ಶಿವಮೊಗ್ಗ, ಆ.31 : ಸಂವಿಧಾನದ ಪ್ರತಿಯನ್ನು ತುಳಿಯುವ, ಹರಿದು ಹಾಕುವ ಹಾಗೂ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳುವವರ ಮನಸ್ಥಿತಿಯನ್ನು ಸಮಾಜದಲ್ಲಿ ಬದಲಾಯಿಸುವ ಮಹತ್ವದ ಕೆಲಸವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದ ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ‘ಮೆಮೊರಬಲ್ ಟ್ರಯಲ್ಸ್ – ಅವಿಸ್ಮರಣೀಯ ಪ್ರಕರಣಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಾಗಮೋಹನ್ ದಾಸ್ ಅವರ ವಿಚಾರಗಳನ್ನು ತಾವು ಕೂಡ ತಿಳಿದುಕೊಳ್ಳುತ್ತಿರುವುದಾಗಿ ಹೇಳಿದ ಸಚಿವರು, ಸಾಮಾನ್ಯವಾಗಿ ನ್ಯಾಯಾಧೀಶರು ನಿವೃತ್ತರಾದ ಬಳಿಕ ವಿಶ್ರಾಂತಿ ಜೀವನ ನಡೆಸುತ್ತಾರೆ. ಆದರೆ ನಾಗಮೋಹನ್ ದಾಸ್ ಅವರು ಅದಕ್ಕೆ ಭಿನ್ನವಾಗಿ ಸಮಾಜದಲ್ಲಿ ಬದಲಾವಣೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಈ ಕಾಲದ ಸಮಾಜ ಚಿಂತಕ ಎಂದು ಪರಿಗಣಿಸುತ್ತೇನೆ ಎಂದರು.




ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ವಿಚಾರಗಳು ಇಂದು ನಾಗಮೋಹನ್ ದಾಸ್ ಅವರ ಕೃತಿಗಳ ಮೂಲಕ ಹೊರಬರುತ್ತಿರುವುದು ಸಂತಸದ ಸಂಗತಿ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೃತಿಯನ್ನು ಬಿಡುಗಡೆ ಮಾಡಿರುವುದು ಸಮಾಜಕ್ಕೆ ಒಂದು ಸಂದೇಶವಾಗಿದೆ. ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ ಪುಸ್ತಕವನ್ನು ಶಿವಮೊಗ್ಗದಲ್ಲಿ ತಾವು ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪುಸ್ತಕವನ್ನು ಕಣ್ಣಾಡಿಸಿದಾಗ ನಮ್ಮಲ್ಲಿರುವ ಹಲವು ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯುತ್ತದೆ ಎಂಬುದು ಮನದಟ್ಟಾಯಿತು. ಕೃತಿಯಲ್ಲಿರುವ 21 ಪ್ರಕರಣಗಳು ಸಾಮಾನ್ಯ ಪ್ರಕರಣಗಳಲ್ಲ. ಪ್ರತಿಯೊಂದು ಪ್ರಕರಣದ ಹಿಂದೆಯೂ ಒಂದೊಂದು ಇತಿಹಾಸ ಅಡಗಿದೆ. ಅವುಗಳ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ಸಚಿವರು ಹೇಳಿದರು.
ಶಿಕ್ಷಣದ ಮೂಲಕ ಸಂವಿಧಾನ ಪ್ರಜ್ಞೆ
‘ಸಂವಿಧಾನ ಓದು’ ತಮ್ಮ ಶಿಕ್ಷಣ ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಮತ್ತೆ ಶಿಕ್ಷಣ ಇಲಾಖೆಯ ಸಚಿವನಾಗಿರುವುದಕ್ಕೆ ಹೆಮ್ಮೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇರೆ ಖಾತೆ ಬೇಕೇ ಎಂದು ಕೇಳಿದರೂ ತಾವು ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು.
ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆ ಶ್ರೇಷ್ಠವಾದ ಇಲಾಖೆ ಎಂಬ ನಂಬಿಕೆ ನನಗಿದೆ. ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದು ಅತ್ಯಂತ ಅಗತ್ಯ. ಭಾರತಾಂಬೆಯ ಬಗ್ಗೆ ಪುಗಸಟ್ಟೆ ಭಾಷಣ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಭಾರತವನ್ನು ಉಳಿಸುವ ಮತ್ತು ಉತ್ತಮ ಸಮಾಜ ನಿರ್ಮಿಸುವ ಕೆಲಸ ಮಾಡುವವರು ಕಡಿಮೆ. ಶಾಲಾ ಶಿಕ್ಷಣ ಸಚಿವನಾದ ಬಳಿಕ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದರು.
ನಾಗಮೋಹನ್ ದಾಸ್ ಅವರಂತಹ ಚಿಂತಕರ ಕೃತಿಗಳು ವಿದ್ಯಾರ್ಥಿಗಳಲ್ಲಿ ಸಂವಿಧಾನ, ಕಾನೂನು ಹಾಗೂ ಸಾಮಾಜಿಕ ನ್ಯಾಯದ ಕುರಿತು ಅರಿವು ಮೂಡಿಸಲು ಸಹಕಾರಿಯಾಗಲಿವೆ. ಇಂತಹ ಗ್ರಂಥಗಳನ್ನು ಶಾಲಾ ಮಕ್ಕಳಿಗೂ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗ್ರಾಮೀಣ ಕೃಪಾಂಕ ವ್ಯವಸ್ಥೆಯೂ ಚರ್ಚೆ
ಕಾರ್ಯಕ್ರಮದಲ್ಲಿ ಗ್ರಾಮೀಣ ಕೃಪಾಂಕದ ಬಗ್ಗೆಯೂ ಇಲ್ಲಿ ಚರ್ಚೆ ನಡೆಯಿತು. ಗ್ರಾಮೀಣ ಕೃಪಾಂಕ ವ್ಯವಸ್ಥೆಯನ್ನು ಜಾರಿಗೆ ತಂದವರು ತಮ್ಮ ತಂದೆ ಎಸ್. ಬಂಗಾರಪ್ಪ ಅವರು. ಇದರ ಮೂಲಕ ಗ್ರಾಮೀಣ ಭಾಗದ ಅನೇಕರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಯಿತು. ಆದರೆ ನ್ಯಾಯಾಲಯದಲ್ಲಿ ಈ ವ್ಯವಸ್ಥೆ ಮಾನ್ಯವಾಗಲಿಲ್ಲ. ಇದು ನಮ್ಮ ವ್ಯವಸ್ಥೆಯಲ್ಲಿರುವ ದೋಷವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಹರ್ಷಕುಮಾರ್ ಕುಗ್ವೆ ಅವರು ಕೃತಿ ಕುರಿತು ಮಾತನಾಡಿದರು. ಹಿರಿಯ ವಕೀಲ ಜಿ.ಎಸ್. ನಾಗರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕೆ. ಬಸಪ್ಪಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ದಲಿತ ಸಂಘರ್ಷ ಸಮಿತಿಯ ಎಂ. ಗುರುಮೂರ್ತಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸದಸ್ಯ ಕೆ.ಪಿ. ಶ್ರೀಪಾಲ್, ಪ್ರಾಂಶುಪಾಲೆ ಅನಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

