ಬೆಂಗಳೂರು ಸೆ. 11: ಧರ್ಮಸ್ಥಳದ ಬಂಗ್ಲೆಗುಡ್ಡೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮಾನವ ತಲೆಬುರುಡೆಗಳ ಪೈಕಿ ಒಂದರೊಳಗೆ ‘ಉಲ್ನಾ’ (ಮುಂಗೈಯಲ್ಲಿರುವ ಮೂಳೆ) ಸೇರಿಕೊಂಡಿರುವುದು ಎಸ್‌ಐಟಿ ತನಿಖೆಗೆ ಸಂಬಂಧಿಸಿದ ವರದಿಯಲ್ಲಿ ದಾಖಲಾಗಿದೆ ಎಂದು BLR Post ವರದಿ ಮಾಡಿದೆ.
ತಲೆಬುರುಡೆಯೊಳಗೆ ಸಾಮಾನ್ಯವಾಗಿ ಇರದ ಮೂಳೆ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೂಳೆ ಸ್ವಾಭಾವಿಕವಾಗಿ ಅಲ್ಲಿಗೆ ಸೇರಿಕೊಂಡಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ತಲೆಬುರುಡೆಯೊಳಗೆ ಇಟ್ಟಿದ್ದಾರೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹಲವು ಮಾನವ ತಲೆಬುರುಡೆಗಳು ಹಾಗೂ ನೂರಾರು ಮೂಳೆಗಳು ಪತ್ತೆಯಾಗಿದ್ದವು. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡಿಎನ್‌ಎ ಸೇರಿದಂತೆ ವಿವಿಧ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಹಿಂದೆ ಪತ್ತೆಯಾದ ಕೆಲವು ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಡಿಎನ್‌ಎ ಹೊಂದಾಣಿಕೆ ಮೂಲಕ ಮೃತರ ಗುರುತು ಪತ್ತೆಹಚ್ಚುವ ಪ್ರಕ್ರಿಯೆಯೂ ನಡೆದಿದೆ. ಹೀಗಾಗಿ ತಲೆಬುರುಡೆಯೊಳಗೆ ಮುಂಗೈ ಮೂಳೆ ಪತ್ತೆಯಾಗಿರುವ ಅಂಶವೂ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಆದರೆ, ಈ ಮೂಳೆಯ ಸ್ಥಾನಮಾನಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಧಿವಿಜ್ಞಾನ ವರದಿ ಹಾಗೂ ಎಸ್‌ಐಟಿ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.
ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾಗಿರುವ ಮಾನವ ಅವಶೇಷಗಳ ಹಿನ್ನೆಲೆ, ಅವುಗಳ ಗುರುತು, ಸಾವಿನ ಕಾರಣ ಹಾಗೂ ಅವಶೇಷಗಳು ಅಲ್ಲಿಗೆ ಹೇಗೆ ಬಂದವು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಎಸ್‌ಐಟಿ ಮುಂದಿರುವ ಪ್ರಮುಖ ಸವಾಲಾಗಿದೆ.

