ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಶೂಟರ್ಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಹರಿಯಾಣ ಮೂಲದವರಾಗಿದ್ದು, ಮತ್ತೊಬ್ಬ ಮಹಾರಾಷ್ಟ್ರದವನು ಎಂದು ತಿಳಿದುಬಂದಿದೆ. ಮೂವರಿಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕವಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಜುಹು ಪ್ರದೇಶದಲ್ಲಿ ನಡೆದಿದ್ದ ಗುಂಡಿನ ದಾಳಿ
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಆದರೆ ಅವರ ಕಾರು ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ತನಿಖಾ ಸಂಸ್ಥೆಗಳು ಇದೀಗ ಮೂವರು ಶಂಕಿತ ಶೂಟರ್ಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ದಾಳಿಗೂ ಮುನ್ನ ಟೈಗರ್ ಶ್ರಾಫ್ ಚಲನವಲನಗಳ ಮೇಲೆ ನಿಗಾ?
ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿ ಆಕಸ್ಮಿಕವಲ್ಲ, ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ದಾಳಿಕೋರರು ತರಬೇತಿ ಪಡೆದ ಶೂಟರ್ಗಳಾಗಿದ್ದು, ದಾಳಿ ನಡೆಸುವ ಮೊದಲು ನಟನ ದೈನಂದಿನ ಚಟುವಟಿಕೆಗಳು ಹಾಗೂ ವಾರದ ವೇಳಾಪಟ್ಟಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎಂದು ಎಎನ್ಐ ಸುದ್ದಿಸಂಸ್ಥೆ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ವಿಶೇಷವಾಗಿ ಟೈಗರ್ ಶ್ರಾಫ್ ಅವರು ಪ್ರತಿ ಭಾನುವಾರ ಜುಹು ಫುಟ್ಬಾಲ್ ಮೈದಾನಕ್ಕೆ ಭೇಟಿ ನೀಡುವುದನ್ನು ಆರೋಪಿಗಳು ಗಮನಿಸಿದ್ದರು ಎನ್ನಲಾಗಿದೆ.
ತಪ್ಪಿಸಿಕೊಳ್ಳಲು ಮೊದಲೇ ಮಾರ್ಗ ನಿಗದಿ?
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳಲು ಮೊದಲೇ ಯೋಜಿಸಿದ್ದ ಮಾರ್ಗವನ್ನು ಬಳಸಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ದಾಳಿಯ ನಂತರ ಶೂಟರ್ಗಳು ಎಸ್ವಿ ರಸ್ತೆಯ ಮೂಲಕ ವಿಲೇ ಪಾರ್ಲೆ ಮತ್ತು ಅಂಧೇರಿ ಕಡೆಗೆ ತೆರಳಿದ್ದಾರೆ. ಬಳಿಕ ಅಂಧೇರಿ ಪಶ್ಚಿಮ ರೈಲು ನಿಲ್ದಾಣದ ಸಮೀಪ ತಮ್ಮ ಮೋಟಾರ್ಸೈಕಲ್ ಬಿಟ್ಟು, ಬೊರಿವಲಿ ಕಡೆಗೆ ತೆರಳುವ ರೈಲನ್ನು ಹತ್ತಿದ್ದಾರೆ. ಈ ಬೆಳವಣಿಗೆಗಳು ದಾಳಿಯನ್ನು ವ್ಯವಸ್ಥಿತವಾಗಿ ಯೋಜಿಸಲಾಗಿತ್ತು ಎಂಬ ಶಂಕೆಗೆ ಕಾರಣವಾಗಿವೆ.
ಬಿಷ್ಣೋಯ್ ಗ್ಯಾಂಗ್ ಸಂಪರ್ಕದ ಬಗ್ಗೆ ತನಿಖೆ
ವಶಕ್ಕೆ ಪಡೆಯಲಾದ ಮೂವರು ಶಂಕಿತರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕವಿದೆ ಎಂದು ವರದಿಯಾಗಿದ್ದರೂ, ದಾಳಿಯ ಹಿಂದಿನ ಸಂಚು ಹಾಗೂ ಆರೋಪಿಗಳ ನಿಖರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

