ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮಗೆ ಆಗ್ರಹಿಸಿ ಜಂತರ್ ಮಂತರ್ನತ್ತ ತೆರಳಲು ಯತ್ನಿಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಇತರ ಸಂಸದರನ್ನು ಬುಧವಾರ ಸಂಜೆ ದೆಹಲಿ ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಸಂಸದರನ್ನು ದೆಹಲಿ ಪೊಲೀಸರು ತಡೆದಾಗ, ಅವರು ಅಲ್ಲೇ ಸಮೀಪದಲ್ಲಿ ಧರಣಿ ನಡೆಸಲು ಮುಂದಾದರು. ನಂತರ ಪೊಲೀಸರು ಅವರನ್ನು ಬಲವಂತವಾಗಿ ಸ್ಥಳದಿಂದ ತೆರವುಗೊಳಿಸಿ ವಶಕ್ಕೆ ಪಡೆದರು.
“ಮತ ಕಳ್ಳತನ”ದ ಆರೋಪದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಮೆರವಣಿಗೆಯ ನಂತರ, ಆಕಾಶವಾಣಿ ಭವನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಂಟು ಗಂಟೆಗೂ ಹೆಚ್ಚು ಕಾಲ ಧರಣಿ ನಡೆದ ಮರುದಿನವೇ ಈ ಪ್ರತಿಭಟನೆ ನಡೆದಿದೆ. ಆ ಸಂದರ್ಭದಲ್ಲಿ ಸುಮಾರು 250 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು.

