ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮತ್ತೆ ಏರಿಕೆಯಾಗಿದ್ದು, ಶನಿವಾರ ಬೆಳಗ್ಗೆ ವಾಯು ಗುಣಮಟ್ಟ ಸೂಚ್ಯಂಕ (AQI) 348ಕ್ಕೆ ತಲುಪಿದೆ. ಬೆಳಗ್ಗೆ 7.05ರ ವೇಳೆಗೆ ದಾಖಲಾಗಿರುವ ಈ ಪ್ರಮಾಣವು ‘ಅತ್ಯಂತ ಕಳಪೆ’ (Very Poor) ವರ್ಗದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
ನಗರದ ಹಲವು ಪ್ರದೇಶಗಳಲ್ಲಿ ದಟ್ಟವಾದ ಹೊಗೆ ಮತ್ತು ಮಂಜಿನ ಪದರ ಆವರಿಸಿದ್ದು, ಜನಜೀವನದ ಮೇಲೆ ವಾಯುಮಾಲಿನ್ಯದ ಪರಿಣಾಮ ಮುಂದುವರಿದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ವರದಿಯ ಪ್ರಕಾರ, ಬೆಳಗ್ಗೆ 7 ಗಂಟೆಗೆ ದಾಖಲಾಗಿರುವ ಅಂಕಿಅಂಶಗಳಲ್ಲಿ PM10 ಮತ್ತು PM2.5 ಕಣಗಳು ನಗರದ ಪ್ರಮುಖ ವಾಯುಮಾಲಿನ್ಯಕಾರಕಗಳಾಗಿವೆ. ಹಲವು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಮಾಲಿನ್ಯದ ಪ್ರಮಾಣ ‘ಗಂಭೀರ’ (Severe) ಹಂತ ತಲುಪಿದೆ. ದೆಹಲಿ ನಾರ್ತ್ ಕ್ಯಾಂಪಸ್ನಲ್ಲಿ ಗರಿಷ್ಠ 421 AQI ದಾಖಲಾಗಿದ್ದು, ಐಐಟಿ ದೆಹಲಿ 419, ಐಟಿಒ 415 ಹಾಗೂ ಬುರಾರಿ ಕ್ರಾಸಿಂಗ್ನಲ್ಲಿ 410 AQI ದಾಖಲಾಗಿದೆ.
‘ಅತ್ಯಂತ ಕಳಪೆ’ ಗಾಳಿಯ ಗುಣಮಟ್ಟ ದಾಖಲಾಗಿರುವ ಪ್ರದೇಶಗಳಲ್ಲಿ ಚಾಂದಿನಿ ಚೌಕ್ 392, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) 390, ಆನಂದ್ ವಿಹಾರ್ 379 ಹಾಗೂ ಛಾವ್ಲಾದಲ್ಲಿ 352 AQI ದಾಖಲಾಗಿದೆ. ಇನ್ನು ಕನ್ನಾಟ್ ಪ್ಲೇಸ್ನ ಒಳ ಮತ್ತು ಹೊರ ವೃತ್ತಗಳಲ್ಲಿ 326 ಹಾಗೂ ಮೈದಾನ್ ಗರ್ಹಿಯಲ್ಲಿ 300 AQI ದಾಖಲಾಗಿದೆ.
ಮಾಲಿನ್ಯ ನಿಯಂತ್ರಣಕ್ಕೆ GRAP ಹಂತ-3 ಜಾರಿ
ವಾಯುಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM), ನವೆಂಬರ್ 6ರಂದು ದೆಹಲಿ-ಎನ್ಸಿಆರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ಮೂರನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಿದೆ.
ಇದರ ನಡುವೆಯೇ ದೆಹಲಿ ಸರ್ಕಾರವೂ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಿದೆ. ಗಾಳಿಯಲ್ಲಿನ ಧೂಳಿನ ಕಣಗಳ ಪ್ರಮಾಣ ಕಡಿಮೆ ಮಾಡಲು ನಗರದ ವಿವಿಧೆಡೆ ನೀರು ಸಿಂಪಡಿಸುವ ವಾಹನಗಳನ್ನು ನಿಯೋಜಿಸಲಾಗಿದೆ.
ಕೃತಕ ಮಳೆ ಪ್ರಯೋಗಕ್ಕೆ ಸಿದ್ಧತೆ
ಈ ನಡುವೆ, ದೆಹಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಬುಧವಾರ ಮಹತ್ವದ ಮಾಹಿತಿ ನೀಡಿದ್ದು, ಐಐಟಿ ಕಾನ್ಪುರದ ಮೇಲ್ವಿಚಾರಣೆಯಲ್ಲಿ ಕೃತಕ ಮಳೆ (Cloud Seeding) ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಈ ಪ್ರಯೋಗದ ಅನುಷ್ಠಾನ, ಮಳೆ ಸುರಿಯುವ ಸಾಧ್ಯತೆ ಹಾಗೂ ಅದರ ಫಲಿತಾಂಶಗಳ ಕುರಿತು ಅಧ್ಯಯನ ಪೂರ್ಣಗೊಂಡು ಸಕಾರಾತ್ಮಕ ವರದಿ ಬಂದ ಬಳಿಕ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

