಕೌದಿ ಹೊಲಿಯುತ್ತ ಅನೇಕ ವಿಚಾರಗಳನ್ನು ಕಲಿಯುವ, ತಿಳಿಸುವ ಕಾರ‍್ಯಕ್ರಮ ನಡೆಸುವುದು ಮತ್ತು ಹೀಗೆ ಹೊಲಿದ ಕೌದಿಯನ್ನು ಸಮಾವೇಶದ ಅತಿಥಿಗಳಿಗೆ ನೀಡುವುದು ಕೂಡ ನಿರಂತರ ನಡೆದುಕೊಂಡು ಬಂದಿದೆ. ಸಮಾವೇಶದ ಬಳಿಕ ತಪ್ಪದೆ ಸ್ಮೃತಿ ಸಂಚಯ ಹೊತ್ತಗೆಯನ್ನು ಪ್ರತಿ ವರ್ಷ ತರಲಾಗುವುದು. ಕೊರೋನಾ ಕಾಲದಲ್ಲಿ ಆನ್ ಲೈನ್ ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಕಾರ್ಯನಿರ್ವಹಿಸಿದ್ದೂ ಇದೆ. ಬಹುಮುಖ್ಯವಾಗಿ ಎಲ್ಲ ಬಗೆಯ ಸಾಮಾಜಿಕ ಹೋರಾಟಗಳಿಗೆ ಒಕ್ಕೂಟವು ದನಿಗೂಡಿಸಿದೆ.
ಇದುವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲ್ಬುರ್ಗಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇಂಥ ಸಮಾವೇಶಗಳನ್ನು ಒಕ್ಕೂಟವು ನಡೆಸಿದೆ. ಇಂಥ ಸಂದರ್ಭಗಳಲ್ಲಿ ಭಾರತದ ವಿವಿಧ ರಾಜ್ಯಗಳ ಮಹಿಳಾ ಚಳುವಳಿಯ ನಾಯಕಿಯರನ್ನು ಸಮಾವೇಶಕ್ಕೆ ಕರೆಸುತ್ತ ಬಂದಿದ್ದೇವೆ. ದೇಶದ ವಿವಿಧ ಭಾಗಗಳ ಮಹಿಳಾ ಹೋರಾಟಗಾರ್ತಿಯರ ನಡುವೆ ಬಾಂಧವ್ಯ ಇದರಿಂದ ಬೆಳೆಯಲು ಸಾಧ್ಯವಾಗಿದೆ; ಅವರೂ ಕರ್ನಾಟಕದ ಮಹಿಳಾ ಹೋರಾಟಗಳನ್ನು ಅವರ ಊರಿಗೆ ಪಸರಿಸಲು ಇದರಿಂದ ಸಾಧ್ಯ. ನಿದರ್ಶನಕ್ಕೆ ಮಂಗಳೂರಿನ ಮೊದಲ ಸಮಾವೇಶವನ್ನು ರಾಜಸ್ತಾನದ ಸಾಥಿನ್ ಭಾಂವ್ರಿದೇವಿ ಅವರು ಉದ್ಘಾಟಿಸಿದರು. ತನ್ನ ಕರ್ತವ್ಯದ ಭಾಗವಾಗಿ ಬಾಲ್ಯವಿವಾಹವನ್ನು ತಡೆದ ತಪ್ಪಿಗೆ ಆಕೆಗೆ ಊರಿನ ಉಳ್ಳವರು ಸಾಮೂಹಿಕ ಅತ್ಯಾಚಾರದಂಥ ಘೋರ ಶಿಕ್ಷೆಯನ್ನು ನೀಡಿದರು. ಆದರೆ ಭಾಂವ್ರಿದೇವಿ ಎದೆಗುಂದದೆ ಇಂದಿಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ದಿಟ್ಟ ಮಹಿಳೆ.
ಮೈಸೂರಿನ ಸಮಾವೇಶವನ್ನು ಮಣಿಪುರದಲ್ಲಿ ಸೈನಿಕರಿಗೆ ನೀಡಿದ ವಿಶೇಷಾಧಿಕಾರವನ್ನು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟಿಸಿದ ಇಮಾ ನಾನ್ಬಿ, ಚಿತ್ರ ಅಹೆಂತಮ್, ರೇಣು ತಕಲೆಂಬಂ ಅವರುಗಳು ಉದ್ಘಾಟಿಸಿದರು. ಭೂಪಾಲ್ ಅನಿಲ ದುರಂತದ ವಿರುದ್ಧ ಮತ್ತು ಅದರ ಸಂತ್ರಸ್ತರ ಪರವಾಗಿ ಇಂದಿಗೂ ಹೋರಾಡುತ್ತಿರುವ ರಶೀದಾಬಿ ಮತ್ತು ಚಂಪಾದೇವಿ ಶುಕ್ಲಾ ಅವರು ಬೆಂಗಳೂರಿನ ಸಮಾವೇಶದ ಅತಿಥಿಗಳಾಗಿದ್ದರು. ಇದೇ ರೀತಿಯಲ್ಲಿ ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ ಮೇಧಾ ಪಾಟ್ಕರ್, ಕವಿತಾ ಕೃಷ್ಣನ್, ತೆಲಂಗಾಣದ ಗೋಗು ಶ್ಯಾಮಲಾ, ಸ್ವತಹ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ, ಅಲ್ಲಿಂದ ಸಿಡಿದೆದ್ದು, ಲಾ ಪದವಿ ಓದಿ ವಕೀಲೆಯಾಗಿ, ಇಂದು ಮುಂಬೈನಲ್ಲಿ ದೌರ್ಜನ್ಯಕ್ಕೆ ಒಳಗಾದ ಸಾವಿರಾರು ಮಹಿಳೆಯರಿಗೆ ಅಭಯ ನೀಡುವ ಕೆಲಸದಲ್ಲಿ ತೊಡಗಿರುವ ಫ್ಲೇವಿಯಾ ಆ್ಯಗ್ನೇಸ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಕಾರ್ಯದರ್ಶಿಯಾದ ಅರ‍್ಜಿತ್ ಕೌರ್, ಮಹಿಳಾಪರ ಹೋರಾಟಗಾರ್ತಿ ದೆಹಲಿಯ ಶಬ್ನಂ ಹಶ್ಮಿ, ತೆಲುಗು ಕವಿ, ದಲಿತ ಮತ್ತು ಜನಪರ ಹೋರಾಟಗಾರ್ತಿ ಜೂಪಕ ಸುಭದ್ರ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಸಂಚಾಲಕರಾದ ಮರಿಯಂ ಧವಳೆ, ಕೇರಳದ ಮಾಜಿ ಆರೋಗ್ಯ ಸಚಿವರಾಗಿ ತಮ್ಮ ಕರ್ತವ್ಯಪ್ರಜ್ಞೆಯಿಂದ ದೇಶಕ್ಕೇ ಮಾದರಿಯಾಗಿದ್ದ ಕಾಮ್ರೇಡ್ ಕೆ.ಕೆ. ಶೈಲಜಾ ಮತ್ತು ಮುಂಬೈನ ವಿಹಾನ್(ಟ್ರಾನ್ಸ್ ಮ್ಯಾನ್) ಮುಂತಾದವರು ಹಿಂದಿನ ವಿವಿಧ ಜಿಲ್ಲಾ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ ಎನ್ನುವುದು ಒಂದು ಸಂಘವಲ್ಲ; ಸಂಘಟನೆಯಲ್ಲ; ಇದಕ್ಕೆ ಪದಾಧಿಕಾರಿಗಳೂ ಇಲ್ಲ. ಇದು ಸಮಾನ ಮನಸ್ಕ ಜನರ ಮತ್ತು ಸಂಘಟನೆಗಳ ಒಂದು ಜಾಲ. ಪ್ರಜಾಸತ್ತಾತ್ಮಕವಾಗಿ ನಿರ್ಣಯಗಳನ್ನು ಕೈಗೊಂಡು, ಒಕ್ಕೂಟವು ಕಾರ್ಯ ನಿರ್ವಹಿಸುತ್ತಿದೆ. ಒಕ್ಕೂಟ ತನ್ನದೇ ಆದ ಸಂವಿಧಾನವನ್ನೂ ರಚಿಸಿಕೊಂಡಿದೆ. ಪ್ರತಿಬಾರಿ ಜನರಿಂದ ದೇಣಿಗೆ ಸಂಗ್ರಹಿಸಿ, ಕಾರ್ಯಕ್ರಮವಾದ ಕೆಲವೇ ದಿನಗಳಲ್ಲಿ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಲಾಗುತ್ತದೆ. ಜೀವವಿರೋಧೀ ವ್ಯಕ್ತಿ, ಸಂಘಟನೆ, ಶಕ್ತಿಗಳಿಂದ ಹಣ ಸ್ವೀಕರಿಸದಿರುವುದು, ಕೊಡುವವರಿದ್ದಾರೆಂದು ನಿಗದಿತ ಮೊತ್ತಕ್ಕಿಂತ ಹೆಚ್ಚು ದೇಣಿಗೆ ಒಬ್ಬರಿಂದ ಪಡೆಯದಿರುವುದು ಒಕ್ಕೂಟದ ಮುಖ್ಯ ನಿಯಮವಾಗಿದೆ. ಸಂದರ್ಭ- ಸನ್ನಿವೇಶಗಳಿಗೆ ಅನುಗುಣವಾಗಿ ಒಕ್ಕೂಟದ ಆದ್ಯತೆಗಳು, ಕಾರ್ಯಸ್ವರೂಪಗಳು ವಿನ್ಯಾಸಗೊಳ್ಳುತ್ತವೆ. ಸುಮಾರು ೧೫೦ಕ್ಕೂ ಹೆಚ್ಚು ಕರ್ನಾಟಕದ ಪ್ರಗತಿಪರ, ಜೀವಪರ, ಮಹಿಳಾಪರ ಮತ್ತು ಮಹಿಳೆಯರ ಸಂಘಗಳು ಒಕ್ಕೂಟದ ಜೊತೆ ಕೈಜೋಡಿಸಿವೆ. ದಲಿತ-ದಮನಿತರ ಸಂಘಟನೆಗಳು, ಎಡಪಂಥೀಯ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರ, ಪೌರಕಾರ್ಮಿಕರ ಸಂಘಟನೆಗಳು, ಗಾರ್ಮೆಂಟ್ಸ್, ಮನೆಕೆಲಸದ ಕಾರ್ಮಿಕ ಸಂಘಟನೆಗಳು, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳು ಒಕ್ಕೂಟದ ಸಹಭಾಗಿಗಳಾಗಿದ್ದಾರೆ. ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು, ಅಕಾಡೆಮಿಕ್ ವಲಯದವರೂ ಒಕ್ಕೂಟದೊಂದಿಗಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆ ಇರುವ, ದ್ವೇಷ ರಾಜಕಾರಣದ ಬದಲು ಪ್ರೀತಿಯ ರಾಜಕಾರಣದಲ್ಲಿ ನಂಬಿಕೆ ಇರುವ ಎಲ್ಲರೂ ಒಕ್ಕೂಟದ ಸದಸ್ಯರಾಗಬಹುದು. ಇದಕ್ಕೆ ಸದಸ್ಯತ್ವ ಶುಲ್ಕವೂ ಇಲ್ಲ.
ಉಡುಪಿಯ ಈ ಬಾರಿಯ ನಮ್ಮ ಘೋಷವಾಕ್ಯ : ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ
ಮದರಾಸು ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿರುವ, ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಲೇಖಕಿ ಮತ್ತು ವಾಗ್ಮಿಯಾಗಿರುವ ಎ. ಅರುಳ್ ಮೌಳಿ ಅವರು ಮಾರ್ಚ್ 8 ರಂದು ನಡೆಯಲಿರುವ ಮಹಿಳಾ ಪ್ರಾತಿನಿಧ್ಯ ; ಆದರ್ಶ ಮತ್ತು ವಾಸ್ತವ ವಿಚಾರ ಸಂಕಿರಣದ ದಿಕ್ಸೂಚಿ ಭಾಷಣಕಾರರಾಗಿ ಬರಲಿದ್ದಾರೆ.
ಸಿಕಂದರಾಬಾದಿನಲ್ಲಿ ವಾಸಿಸುತ್ತಿರುವ ಉದಯೋನ್ಮುಖ ರಾಜಕಾರಣಿ ಡಾ. ಜಿ. ವಿ. ವೆನ್ನೆಲ ಗದ್ದರ್ ಅವರು ಮಾರ್ಚ್ 9 ರಂದು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ದೀರ್ಘಕಾಲದಿಂದ ದುಡಿಯುತ್ತಿರುವ ಸಭಾ ನಖ್ವಿ ಅವರು ಸಮಾವೇಶದಲ್ಲಿ ಮಾತನಾಡಲು ದೆಹಲಿಯಿಂದ ಬರುತ್ತಿದ್ದಾರೆ. ಬನ್ನಿ ಎಲ್ಲರೂ ಉಡುಪಿಯಲ್ಲಿ ಸೇರೋಣ, ಮಹಿಳಾ ಚೈತನ್ಯ ದಿನವನ್ನು ಅರ್ಥಪೂರ್ಣವಾಗಿಸೋಣ.
ಸಬಿಹಾ ಭೂಮೀಗೌಡ
ಮಹಿಳಾ ದೌರ್ಜನ್ಯ ವಿರೋಧೀ ವೇದಿಕೆ
ಇದನ್ನೂ ಓದಿ- ಸಂಸ್ಕೃತಿ ಮತ್ತು ದೇಹ ರಾಜಕಾರಣ