ಚೆನ್ನೈ, ನ. 28 : ಕ್ಷೇತ್ರ ಮರುವಿಂಗಡಣೆ ಮಸೂದೆಯಲ್ಲಿ ಡಿಎಂಕೆ ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ, ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಮಂಡಿಸುವಂತೆ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ. ಇದರಿಂದ ಮುಂದಿನ 25 ವರ್ಷಗಳ ಕಾಲ ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯವನ್ನು ರಕ್ಷಿಸಿದಂತಾಗಿದೆ ಎಂದು ಹೇಳಿದ್ದಾರೆ.
ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ಲೋಕಸಭೆಯಲ್ಲಿ ತಮಿಳುನಾಡಿಗೆ ಈಗಿರುವ ಶೇ.7.18ರಷ್ಟು ಸ್ಥಾನಗಳ ಪಾಲನ್ನು ಕಡಿತಗೊಳಿಸಬಾರದು ಹಾಗೂ ಒಟ್ಟು ಸ್ಥಾನಗಳ ಸಂಖ್ಯೆ ಹೆಚ್ಚಾದರೂ 1971ರ ಜನಗಣತಿ ಆಧಾರಿತ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಮುಂದುವರಿಸಬೇಕು ಎಂಬ ಎರಡು ಬೇಡಿಕೆಗಳನ್ನು ಮಸೂದೆಯ ಕರಡಿನಲ್ಲಿ ಸೇರಿಸಲಾಗಿದೆ. ಇದು ಪಕ್ಷದ ಮೂರು ವರ್ಷಗಳ ನಿರಂತರ ಹೋರಾಟಕ್ಕೆ ಸಂದ ಜಯ ಎಂದು ತಿಳಿಸಿದರು.
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯನ್ನು ಡಿಎಂಕೆ ಮೊದಲೇ ಗುರುತಿಸಿ ಧ್ವನಿ ಎತ್ತಿತ್ತು. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು 2024ರ ಫೆಬ್ರವರಿ 14ರಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ಅವರು ಸ್ಮರಿಸಿದರು.
ಹಿಂದಿನ ಮಸೂದೆಯನ್ನು ಕೇಂದ್ರ ಸರ್ಕಾರ ಸಮರ್ಪಕ ಚರ್ಚೆ ಹಾಗೂ ಸಂಸದರಿಗೆ ಪರಿಶೀಲನೆಗೆ ಸಾಕಷ್ಟು ಕಾಲಾವಕಾಶ ನೀಡದೆ ಏಕಪಕ್ಷೀಯವಾಗಿ ಮಂಡಿಸಿತ್ತು ಎಂದು ಸ್ಟಾಲಿನ್ ಆರೋಪಿಸಿದರು. ಡಿಎಂಕೆ ಧ್ವನಿ ಎತ್ತದಿದ್ದರೆ ಜನಸಂಖ್ಯೆ ಆಧಾರದ ಮೇಲೆ ಉತ್ತರದ ರಾಜ್ಯಗಳ ಸ್ಥಾನಗಳು ಹೆಚ್ಚಾಗಿ, ತಮಿಳುನಾಡಿನ ಪ್ರಾತಿನಿಧ್ಯದ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದರು.
ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ, ತಮಿಳುನಾಡಿನ ಶೇ.7.18ರಷ್ಟು ಸ್ಥಾನಗಳ ಪಾಲು ಕಡಿತಗೊಳಿಸುವುದನ್ನು ಒಪ್ಪುವುದಿಲ್ಲ ಎಂದು ಪುನರುಚ್ಚರಿಸಲಾಗಿದೆ. 1971ರ ಜನಗಣತಿ ಆಧಾರಿತ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳಿಗೂ ಮುಂದುವರಿಸುವಂತೆ ವಿಶೇಷ ಅಧಿವೇಶನದಲ್ಲಿ ಒತ್ತಾಯಿಸಲು ಸಂಸದರಿಗೆ ಸೂಚಿಸಲಾಗಿದೆ.
ಡಿಎಂಕೆ ಕ್ಷೇತ್ರ ಮರುವಿಂಗಡಣೆಗೆ ಸಂಪೂರ್ಣ ವಿರೋಧಿಯಲ್ಲ; ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆಯನ್ನು ಬೆಂಬಲಿಸುತ್ತದೆ. ಆದರೆ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವ ಕ್ರಮಗಳನ್ನು ವಿರೋಧಿಸುತ್ತದೆ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಿಂದೆ 2025ರ ಮಾರ್ಚ್ನಲ್ಲಿ ತಮಿಳುನಾಡು ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆ ಹಾಗೂ ಚೆನ್ನೈನಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯನ್ನೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

