ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಾಜ್ಯದಲ್ಲಿ ಸೀಟು ಹಂಚಿಕೆ ಸಂಬಂಧ ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಒಪ್ಪಂದದ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಇಂದು ಬೆಳಿಗ್ಗೆಯಿಂದಲೇ ನಡೆಯುತ್ತಿರುವ ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದ್ದು, ಸದ್ಯದಲ್ಲೇ ಮೈತ್ರಿಕೂಟದ ಮುಖಂಡರು ಅಧಿಕೃತ ಘೋಷಣೆ ಮಾಡಲಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಸದಸ್ಯ ಸ್ಥಾನಗಳಿದ್ದು ಈ ಪೈಕಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 10 ಸ್ಥಾನಗಳನ್ನು ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷ ( NCP ) ಕ್ಕೆ ಬಿಟ್ಟುಕೊಡಲಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಎಲ್ಲ ಪಕ್ಷಗಳಿಗೂ ಸುಲಭವಾಗಲಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ವಂಚಿತ್ ಬಹುಜನ್ ಅಘಾಡಿ ಎಂಬ ಪ್ರಾದೇಶಿಕ ಪಕ್ಷ ಐದು ಸ್ಥಾನಗಳ ಬೇಡಿಕೆ ಇಟ್ಟಿತ್ತಾದರೂ ಈ ಪಕ್ಷಕ್ಕೆ ಶಿವಸೇನೆ ತನ್ನ ಪಾಲಿನ ಎರಡು ಸ್ಥಾನಗಳನ್ನು ಬಿಟ್ಟುಕೊಡಲಿದೆ. ಮಿಕ್ಕಂತೆ ಪಕ್ಷೇತರ ಅಭ್ಯರ್ಥಿ ರಾಜು ಶೆಟ್ಟಿ ಅವರನ್ನು ಎನ್ ಸಿಪಿ ಬೆಂಬಲಿಸಲಿದೆ.
ಲಭ್ಯ ಮಾಹಿತಿಗಳ ಪ್ರಕಾರ ಮುಂಬೈನಲ್ಲಿ ಬಲಶಾಲಿಯಾಗಿರುವ ಶಿವಸೇನೆ ಮುಂಬೈ ನಗರವೊಂದರಲ್ಲೇ ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಈಶಾನ್ಯ ಮುಂಬೈ ಸ್ಥಾನವೊಂದನ್ನು ವಂಚಿತ್ ಬಹುಜನ್ ಅಘಾಡಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.
ಯಾವ ಪಕ್ಷ ಯಾವ ಲೋಕಸಭಾ ಕ್ಷೇತ್ರಗಳನ್ನು ಪಡೆಯಲಿದೆ ಎಂಬುದನ್ನು ಇವತ್ತು ಅಥವಾ ನಾಳೆಯೊಳಗೆ ಮೈತ್ರಿಕೂಟದ ಮುಖಂಡರು ಘೋಷಿಸಲಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರೊಂದಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಮಾತುಕತೆಯ ನಂತರ ಸೀಟು ಹಂಚಿಕೆ ಪ್ರಕ್ರಿಯೆ ಬಗೆಹರಿದಿದೆ.