ನವದೆಹಲಿ : ಭಾರತದ ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ತಮಗೆ ಶೇ. 100ರಷ್ಟು ಖಚಿತತೆ ಇದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಮತಗಳನ್ನು ನಾಶಪಡಿಸುವುದು ಸಂವಿಧಾನ, ಕಾನೂನು ರಚನಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿಗೆ ಸಮಾನವಾಗಿದೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, “ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ನನಗೆ ಶೇಕಡಾ 100ರಷ್ಟು ಖಚಿತತೆ ಇದೆ. ಎಲ್ಲಾ ಚುನಾವಣೆಗಳಲ್ಲೂ ಅಕ್ರಮಗಳು ನಡೆಯುತ್ತವೆ,” ಎಂದು ಹೇಳುವ ಮೂಲಕ, ಭಾರತದಲ್ಲಿ ಆಡಳಿತ ವಿರೋಧಿ ಅಲೆ (anti-incumbency) ಮಾಯವಾದಂತೆ ತೋರುತ್ತಿರುವುದನ್ನು ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನೊಳಗೊಂಡ ವಿಡಿಯೋವೊಂದನ್ನು ತೋರಿಸುವ ಮೂಲಕ ಗಾಂಧಿ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು; ಆ ವಿಡಿಯೋದಲ್ಲಿ ಬಿಜೆಪಿ ಸರ್ಕಾರ 30 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಶಾ ಹೇಳುತ್ತಿರುವುದು ಕೇಳಿಸುತ್ತದೆ.
“ನಾನು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವನು. ಯಾವುದೇ ರಾಜಕೀಯ ನಾಯಕ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ,” ಎಂದು ಗಾಂಧಿ ಆ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದ ಚುನಾವಣಾ ವ್ಯವಸ್ಥೆ, ಮತದಾನದ ಹಕ್ಕು ಮತ್ತು ಸಂವಿಧಾನದ ಮೇಲೆಯೇ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು.
“ವೋಟ್ ಚೋರಿ, ಕಾನೂನ್ ಚೋರಿ, ಸಂಸ್ಥಾ ಚೋರಿ” ಎಂದು ಆರೋಪಿಸಿದ ರಾಹುಲ್ ಗಾಂಧಿ, ಮತದಾರರ ಹಕ್ಕುಗಳ ಮೇಲೆ ದಾಳಿ ನಡೆದ ಬಳಿಕ ಕಾನೂನು ರಚನೆಯ ವ್ಯವಸ್ಥೆ ಹಾಗೂ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಆಯ್ಕೆಯಾದ ಸಂಸದರೇ ಅಕ್ರಮದ ಮೂಲಕ ಆಯ್ಕೆಯಾಗಿದ್ದರೆ, ಅವರು ರೂಪಿಸುವ ಕಾನೂನುಗಳ ಬಗ್ಗೆಯೂ ಪ್ರಶ್ನೆ ಮೂಡುತ್ತದೆ ಎಂದು ಅವರು ಪ್ರತಿಪಾದಿಸಿದರು.
“ಮತಗಳ ರಕ್ಷಣೆಯ ಜವಾಬ್ದಾರಿ ಚುನಾವಣಾ ಆಯೋಗದ್ದೇ”
ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳು ಮತ್ತು SIR ಪ್ರಕ್ರಿಯೆ ಕುರಿತು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಸಂದರ್ಭಗಳಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ಹಾಗೂ ಆದೇಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ Indian Express ವರದಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.
“2024ರ ಲೋಕಸಭೆ ಚುನಾವಣೆಯಲ್ಲೂ ಅಕ್ರಮ”
2024ರ ಲೋಕಸಭೆ ಚುನಾವಣೆಯ ಜೊತೆಗೆ ನಂತರ ನಡೆದ ಕೆಲವು ವಿಧಾನಸಭಾ ಚುನಾವಣೆಗಳಲ್ಲೂ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದಲ್ಲಿ ಸಾಮಾನ್ಯವಾಗಿ ಯಾವುದೇ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ರೂಪುಗೊಳ್ಳುತ್ತದೆ. ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಈ ಪರಿಣಾಮವನ್ನು ಎದುರಿಸುತ್ತವೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಗೆ ಮಾತ್ರ ಈ ರೀತಿಯ ಆಡಳಿತ ವಿರೋಧಿ ಪರಿಣಾಮ ಕಾಣಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
“ದೇಶದಲ್ಲಿ ನಡೆಯಬೇಕಾದ ಸಹಜ ರಾಜಕೀಯ ಪ್ರಕ್ರಿಯೆಯೇ ಬದಲಾಗಿರುವಂತೆ ಕಾಣುತ್ತಿದೆ” ಎಂಬ ಅರ್ಥದಲ್ಲಿ ಅವರು ಚುನಾವಣಾ ವ್ಯವಸ್ಥೆಯ ಕುರಿತು ಅನುಮಾನ ವ್ಯಕ್ತಪಡಿಸಿದರು.
ಮಹದೇವಪುರದ ‘ವೋಟ್ ಚೋರಿ’ ಆರೋಪ ಮತ್ತೆ ಪ್ರಸ್ತಾಪ
ಕರ್ನಾಟಕದ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಾವು ಈ ಹಿಂದೆ ಮಾಡಿದ್ದ ಆರೋಪಗಳನ್ನು ರಾಹುಲ್ ಗಾಂಧಿ ಮತ್ತೆ ಪ್ರಸ್ತಾಪಿಸಿದರು.
ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಕಾಂಗ್ರೆಸ್ ಹಲವು ಆರೋಪಗಳನ್ನು ಮಾಡಿತ್ತು. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಮಹದೇವಪುರದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡುವುದಾಗಿ ರಾಹುಲ್ ಗಾಂಧಿ ಮತ್ತೊಮ್ಮೆ ಹೇಳಿದ್ದಾರೆ.
“ಮುಂದಿನ ಆರು ತಿಂಗಳಲ್ಲಿ ಎಲ್ಲವೂ ಬಹಿರಂಗ”
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಮತ್ತು ಸಾಕ್ಷ್ಯಗಳನ್ನು ಬಹಿರಂಗಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
“ಏನೇ ಇದ್ದರೂ ನಾನು ಸಾಕ್ಷಿ ಸಮೇತ ತೋರಿಸುತ್ತೇನೆ” ಎಂದು ಹೇಳಿದ ಅವರು, ಇದು ಕೇವಲ ಒಂದು ಪಕ್ಷದ ವಿರುದ್ಧದ ವಿಚಾರವಲ್ಲ, ಪ್ರತಿಯೊಬ್ಬ ಭಾರತೀಯನ ಮತದಾನದ ಹಕ್ಕಿಗೆ ಸಂಬಂಧಿಸಿದ ವಿಷಯ ಎಂದು ಪ್ರತಿಪಾದಿಸಿದರು.
ಮತದಾನದ ಹಕ್ಕು ದುರ್ಬಲವಾದರೆ ಪ್ರಜಾಪ್ರಭುತ್ವದ ಮೂಲವೇ ದುರ್ಬಲವಾಗುತ್ತದೆ ಎಂಬ ವಾದವನ್ನು ಅವರು ಮುಂದಿಟ್ಟರು.
ಪ್ರತಿಪಕ್ಷಗಳ ಒಗ್ಗಟ್ಟಿನ ಆಕ್ರೋಶ
SIR ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ವಿಚಾರದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಧ್ವನಿ ಎತ್ತಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಡಿಎಂಕೆ, ಸಿಪಿಐ(ಎಂ) ಸೇರಿದಂತೆ ಹಲವು ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು, ತನಿಖೆ ನಡೆಸುವುದು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪರಿಶೀಲಿಸುವಂತೆ ಹಲವು ನಾಯಕರು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು SIRಗೂ ಮುನ್ನ ಇದ್ದ ಮತದಾರರ ಪಟ್ಟಿಯ ಆಧಾರದ ಮೇಲೆ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಕೂಡ SIR ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

