ಬೆಂಗಳೂರು: ನಟ ಪುನೀತ್ ರಾಜ್ಕುಮಾರ್, ಪ್ರೀತಿಯ ಅಪ್ಪು ಅಗಲಿ ಐದು ವರ್ಷಗಳಾಗುತ್ತಿದ್ದರೂ, ಅವರ ಕೊನೆಯ ಕ್ಷಣಗಳನ್ನು ಕುಟುಂಬದ ವೈದ್ಯರಾದ ಡಾ. ರಮಣ ರಾವ್ ನೆನೆದುಕೊಂಡಿದ್ದಾರೆ. ಅವರ ಮಾತುಗಳು ಪುನೀತ್ ಅಭಿಮಾನಿಗಳಲ್ಲಿ ಮತ್ತೊಮ್ಮೆ ನೋವಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿವೆ. ಆ ಕ್ಷಣಗಳನ್ನು ʼಜಸ್ಟ್ ಕ್ಯೂರಿಯಸ್ʼ ಪಾಡ್ಕಾಸ್ಟ್ ನಲ್ಲಿ ವೈದ್ಯರು ಹಂಚಿಕೊಂಡಿದ್ದಾರೆ.
ಕನ್ನಡಿಗರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದ ನೋವು ಇಂದಿಗೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. 2021ರ ಅಕ್ಟೋಬರ್ 29ರಂದು ಹೃದಯ ಸ್ತಂಭನದಿಂದ ಮೃತಪಟ್ಟ ಅಪ್ಪು ಅವರ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು ಅವರ ವೈದ್ಯರಾಗಿದ್ದ ಡಾ. ರಮಣ ರಾವ್ ಇದೀಗ ನೆನಪಿಸಿಕೊಂಡಿದ್ದಾರೆ.
‘ಜಸ್ಟ್ ಕ್ಯೂರಿಯಸ್ ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಪುನೀತ್ ತಮ್ಮ ಕ್ಲಿನಿಕ್ಗೆ ಬಂದ ಸಂದರ್ಭ, ಅವರ ಆರೋಗ್ಯದಲ್ಲಿ ಕಂಡುಬಂದ ಆತಂಕಕಾರಿ ಲಕ್ಷಣಗಳು, ಇಸಿಜಿ ಪರೀಕ್ಷೆಯ ಫಲಿತಾಂಶ ಹಾಗೂ ಆಸ್ಪತ್ರೆಗೆ ಕರೆದೊಯ್ಯುವಾಗ ನಡೆದ ಘಟನೆಗಳನ್ನು ವೈದ್ಯರು ವಿವರಿಸಿದ್ದಾರೆ.
ಒಂದೂವರೆ ಗಂಟೆ ಕಿಕ್ ಬಾಕ್ಸಿಂಗ್ ಮಾಡಿದ್ದ ಅಪ್ಪು
ಪುನೀತ್ ನಿಧನರಾದ ದಿನದ ಘಟನೆಗಳನ್ನು ನೆನಪಿಸಿಕೊಂಡ ಡಾ. ರಮಣ ರಾವ್, ಅಂದು ಅಪ್ಪು ಜಿಮ್ನಲ್ಲಿ ಸುಮಾರು ಒಂದೂವರೆ ಗಂಟೆ ಕಿಕ್ ಬಾಕ್ಸಿಂಗ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ವೈದ್ಯರ ಪ್ರಕಾರ, ಪುನೀತ್ ಅಂದು ಮೊದಲ ಬಾರಿಗೆ ಕಿಕ್ ಬಾಕ್ಸಿಂಗ್ ಪ್ರಯತ್ನಿಸಿದ್ದರು. ತೀವ್ರ ವ್ಯಾಯಾಮದ ಬಳಿಕ ಅವರು ಸಾಕಷ್ಟು ದಣಿದ ಸ್ಥಿತಿಯಲ್ಲಿ ಕ್ಲಿನಿಕ್ಗೆ ಬಂದಿದ್ದರು.
“ನಾನು ಕ್ಲಿನಿಕ್ನಲ್ಲಿದ್ದಾಗ ಅಪ್ಪು ಬಂದರು. ಅವರಿಗೆ ವಿಪರೀತ ಬೆವರು ಬರುತ್ತಿತ್ತು. ಜಿಮ್ನಲ್ಲಿ ಒಂದೂವರೆ ಗಂಟೆ ಕಿಕ್ ಬಾಕ್ಸಿಂಗ್ ಮಾಡಿದ್ದಾಗಿ ಹೇಳಿದರು. ಅಂದು ಮೊದಲ ಬಾರಿಗೆ ಆ ವ್ಯಾಯಾಮ ಮಾಡಿದ್ದರು. ತುಂಬಾ ಸುಸ್ತಾಗಿದ್ದರು. ಆದರೆ ಅವರ ಬೆವರಿನ ಪ್ರಮಾಣ ನೋಡಿದಾಗ ಇದು ಕೇವಲ ವ್ಯಾಯಾಮದಿಂದ ಉಂಟಾದ ಆಯಾಸವಲ್ಲ ಎಂಬ ಅನುಮಾನ ನನಗೆ ಬಂತು” ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ.
ಇಸಿಜಿಯಲ್ಲಿ ಕಂಡುಬಂದಿತ್ತು ಹೃದಯದ ಮೇಲಿನ ಒತ್ತಡ!
ಪುನೀತ್ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿದ ಡಾ. ರಮಣ ರಾವ್ ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಿದ್ದರು. ಪರೀಕ್ಷೆಯಲ್ಲಿ ಹೃದಯದ ಮೇಲಿನ ಒತ್ತಡದ ಲಕ್ಷಣಗಳು ಕಂಡುಬಂದಿದ್ದವು ಎಂದು ಅವರು ತಿಳಿಸಿದ್ದಾರೆ.
“ಇಸಿಜಿಯಲ್ಲಿ ಒತ್ತಡದ ಲಕ್ಷಣಗಳು ಕಂಡುಬಂದವು. ಅದು ಹೃದಯಾಘಾತವಾಗಿರಲಿಲ್ಲ, ಆದರೆ ಒತ್ತಡವಿತ್ತು. ಏನಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ನನಗಿತ್ತು. ಹೀಗಾಗಿ ತಕ್ಷಣ ಔಷಧ ನೀಡಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದೆವು” ಎಂದು ಹೇಳಿದ್ದಾರೆ.
ಪತ್ನಿ ಅಶ್ವಿನಿ ಮಡಿಲಲ್ಲಿ ತಲೆ ಇಟ್ಟು ಮಲಗಲು ಹೇಳಿದ್ದ ವೈದ್ಯರು
ಕ್ಲಿನಿಕ್ನಿಂದ ಆಸ್ಪತ್ರೆಗೆ ಕರೆದೊಯ್ಯುವಾಗ ಪುನೀತ್ ಪ್ರಜ್ಞಾವಸ್ಥೆಯಲ್ಲಿದ್ದು, ಎಲ್ಲರೊಂದಿಗೂ ಮಾತನಾಡುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ಸ್ವಂತ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಪ್ಪು ಕಾರಿನಲ್ಲಿ ಕುಳಿತುಕೊಳ್ಳಲು ಬಯಸಿದ್ದರು. ಆದರೆ ನಾನು ಅವರಿಗೆ ಪತ್ನಿ ಅಶ್ವಿನಿ ಅವರ ಮಡಿಲಲ್ಲಿ ತಲೆ ಇಟ್ಟು ವಿಶ್ರಾಂತಿ ಪಡೆಯುವಂತೆ ಹೇಳಿದೆ. ಚಾಲಕನಿಗೆ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದೆ ಎಂದು ಡಾ. ರಮಣ ರಾವ್ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ರಂಗನಾಯಕ್ ಆಸ್ಪತ್ರೆಯಲ್ಲಿ ಅಗತ್ಯ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಸಿದ್ಧಪಡಿಸಲು ನೆರವಾಗಿದ್ದರು. ಡಾ. ರಂಗನಾಯಕ್ ಅವರು ಈ ಹಿಂದೆ ಪುನೀತ್ ಅವರ ತಂದೆ, ವರನಟ ಡಾ. ರಾಜ್ಕುಮಾರ್ ಸೇರಿದಂತೆ ಕುಟುಂಬದ ಇತರ ಸದಸ್ಯರಿಗೂ ಚಿಕಿತ್ಸೆ ನೀಡಿದ್ದರು.
‘ಆಸ್ಪತ್ರೆ ತಲುಪುವ ಒಂದು ನಿಮಿಷ ಮುನ್ನ ಹೃದಯ ಬಡಿತ ನಿಂತಿತ್ತು’
ಪುನೀತ್ ಅವರ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡ ಡಾ. ರಮಣ ರಾವ್ ಭಾವುಕರಾಗಿದ್ದಾರೆ. ಆಸ್ಪತ್ರೆ ತಲುಪುವ ಒಂದು ನಿಮಿಷ ಮುನ್ನವೇ ಅವರ ಹೃದಯ ಬಡಿತ ನಿಂತಿತ್ತು. ಆಸ್ಪತ್ರೆಯ ಒಳಗೆ ಕರೆದೊಯ್ಯುವಾಗ ಹೃದಯ ಬಡಿತ ಇರಲಿಲ್ಲ” ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಪುನೀತ್ ಅವರನ್ನು ದಾಖಲಿಸಿದ ಬಳಿಕ ವೈದ್ಯಕೀಯ ತಂಡ ತುರ್ತು ಚಿಕಿತ್ಸಾ ವಿಧಾನಗಳ ಮೂಲಕ ಅವರನ್ನು ಬದುಕಿಸಲು ಪ್ರಯತ್ನಿಸಿತ್ತು. ಆದರೆ ವೈದ್ಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪುನೀತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
2021ರ ಅಕ್ಟೋಬರ್ 29ರಂದು ಕೇವಲ 46ನೇ ವಯಸ್ಸಿನಲ್ಲಿ ಪುನೀತ್ ರಾಜ್ಕುಮಾರ್ ಕೊನೆಯುಸಿರೆಳೆದಿದ್ದರು.
‘ಅಪ್ಪು ನನಗೆ ಮಗನಂತಿದ್ದರು’
“ಅಪ್ಪು ಅತ್ಯಂತ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರು ನನಗೆ ಮಗನಂತಿದ್ದರು. ನನ್ನ ಎರಡನೇ ಮಗ ಮತ್ತು ಅಪ್ಪು ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ಒಟ್ಟಿಗೆ ಆಟವಾಡುತ್ತಿದ್ದರು. ಆಟಿಕೆಗಳನ್ನು ಹಂಚಿಕೊಳ್ಳುತ್ತಿದ್ದರು” ಎಂದು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ವೈದ್ಯಕೀಯ ವೃತ್ತಿಯಲ್ಲಿ ಅನೇಕ ದುಃಖದ ಘಟನೆಗಳನ್ನು ಕಂಡಿದ್ದರೂ ಪುನೀತ್ ಅವರ ನಿಧನ ತಮ್ಮ ಜೀವನದ ಅತ್ಯಂತ ನೋವಿನ ಅನುಭವಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
“ವೈದ್ಯನಾಗಿ ನನ್ನ ಜೀವನದಲ್ಲಿ ಅನೇಕ ದುರಂತಗಳನ್ನು ನೋಡಿದ್ದೇನೆ. ಕೆಲವು ಘಟನೆಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ. ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು ಅವರ ನಿಧನವೂ ಅಂತಹದ್ದೇ ಘಟನೆ” ಎಂದು ತಿಳಿಸಿದ್ದಾರೆ.
‘ಸ್ವಂತ ಮಗನನ್ನು ಕಳೆದುಕೊಂಡಷ್ಟು ನೋವಾಗಿತ್ತು’
ಪುನೀತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕ್ಷಣವನ್ನು ನೆನಪಿಸಿಕೊಂಡ ವೈದ್ಯರು, ಅದು ತಮ್ಮ ಜೀವನದ ಅತ್ಯಂತ ದುಃಖಕರ ಸಂದರ್ಭಗಳಲ್ಲಿ ಒಂದಾಗಿತ್ತು ಎಂದಿದ್ದಾರೆ.
“ಅದು ನಮ್ಮೆಲ್ಲರ ಪಾಲಿಗೆ ಅತ್ಯಂತ ನೋವಿನ ಕ್ಷಣವಾಗಿತ್ತು. ನನ್ನ ಸ್ವಂತ ಮಗನನ್ನೇ ಕಳೆದುಕೊಂಡಂತಾಗಿತ್ತು” ಎಂದು ಡಾ. ರಮಣ ರಾವ್ ಭಾವುಕರಾಗಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ, ತಮ್ಮ ಸರಳತೆ, ಸಮಾಜಮುಖಿ ಕಾರ್ಯಗಳು ಮತ್ತು ವ್ಯಕ್ತಿತ್ವದಿಂದ ಅಪಾರ ಅಭಿಮಾನ ಗಳಿಸಿದ್ದ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನ ಇಡೀ ಕರ್ನಾಟಕವನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು.

