ಲಕ್ನೋ, ಅ.26: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ವಾಹನಗಳು ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ವೇನಲ್ಲಿ ಸೋಮವಾರ ಬೆಳಗ್ಗೆ ಸರಣಿ ಅಪಘಾತಕ್ಕೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ರಾಹುಲ್ ಗಾಂಧಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.
ಅಮಿತ್ ಶಾ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್ಪುರ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಐದು ವಾಹನಗಳು, ಆಂಬುಲೆನ್ಸ್ ನಡುವೆ ಸರಣಿ ಡಿಕ್ಕಿ
ಪೂರ್ವಾಂಚಲ ಎಕ್ಸ್ಪ್ರೆಸ್ವೇನ 91ನೇ ಕಿಲೋಮೀಟರ್ ಮೈಲಿಗಲ್ಲಿನ ಸಮೀಪ ಬೆಳಗ್ಗೆ ಸುಮಾರು 10.15ಕ್ಕೆ ಅಪಘಾತ ಸಂಭವಿಸಿದೆ.
ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ಸಾಲಿನಲ್ಲಿ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸೇರಿದ ಖಾಸಗಿ ವಾಹನವೊಂದು ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಹಿಂದೆ ಬರುತ್ತಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಸರಣಿ ಅಪಘಾತದಲ್ಲಿ ಐದು ವಾಹನಗಳು ಹಾಗೂ ಒಂದು ಆಂಬುಲೆನ್ಸ್ ಡಿಕ್ಕಿಯಾಗಿವೆ. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಮತ್ತು ಬೆಂಗಾವಲು ಪಡೆಯಲ್ಲಿದ್ದ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಭಾಗದ ವಾಹನದ ಚಾಲಕ ಏಕಾಏಕಿ ಬ್ರೇಕ್ ಹಾಕಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಪಘಾತದ ನಡುವೆಯೂ ರಾಹುಲ್ ಸುರಕ್ಷಿತ
ಬೆಂಗಾವಲು ಪಡೆಯ ವಾಹನಗಳು ಅಪಘಾತಕ್ಕೀಡಾದರೂ ರಾಹುಲ್ ಗಾಂಧಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಲ್ತಾನ್ಪುರ ನ್ಯಾಯಾಲಯದಲ್ಲಿ ನಡೆಯಲಿದ್ದ ಮಾನನಷ್ಟ ಪ್ರಕರಣದ ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದರು. ಅವರ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯೂ ಬೆಂಗಾವಲು ಪಡೆಯೊಂದಿಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 11.15ಕ್ಕೆ ಬೆಂಗಾವಲು ಪಡೆ ಸುಲ್ತಾನ್ಪುರ ನ್ಯಾಯಾಲಯ ತಲುಪುವ ನಿರೀಕ್ಷೆಯಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲಕ್ನೋ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ
ಇದಕ್ಕೂ ಮೊದಲು ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಪಕ್ಷದ ಮುಖಂಡರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ ಸುಲ್ತಾನ್ಪುರಕ್ಕೆ ಪ್ರಯಾಣ ಆರಂಭಿಸುವ ಮುನ್ನ ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ.

