ಬೆಂಗಳೂರು, ಅಕ್ಟೋಬರ್ 8: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ತೊಂದರೆಗೊಳಗಾದವರ ಪರವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯ ಭಾಗವಾಗಿ ರಾಜ್ಯಮಟ್ಟದ ಜನತಾ ನ್ಯಾಯಾಲಯ ಕೂಡ ಆಯೋಜಿಸಲಾಗಿದ್ದು, ಸಂತ್ರಸ್ತರ ಅಹವಾಲುಗಳನ್ನು ಆಲಿಸಲಾಗುತ್ತಿದೆ.
ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆ ಮತ್ತು ಜನತಾ ನ್ಯಾಯಾಲಯವನ್ನು ಆಯೋಜಿಸಿದೆ.
ನಿವೃತ್ತ ನ್ಯಾಯಮೂರ್ತಿಗಳ ಮುಂದೆ ಸಂತ್ರಸ್ತರ ಅಹವಾಲು
ಜನತಾ ನ್ಯಾಯಾಲಯದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಭಾಗವಹಿಸಿ, ಎಸ್‌ಐಆರ್‌ನಿಂದ ಸಮಸ್ಯೆ ಎದುರಿಸಿರುವವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳು, ಹೆಸರುಗಳಿಗೆ ಸಂಬಂಧಿಸಿದ ಗೊಂದಲಗಳು ಹಾಗೂ ಸಂತ್ರಸ್ತರ ಅಹವಾಲುಗಳನ್ನು ಜನತಾ ನ್ಯಾಯಾಲಯದ ಮುಂದೆ ಮಂಡಿಸಲು ವ್ಯವಸ್ಥೆ ಮಾಡಲಾಗಿದೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಕಹಳೆ
ಪ್ರತಿಭಟನಾ ವೇದಿಕೆಯಲ್ಲಿ ಈಗಾಗಲೇ ಹಾಡುಗಳು ಮೊಳಗುತ್ತಿದ್ದು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಭಟನಾ ಸ್ಥಳ ಬಹುತೇಕ ಭರ್ತಿಯಾಗಿದೆ. ವೇದಿಕೆಯಲ್ಲಿ ಒಕ್ಕೂಟದ ಮುಖಂಡರು ಒಂದರ ಹಿಂದೆ ಒಂದರಂತೆ ಭಾಗವಹಿಸುತ್ತಿದ್ದು, ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಪ್ರತಿಭಟನೆಗೆ ಸಾಹಿತಿ ದೇವನೂರ ಮಹಾದೇವ, ನಟ ಪ್ರಕಾಶ್ ರಾಜ್, ಕಾಕ್ರೋಚ್ ಜನತಾ ಪಾರ್ಟಿಯ ಮುಖಂಡರಾದ ಅಭಿಜಿತ್ ದೀಪೈ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ, ಯೂಟ್ಯೂಬರ್ ಧ್ರುವ ರಾಠಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಸೇರಿದಂತೆ ಹಲವು ಚಿಂತಕರು, ಕಲಾವಿದರು ಮತ್ತು ಸಾಹಿತಿಗಳು ಭಾಗವಹಿಸುತ್ತಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಿಂದ ಸಮಸ್ಯೆ ಎದುರಿಸಿದವರ ಧ್ವನಿಯನ್ನು ಸಾರ್ವಜನಿಕವಾಗಿ ದಾಖಲಿಸುವುದು ಹಾಗೂ ಅವರ ಅಹವಾಲುಗಳಿಗೆ ವೇದಿಕೆ ಕಲ್ಪಿಸುವುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಈ ಜನತಾ ನ್ಯಾಯಾಲಯ ಮತ್ತು ಬೃಹತ್ ಪ್ರತಿಭಟನೆ ಇದೀಗ ರಾಜ್ಯ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

