ದುಬೈ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆ ಬಳಿಕ ದುಬೈ ಮೂಲದ ವಿಮಾನಯಾನ ಸಂಸ್ಥೆ ಇಸ್ರೇಲ್ಗೆ ಹಾಗೂ ಇಸ್ರೇಲ್ನಿಂದ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್ನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ FZ1073 ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾಗಿತ್ತು. ಬೋಯಿಂಗ್ 737 MAX 8 ವಿಮಾನವು ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ತುರ್ತು ಸಂಕೇತಗಳನ್ನು ರವಾನಿಸಿತ್ತು. ಇದರಲ್ಲಿ ಸಂಭವನೀಯ ಹೈಜಾಕ್ಗೆ ಸಂಬಂಧಿಸಿದ ಸಂಕೇತವೂ ಸೇರಿತ್ತು ಎನ್ನಲಾಗಿದೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದತ್ತ ತಿರುಗಿಸಲಾಗಿದ್ದು, ಕೊನೆಗೆ ತಬೂಕ್ನಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.
ಕಾಕ್ಪಿಟ್ನಲ್ಲೇ ಗಲಾಟೆ
ಫ್ಲೈದುಬೈ ನೀಡಿರುವ ಮಾಹಿತಿಯ ಪ್ರಕಾರ, ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ವಿಮಾನ ಸಾಗುತ್ತಿದ್ದ ವೇಳೆ ಕಾಕ್ಪಿಟ್ನಲ್ಲಿ ಇಬ್ಬರು ಪೈಲಟ್ಗಳ ನಡುವೆ ಗಲಾಟೆ ನಡೆದಿದೆ.
ಸಹ ಪೈಲಟ್ ವಿಮಾನಕ್ಕೆ ಹಾನಿ ಮಾಡಲು ಪ್ರಯತ್ನಿಸಿದ್ದು, ಅದನ್ನು ತಡೆಯಲು ಮುಂದಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಸಹ ಪೈಲಟ್ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ.
ಆ ಸಮಯದಲ್ಲಿ ವಿಮಾನ ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿತ್ತು. ಘಟನೆ ಬಳಿಕ ವಿಮಾನದ ಇಳಿಯುವ ವೇಗ ತೀವ್ರವಾಗಿ ಹೆಚ್ಚಾಗಿ, ಪ್ರತಿ ನಿಮಿಷಕ್ಕೆ ಸುಮಾರು 23,000 ಅಡಿ ವೇಗದಲ್ಲಿ ವಿಮಾನ ಕೆಳಕ್ಕೆ ಇಳಿಯತೊಡಗಿತ್ತು. ಬಳಿಕ ಸುಮಾರು 15,600 ಅಡಿ ಎತ್ತರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ವರದಿಯಾಗಿದೆ.
ಪ್ರಯಾಣಿಕರ ಸಹಾಯದಿಂದ ದಾಳಿ ತಡೆ

ದಾಳಿಯ ನಡುವೆಯೂ ಕ್ಯಾಪ್ಟನ್ ಮಚ್ಚರ್ ಪ್ರತಿರೋಧ ತೋರಿದ್ದು, ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.
ಇದರಿಂದ ವಿಮಾನದ ಮುಂಭಾಗದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್ಪಿಟ್ಗೆ ತೆರಳಿ ದಾಳಿ ನಡೆಸುತ್ತಿದ್ದ ವ್ಯಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡಿದ್ದಾರೆ ಎಂದು ವಿಮಾನದಲ್ಲಿದ್ದವರ ಹೇಳಿಕೆಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ವಿಮಾನದಲ್ಲಿದ್ದ ಇಬ್ಬರು ಇತರ ಪರ್ಯಾಯ ಪೈಲಟ್ಗಳು ಬಳಿಕ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು, ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಕಡೆಗೆ ತಿರುಗಿಸಿದ್ದಾರೆ. ನಂತರ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ತನಿಖೆ ಮುಂದುವರಿಯುವವರೆಗೆ ವಿಮಾನ ಹಾರಾಟ ಸ್ಥಗಿತ
ಘಟನೆಯ ಸಂಪೂರ್ಣ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ಗೆ ಮತ್ತು ಇಸ್ರೇಲ್ನಿಂದ ಫ್ಲೈದುಬೈ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಯಾಣಿಕರು, ಸಿಬ್ಬಂದಿ ಹಾಗೂ ವಿಮಾನ ಕಾರ್ಯಾಚರಣೆಯ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಫ್ಲೈದುಬೈ ಹೇಳಿದೆ.
ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದ್ದು, ಸರ್ಕಾರದ ಅಧಿಕಾರಿಗಳು, ನಿಯಂತ್ರಣ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣದ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾದಂತೆ ವಿಮಾನಗಳ ಸ್ಥಗಿತದ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಫ್ಲೈದುಬೈ ಸ್ಪಷ್ಟಪಡಿಸಿದೆ.
ಘಟನೆಯಿಂದ ಪ್ರಯಾಣ ಯೋಜನೆಗೆ ತೊಂದರೆಗೊಳಗಾದ ಪ್ರಯಾಣಿಕರಿಗೆ ಸಂಸ್ಥೆ ಕ್ಷಮೆಯಾಚಿಸಿದ್ದು, ಸಾಧ್ಯವಾದಷ್ಟು ಪರ್ಯಾಯ ವ್ಯವಸ್ಥೆ ಮತ್ತು ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದೆ.

