2024ರ ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಮೈತ್ರಿಯಡಿ ಯಾರಿಗೆ ಎಷ್ಟು ಸ್ಥಾನ ಎಂಬುದು ಇನ್ನೂ ಅಂತಿಮವಾಗಿಲ್ಲ. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದಲೂ ಆಕಾಂಕ್ಷಿಗಳಿದ್ದಾರೆ, ಹಾಲಿ ಸಂಸದ ಮುನಿಸ್ವಾಮಿ ಸಹಾ ಸಮರ್ಥರಿದ್ದಾರೆ. ಆದರೆ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸಮೃದ್ಧಿ ಗೋಲ್ಡ್ ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿನಿಖಿಲ್ ಸ್ಪರ್ಧೆ ಮಾಡುವುದಿಲ್ಲ. ಅವನೇ ಸ್ಪಷ್ಟನೆ ನೀಡಿದ್ದಾನೆ. ರಾತ್ರಿ 1.30 ರವರೆಗೂ ಮಂಡ್ಯ ಚುನಾವಣೆ ಬಗ್ಗೆ ಸಭೆ ಮಾಡಿದ್ದೇನೆ. ಈ ಮಧ್ಯೆ ಏನೇನೋ ಬೆಳವಣಿಗೆ ಆಗುತ್ತಿದೆ. ಸುಮಲತಾ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟ ವಿಚಾರ. ಅವರು ದೊಡ್ಡವರು. ಅವರ ಬಗ್ಗೆ ನಾವು ಮಾತನಾಡಲ್ಲ. ನಮ್ಮದು ಸಣ್ಣ ಪಕ್ಷ, ನಾವು ಏನೂ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಚುನಾವಣೆಗಿಂತ ಮುಖ್ಯವಾಗಿ ರಾಜ್ಯದಲ್ಲಿ ಭ್ರಷ್ಟಾಚಾರದ ರೈತ ವಿರೋಧಿ ಕೆಟ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂಬುದೇ ನಮ್ಮ ಪ್ರಮುಖ ಉದ್ದೇಶ ಎಂದರು.
ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ಕಾಂಗ್ರೆಸ್ ಸರಕಾರವು ತನ್ನ 5 ಗ್ಯಾರೆಂಟಿಗಳ ಕುರಿತು ಮಾಧ್ಯಮಗಳಿಗೆ ಧಾರವಾಹಿಗಳ ಮಾದರಿಯಲ್ಲಿ ದಿನ ನಿತ್ಯ ಬಣ್ಣ, ಬಣ್ಣದ ಪುಟಗಳ ಜಾಹೀರಾತು ನೀಡುತ್ತಿದೆ. ಪತ್ರಿಕೆಗಳಲ್ಲಿ ಸುದ್ದಿಗಳಿಗಿಂತ ಜಾಹೀರಾತುಗಳನ್ನೇ ವೈಭವೀಕರಿಸಲಾಗುತ್ತಿದ್ದು, ಪತ್ರಿಕೆ ನೋಡಲು ಬೇಸರ ತರಿಸುತ್ತದೆ ಎಂದರು.
ಬಜೆಟ್‌ನಲ್ಲಿ ಜಾಹಿರಾತುಗಳಿಗೆ 200 ಕೋಟಿ ರೂ ಮೀಸಲಿಟ್ಟಿದ್ದಾರೆ. ಜನರ ತೆರಿಗೆ ಹಣದಲ್ಲಿ ಜಾಹಿರಾತುಗಳಿಗೆ ಹಣ ನೀಡುತ್ತಿರುವುದನ್ನು ಅವರು ಕೇಳಿದಂತೆ ನಾನು ಸಹ ಇದು ಯಾರಪ್ಪನ ದುಡ್ಡಾಗಿದೆ? ಎಂದು ಪ್ರಶ್ನಿಸಬಹುದಲ್ಲವೇ ಎಂದರು.